ಸಂಸತ್‌ನಲ್ಲಿ ತಾನು ಮಾಡಿದ ಭಾಷಣದ ಭಾಗಗಳನ್ನು ಕಡತದಿಂದ ತೆಗೆದು ಹಾಕುವ ಸ್ಪೀಕರ್ ಓಂ ಬಿರ್ಲಾ ಅವರ ಕ್ರಮ ಪ್ರಶ್ನಿಸಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪತ್ರ ಬರೆದಿದ್ದಾರೆ.
ಸ್ಪೀಕರ್ ಅವರ ಕ್ರಮ ಸಂಸದೀಯ ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಜುಲೈ 1ರಂದು ನಾನು ಮಾಡಿದ ಭಾಷಣದ ಭಾಗಗಳನ್ನು ಕಡತದಿಂದ ತೆಗೆದು ಹಾಕುವ ಸ್ಪೀಕರ್ ಅವರ ನಿರ್ಧಾರಕ್ಕೆ ಸಂಬಂಧಪಟ್ಟಂತೆ ನಾನು ಪತ್ರ ಬರೆಯುತ್ತಿದ್ದೇನೆ. ಲೋಕಸಭೆಯ ವ್ಯವಹಾರಗಳ ನಿಯಮ 380ರ ಅಡಿ ವಿರೋಧಿಸಲಾದ ಪದಗಳನ್ನು ಕಡತದಿಂದ ತೆಗೆದು ಹಾಕುವ ಅಧಿಕಾರ ಅಧ್ಯಕ್ಷರಿಗಿದೆ. ಆದರೆ, ನಾನು ಅಂತಹ ಪದಗಳನ್ನು ಬಳಸಿಲ್ಲ” ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
“ನನ್ನ ಭಾಷಣದ ಹಲವು ಭಾಗಗಳನ್ನು ಕಡತದಿಂದ ತೆಗೆದು ಹಾಕುವ ನಿರ್ಧಾರದಿಂದ ನಾನು ಆಘಾತಗೊಂಡಿದ್ದೇನೆ. ನಾನು ಸದನದಲ್ಲಿ ತಿಳಿಸಿದ್ದು ನೆಲದ ವಾಸ್ತವಿಕತೆಯನ್ನಾಗಿದೆ. ಭಾರತದ ಸಂವಿಧಾನದ 105(1)ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಿರುವಂತೆ ತನ್ನ ಮತ್ತ ತಾನು ಪ್ರತಿನಿಧಿಸುವ ಜನರ ಸಾಮೂಹಿಕ ಧ್ವನಿಯನ್ನು ವ್ಯಕ್ತಪಡಿಸುವ ಹಕ್ಕು ಸದನದ ಪ್ರತಿಯೊಬ್ಬ ಸದಸ್ಯರಿಗೂ ಇದೆ. ಸದನದಲ್ಲಿ ಜನಪರ ಕಾಳಜಿ ವ್ಯಕ್ತಪಡಿಸುವುದು ಪ್ರತಿಯೊಬ್ಬ ಸದಸ್ಯರ ಹಕ್ಕು” ಎಂದಿದ್ದಾರೆ.
ಬಿಜೆಪಿ ಸಂಸದ ಅನುರಾಗ್ ಠಾಕುರ್ ಅವರ ಭಾಷಣದಲ್ಲಿ ತುಂಬಾ ಆರೋಪಗಳಿದ್ದರೂ, ಅಚ್ಚರಿಯೆಂಬಂತೆ ಕೇವಲ ಒಂದು ಪದವನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಭಾಷಣದ ರಾಹುಲ್ ಗಾಂಧಿ “ಪ್ರವಾದಿ ಮುಹಮ್ಮದ್ ಅವರನ್ನು ಉಲ್ಲೇಖಿಸಿ ಖುರಾನ್‌ನಲ್ಲಿ ತಿಳಿಸಲಾದ ನಿರ್ಭಯತೆಯ ಬಗ್ಗೆ ಮಾತನಾಡಿದ್ದರು. ಭಗವಾನ್ ಶಿವ, ಗುರುನಾನಕ್ ಮತ್ತು ಏಸು ಕ್ರೈಸ್ತನ ಫೋಟೋಗಳನ್ನು ಪ್ರದರ್ಶಿಸಿ ಹಿಂದೂ, ಇಸ್ಲಾಂ, ಸಿಖ್, ಕ್ರೈಸ್ತ, ಬೌದ್ಧ ಮತ್ತು ಜೈನ ಧರ್ಮಗಳಲ್ಲಿ ಉಲ್ಲೇಖಿಸಲಾದ ನಿರ್ಭಯತೆಯ ಮಹತ್ವವನ್ನು ಒತ್ತಿ ಹೇಳಿದ್ದರು. ಭಗವಾನ್ ಶಿವನ ಗುಣ ಲಕ್ಷಣಗಳನ್ನು ಮತ್ತು ಗುರುನಾನಕ್, ಏಸು ಕ್ರಿಸ್ತ, ಬುದ್ಧ ಮತ್ತು ಮಹಾವೀರರ ಬೋಧನೆಗಳನ್ನು ಉಲ್ಲೇಖಿಸಿ, ದೇಶದ ಎಲ್ಲಾ ಧರ್ಮಗಳು ಮತ್ತು ಮಹಾನ್ ವ್ಯಕ್ತಿಗಳು “ಹೆದರಬೇಡಿ, ಇತರರನ್ನು ಹೆದರಿಸಬೇಡಿ” ಎಂದು ಹೇಳಿದ್ದಾರೆ. ಶಿವಾಜಿ ಕೂಡ ಅಹಿಂಸೆಯ ಬಗ್ಗೆ ಮಾತನಾಡಿದ್ದಾರೆ ಎಂದಿದ್ದರು.
ಇದನ್ನೂ ಓದಿ : ಇಂಜಿನಿಯರ್ ರಶೀದ್‌ಗೆ 2 ಗಂಟೆಗಳ ಪೆರೋಲ್; ಜುಲೈ 5 ರಂದು ಸಂಸದರಾಗಿ ಪ್ರಮಾಣ ವಚನ ಸ್ವೀಕಾರ


