ಲೈಂಗಿಕ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ಪಾಲಕ್ಕಾಡ್ ಶಾಸಕ ರಾಹುಲ್ ಮಾಮ್‌ಕೂಟತ್ತಿಲ್ ಅವರು ಗುರುವಾರ (ಆ.21) ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
ಯುವ ಕಾಂಗ್ರೆಸ್‌ನೊಳಗೆ ಒತ್ತಡ ಹೆಚ್ಚಾದ ಹಿನ್ನೆಲೆ ಮತ್ತು ಹಿರಿಯ ನಾಯಕರಿಂದ ತೀವ್ರ ಟೀಕೆ ವ್ಯಕ್ತವಾದ ಕಾರಣ ಕಾಂಗ್ರೆಸ್ ನಾಯಕತ್ವವು ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ರಾಹುಲ್ ಅವರಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ರಾಹುಲ್ ಕಾಂಗ್ರೆಸ್ ಪಕ್ಷದ ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರೂ, ಪಕ್ಷವು ಅವರನ್ನು ಅಮಾನತುಗೊಳಿಸಲು ಅಥವಾ ಹೊರಹಾಕಲು ನಿರ್ಧರಿಸದ ಹೊರತು, ಅವರು ಪಾಲಕ್ಕಾಡ್‌ನಿಂದ ಸ್ವತಂತ್ರ ಶಾಸಕರಾಗಿ ಮುಂದುವರಿಯಬಹುದು ಎಂದು ಹಿರಿಯ ಕಾಂಗ್ರೆಸ್ ಮೂಲವೊಂದು ತಿಳಿಸಿದ್ದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
“ಮೂರು ವರ್ಷಗಳ ಹಿಂದೆ ಕೇರಳದ ಯುವ ರಾಜಕಾರಣಿಯೊಬ್ಬರು ತನಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್ ಕೋಣೆಗೆ ಆಹ್ವಾನಿಸಿದ್ದರು” ಎಂದು ನಟಿ ಮತ್ತು ಮಾಜಿ ಪತ್ರಕರ್ತೆ ರಿನಿ ಆನ್ ಜಾರ್ಜ್ ಅವರು ಆಗಸ್ಟ್ 20ರಂದು ಆರೋಪಿಸಿದ್ದರು.
ರಿನಿ ಆರೋಪ ಮಾಡುವಾಗ ಯುವ ರಾಜಕಾರಣಿ ರಾಹುಲ್ ಮಾಮ್‌ಕೂಟತ್ತಿಲ್ ಎಂದು ಹೇಳಿರಲಿಲ್ಲ. ಆದರೆ, ಪಾಲಕ್ಕಾಡ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಯುವ ಘಟಕದ ನಾಯಕರು ರಿನಿ ಆರೋಪ ಮಾಡಿರುವುದು ರಾಹುಲ್ ವಿರುದ್ದವೇ ಎಂದಿದ್ದರು.
ರಿನಿ ಆರೋಪ ಬೆನ್ನಲ್ಲೇ ಮಲಯಾಳಂ ಬರಗಾರ್ತಿ ಹನಿ ಭಾಸ್ಕರನ್ ಕೂಡ ರಾಹುಲ್ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. “ತಾನು ಶ್ರೀಲಂಕಾದಲ್ಲಿದ್ದಾಗ ರಾಹುಲ್ ಇನ್‌ಸ್ಟಾಗ್ರಾಮ್ ಮೂಲಕ ಸಂಭಾಷಣೆ ಆರಂಭಿಸಿದ್ದರು. ನಂತರ, ಖಾಸಗಿ ವಿಷಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದರು. ಈ ಬಗ್ಗೆ ಅವರ ಗೆಳೆಯರಲ್ಲಿ ಹೇಳಿಕೊಂಡು ತನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂದು ಹನಿ ಭಾಸ್ಕರನ್ ಸಾರ್ವಜನಿಕವಾಗಿ ಆರೋಪಿಸಿದ್ದರು.
ರಾಹುಲ್ ವಿರುದ್ದದ ಈ ಗಂಭೀರ ಆರೋಪಗಳು ಯುವ ಕಾಂಗ್ರೆಸ್‌ನೊಳಗೆ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ವಿ ಸ್ನೇಹಾ ಮತ್ತು ಉಪಾಧ್ಯಕ್ಷ ವಿಷ್ಣು ಸುನಿಲ್ ಪಂದಲಂ ಸೇರಿದಂತೆ ಹಲವಾರು ನಾಯಕರು ರಾಹುಲ್ ರಾಜೀನಾಮೆಗೆ ಒತ್ತಾಯಿಸಿದ್ದರು. ಶಾಸಕ ಚಾಂಡಿ ಉಮ್ಮನ್ ಅವರ ಬೆಂಬಲಿಗರು ಕೂಡ ರಾಹುಲ್ ಅವರನ್ನು ಪಕ್ಷದ ಹುದ್ದೆಗಳಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು.
ಗಂಭೀರ ಆರೋಪಗಳ ನಡುವೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಹುಲ್, “ನಾನು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ನನ್ನಲ್ಲಿ ಯಾರೂ ರಾಜೀನಾಮೆ ಕೇಳಿಲ್ಲ. ನನ್ನ ವಿರುದ್ದ ಕೇಳಿ ಬಂದಿರುವ ಆರೋಪಗಳೆಲ್ಲ ಸುಳ್ಳು” ಎಂದಿದ್ದಾರೆ.
ಈ ನಡುವೆ, “ಯುವ ನಟ ತನ್ನ ವಿರುದ್ಧ ಮಾತನಾಡಿದ್ದಾರೆಂದು ತಾನು ಭಾವಿಸುವುದಿಲ್ಲ. ಅವರು ನನ್ನ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ನಾನು ಕಾನೂನುಬಾಹಿರ ಅಥವಾ ಸಂವಿಧಾನಬಾಹಿರವಾದ ಏನನ್ನೂ ಮಾಡಿಲ್ಲ” ಎಂದು ರಾಹುಲ್ ಸಮರ್ಥಿಸಿಕೊಂಡಿದ್ದಾರೆ.
ರಾಹುಲ್ ಅವರ ರಾಜೀನಾಮೆಯಿಂದ ತೆರವಾದ ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಬಿನ್ ವರ್ಗೀಸ್ ಮತ್ತು ಕೆ.ಎಂ ಅಭಿಜಿತ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ದಿ ನ್ಯೂಸ್ ಮಿನಿಟನ್ ವರದಿ ಮಾಡಿದೆ.
ರಾಹುಲ್ ವಿರುದ್ದ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ, ಪಕ್ಷವು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಿದೆ ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ಹಾಗೂ ಕಾಂಗ್ರೆಸ್‌ನ ನಾಯಕ ವಿ.ಡಿ. ಸತೀಶನ್ ಗುರುವಾರ ಭರವಸೆ ನೀಡಿದ್ದಾರೆ.
2024ರಲ್ಲಿ ನಡೆದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 18,840 ಮತಗಳ ಅಂತರದಿಂದ ರಾಹುಲ್ ದಾಖಲೆಯ ಗೆಲುವು ಸಾಧಿಸಿದ್ದರು. ಕೇರಳ ವಿದ್ಯಾರ್ಥಿ ಸಂಘದ ಮೂಲಕ ತಮ್ಮ ರಾಜಕೀಯ ಪಯಣ ಆರಂಭಿಸಿದ ರಾಹುಲ್, ನಂತರ ಯುವ ಕಾಂಗ್ರೆಸ್‌ನ ಅಧ್ಯಕ್ಷ ಹುದ್ದೆಗೇರುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಯುವ ನಾಯಕ ಎನಿಸಿಕೊಂಡರು.
ನವೆಂಬರ್ 2023ರಲ್ಲಿ ಕೇರಳದಲ್ಲಿ ನಡೆದ ಭಾರತೀಯ ಯುವ ಕಾಂಗ್ರೆಸ್ ಪಕ್ಷದ ಆಂತರಿಕ ಚುನಾವಣೆಯಲ್ಲಿ 2,21,986 ಮತಗಳನ್ನು ಪಡೆದು ರಾಹುಲ್ ಜಯಗಳಿಸಿದ್ದರು. ಅವರ ಹತ್ತಿರದ ಪ್ರತಿಸ್ಪರ್ಧಿ ಅಬಿನ್ ವರ್ಕಿ ಕೊಡಿಯಾಟ್ಟು ಅವರು 53,398 ಮತಗಳ ಅಂತರದಿಂದ ಸೋಲನುಭವಿಸಿದ್ದರು.
ಚುನಾಯಿತ ಸರ್ಕಾರ ರಾಜ್ಯಪಾಲರ ಇಚ್ಛೆಗೆ ಒಳಪಡುವಂತಾಗುವುದಿಲ್ಲವೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ


