ಬೆಂಗಳೂರು: ರಾಯಚೂರು ಕೃಷಿ ವಿವಿಯಲ್ಲಿನ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಿಗದಿತ ದಿನಾಂಕಗಳಾದ ಜನವರಿ.17 ಮತ್ತು ಜನವರಿ.18ರಂದೇ ನಡೆಸಬೇಕು. ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಮಂಗಳವಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರಕಟನೆ ಹೊರಡಿಸಿದ್ದು, ರಾಯಚೂರು ಕೃಷಿ ವಿಶ್ವವಿದ್ಯಾಲಯವು 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ 2023ರ ಅ.18ರಂದು ಅಧಿಸೂಚನೆಯನ್ನು ಹೊರಡಿಸಿತ್ತು. ಈ 75 ಹುದ್ದೆಗಳಲ್ಲಿ ಹೊಸ ಮೀಸಲಾತಿ ರೋಸ್ಟರ್ ಬಿಂದುಗಳ ಅನುಗುಣವಾಗಿ, ಮೊದಲ ರೋಸ್ಟರ್ ಬಿಂದು ಪರಿಶಿಷ್ಟ ಜಾತಿಗೆ ಮತ್ತು ಮೂರನೇ ರೋಸ್ಟರ್ ಬಿಂದು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
75 ಹುದ್ದೆಗಳಲ್ಲಿ 24 ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ 10 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಒಟ್ಟಾರೆ 34 ಹುದ್ದೆಗಳು ದಲಿತ ಸಮುದಾಯಕ್ಕೆ ಮೀಸಲಾಗಿವೆ. ಇದನ್ನು ಸಹಿಸದ ಬಲಾಢ್ಯ ಜಾತಿಗಳ ಜನ ಪರೀಕ್ಷೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 18/10/2023ರಂದು ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಈ 75 ಹುದ್ದೆಗಳಲ್ಲಿ ಹೊಸಮೀಸಲಾತಿ ರೋಸ್ಟರ್ ಬಿಂದುಗಳ ಅನುಗುಣವಾಗಿ, ಮೊದಲ ರೋಸ್ಟರ್ ಬಿಂದು ಪರಿಶಿಷ್ಟಜಾತಿಗೆ ಮತ್ತು ಮೂರನೇ ರೋಸ್ಟರ್ ಬಿಂದು ಪರಿಶಿಷ್ಟಪಂಗಡಕ್ಕೆ ಮೀಸಲಾಗಿರುತ್ತದೆ.
ಅಧಿಸೂಚನೆಯಲ್ಲಿ ವಿಷಯವಾರು ಹುದ್ದೆಗಳನ್ನು ವಿಂಗಡಿಸಿರುವುದರಿಂದ, ಪ್ರತಿ ವಿಷಯದ ಮೊದಲ ಮತ್ತು ಮೂರನೇ ಸ್ಥಾನಗಳು ಕ್ರಮವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಾಗಿವೆ.
ಈ ರೀತಿ ಒಟ್ಟು 75 ಹುದ್ದೆಗಳಲ್ಲಿ 24 ಹುದ್ದೆಗಳು ಪರಿಶಿಷ್ಟ ಜಾತಿಗೆ ಹಾಗೂ 10 ಹುದ್ದೆಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಒಟ್ಟಾರೆ 34 ಹುದ್ದೆಗಳು ದಲಿತ ಸಮುದಾಯಕ್ಕೆ ಮೀಸಲಾಗಿವೆ.
ಈ ನೇಮಕಾತಿ ಅಧಿಸೂಚನೆ ಪ್ರಕಟವಾದ ದಿನದಿಂದಲೂ, 75 ಹುದ್ದೆಗಳಲ್ಲಿ 34 ಹುದ್ದೆಗಳು ದಲಿತರಿಗೆ ಮೀಸಲಾಗಿರುವುದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿವಿಧ ರೀತಿಯ ಷಡ್ಯಂತ್ರಗಳ ಮೂಲಕ ನೇಮಕಾತಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು ದಿನಾಂಕ 22/02/2025 ರಂದು ನಡೆಸಲು ನಿಗದಿಪಡಿಸಲಾಗಿತ್ತು. ಆದರೆ ಪರೀಕ್ಷೆಗೆ ಕೇವಲ ಒಂದು ವಾರ ಬಾಕಿಯಿದ್ದಾಗಲೇ ಅದನ್ನು ಮುಂದೂಡಲಾಯಿತು. ನಂತರ ಪರೀಕ್ಷೆಯನ್ನು ದಿನಾಂಕ 05/03/2025ರಂದು ಮರುನಿಗದಿ ಪಡಿಸಲಾಯಿತು.
ಆದರೆ ಪರೀಕ್ಷೆಗೆ ಕೇವಲ 12 ಗಂಟೆಗಳು ಉಳಿದಿದ್ದಾಗ ಯಾವುದೇ ಸಮಂಜಸ ಕಾರಣವಿಲ್ಲದೆ ಮತ್ತೆ ಪರೀಕ್ಷೆಯನ್ನು ಮುಂದೂಡಲಾಯಿತು.
ಇದಾದ ಬಳಿಕ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಯಿತು (WP No. 202940 of 2024).
ಹೈಕೋರ್ಟ್ ಈ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಪರೀಕ್ಷಾ ಪ್ರಕ್ರಿಯೆಗೆ ತಡೆನೀಡಿತು.
ನಂತರ ಎಲ್ಲಾ ವಾದ–ವಿವಾದಗಳನ್ನು ಆಲಿಸಿದ ಗೌರವಾನ್ವಿತ ಕರ್ನಾಟಕ ಹೈಕೋರ್ಟ್, ದಿನಾಂಕ 04/08/2025ರಂದು
ಅರ್ಜಿಯನ್ನು ವಜಾಗೊಳಿಸಿ, ಅಧಿಸೂಚನೆ ಹಾಗೂ ನೇಮಕಾತಿ ಪ್ರಕ್ರಿಯೆ ಯುಜಿಸಿ ನಿಯಮಗಳ ಪ್ರಕಾರ ಸರಿಯಾಗಿದೆ ಎಂದು ಸ್ಪಷ್ಟ ತೀರ್ಪು ನೀಡಿತು.
ಇಷ್ಟೆಲ್ಲಾ ಆದರೂ ಈವರೆಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ 75 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಗಳು ನಡೆಯದಂತೆ ಪಟ್ಟಭದ್ರರು ನೋಡಿಕೊಂಡಿದ್ದಾರೆ. ಆದರೆ ಇದೇ ತಿಂಗಳ ಅಂದರೆ ಜನವರಿ 17 ಮತ್ತು ಜನವರಿ 18ರಂದು ಪರೀಕ್ಷಾ ದಿನಾಂಕ ನಿಗಧಿಯಾಗಿದ್ದು, ಈ ಬಾರಿ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಪರೀಕ್ಷೆಯನ್ನು ಮುಂದೂಡಬಾರದು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.


