ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಜನವರಿ 5ರಂದು ಮತ್ತೊಬ್ಬರು ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ (24 ) ಮೃತಪಟ್ಟಿದ್ದಾರೆ ಎಂದು ಈದಿನ.ಕಾಂ ವರದಿ ಮಾಡಿದೆ.
ಜನವರಿ 2ರಂದು ಸರಸ್ವತಿ ಅವರಿಗೆ ಸಿಸೇರಿಯನ್ ಹೆರಿಗೆಯಾಗಿತ್ತು. ನಂತರ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಜನವರಿ 5ರಂದು ಅವರು ಸಾವನ್ನಪ್ಪಿದ್ದಾರೆ. ಸದ್ಯ ವೆಂಟಿಲೇಟರ್‌ನಲ್ಲಿ ಶಿಶುವಿಗೆ ಚಿಕಿತ್ಸೆ ಮುಂದುವರಿದಿದೆ. ನಾಲ್ಕನೇ ಮಗುವಿಗೆ ಜನ್ಮ ನೀಡಿದ ಬಳಿಕ ಸರಸ್ವತಿ ಕೊನೆಯುಸಿರೆಳೆದಿದ್ದಾರೆ.
ವರದಿಯ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿದ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 5 ಮಂದಿ ರಿಮ್ಸ್ ಆಸ್ಪತ್ರೆಯಲ್ಲೇ ಸಾವಿಗೀಡಾಗಿದ್ದಾರೆ.
ಸಿಸೇರಿಯನ್ ಹೆರಿಗೆಗೆ ಒಳಗಾಗಿದ್ದ ಬಾಣಂತಿಯೊಬ್ಬರು ಹೊಸ ವರ್ಷದ ಮೊದಲ ದಿನದಂದೇ ಸಾವನ್ನಪ್ಪಿದ್ದರು. ದೇವದುರ್ಗ ತಾಲೂಕಿನ ಮಸೀದಾಪೂರ ಗ್ರಾಮದ ಶಿವಲಿಂಗಮ್ಮ (22) ಮೃತ ಮಹಿಳೆ. ಚೊಚ್ಚಲ ಹೆರಿಗೆಯ ಬಳಿಕ ಕೊನೆಯುಸಿರೆಳದ ಈಕೆಯನ್ನು ಡಿಸೆಂಬರ್ 27ರಂದು ಮಾನವಿ ಆಸ್ಪತ್ರೆಯಿಂದ ರಿಮ್ಸ್ ದಾಖಲಿಸಲಾಗಿತ್ತು.
ಇದನ್ನೂ ಓದಿ : ಬೆಂಗಳೂರು| ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆ


