Homeಅಂಕಣಗಳುರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ...

ರೈಲ್ವೇ ಮಾರ್ಗ ಮಲೆನಾಡಿನ ಸಾವಿರಾರು ಎಕರೆ ಪರಿಸರ ನುಂಗಿದ್ದು ಹೀಗೆ…

- Advertisement -
- Advertisement -

ಕಳೆದು ಹೋದ ದಿನಗಳು -9

ಅಪ್ಪ ಪೂರ್ಣಿಮಾ ಎಸ್ಟೇಟಿನಲ್ಲಿ ಕೆಲಸಕ್ಕೆ ನಿಂತ ನಂತರದ ಮೊದಲ ಭೇಟಿಯಲ್ಲೇ ಪೂಣಚ್ಚ ಅಪ್ಪನ ಅನುಮಾನಗಳನ್ನು ತೊಡೆದು ಹಾಕಿದ್ದರು. ಅವರು ಅಪ್ಪನೊಡನೆ ಹಳೆಯ ಸ್ನೇಹಿತನಂತೇ ಮಾತಾಡಿದ್ದರು. ಪ್ರಾರಂಭದ ದಿನಗಳಲ್ಲಿ ಅವರು ಬಂದಾಗ ಹಾರ್ಲೆಯಲ್ಲಿ ಗಣಪಯ್ಯನವರ ಬಂಗಲೆಯಲ್ಲೇ ಉಳಿದುಕೊಳ್ಳುತ್ತಿದ್ದರು. ನಂತರ ಅವರು ಬಂದಾಗ ಉಳಿದುಕೊಳ್ಳಲೆಂದು ತೋಟದಲ್ಲೇ ಮನೆಯೊಂದನ್ನು ಕಟ್ಟಿಸಿದರು. ಅದನ್ನು ಹೆಸರಿಗೆ ಪೂರ್ಣಿಮಾ ಬಂಗಲೆ ಎಂದು ಕರೆದರೂ ಅದೊಂದು ಸಾಧಾರಣ ಹಂಚಿನ ಮನೆಯಾಗಿತ್ತು. ನಂತರದ ದಿನಗಳಲ್ಲಿ ಪೂಣಚ್ಚನವರ ಕುಟುಂಬದವರು ತೋಟಕ್ಕೆ ಬಂದಾಗ ಅಲ್ಲೇ ಉಳಿದುಕೊಳ್ಳುತ್ತಿದ್ದರು.

ಅವರು ರೈಲ್ವೇ ಸಚಿವರಾಗಿದ್ದಾಗ ಒಮ್ಮೆ ಕರ್ನಾಟಕಕ್ಕೆ ಬಂದವರು ತೋಟದಲ್ಲಿ ಉಳಿಯುತ್ತೇನೆ ಎಂದಿದ್ದರು. ಆಗ ಹಾಸನ ಮಂಗಳೂರು ರೈಲ್ವೇ ಕೆಲಸ ನಡೆಯುತ್ತಿತ್ತು. ಅವರು ಬರುವ ಒಂದು ವಾರದ ಮುಂಚೆ ಪೋಲಿಸ್ ಅಧಿಕಾರಿಗಳು ಮತ್ತು ತಾಲ್ಲೂಕಿನ ತಹಸೀಲ್ದಾರರು ಸಚಿವರ ವಾಸ್ತವ್ಯದ ಸ್ಥಳ ಪರಿಶೀಲನೆಗೆ ಬಂದರು. ಆಗ ಅಪ್ಪ ಅಧಿಕಾರಿಗಳಿಗೆ ಬಂಗಲೆಯನ್ನು ತೋರಿಸಲು ಕರೆದುಕೊಂಡು ಹೋದರು. ಆ ಮನೆಯನ್ನು ನೋಡಿ ತಹಸೀಲ್ದಾರರು ದಂಗಾಗಿದ್ದರು.

ಅವರು ಅಪ್ಪನಲ್ಲಿ “ಇದು ನಿಮ್ಮ ವಾಸದ ಮನೆನಾ? ಮಿನಿಸ್ಟರು ಬಂದಾಗ ಎಲ್ಲಿರ್ತಾರೆ? ಎಂದರಂತೆ!

ಆಗ ಅಪ್ಪ “ಇದೇ ಬಂಗಲೆಯಲ್ಲಿ ಅವರು ಬಂದಾಗ ಉಳಿಯೋದು” ಎಂದರು.

ಶಿರಾಡಿ ಘಾಟ್ ನಲ್ಲಿ ಹಾಸನ ಮಂಗಳೂರು ರೈಲ್ವೆ

“ಇದಾ ನಾವೇನೋ ದೊಡ್ಡ ಮನೆ ಇರುತ್ತೆ ಅಂದ್ರೆ ಇದೇನಿದು, ಒಂದೊಳ್ಳೆ ಬಂಗಲೆ ಕಟ್ಸಕೆ ಹೇಳಿ ನಿಮ್ ಸಾವ್ಕಾರ್ರಿಗೆ” ಎಂದು ಅಧಿಕಾರಿಗಳು ವಾಪಸ್ ಹೋದರು.

ಅಧಿಕಾರಿಗಳು ಆ ಸಲ ಪೂಣಚ್ಚನವರಿಗೆ ತೋಟದಲ್ಲಿ ಉಳಿಯುವ ಅವಕಾಶವನ್ನು ಕೊಡಲಿಲ್ಲ. ಬದಲಿಗೆ ಹಾಸನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಆದರೆ ಪೂಣಚ್ಚ ತೋಟಕ್ಕೊಂದು ಭೇಟಿ ನೀಡಿದರು. ಜೊತೆಯಲ್ಲಿ ಹಲವಾರು ಅಧಿಕಾರಿಗಳು. ಅಪ್ಪ ದೂರದಲ್ಲೆಲ್ಲೋ ನಿಂತು ನೋಡುತ್ತಿದ್ದರು. ಅಧಿಕಾರಿಗಳು ನೋಡುತ್ತಿದ್ದಂತೆ ಪೂಣಚ್ಚ ಸ್ವತಃ ಅಪ್ಪನ ಹತ್ತಿರ ಬಂದು ಹೆಗಲಿಗೆ ಕೈಹಾಕಿ ಸ್ವಲ್ಪದೂರ ಕರೆದುಕೊಂಡು ಹೋಗಿ ಮಾತಾಡುತ್ತ ನಿಂತರು. ಆಗಲೂ ಅವರು ತೋಟದ ವಿಚಾರ ಮಾತಾಡದೆ ಕೌಟುಂಬಿಕ ವಿಚಾರಗಳನ್ನು ಮಾತಾಡಿದ್ದು. ಹೊರಡುವಾಗ ಎರಡು ಒಳ್ಳೆಯ ಪೆನ್ನುಗಳು, ಡೈರಿ ಮುಂತಾದವುಗಳ ಕೊಡುಗೆಯಿತ್ತು ಹೋದರು.

1971 ರವರೆಗೆ ಪೂಣಚ್ಚ ರೈಲ್ವೆ ಮಂತ್ರಿಗಳಾಗಿದ್ದರು. ಮತ್ತೊಂದೆರಡು ಸಲ ಹಾಸನ ಮಂಗಳೂರು ರೈಲ್ವೆ ಕಾಮಗಾರಿ ಪರಿಶೀಲನೆಗೆ ಬಂದಿದ್ದರೂ ಅವರು ತೋಟಕ್ಕೆ ಬರಲಾಗಲಿಲ್ಲ. ಮುಂದೊಂದು ದಿನ ಪೂಣಚ್ಚ ತೋಟಕ್ಕೆ ಬಂದು ಉಳಿದಾಗ ಅಪ್ಪನೊಡನೆ ಮಾತಾಡುತ್ತ ಕೆಲವು ವಿಚಾರ ತಿಳಿಸಿದರು. ಅದು ಒಂದು ಚಾರಿತ್ರಿಕ ಮಹತ್ವದ್ದಾದ್ದರಿಂದ ಇಲ್ಲಿ ಉಲ್ಲೇಖಿಸುತ್ತೇನೆ.

ಪೂಣಚ್ಚ ತೋಟಕ್ಕೆ ವರ್ಷಕ್ಕೆ ಒಮ್ಮೆಯೋ ಎರಡು ಬಾರಿಯೋ ಬರುತ್ತಿದ್ದುದಷ್ಟೆ. ಬಂದಾಗ ತೋಟದವನ್ನು ಸುತ್ತಿ ನೋಡುವರೇ ಹೊರತು, ತೋಟದ ಬಗ್ಗೆ ಒಂದೇ ಒಂದು ಮಾತನ್ನು ಆಡಿದವರಲ್ಲ. ಸಂಜೆ ಅಪ್ಪ ತಾವಾಗಿಯೇ ಬಂಗಲೆಗೆ ಹೋಗಿ ಏನಾದರೂ ಹೇಳಿದರೆ ಕೇಳಿಸಿಕೊಳ್ಳುವರು. ಆಗಲೂ ಅಷ್ಟೆ ಯಾವುದೇ ಟೀಕೆ ಟಿಪ್ಪಣಿ ಇಲ್ಲ.

ರೈಲ್ವೆ ಸಚಿವರಾಗಿ ಪ್ರಧಾನಿ ಇಂದಿರಾ ಜೊತೆ ಪೂಣಚ್ಚ

ಆದರೆ ಅಪ್ಪನೊಡನೆ ಟೀ ಕುಡಿಯುತ್ತಾ ಮಾತಾಡುವರು. ಕೊಡಗಿನ ಎಷ್ಟೋ ಹಳೆಯ ಸಂಗತಿಗಳನ್ನು ಮೆಲುಕು ಹಾಕುವರು. ಆಗ ಹಾಸನ ಮಂಗಳೂರು ರೈಲು ದಾರಿಯ ಬಗ್ಗೆ ಹೇಳುತ್ತಾ. “ಕೆಲವು ಸಂಗತಿಗಳನ್ನು ನಾನು ಮಾತಾಡಬಾರದು. ಆದರೆ ಹಾಸನ ಮಂಗಳೂರು ರೈಲು ದಾರಿಯ ಬಗ್ಗೆ ನಾನು ಏನೂ ಮಾಡಲಾರದ ವ್ಯಥೆ ಇದೆ. ಇದು ನಿಜವಾಗಿ ಮೊದಲು ಸರ್ವೆಯಾದಂತೆ (ಈ ಎಲ್ಲಾ ಸರ್ವೆಗಳೂ ಬ್ರಿಟಿಷ್ ಕಾಲದಲ್ಲಿಯೇ ಆಗಿದ್ದವು) ಸಕಲೇಶಪುರದಿಂದ ಹಾನುಬಾಳು ದೇವರುಂದ ಬೈರಾಪುರ, ಬಿ.ಸಿ.ರೋಡಿಗಾಗಿ ಹೋಗಬೇಕಿತ್ತು. ನಲುವತ್ತು ಕಿ.ಮೀ ಹತ್ತಿರದ ದಾರಿ ಇಷ್ಟು ಅರಣ್ಯ ನಾಶವೂ ಇರಲಿಲ್ಲ. ಖರ್ಚೂ ಬಹಳ ಕಡಿಮೆ ಆಗುತ್ತಿತ್ತು. ಈಗಿನ ದಾರಿ ಎಲ್ಲ ರೀತಿಯಿಂದಲೂ ಸೂಕ್ತವಲ್ಲ. ನಾನು ಮಂತ್ರಿಯಾಗುವಾಗ ಕೆಲಸ ತುಂಬಾ ದೂರ ಸಾಗಿ ಆಗಿತ್ತು, ಈಗ ಇದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ.” ಎಂದಿದ್ದರು.

ಅದೀಗ ನಿಜವಾಗಿದೆ. ಈ ರೈಲ್ವೇ ಸಾವಿರಾರು ಕೋಟಿಗಳನ್ನು ಕಬಳಿಸಿತು. ಸಾವಿರಾರು ಎಕರೆ ಪರಿಸರವನ್ನು ನುಂಗಿತು. ಈಗ ಮತ್ತೆ ಶಿಶಿಲ ಬೈರಾಪುರ ರಸ್ತೆಯ ಮಾತಾಡುತ್ತಿದ್ದಾರೆ.

1969 ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸುಂಟರಗಾಳಿ ಎದ್ದಿತು. ಪಕ್ಷ ಒಡೆದು ಎರಡು ಹೋಳಾಯಿತು. ಕಾಮರಾಜ- ನಿಜಲಿಂಗಪ್ಪನವರ ಹಿರಿಯರ ಸಂಸ್ಥಾ ಕಾಂಗ್ರೆಸ್ ಒಂದು ಕಡೆಯಾದರೆ ಇಂದಿರಾಗಾಂಧಿ ನಾಯಕತ್ವದ ಹೆಚ್ಚಾಗಿ ಯುವ ಕಾಂಗ್ರೆಸಿಗರೇ ಇದ್ದ ಇಂದಿರಾ ಕಾಂಗ್ರೆಸ್ ಇನ್ನೊಂದು ಭಾಗವಾಗಿತ್ತು.

ಪೂಣಚ್ಚ ಇಂದಿರಾ ಬಣದಲ್ಲೇ ಇದ್ದರು. ಕೆಲವು ಮೂಲಗಳ ಪ್ರಕಾರ ಪೂಣಚ್ಚ ಒಳಗೊಳಗೇ ಸಂಸ್ಥಾ ಕಾಂಗ್ರೆಸ್ಸಿನ ಪರ ಇದ್ದಾರೆಂದು ಕೆಲವರು ಇಂದಿರಾ ಮನಸ್ಸಿನಲ್ಲಿ ತುಂಬಿದ್ದಾರೆಂಬ ಸುದ್ದಿಯಿತ್ತು. ಆದರೆ ಇಂದಿರಾ ಗಾಂಧಿ ಪೂಣಚ್ಚನವರನ್ನು ಮಂತ್ರಿ ಮಂಡಲದಿಂದ ಕೈಬಿಟ್ಟಿರಲಿಲ್ಲ. 1971 ರವರೆಗೂ ಪೂಣಚ್ಚ ಮಂತ್ರಿಗಳಾಗಿಯೇ ಇದ್ದರು. ಇನ್ನೊಂದು  ಮೂಲದ ಪ್ರಕಾರ ಇಂದಿರಾ ನೇರವಾಗಿ ಪೂಣಚ್ಚನವರಲ್ಲಿ ನೀವು ನಿಜಲಿಂಗಪ್ಪನವರ ಚೇಲಾ ಎಂದು ಹೇಳಿದರೆಂದು  ಸುದ್ದಿಯಾಗಿತ್ತು. ಆದರೆ ಅಧಿಕೃತವಾಗಿ ಪೂಣಚ್ಚ ಏನೂ ಹೇಳಲಿಲ್ಲ. ಆದರೆ 1971 ರ ಮಹಾಚುನಾವಣೆಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಪೂಣಚ್ಚನವರ ಹೆಸರಿರಲಿಲ್ಲ. ಮಂಗಳೂರಿನಿಂದ ಕೆ.ಕೆ. ಶೆಟ್ಟರು ಅಭ್ಯರ್ಥಿಯಾಗಿದ್ದರು!

ಪೂಣಚ್ಚನವರ ಮಗ ಸಿ.ಪಿ. ಬೆಳ್ಳಿಯಪ್ಪ ಪುಸ್ತಕ ಓದುತ್ತಾ…

ಆ ಚುನಾವಣೆಯಲ್ಲಿ ಪೂಣಚ್ಚ ಸಂಸ್ಥಾ ಕಾಂಗ್ರೆಸ್‌ನಿಂದ ಅಭ್ಯರ್ಥಿಯಾದರು. ಸಂಸ್ಥಾ ಕಾಂಗ್ರೆಸ್ ಸಂಪೂರ್ಣ ಸೋತಿತು. ಇಂದಿರಾ ಮತ್ತೆ ಪ್ರಧಾನಿಯಾದರು.

ನಂತರ ಪೂಣಚ್ಚ 1976 ರವರೆಗೆ ಹೆಚ್ಚೂ ಕಡಿಮೆ ರಾಜಕಾರಣದಿಂದ ದೂರವುಳಿದಿದ್ದರು.

ಪೂಣಚ್ಚ ಒಳ್ಳೆಯ ಓದುಗರು ಕೂಡಾ ಕನ್ನಡದ ಮೇರು ಕೃತಿಗಳನ್ನೆಲ್ಲ ಓದಿದ್ದರು. ಒಮ್ಮೆ ನಾನು ಸಕಲೇಶಪುರದ  ಗ್ರಂಥಾಲಯದಿಂದ ಕೆಲವು ಪುಸ್ತಕಗಳನ್ನು  ತಂದಿಟ್ಟುಕೊಂಡಿದ್ದೆ. ಅದನ್ನು ನೋಡಿ “ಹೋ ನಿಮಗೆ ಓದುವ ಅಭ್ಯಾಸ ಇದೆ. ಅದು ಬಹಳ ಒಳ್ಳೆಯದು ಬಿಡಬೇಡಿ” ಎಂದರು. ಅವರಾಗ ರಾವ ಬಹದ್ದೂರ್ ಅವರ ಗ್ರಾಮಾಯಣವನ್ನು ಓದುತ್ತಿದ್ದರು.

ಪೂಣಚ್ಚನವರಿಗೆ ನಾಲ್ವರು ಮಕ್ಕಳು. ಹಿರಿಯ ಮಗ ಸಿ.ಪಿ. ಬೆಳ್ಳಿಯಪ್ಪ. ಇವರು Victoria gowramma the last princes of coorg, nuggets from coorg history  ಮುಂತಾದ ಪುಸ್ತಕಗಳ ಬರಹಗಾರರು.

ಕಿಟ್ಟಿ ಗಾಳಿಪಟ

ಇನ್ನೊಬ್ಬಳು ಮಗಳು ವಿಜಯಾ ಬ್ರಿಗೇಡಿಯರ್ ಡಿಯರ್ ಕೆ.ಎಂ. ಮುತ್ತಣ್ಣನವರ ಪತ್ನಿ. ಮೂರನೆಯವರು ಖ್ಯಾತ ಪರಿಸರಾಸಕ್ತ ಕರ್ನಲ್ ಸಿ.ಪಿ ಮುತ್ತಣ್ಣ. ಪರಿಸರ ಹೋರಾಟಕ್ಕಾಗಿ ಡಾ. ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಪಡೆದಿರುವ ಸಿ.ಪಿ. ಮುತ್ತಣ್ಣ ಈಗ ಕೊಡಗಿಗೆ ರೈಲ್ವೇ ತರುವುದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ.

ಕೊನೆಯವರು ವೈದ್ಯೆ ಕಾದಂಬರಿಕಾರ್ತಿ ಕಾವೇರಿ ನಂಬೀಶನ್  The story must not be told, the scent of pepper ಮುಂತಾದ ಐದು ಕಾದಂಬರಿಗಳನ್ನು kitty kite ಸೇರಿದಂತೆ ಮಕ್ಕಳಿಗಾಗಿ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. Kitty kite ಕನ್ನಡದಲ್ಲೂ ಬಂದಿದೆ.

ಅಪರೂಪಕ್ಕೊಮ್ಮೆ ಇವರೆಲ್ಲರೂ ಕೂಡಿ ತೋಟಕ್ಕೆ ಬರುವುದಿತ್ತು.

ಡಾ. ಕಾವೇರಿ ಭಾರತದ ಹಲವಾರು ಕಡೆಗಳಲ್ಲಿ ಹಿಂದುಳಿದ ಗ್ರಾಮಾಂತರ ಪ್ರದೇಶದಲ್ಲಿ ವೈದ್ಯೆಯಾಗಿ ಕೆಲಸಮಾಡಿದವರು. ಗ್ರಾಮ ಭಾರತ ಅವರ ಆಯ್ಕೆ. ಸಕಲೇಶಪುರದ ಪಕ್ಕ ಹಳ್ಳಿಯೊಂದರಲ್ಲಿ ಸಣ್ಣ ಆಸ್ಪತ್ರೆಯೊಂದನ್ನು ಸ್ಥಾಪಿಸಿ ಕೆಲಸ ಮಾಡುವ ಉದ್ದೇಶದಿಂದ ರಕ್ಷಿದಿಯಲ್ಲಿ ಒಂದು ಸ್ಥಳವನ್ನು ಕೊಂಡುಕೊಳ್ಳಲು ಬಯಸಿದ್ದರು. ಸ್ಥಳವನ್ನು ಮಾರಬಯಸಿದ್ದ ವ್ಯಕ್ತಿ ಕೊನೆಯ ಕ್ಷಣದಲ್ಲಿ ಕರಾರಿಗೆ ತಪ್ಪಿದ್ದರಿಂದ ಪೂಣಚ್ಚನವರಿಗೆ ನಿರಾಸೆಯಾಯಿತು. ನಂತರ ಸಕಲೇಶಪುರದ ಪಕ್ಕದ ನಾರ್ವೆಗ್ರಾಮದಲ್ಲಿ(ತೇಜಸ್ವಿಯವರ ಕರ್ವಾಲೋ ಕಾದಂಬರಿಯಲ್ಲಿ ಬರುವ ನಾರ್ವೆ ಗ್ರಾಮ ಇದೇ) ನಾರ್ವೆ ಮಹಾಂತಪ್ಪನವರ ಕುಟುಂಬದವರು ಉಚಿತವಾಗಿ ಸ್ಥಳ ಕೊಡುತ್ತೇವೆಂದರೂ ಯಾಕೋ ಅವರು ಮನಸ್ಸು ಮಾಡಲಿಲ್ಲ. ನಂತರ ಅವರು ಕೊಡಗಿನ ಅಮ್ಮತ್ತಿಯ ಬಳಿಯೇ ಒಂದು ಆಸ್ಪತ್ರೆಯನ್ನು ಸ್ಥಾಪಿಸಿದರು.

ಆ ಕಾರಣದಿಂದ ಸಕಲೇಶಪುರದ ಪರಿಸರದಲ್ಲಿ ಸಮಾಜಮುಖಿ ವೈದ್ಯರೊಬ್ಬರ ಸೇವೆ ಸಿಗುವುದು ತಪ್ಪಿಹೋಯಿತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು -5: ಗಣಪಯ್ಯ ಎಂಬ ಅನ್ನದಾತ, ಉದ್ಯೋಗದಾತ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...