ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ದೆಹಲಿಯ ವಾಯು ಮಾಲಿನ್ಯದಂತಹ ನಿರ್ಣಾಯಕ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದು ನಾಟಕವಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ಕೊಟ್ಟಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳ ಮುಂದೆ ಮಾತನಾಡಿದ್ದ ಪ್ರಧಾನಿ ಮೋದಿ, ಪ್ರತಿಪಕ್ಷಗಳನ್ನು ಟೀಕಿಸಿ “ವಿಷಯಗಳು ಸ್ಪಷ್ಟವಾಗಿರಬೇಕು, ಸಂಸತ್ತು ನಾಟಕದ ವೇದಿಕೆಯಲ್ಲ” ಎಂದಿದ್ದರು.
ಪ್ರಧಾನಿಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, “ಚುನಾವಣಾ ಪರಿಸ್ಥಿತಿ, ಎಸ್‌ಐಆರ್ ಮತ್ತು ಮಾಲಿನ್ಯ ದೊಡ್ಡ ಸಮಸ್ಯೆಗಳು, ನಾವು ಅವುಗಳ ಬಗ್ಗೆ ಚರ್ಚಿಸೋಣ. ಸಂಸತ್ತು ಇರುವುದು ಏತಕ್ಕೆ? ಈ ವಿಷಯಗಳೆಲ್ಲ ನಾಟಕವಲ್ಲ. ಸಮಸ್ಯೆಗಳನ್ನು ಪ್ರಸ್ತಾಪಿಸಿ ಅವುಗಳ ಬಗ್ಗೆ ಧ್ವನಿ ಎತ್ತುವುದು ನಾಟಕವಲ್ಲ. ಜನರಿಗೆ ಸಂಬಂಧಿಸಿದ ಮುಖ್ಯವಾದ ವಿಷಯಗಳ ಬಗ್ಗೆ ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಅವಕಾಶ ನೀಡದಿರುವುದು ನಾಟಕ” ಎಂದು ಹೇಳಿದ್ದಾರೆ.
ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಚಳಿಗಾಲದ ಅಧಿವೇಶನವನ್ನು ನಾಟಕೀಯ ವೇದಿಕೆಯನ್ನಾಗಿ ಪರಿವರ್ತಿಸಬೇಡಿ. ತಮ್ಮ ಅಧಿಕೃತ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸಲಹೆಗಳನ್ನು ನೀಡಬಹುದು ಎಂದು ಹೇಳುವ ಮೂಲಕ ಪ್ರತಿಪಕ್ಷಗಳನ್ನು ಕೆಣಕಿದ್ದರು.
ಈ ಹಿಂದೆ ಕಲಾಪಗಳಿಗೆ ಅಡ್ಡಿಪಡಿಸಲು ಪ್ರತಿಪಕ್ಷಗಳು ಮಾಡಿದ್ದ ತಂತ್ರಗಳನ್ನು ಟೀಕಿಸಿದ್ದ ಮೋದಿ, ಸಂಸದರು ಈಗ ತಮ್ಮ ತಂತ್ರವನ್ನು ಬದಲಾಯಿಸಿಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದರು.
ಕಳೆದ 10 ವರ್ಷಗಳಿಂದ ವಿರೋಧ ಪಕ್ಷಗಳು ಆಡುತ್ತಿರುವ ಆಟ ಇನ್ನು ಮುಂದೆ ಜನರ ಮುಂದೆ ನಡೆಯುವುದಿಲ್ಲ. ಅವರು ತಮ್ಮ ತಂತ್ರವನ್ನು ಬದಲಾಯಿಸಿಕೊಳ್ಳಬೇಕು. ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದರು.
ನಾಟಕ ಮಾಡಲು ಬಯಸುವವರು ಮಾಡಬಹುದು. ಆದರೆ, ಇಲ್ಲಿ ಸ್ಪಷ್ಟತೆ ಇರಬೇಕು, ನಾಟಕವಲ್ಲ. ನೀತಿ ನಿಯಮಗಳಿಗೆ ಒತ್ತು ನೀಡಬೇಕು, ಘೋಷಣೆಗಳಿಗಲ್ಲ. ಮೊದಲ ಬಾರಿಗೆ ಸಂಸದರಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಸಿಗದ ಕಾರಣ ನಿರಾಶೆಗೊಳ್ಳುತ್ತಿದ್ದಾರೆ ಎಂದಿದ್ದರು.
ಮೊದಲ ಬಾರಿಗೆ ಸಂಸದರಾದವರಿಗೆ, ಅವರ ಪಕ್ಷ ಯಾವುದೇ ಆಗಿರಲಿ ಅವಕಾಶ ನೀಡಬೇಕು. ನಾವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಾಟಕ ಮಾಡಲು ಹಲವು ಸ್ಥಳಗಳಿವೆ, ಸಂಸತ್ತು ಅದಕ್ಕೆ ವೇದಿಕೆಯಲ್ಲ ಎಂದು ಹೇಳಿದ್ದರು.
ಈ ಬಾರಿ ಕಡಿಮೆ ಅವಧಿಯ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಸರ್ಕಾರ 14 ಮಸೂದೆಗಳ ಮಂಡನೆ ಸೇರಿದಂತೆ ದೊಡ್ಡ ಮಟ್ಟದ ಶಾಸಕಾಂಗ ಕಾರ್ಯಸೂಚಿಯನ್ನು ರೂಪಿಸಿದೆ.
ನವೆಂಬರ್ 10ರ ದೆಹಲಿ ಭಯೋತ್ಪಾದಕ ದಾಳಿಯ ನಂತರದ ರಾಷ್ಟ್ರೀಯ ಭದ್ರತಾ ಕಾಳಜಿಗಳು, ವಿಶೇಷವಾಗಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಹಲವಾರು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಆತ್ಮಹತ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ವಿರೋಧ ಪಕ್ಷಗಳು ಒತ್ತಾಯಿಸಿವೆ.
ಈ ಬಾರಿ ಚಳಿಗಾಲದ ಅಧಿವೇಶನದಲ್ಲಿ 15 ಕಲಾಪಗಳು ನಡೆಯಲಿವೆ. ಸಾಮಾನ್ಯ 20 ಕಲಾಪಗಳು ನಡೆಯಬೇಕು. ಆದರೆ, ಈ ಬಾರಿ ಅಧಿವೇಶನದ ಸಮಯ ಕಡಿತಗೊಳಿಸಲಾಗಿದೆ.
ಸರ್ಕಾರ ಸಂಸತ್ತಿನ ಹಳಿತಪ್ಪಿಸುತ್ತದೆ ಮತ್ತು ಅಧಿವೇಶನದ ಅವಧಿಯನ್ನು ಕಡಿಮೆ ಮಾಡುವ ಮೂಲಕ ಶಾಸಕಾಂಗವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.


