“ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಜನರ ಪ್ರತಿಭಟನೆ ಹಕ್ಕನ್ನು ಕಸಿಯುವ ಪ್ರಯತ್ನ ಮಾಡುತ್ತಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಮತ್ತು ಜನ ವಿರೋಧಿ ಕಾಯ್ದೆಗಳ ವಿರುದ್ಧದ ‘ರಾಜಭವನ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿರುವ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಿನ್ನೆ ರಾತ್ರಿಯಿಂದಲೇ ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆಯುತ್ತಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸರಕಾರ ದೌರ್ಜನ್ಯ ಮೆರೆಯುತ್ತಿದೆ” ಎಂದು ಶಿವಕುಮಾರ್ ಕಿಡಿ ಕಾರಿದ್ದಾರೆ.
“ಹೋರಾಟ ನಮ್ಮ ಉಸಿರು. ಪ್ರತಿಭಟನೆ ಹಕ್ಕು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಹೀಗಾಗಿ ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲೇ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿ, ರಸ್ತೆ ಬಂದ್ ಮಾಡಿ” ಎಂದು ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.
ಇದನ್ನೂ ಓದಿ:ಕೃಷಿ ನೀತಿ ವಿರೋಧಿ ಹೋರಾಟ: ಪೆರುವಿನ ರೈತರ ಹೋರಾಟಕ್ಕೆ ಜಯ
ಮೂರು ಕರಾಳ ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲವಾಗಿ, ರಾಜ್ಯದಲ್ಲಿ ಕೊರೋನಾ ಪರಿಹಾರ ಹಣ ನೀಡದಿರುವುದು ಹಾಗೂ ಬೆಲೆ ಏರಿಕೆ, ತೆರಿಗೆ ಏರಿಕೆಯಂತಹ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಜನರ ಧ್ವನಿಯನ್ನು ಎತ್ತಲು ಇಂದು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದ್ದರು.
“ನಾವು ರೈತರ ಪರವಾಗಿ ನಿಲ್ಲುತ್ತೇವೆ. ಕರಾಳ ಕಾಯ್ದೆಗಳನ್ನು ಕಿತ್ತುಹಾಕಬೇಕು ಎಂಬುದು ರೈತರ ಬೇಡಿಕೆ. ಅವರ ಬೇಡಿಕೆ ಈಡೇರುವವರೆಗೆ ನಾವು ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ. ಈ ಹಿನ್ನೆಲೆಯಲ್ಲಿ ಅವರಿಗೆ ಧ್ವನಿಯಾಗಲು ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾವು ಶಿಸ್ತಿನ ಪ್ರತಿಭಟನೆ ಮಾಡಬೇಕಿದ್ದು, ಎಲ್ಲ ವಾಹನಗಳು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಬಂದು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಬರಬೇಕು. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ” ಎಂದು ಹೇಳಿದ್ದರು.
ಇದನ್ನೂ ಓದಿ: ಟ್ರಾಕ್ಟರ್ ರ್ಯಾಲಿ ತಡೆಯುವಂತೆ PIL: ಕಾನೂನಿನಡಿ ಇರುವ ಎಲ್ಲಾ ಅಧಿಕಾರ ಬಳಸಲು ನೀವು ಸ್ವಂತಂತ್ರರು…


