ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಉತ್ತರ ಪ್ರದೇಶದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ವಿರೋಧ ಪಕ್ಷದ ಬೂಟಾಟಿಕೆಯನ್ನು ಈ ಘಟನೆ ಬಯಲು ಮಾಡಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಅಲ್ವಾರ್‌ನಿಂದ ವರದಿಯಾಗಿದೆ ಆದರೆ ಘಟನೆಯ ಆರೋಪಿಗಳನ್ನು ರಾಜ್ಯ ಸರ್ಕಾರ ಇಲ್ಲಿಯವರೆಗೆ ಬಂಧಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಪ್ರಿಯಾಂಕಾ ಗಾಂಧಿಯವರ ಜನ್ಮದಿನವನ್ನು ಆಚರಿಸುವಲ್ಲಿ ನಿರತರಾಗಿದ್ದಾಗ, ರಾಜಸ್ಥಾನದ ಯುವತಿಯರು ಈ ಘೋರ ಅನ್ಯಾಯಕ್ಕಾಗಿ ನ್ಯಾಯವನ್ನು ಬೇಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು
ದೇಹದ ಖಾಸಗಿ ಭಾಗಗಳಿಗೆ ತೀವ್ರ ಗಾಯಗಳಾಗಿದ್ದ ಮಾನಸಿಕ ಅಸ್ವಸ್ಥ ಅಪ್ರಾಪ್ತ ಬಾಲಕಿ ರಾಜಸ್ಥಾನದ ಅಲ್ವಾರ್‌ನಲ್ಲಿ ಬುಧವಾರ (ಜ.12) ಪತ್ತೆಯಾಗಿದ್ದರು. ಆಕೆಯನ್ನು ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬುಧವಾರವೇ ಪ್ರಿಯಾಂಕಾ ಗಾಂಧಿಯವರಯ ಹುಟ್ಟುಹಬ್ಬವಿತ್ತು.
“ಒಂದೆಡೆ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ‘ಲಡ್ಕಿ ಹು ಲಡ್ ಸಕ್ತಿ ಹು’ (ನಾನು ಹುಡುಗಿ ಮತ್ತು ನಾನು ಹೋರಾಡಬಲ್ಲೆ) ಎಂದು ಹೇಳಿದರೆ, ಮತ್ತೊಂದೆಡೆ, ಅವರ ಪಕ್ಷದ ಆಡಳಿತವಿರುವ ರಾಜಸ್ಥಾನದ ಹುಡುಗಿಯರು ’ಲಡ್ಕಿ ಹು, ತುಮ್ ಪರ್ ಭಡ್ಕಿ ಹು’ (ನಾನು ಹುಡುಗಿ ಮತ್ತು ನಿಮ್ಮ ಮೇಲೆ ಕೋಪಗೊಂಡಿದ್ದೇನೆ) ಎಂದು ಹೇಳುವ ಮೂಲಕ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ” ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.
ಈ ಘಟನೆಯಿಂದಾಗಿ ರಾಜ್ಯದ ಜನರಲ್ಲಿ ವ್ಯಾಪಕ ಆಕ್ರೋಶವಿದೆ ಎಂದು ತಿಳಿಸಿರುವ ಗೌರವ್ ಭಾಟಿಯಾ, ಇದು ಕಾಂಗ್ರೆಸ್‌ನ ಬೂಟಾಟಿಕೆಯನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದ್ದಾರೆ.
ಸುಮಾರು 14 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಬಾಲಕಿ ಮಂಗಳವಾರ ತನ್ನ ಮನೆಯಿಂದ ಕಾಣೆಯಾಗಿದ್ದರು. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ತಿಜಾರಾ ಫಟಕ್ ಬಳಿಯ ರಸ್ತೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿಂದ ಜೈಪುರದ ಜೆಕೆ ಲೋನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಅಲ್ವಾರ್ ಘಟನೆಯ ಕುರಿತು ಪೊಲೀಸ್ ಮಹಾನಿರ್ದೇಶಕರಿಂದ ವರದಿ ಕೇಳಿದ್ದಾರೆ ಮತ್ತು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.


