ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯಲ್ಲಿ ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡಿದ್ದ ಅಪರಾಧಿಗೆ ಸುಲ್ತಾನ್‌ಪುರ ನ್ಯಾಯಾಲಯವೊಂದು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ಶರ್ಮಾ ಅವರು ಅಪರಾಧಿ ಸೂರಜ್ ಸರೋಜ್‌ಗೆ 10 ವರ್ಷ ಜೈಲು ಮತ್ತು 51,000 ರೂಪಾಯಿ ದಂಡ ವಿಧಿಸಿದ್ದಾರೆ. ಸುಲ್ತಾನ್‌ಪುರ ಜಿಲ್ಲೆಯ ಸಂಗ್ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
10 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ತನ್ನ 15 ವರ್ಷದ ಮಗಳನ್ನು 2020 ರ ಜನವರಿ 25 ರಂದು ಸೂರಜ್ ಸರೋಜ್ ಬಲವಂತವಾಗಿ ಕೋಳಿ ಫಾರಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೂರಜ್ ಸರೋಜ್ ತನ್ನ ಸಹಚರರ ಸಹಾಯದಿಂದ ಈ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಬೀರುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮಿಂದಾಗಿ ನಾನು ನೇಣು ಹಾಕಿಕೊಳ್ಬೇಕಾ? ಸುವರ್ಣ ಟಿ.ವಿ. ವಿರುದ್ಧ ನಟಿ ಸಂಜನಾ ಕಿಡಿ
ದೂರಿನ ಆಧಾರದ ಮೇಲೆ, ಜನವರಿ 29, 2020 ರಂದು ಸೂರಜ್ ಸರೋಜ್ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿತ್ತು. ಬಳಿಕ ಪೊಲೀಸರು ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಪ್ರಾಸಿಕ್ಯೂಷನ್ ಪರವಾಗಿ ಹಾಜರಾದ ಸರ್ಕಾರಿ ವಕೀಲ ಸಿ.ಎಲ್. ದ್ವಿವೇದಿ ಅವರು ಸಾಕ್ಷ್ಯಗಳನ್ನು ಪ್ರಸ್ತುತಪಡಿಸಿದ್ದರು. ಈ ಘೋರ ಅಪರಾಧಕ್ಕೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು.
ಬಾಲಕಿಯ ಮೇಲಿನ ಅತ್ಯಾಚಾರವನ್ನು ಚಿತ್ರೀಕರಿಸಲು ಸಹಾಯ ಮಾಡಿದ ಅಪರಾಧಿ ಸೂರಜ್ ಸರೋಜ್ ಸಹಚರರನ್ನು ಪೊಲೀಸರು ಇನ್ನೂ ಗುರುತಿಸಿಲ್ಲ.


