ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಿಜೆಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಸಚಿವ ಸ್ಥಾನವನ್ನು ತೊರೆದು ಅಖಿಲೇಶ್ ಯಾದವ್ ಅವರ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಸ್ವಾಮಿ ಪ್ರಸಾದ್ ಮೌರ್ಯ ಅವರು ತಮ್ಮೊಂದಿಗೆ ಇನ್ನೂ ಕೆಲವು ಬಿಜೆಪಿ ಶಾಸಕರನ್ನು ಕರೆದೊಯ್ಯಬಹುದು ಎಂದು ಮೂಲಗಳು ತಿಳಿಸಿವೆ.
“ವಿಭಿನ್ನ ಸಿದ್ಧಾಂತದ ಹೊರತಾಗಿಯೂ, ನಾನು ಯೋಗಿ ಆದಿತ್ಯನಾಥ್ ಸಂಪುಟದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದೇನೆ. ಆದರೆ ದಲಿತರು, ಒಬಿಸಿಗಳು, ರೈತರು, ನಿರುದ್ಯೋಗಿಗಳು ಮತ್ತು ಸಣ್ಣ ಉದ್ಯಮಿಗಳ ಮೇಲೆ ನಡೆಯುತ್ತಿರುವ ತೀವ್ರವಾದ ದಬ್ಬಾಳಿಕೆಯಿಂದಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಯುಪಿ ಚುನಾವಣೆ: ಎಲ್ಲಾ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿದ ಕಾಂಗ್ರೆಸ್
ಸ್ವಾಮಿ ಪ್ರಸಾದ್ ಮೌರ್ಯ ಅವರ ರಾಜೀನಾಮೆ ಪತ್ರ ಹೊರಬರುವ ಮೊದಲೇ ಅವರು ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಪ್ರಬಲ ಹಿಂದುಳಿದ ವರ್ಗದ ನಾಯಕರಾಗಿರು ಸ್ವಾಮಿ ಪ್ರಸಾದ್ ಮೌರ್ಯ ಮಾಯಾವತಿಯವರ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ತೊರೆದ ನಂತರ 2016 ರಲ್ಲಿ ಬಿಜೆಪಿ ಸೇರಿದ್ದರು. ಪೂರ್ವ ಉತ್ತರ ಪ್ರದೇಶದ ಪದ್ರೌನಾದಿಂದ ಬಿಜೆಪಿ ಶಾಸಕರಾಗಿದ್ದಾರೆ. ಅವರ ಪುತ್ರಿ ಸಂಘಮಿತ್ರಾ ಯುಪಿಯ ಬಿಜೆಪಿ ಸಂಸದೆಯಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಸುತ್ತುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬರಲಿದೆ.