ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ ರಾಜಕೀಯ ಶಕ್ತಿಯನ್ನು ಕಳೆದುಕೊಳ್ಳುವ ಅಂತಕ ವ್ಯಕ್ತಪಡಿಸಿದರೆ, ಅವರನ್ನು ಸಮಾಧಾನಪಡಿಸಲು ಸಚಿವರು ಕೆಲವು ಸುಳ್ಳು ಅಂಕಿ ಅಂಶಗಳನ್ನು ನೀಡಿದ್ದಾರೆ. ಆದರೆ, ಸಚಿವರು ಬಾಯಲ್ಲಿ ಹೇಳುವ ಮಾತುಗಳಿಗಿಂತ, ಪುಸ್ತಕದಲ್ಲಿ ಅಚ್ಚಾಗಿರುವ ಕಾನೂನಿನ ಬರಹವೇ ಅಂತಿಮ ಮತ್ತು ಶಕ್ತಿಯುತವಾದುದು.
ಗೃಹ ಸಚಿವರ ಭಾಷಣದ ವ್ಯವಸ್ಥಿತ ತಿರುಚುವಿಕೆ ಇಲ್ಲಿದೆ…
ಹೇಳಿಕೆ 1: “ಲೋಕಸಭೆ ಸ್ಥಾನಗಳ ಸಂಖ್ಯೆಯಲ್ಲಿ ಸುಮಾರು ಶೇಕಡ 50ರಷ್ಟು ಹೆಚ್ಚಳವಾಗಲಿದೆ… ತಮಿಳುನಾಡು ಯಾವುದೇ ನಷ್ಟವನ್ನು ಅನುಭವಿಸುವುದಿಲ್ಲ… ಮತ್ತು ಕೇರಳ 30 ಸಂಸದರನ್ನು ಹೊಂದಲಿದೆ.”
ವಾಸ್ತವ : ಇದೊಂದು ಶಾಸನಬದ್ಧ ಕಾಲ್ಪನಿಕ ಕಥೆ (statutory fiction) ಲೆಕ್ಕಾಚಾರದ ಪ್ರಕಾರ ಇದು ಅಸಾಧ್ಯವಾದುದು.
ಗೃಹ ಸಚಿವರು ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಶೇಕಡ 50ರಷ್ಟು ಸ್ಥಾನಗಳನ್ನು ಹೆಚ್ಚಿಸಲಾಗುವುದು ಎಂದು ಪದೇ ಪದೇ ಪ್ರತಿಪಾದಿಸಿದ್ದಾರೆ. ಆದರೆ, 2026ರ ಕ್ಷೇತ್ರ ಮರು ವಿಂಗಡಣಾ ಮಸೂದೆಯಲ್ಲಾಗಲಿ (Delimitation Bill, 2026) ಅಥವಾ ಸಾಂವಿಧಾನಿಕ ತಿದ್ದುಪಡಿ ಮಸೂದೆಯಲ್ಲಾಗಲಿ ಈ ಸೂತ್ರವು ಎಲ್ಲಿಯೂ ಕಂಡುಬರುವುದಿಲ್ಲ. ಅಸಲಿಗೆ, ಈ ನಿಯಮವು ಕಾನೂನಿನಲ್ಲಿಯೇ ಅಸ್ತಿತ್ವದಲ್ಲಿಲ್ಲ.
ಕಾನೂನು ಏನು ಹೇಳುತ್ತದೆ? ಹೊಸ ಕ್ಷೇತ್ರ ಮರು ವಿಂಗಡಣಾ ಮಸೂದೆಯ ಸೆಕ್ಷನ್ 8, “ಇತ್ತೀಚಿನ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ” ರಾಜ್ಯಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡುವಂತೆ ಆಯೋಗಕ್ಕೆ ಆದೇಶಿಸುತ್ತದೆ. ಅದೇ ಸಮಯದಲ್ಲಿ, ಸಂವಿಧಾನದ ವಿಧಿ 81(2)(a) ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೂ ಜನಸಂಖ್ಯೆ ಮತ್ತು ಸ್ಥಾನಗಳ ಅನುಪಾತವು ಒಂದೇ ಆಗಿರಬೇಕು ಎಂದು ಕಡ್ಡಾಯಗೊಳಿಸುತ್ತದೆ.
ಇವುಗಳಲ್ಲಿ ಯಾವುದನ್ನೂ ಕಾನೂನುಬದ್ಧವಾಗಿ ಅಥವಾ ಲೆಕ್ಕಾಚಾರದ ಪ್ರಕಾರ ಪೂರೈಸಲು ಸಾಧ್ಯವಿಲ್ಲ. 1971 ರಿಂದ ಉತ್ತರ ಪ್ರದೇಶದ ಜನಸಂಖ್ಯೆಯು ಸ್ಫೋಟಗೊಂಡಿದೆ, ಆದರೆ ಕೇರಳದ ಜನಸಂಖ್ಯೆಯು ಸ್ಥಿರವಾಗಿದೆ. ಎರಡೂ ರಾಜ್ಯಗಳಿಗೆ ಸಮನಾಗಿ ಶೇಕಡ 50 ಹೆಚ್ಚಳವನ್ನು ಅನ್ವಯಿಸಿದರೆ, ಉತ್ತರ ಪ್ರದೇಶದ ಒಬ್ಬ ಸಂಸದನು ಕೇರಳದ ಸಂಸದನಿಗಿಂತ ಲಕ್ಷಾಂತರ ಹೆಚ್ಚು ಜನರನ್ನು ಪ್ರತಿನಿಧಿಸುತ್ತಾನೆ. ಇದು ಸಂವಿಧಾನದ 81ನೇ ವಿಧಿಯ ನೇರ ಉಲ್ಲಂಘನೆಯಾಗಿದೆ. ಒಂದು ವೇಳೆ ಕ್ಷೇತ್ರ ಮರು ವಿಂಗಡನೆ ಆಯೋಗವು ಹೊಸ ಮಸೂದೆಯ ಮೂಲ ಪಠ್ಯವನ್ನು ಅನುಸರಿಸಿ, ಸಮಾನ ಪ್ರಾತಿನಿಧ್ಯದ ಅನುಪಾತವನ್ನು ಕಾಯ್ದುಕೊಳ್ಳಲು ‘ಇತ್ತೀಚಿನ ಜನಗಣತಿ’ಯನ್ನು ಬಳಸಿದರೆ, ಅದು ಹಿಂದಿ ಭಾಷಿಕ ರಾಜ್ಯಗಳಿಗೆ ಹೊಸ ಸ್ಥಾನಗಳಲ್ಲಿ ಬೃಹತ್ ಮತ್ತು ಅಸಮಾನ ಪಾಲನ್ನು ನೀಡಬೇಕಾಗುತ್ತದೆ. ಗೃಹ ಸಚಿವರು ಮಂಡಿಸುತ್ತಿರುವ ಕಾನೂನುಗಳ ಅಡಿಯಲ್ಲೇ, ಈ ಶೇ 50ರಷ್ಟು ಸಮಾನ ಹೆಚ್ಚಳ ಎಂಬುದು ಲೆಕ್ಕಾಚಾರದ ದೃಷ್ಟಿಯಿಂದ ಅಸಾಧ್ಯವಾದುದು.
ಹೇಳಿಕೆ 2 : “ಪ್ರಸ್ತುತ, ತಮಿಳುನಾಡಿನ ಶೇಕಡಾವಾರು ಬಲವು ಶೇಕಡ 7.18ರಷ್ಟಿದ್ದು, ಅದು ಶೇಕಡ 7.23ಕ್ಕೆ ಹೆಚ್ಚಾಗುತ್ತದೆ… ದಕ್ಷಿಣದ ಸಂಸದರ ಬಲವು… ಶೇಕಡ 23.97 ಆಗುತ್ತದೆ, ಅಂದರೆ ಶೇಕಡ 24”
ವಾಸ್ತವ : ಇದು ಯಾವುದೇ ಜನಗಣತಿಗೆ ಸಂಬಂಧವಿಲ್ಲದ, ಕೇವಲ ಕಲ್ಪಿತ ಅಥವಾ ಸೃಷ್ಟಿಸಿದ ಸೂತ್ರವಾಗಿದೆ (fabricated formula).
ಗೃಹ ಸಚಿವರು ಭವಿಷ್ಯದ ಸಂಸತ್ತಿನಲ್ಲಿ ಒಟ್ಟು 816 ಸೀಟುಗಳು ಇರುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿಯೊಂದು ರಾಜ್ಯಕ್ಕೆ ಎಷ್ಟು ಪರ್ಸೆಂಟ್ ಸೀಟು ಸಿಗುತ್ತದೆ ಎಂಬ ಬಗ್ಗೆ ಪಾಯಿಂಟ್ ಸಮೇತ (Decimal point) ಅತಿ ನಿಖರವಾದ ಅಂಕಿ ಅಂಶಗಳನ್ನು ನೀಡಿದ್ದಾರೆ. ಅವರು ಈ ರೀತಿ ಅತಿ ನಿಖರವಾಗಿ ಅಂಕಿ ಅಂಶಗಳನ್ನು ಕೊಟ್ಟಾಗ, ದಕ್ಷಿಣ ಭಾರತದ ಜನರಿಗೆ ನಮ್ಮ ಪ್ರಾತಿನಿಧ್ಯ ಕಡಿಮೆ ಆಗುವುದಿಲ್ಲ ಎಂಬ ಭರವಸೆ ಮೂಡಬಹುದು. ಇದನ್ನು ನೋಡಿದ ಯಾರಾದರೂ, ಸಚಿವರು ಈ ಲೆಕ್ಕಾಚಾರವನ್ನು 2011ರ ಜನಗಣತಿಯ ಆಧಾರದ ಮೇಲೆ ಮಾಡಿರಬಹುದು ಎಂದು ನಂಬುವಂತಿದೆ.
ಆದರೆ ನಾವು ಲೆಕ್ಕಾಚಾರವನ್ನು ಗಮನಿಸಿದರೆ, ಅವರು ಹಾಗೆ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಒಂದು ವೇಳೆ ಸರ್ಕಾರವು ಸಂವಿಧಾನದ ನಿಯಮದಂತೆ (ಪ್ರತಿ ಸ್ಥಾನಕ್ಕೆ ಸಮಾನ ಜನಸಂಖ್ಯೆ) 2011ರ ಜನಗಣತಿಯ ಅಂಕಿ ಅಂಶಗಳನ್ನು ಬಳಸಿ 816 ಸ್ಥಾನಗಳನ್ನು ಹಂಚಿಕೆ ಮಾಡಿದರೆ, ದಕ್ಷಿಣ ಭಾರತದ ರಾಜ್ಯಗಳ ಪಾಲಿನ ಶೇಕಡಾವಾರು ಪ್ರಮಾಣವು ಗಣನೀಯವಾಗಿ ಕುಸಿಯುತ್ತದೆ. ಏಕೆಂದರೆ, 1971 ಮತ್ತು 2011ರ ನಡುವಿನ ಅವಧಿಯಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಭಾರತದ ಜನಸಂಖ್ಯೆಯ ಪಾಲು ಸಾಕಷ್ಟು ಕುಗ್ಗಿದೆ.
ಹಾಗಾದರೆ, ಗೃಹ ಸಚಿವರು ತಮಿಳುನಾಡಿಗೆ 7.23% ಎಂಬ ಅಂಕಿಅಂಶವನ್ನು ಹೇಗೆ ಲೆಕ್ಕ ಹಾಕಿದರು?
ವಾಸ್ತವದಲ್ಲಿ, ಅವರು ಈ ಲೆಕ್ಕಕ್ಕೆ ಯಾವುದೇ ಜನಗಣತಿಯ ದತ್ತಾಂಶವನ್ನು ಬಳಸಿಲ್ಲ. ಬದಲಾಗಿ, ಅವರು ಅತ್ಯಂತ ಸರಳವಾದ ಒಂದು ಸೂತ್ರವನ್ನು ಬಳಸಿದ್ದಾರೆ:
ತಮಿಳುನಾಡಿನ ಈಗಿನ 39 ಸ್ಥಾನಗಳನ್ನು (1971ರ ಜನಗಣತಿ ಆಧಾರಿತ) ತೆಗೆದುಕೊಂಡು, ಅದಕ್ಕೆ 1.5 ರಿಂದ ಗುಣಿಸಿದ್ದಾರೆ (39×1.5=58.5). ಬಂದ ಮೊತ್ತವನ್ನು ರೌಂಡ್ ಆಫ್ ಮಾಡಿ 59 ಸ್ಥಾನಗಳು ಎಂದು ನಿಗದಿಪಡಿಸಿದ್ದಾರೆ. ನಂತರ, ಈ 59 ಸ್ಥಾನಗಳನ್ನು ಅವರು ಪ್ರಸ್ತಾಪಿಸಿದ ಸಂಸತ್ತಿನ ಒಟ್ಟು 816 ಸ್ಥಾನಗಳಿಂದ ಭಾಗಿಸಿದ್ದಾರೆ (59÷816). ಈ ಲೆಕ್ಕಾಚಾರದಿಂದ ಅವರಿಗೆ 7.23% ಎಂಬ ನಿಖರವಾದ ಅಂಕಿ ಅಂಶ ಸಿಕ್ಕಿದೆ.
ಸಚಿವರು ನೀಡಿದ ಈ 7.23% ಅಂಕಿ ಅಂಶಕ್ಕೂ ಮತ್ತು ಮಸೂದೆಯಲ್ಲಿ ಉಲ್ಲೇಖಿಸಲಾದ ‘ಇತ್ತೀಚಿನ ಜನಗಣತಿ’ ಆಧಾರಿತ ಸೀಟು ಹಂಚಿಕೆಗೂ ಯಾವುದೇ ಸಂಬಂಧವಿಲ್ಲ.
ಮೊದಲನೆಯದಾಗಿ, ಗೃಹ ಸಚಿವರು ಸಂಸತ್ತಿನಲ್ಲಿ ನಿಂತು ತಾವು ನೀಡಿದ ಸಮಾಧಾನಕರ ಅಂಕಿಅಂಶಗಳು ಕೇವಲ 1.5 ರಿಂದ ಗುಣಿಸುವ ಸೂತ್ರವನ್ನು ಅವಲಂಬಿಸಿವೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಎರಡನೆಯದಾಗಿ, ಮತ್ತು ಅತ್ಯಂತ ಮುಖ್ಯವಾಗಿ, ಸಚಿವರು ಸಮರ್ಥಿಸಿಕೊಳ್ಳುತ್ತಿರುವ ಮಸೂದೆಯ ಅಡಿಯಲ್ಲೇ ಈ ಸೂತ್ರವು ಕಾನೂನುಬಾಹಿರವಾಗಿದೆ. ಕ್ಷೇತ್ರ ಮರು ವಿಂಗಡಣಾ ಮಸೂದೆಯ ಸೆಕ್ಷನ್ 8, ಇತ್ತೀಚಿನ ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡುವಂತೆ ಆಯೋಗಕ್ಕೆ ಆದೇಶಿಸುತ್ತದೆ. ಪ್ರಸ್ತುತ ಇರುವ ಸ್ಥಾನಗಳನ್ನು 1.5 ರಿಂದ ಗುಣಿಸಲು ಇದು ಆಯೋಗಕ್ಕೆ ಅವಕಾಶ ನೀಡುವುದಿಲ್ಲ.
ಗೃಹ ಸಚಿವರು ಜನಸಂಖ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಒಂದು ಕಾಲ್ಪನಿಕ ಗಣಿತದ ಮಾದರಿಯನ್ನು ಮುಂದಿಟ್ಟು ಸಂಸತ್ತನ್ನು ಸಮಾಧಾನಪಡಿಸುತ್ತಿದ್ದಾರೆ; ಆದರೆ ಅದೇ ಸಮಯದಲ್ಲಿ, ಜನಸಂಖ್ಯೆಯನ್ನೇ ರಾಜಕೀಯ ಅಧಿಕಾರದ ಏಕೈಕ ಮತ್ತು ನಿರ್ಣಾಯಕವನ್ನಾಗಿಸುವ ಕಾನೂನನ್ನು ಅಂಗೀಕರಿಸುತ್ತಿದ್ದಾರೆ. ಅವರು ನಮಗೆ ಮರೀಚಿಕೆಯನ್ನು ತೋರಿಸುತ್ತಾ, ನಿಜವಾದ ಅಸ್ತ್ರವನ್ನು ಕಾನೂನಿನ ಪಠ್ಯದೊಳಗೆ ಅಡಗಿಸಿಡುತ್ತಿದ್ದಾರೆ.
ಹೇಳಿಕೆ 3: “ಈ ವಿವರಣೆಗಳನ್ನು ನಾನು ಅತ್ಯಂತ ಅಧಿಕೃತವಾಗಿ, ಈ ಮಸೂದೆಯನ್ನು ಮಂಡಿಸುತ್ತಿರುವ ಸಚಿವನಾಗಿ ಇಲ್ಲಿ ಮಂಡಿಸುತ್ತಿದ್ದೇನೆ.”
ವಾಸ್ತವ : ಭಾಷಣಗಳು ಶಾಸನಬದ್ಧ ಕಾನೂನನ್ನು ಬದಲಿಸಲು ಅಥವಾ ಮೀರಿ ನಿಲ್ಲಲು ಸಾಧ್ಯವಿಲ್ಲ.
ಸಾಂವಿಧಾನಿಕ ಕಾನೂನು ಶಾಸ್ತ್ರದ ಪ್ರಕಾರ ಒಬ್ಬ ಸಚಿವರ ಮೌಖಿಕ ಭರವಸೆಗಳು ಕಾನೂನಿನ ಅಧಿಕೃತ ಪಠ್ಯಕ್ಕೆ ನೇರವಾಗಿ ವಿರುದ್ಧವಾಗಿದ್ದಾಗ, ಆ ಮಾತುಗಳಿಗೆ ಯಾವುದೇ ಕಾನೂನುಬದ್ಧ ಮಾನ್ಯತೆ ಇರುವುದಿಲ್ಲ.
ಕ್ಷೇತ್ರ ಮರು ವಿಂಗಡಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ಕಾನೂನನ್ನು ಅರ್ಥೈಸುವಾಗ ಗೆಜೆಟ್‌ನಲ್ಲಿ ಬರೆಯಲಾದ ಅಧಿಕೃತ ಪಠ್ಯವನ್ನು ಆಧರಿಸುತ್ತಾರೆಯೇ ಹೊರತು, ಕೆರಳಿದ ವಿರೋಧ ಪಕ್ಷಗಳನ್ನು ಸಮಾಧಾನಪಡಿಸಲು ಆಡಿದ ಮಾತುಗಳನ್ನಲ್ಲ. ಒಂದು ವೇಳೆ ದಕ್ಷಿಣ ಭಾರತದ ರಾಜ್ಯಗಳ ಶೇಕಡ 24 ಅನುಪಾತದ ಪಾಲನ್ನು ರಕ್ಷಿಸುವ ಪ್ರಾಮಾಣಿಕ ಉದ್ದೇಶವೇ ಸರ್ಕಾರಕ್ಕೆ ಇದ್ದಿದ್ದರೆ, ಸಂವಿಧಾನ ತಿದ್ದುಪಡಿ ಮಸೂದೆಯಲ್ಲಿ ರಾಜ್ಯಗಳ ನಡುವಿನ ಸ್ಥಾನಗಳ ಅನುಪಾತವು 1971ರ ಅನುಪಾತದಲ್ಲೇ ಮುಂದುವರಿಯುತ್ತದೆ ಎಂಬ ಒಂದೇ ಒಂದು ವಾಕ್ಯವನ್ನು ಸೇರಿಸಿದರೆ ಸಾಕಾಗಿತ್ತು.
ಸರ್ಕಾರವು ಈ ವಾಕ್ಯವನ್ನು ಬರೆಯದಿರಲು ಉದ್ದೇಶಪೂರ್ವಕವಾಗಿಯೇ ನಿರ್ಧರಿಸಿದೆ. ಬದಲಾಗಿ, ಅದು ಜನಗಣತಿಯ ಆಧಾರದ ಮೇಲೆ ಸೀಟುಗಳ ಸಂಖ್ಯೆಯನ್ನು ಮರುಹಂಚಿಕೆ ಮಾಡಲು ಮುಕ್ತ ಅವಕಾಶ ನೀಡುವ ವಾಕ್ಯವನ್ನು ಬರೆದಿದೆ.
ಹೇಳಿಕೆ 4: “ಮುಕ್ತ ಕ್ಷೇತ್ರಗಳ ಸಂಖ್ಯೆಯನ್ನು ಕಡಿಮೆ ಮಾಡದೆ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ಕಲ್ಪಿಸಲೆಂದೇ ಲೋಕಸಭೆಯ ಒಟ್ಟು ಸ್ಥಾನಗಳನ್ನು 850ಕ್ಕೆ ಏರಿಸಲಾಗುತ್ತಿದೆ.
ವಾಸ್ತವ : ಅಧಿಕಾರವನ್ನು ಕಬಳಿಸುವ ಸಂಚನ್ನು ಮರೆಮಾಚಲು ಮಹಿಳಾ ಹಕ್ಕುಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ.
ಸರ್ಕಾರವು ಒಂದು ಪ್ರಗತಿಪರ ಬೇಡಿಕೆಯನ್ನು ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಲೋಕಸಭೆಯ ಬೃಹತ್ ವಿಸ್ತರಣೆಯನ್ನು ನಾರಿ ಶಕ್ತಿಯ ಹಕ್ಕುಗಳೊಂದಿಗೆ ಜೋಡಿಸುವ ಮೂಲಕ, ಸರ್ಕಾರವು ತನ್ನ ಸುತ್ತ ಒಂದು ನೈತಿಕ ಕವಚವನ್ನು ನಿರ್ಮಿಸಿಕೊಳ್ಳುತ್ತಿದೆ.
ಆದರೆ, ಈ ವಿಸ್ತರಣೆಯ ಪೊಲಿಟಿಕಲ್ ಎಕಾನಮಿ ಗಮನಿಸಿ. ಸದನದ ಗರಿಷ್ಠ ಮಿತಿಯನ್ನು 850ಕ್ಕೆ ಏರಿಸುವುದರಿಂದ 300ಕ್ಕೂ ಹೆಚ್ಚು ಹೆಚ್ಚುವರಿ ಸ್ಥಾನಗಳ ಬೃಹತ್ ಸಂಗ್ರಹ ಸೃಷ್ಟಿಯಾಗುತ್ತದೆ. ಈ ಹೆಚ್ಚುವರಿ ಸ್ಥಾನಗಳು ದಕ್ಷಿಣದ ರಾಜ್ಯಗಳಿಗೆ ಒಂದು ಭರವಸೆ ನೀಡುತ್ತವೆ: ಅದೆಂದರೆ, ರಾಷ್ಟ್ರೀಯ ರಾಜಕೀಯದಲ್ಲಿ ಅವರ ಪಾಲಿನ ಶೇಕಡಾವಾರು ಶಕ್ತಿ ಕುಸಿದರೂ ಸಹ, ಅವರು ಪ್ರಸ್ತುತ ಹೊಂದಿರುವ ಸ್ಥಾನಗಳ ಒಟ್ಟು ಸಂಖ್ಯೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದಿಲ್ಲ (ಉದಾಹರಣೆಗೆ, ಕೇರಳ ತನ್ನ 20 ಸ್ಥಾನಗಳನ್ನು ಉಳಿಸಿಕೊಳ್ಳಬಹುದು ಅಥವಾ 30ಕ್ಕೆ ಏರಿಸಿಕೊಳ್ಳಬಹುದು).
ಇದು ಚಂದ್ರಬಾಬು ನಾಯ್ಡು ಅವರಂತಹ ಪ್ರಾದೇಶಿಕ ಮಿತ್ರಪಕ್ಷಗಳು ಮುಖಭಂಗದಿಂದ ತಪ್ಪಿಸಿಕೊಳ್ಳಲು ಅವಕಾಶವನ್ನು ನೀಡಲು ರೂಪಿಸಿದ ಒಂದು ಕೈಚಳಕವಾಗಿದೆ. ಅವರು ತಮ್ಮ ಮತದಾರರಿಗೆ, ‘ನಾವು ಯಾವುದೇ ಸ್ಥಾನಗಳನ್ನು ಕಳೆದುಕೊಂಡಿಲ್ಲ’ ಎಂದು ಹೇಳಿಕೊಳ್ಳಬಹುದು. ಆದರೆ ಸಂಸದೀಯ ವ್ಯವಸ್ಥೆಯಲ್ಲಿ ಕೇವಲ ಸ್ಥಾನಗಳ ಸಂಖ್ಯೆಗೆ ಅರ್ಥವಿಲ್ಲ; ಸಂಸತ್ತಿನ ಅಧಿಕಾರವು ಕಟ್ಟುನಿಟ್ಟಾಗಿ ಅನುಪಾತವನ್ನು ಅವಲಂಬಿಸಿರುತ್ತದೆ. ದಕ್ಷಿಣದ ರಾಜ್ಯಗಳು ತಮ್ಮ ಅನುಪಾತದ ಶಕ್ತಿಯನ್ನು ಕಳೆದುಕೊಳ್ಳುವಾಗ ಅದರ ನೋವು ಅವರಿಗೆ ತಿಳಿಯದಂತೆ ಮಾಡಲು, ‘ಸದನದ ವಿಸ್ತರಣೆ’ ಎಂಬ ಅರವಳಿಕೆಯನ್ನು ನೀಡಲಾಗುತ್ತಿದೆ.
ಹೇಳಿಕೆ 5: “ನಾವು ಕ್ಷೇತ್ರ ಮರು ವಿಂಗಡಣಾ ಆಯೋಗದ ಕಾಯ್ದೆಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ… ನಾವು ಅದನ್ನು ದುರುದ್ದೇಶದಿಂದ ತಿರುಚುವುದಿಲ್ಲ.
ವಾಸ್ತವ : ಈ ಬದಲಾವಣೆ ಕೇವಲ ಕ್ಷೇತ್ರ ಮರು ವಿಂಗಡಣಾ ಆಯೋಗಕ್ಕೆ ಸೀಮಿತವಾಗಿಲ್ಲ, ಅದು ಸಂವಿಧಾನದ ಬರಹದಲ್ಲೇ ಇದೆ.
ಗೃಹ ಸಚಿವರು ವಿರೋಧ ಪಕ್ಷಗಳಿಗೆ ಸವಾಲು ಹಾಕುತ್ತಾ, ಸರ್ಕಾರವು ಕ್ಷೇತ್ರ ಮರು ವಿಂಗಡಣಾ ಆಯೋಗದ ಕಾಯ್ದೆಯ ರಚನೆಯಲ್ಲಿ ಒಂದು “ಪೂರ್ಣವಿರಾಮ ಅಥವಾ ಅಲ್ಪವಿರಾಮದಷ್ಟು” ಬದಲಾವಣೆಯನ್ನೂ ಮಾಡಿಲ್ಲ ಎಂದು ಪ್ರತಿಪಾದಿಸಿದೆ.
ಇದು ಕೇವಲ ದಾರಿ ತಪ್ಪಿಸುವ ತಂತ್ರ. ಇಲ್ಲಿ ನಡೆಯುತ್ತಿರುವುದು ಒಂದು ರೀತಿಯ ‘ರಾಜಕೀಯ ಕೈಚಳಕ’. ಇದನ್ನು ಮೂರು ಹಂತಗಳಲ್ಲಿ ಅರ್ಥಮಾಡಿಕೊಳ್ಳಬಹುದು:
ಸಚಿವರು “ನಾವು ಆಯೋಗದ ನಿಯಮಗಳನ್ನು ಬದಲಿಸಿಲ್ಲ” ಎಂದು ಹೇಳುತ್ತಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಮಾತು. ಅಸಲಿ ಬದಲಾವಣೆ ಆಗುತ್ತಿರುವುದು ಸಂವಿಧಾನದಲ್ಲಿ. ಆಟಗಾರರನ್ನು ಬದಲಿಸದಿದ್ದರೂ, ಆಟದ ನಿಯಮಗಳನ್ನೇ ಬದಲಿಸಿದರೆ ಫಲಿತಾಂಶ ತಾನಾಗಿಯೇ ಬದಲಾಗುತ್ತದೆ. ಇಲ್ಲಿ ಸಂವಿಧಾನದ ತಿದ್ದುಪಡಿಯೇ ಆ ‘ನಿಯಮ ಬದಲಾವಣೆ’.
ಇದುವರೆಗೆ 1971ರ ಜನಗಣತಿಯ ಆಧಾರದ ಮೇಲೆ ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಸೀಟುಗಳು ಸಿಗುತ್ತಿದ್ದವು (ಜನಸಂಖ್ಯೆ ಕಡಿಮೆಯಿದ್ದರೂ). ಈಗ ಸರ್ಕಾರ ತರುತ್ತಿರುವ ಹೊಸ ಮಸೂದೆಯು ಈ ಹಳೆಯ ನಿಯಮವನ್ನು ಅಳಿಸಿಹಾಕುತ್ತದೆ. ಇದು ಆಯೋಗಕ್ಕೆ “ಹೊಸ ಜನಗಣತಿಯನ್ನೇ ಬಳಸಿ” ಎಂದು ಆರ್ಡರ್ ಮಾಡುತ್ತದೆ.
ಕ್ಷೇತ್ರ ಮರು ವಿಂಗಡಣಾ ಆಯೋಗವು ಕೇವಲ ಒಬ್ಬ ‘ಆಜ್ಞಾಪಾಲಕ’ ಅಷ್ಟೆ. ಸಂವಿಧಾನದಲ್ಲಿ “ಹೊಸ ಜನಗಣತಿ ಬಳಸಿ” ಎಂದು ಬರೆದ ಮೇಲೆ, ಆಯೋಗವು ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸೀಟುಗಳನ್ನು ಕೊಡಲೇಬೇಕಾಗುತ್ತದೆ. ದಕ್ಷಿಣದ ರಾಜ್ಯಗಳ ಅಧಿಕಾರ ಕುಗ್ಗುವುದನ್ನು ತಡೆಯಲು ಆಯೋಗಕ್ಕೂ ಸಾಧ್ಯವಿಲ್ಲ.
ಅಲ್ಲದೆ, ಸದನದ ಸ್ಥಾನಗಳ ಸಂಖ್ಯೆಯನ್ನು 850ಕ್ಕೆ ಏರಿಸುವುದು ಹೊಸ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸಲು ಒಂದು ಬೃಹತ್ ಮತ್ತು ಗೊಂದಲಮಯ ವೇದಿಕೆಯನ್ನು ಸೃಷ್ಟಿಸಿಕೊಡುತ್ತದೆ. ಈಗಿರುವ 543 ಕ್ಷೇತ್ರಗಳ ಗಡಿಗಳನ್ನು ಬದಲಾಯಿಸುವುದಕ್ಕಿಂತ, ಆಡಳಿತ ಪಕ್ಷಕ್ಕೆ ಅನುಕೂಲವಾಗುವಂತೆ ‘ಜೆರಿಮ್ಯಾಂಡರಿಂಗ್’ (Gerrymandering – ಕ್ಷೇತ್ರಗಳ ವಿಂಗಡಣೆಯಲ್ಲಿ ಮಾಡುವ ಕುತಂತ್ರ) ಮೂಲಕ 300 ಹೊಸ ಕ್ಷೇತ್ರಗಳನ್ನು ಸೃಷ್ಟಿಸುವುದು ಮತ್ತು ಅದನ್ನು ಮರೆಮಾಚುವುದು ಅತ್ಯಂತ ಸುಲಭವಾದ ಕೆಲಸವಾಗಿರುತ್ತದೆ.
ಇಲ್ಲಿ ಗೃಹ ಸಚಿವರು ಒಂದು ದೊಡ್ಡ ಮಾತಿನ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರು ಹೇಳುತ್ತಿರುವುದು: “ಜನರು ಯಾರಿಗೆ ವೋಟ್ ಹಾಕುತ್ತಾರೋ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ.” ಇದು ನಿಜವಿರಬಹುದು, ಆದರೆ ಅಸಲಿ ವಿಷಯ ಇದಲ್ಲ.
ಸರ್ಕಾರವು ನೀವು ಯಾರಿಗೆ ವೋಟ್ ಹಾಕಬೇಕು ಎಂಬುದನ್ನು ಬದಲಿಸುತ್ತಿಲ್ಲ. ಬದಲಾಗಿ, ನಿಮ್ಮ ವೋಟ್‌ನ ಶಕ್ತಿಯನ್ನು (Value) ಕಡಿಮೆ ಮಾಡುತ್ತಿದೆ.
ಉತ್ತರ ಭಾರತದ 10 ಲಕ್ಷ ಜನರಿಗೆ ಒಬ್ಬ ಸಂಸದ ಇದ್ದರೆ, ದಕ್ಷಿಣ ಭಾರತದ 20 ಲಕ್ಷ ಜನರಿಗೆ ಒಬ್ಬ ಸಂಸದ ಇರುವಂತೆ ಕಾನೂನು ರೂಪಿಸಲಾಗುತ್ತಿದೆ. ಅಂದರೆ, ದಕ್ಷಿಣದ ಒಬ್ಬ ಮತದಾರನ ಶಕ್ತಿ ಉತ್ತರದ ಮತದಾರನಿಗಿಂತ ಅರ್ಧದಷ್ಟು ಕಡಿಮೆಯಾಗುತ್ತದೆ.
ದಕ್ಷಿಣದ ರಾಜ್ಯಗಳು ಜನಸಂಖ್ಯಾ ನಿಯಂತ್ರಣವನ್ನು ಚೆನ್ನಾಗಿ ಮಾಡಿದ್ದಕ್ಕಾಗಿ ಅವರಿಗೆ ಸಿಗಬೇಕಾದ ಗೌರವದ ಬದಲಿಗೆ, ಶಿಕ್ಷೆ ನೀಡಲಾಗುತ್ತಿದೆ. ಇದನ್ನು ತಡೆಯಲು ಕಾನೂನಿನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಸರ್ಕಾರ ಸೇರಿಸಿಲ್ಲ.
ಸಚಿವರ ಭಾಷಣವು ವಿಷಯವನ್ನು ಸ್ಪಷ್ಟಪಡಿಸುವ ಬದಲಿಗೆ, ಜನರನ್ನು ನಂಬಿಸಲು ಮಾಡಿದ ಒಂದು ವ್ಯವಸ್ಥಿತ ನಾಟಕದಂತೆ ಇತ್ತು. ಅವರು ಭಾವನಾತ್ಮಕವಾಗಿ ಮಾತನಾಡುತ್ತಾ, ಕಾನೂನಿನ ಮೂಲಕ ದಕ್ಷಿಣದ ರಾಜ್ಯಗಳ ರಾಜಕೀಯ ಶಕ್ತಿಯನ್ನು ಕಿತ್ತುಕೊಳ್ಳುವ ಅಸ್ತ್ರವನ್ನು ಅಡಗಿಸಿಟ್ಟಿದ್ದಾರೆ.
Courtesy : thewire.in


