ಮೇ 2ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ಎರಡು ಸಮುದಾಯಗಳ ನಡುವೆ ಧಾರ್ಮಿಕ ಧ್ವಜಗಳ ವಿಚಾರದಲ್ಲಿ ಘರ್ಷಣೆಯಾಗಿದೆ. ಗಲಭೆಯಲ್ಲಿ ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈದ್-ಉಲ್-ಫಿತ್ರ್‌ನ ಹಿಂದಿನ ರಾತ್ರಿ ಸಿಎಂ ಅಶೋಕ್ ಗೆಹ್ಲೋಟ್ ಅವರ ತವರು ನೆಲವಾದ ಜೋಧ್‌ಪುರದ ಜಲೋರಿ ಗೇಟ್ ಪ್ರದೇಶದಲ್ಲಿ ಘರ್ಷಣೆಗಳು ನಡೆದಿವೆ.
ಈದ್ ಉಲ್ ಫಿತ್ರ್ ಆಚರಣೆಯ ಕೆಲವು ಗಂಟೆಗಳ ಮುಂಚೆ ಈ ಪ್ರದೇಶದಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿವೆ. ಜೋಧಪುರದಲ್ಲಿ ಮೂರು ದಿನಗಳ ಕಾಲ ಪರಶುರಾಮ ಜಯಂತಿ ಉತ್ಸವವನ್ನೂ ಆಯೋಜಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎನ್‌ಡಿಟಿವಿ ವರದಿ ಪ್ರಕಾರ, ಸ್ಥಳೀಯ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ ಮುಂಜಾನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಮನವಿ ಮಾಡಿದ್ದಾರೆ.
ಉದ್ವಿಗ್ನತೆಯನ್ನು ‘ದುರದೃಷ್ಟಕರ’ ಎಂದು ಕರೆದಿರುವ ಸಿಎಂ, “ಎಲ್ಲಾ ರೀತಿಯಲ್ಲೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
जालौरी गेट, जोधपुर पर दो गुटों में झड़प से तनाव पैदा होना दुर्भाग्यपूर्ण है। प्रशासन को हर कीमत पर शांति एवं व्यवस्था बनाए रखने के निर्देश दिए हैं।
— Ashok Gehlot (@ashokgehlot51) May 3, 2022
ಇದರ ನಡುವೆ ನಗರದಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಜಿಗ್ನೇಶ್ ಜಾಮೀನು: ಅಸ್ಸಾಂ ಪೊಲೀಸರನ್ನು ಕುಟುಕಿದ ಕೆಳ ನ್ಯಾಯಾಲಯದ ನಡೆಗೆ ಹೈಕೋರ್ಟ್ ಅಸಮ್ಮತಿ
ಜನರು ವದಂತಿಗಳನ್ನು ಹರಡುವುದನ್ನು ತಡೆಯಲು ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರ ರಕ್ಷಣೆಯಲ್ಲಿ ಈದ್‌ನ ನಮಾಜ್ ನಡೆಸಲಾಗಿದೆ.
ಜೋಧ್‌ಪುರದಲ್ಲಿ ಮೂರು ದಿನಗಳ ಕಾಲ ಪರಶುರಾಮ ಜಯಂತಿಯೂ ನಡೆಯುತ್ತಿದೆ. “ಕಲ್ಲು ತೂರಾಟದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ” ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ದೇಶದಲ್ಲಿ ಈ ರೀತಿಯ ಘರ್ಷಣೆಗಳು ನಡೆಯುತ್ತಿವೆ. ರಾಮನವಮಿ, ಹನುಮ ಜಯಂತಿ, ಈದ್ ಉಲ್ ಫಿತ್ರ್ ಸಂದರ್ಭದಲ್ಲಿ ಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ. ದೆಹಲಿ, ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ಇಂತಹ ಗಲಭೆಗಳು ವರದಿಯಾಗುತ್ತಿವೆ. ದೇವರು, ಧರ್ಮ, ಹಬ್ಬಗಳೀಗ ಗಲಭೆಗಳ ಕೇಂದ್ರಬಿಂದುಗಳಾಗಿ ಬದಲಾಗುತ್ತಿವೆ.
ಹೆಚ್ಚುತ್ತಿರುವ ಗಲಭೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮೌನ ತಾಳಿರುವುದು ಟೀಕೆಗೆ ಒಳಗಾಗಿದೆ.


