ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ 30 ವರ್ಷದ ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಆಸಿಡ್ ಸುರಿದು ಬೆಂಕಿ ಹಚ್ಚಲಾದ ಪ್ರಕರಣದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಮೃತಪಟ್ಟಿದ್ದಾರೆ.
ಮಹಿಳೆಯ ಪತಿ ದೂರು ನೀಡಿದ್ದರು. “ಗುರುವಾರ ಮಹಿಳೆ ಒಬ್ಬಂಟಿಯಾಗಿದ್ದಾಗ ಆರೋಪಿ ಶಕುರ್ ಖಾನ್ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದಾನೆ. ಗಲಾಟೆ ಕೇಳಿ ಅಕ್ಕಪಕ್ಕದವರು ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ, ಸ್ಥಳದಿಂದ ಓಡಿಹೋಗುವ ಮೊದಲು ಖಾನ್ ಮಹಿಳೆಯ ಮೇಲೆ ಆಸಿಡ್ ಸುರಿದು ಬೆಂಕಿ ಹಚ್ಚಿದ್ದಾನೆ” ಎಂದು ವರದಿಯಾಗಿದೆ.
ಸಂತ್ರಸ್ತೆಗೆ ಶೇ.40ರಷ್ಟು ಸುಟ್ಟ ಗಾಯಗಳಾಗಿದ್ದು, ಬಲೋತ್ರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಜೋಧ್‌ಪುರದ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಬಾರ್ಮರ್ ಪೊಲೀಸರು ಶುಕ್ರವಾರ ಆರೋಪಿ ಶಕುರ್ ಖಾನ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆಗೆ ಶಿಕ್ಷೆ), 376 (ಅತ್ಯಾಚಾರಕ್ಕೆ ಶಿಕ್ಷೆ), 326 (ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಘೋರವಾದ ಗಾಯವನ್ನು ಉಂಟುಮಾಡುವುದು), 450 (ಅಪರಾಧ ಎಸಗುವುದಕ್ಕಾಗಿ ಮನೆಯೊಳಗೆ ಅತಿಕ್ರಮಣ) ಮತ್ತು ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ಯ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.


