Homeಅಂಕಣಗಳುಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

ಸಾಚಾರ್ ವರದಿಯ ನಂತರವೂ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ

- Advertisement -
- Advertisement -

ಆ ದೇವೇಂದ್ರನೇ ಎರಡನೇ ಬಾರಿಗೆ ಬಂದಾಗ ನೋಡುಗರಿಗೆ ಯಾವ ಉತ್ಸಾಹವೂ ಇರುವುದಿಲ್ಲವಂತೆ; ಅದರಿಂದ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಹೋಗಿ ಮೋದಿ ಫ್ಲೈಟ್ ಹತ್ತುವಾಗ ಆ ಪ್ರದೇಶದಲ್ಲಿ ಯಾವ ಕುತೂಹಲವೂ ಇರಲಿಲ್ಲ. ಏಕೆಂದರೆ ಅವರ ಪಾರ್ಟಿಯ ಮಾಡಾಳು ವಿರುಪಾಕ್ಷಪ್ಪ ಜೈಲುಪಾಲಾಗಿದ್ದರು; ಹಿಂದೊಮ್ಮೆ ಅಡ್ವಾನಿ ಕರ್ನಾಟಕಕ್ಕೆ ಬಂದಾಗ ಎಡೂರಪ್ಪನವರು ಜೈಲುಪಾಲಾಗಿದ್ದರು. ಆಗ ಅಡ್ವಾನಿ ತಮ್ಮ ಪಕ್ಷದವರ ಬಗ್ಗೆ ಯಾವ ಮುಲಾಜು ಇಲ್ಲದೆ ಕರ್ನಾಟಕದ ಬಿಜೆಪಿ ಸರಕಾರ ಶುದ್ಧ ಜೇಬುಗಳ್ಳರ ಪಕ್ಷವಾಗಿವೆ ಎಂದು ಟಿಕೀಸಿದ್ದರು; ಆದರೆ ಈಗ ಆ ಜೇಬುಗಳ್ಳರು ದರೋಡೆಕೋರರಾಗಿದ್ದಾರೆ! ದರೋಡೆಕೋರರು ಬಲಿಷ್ಠರಾಗಿರುತ್ತಾರೆ. ಅವರಿಗೆ ಯಾವ ಭಯವೂ ಇರುವುದಿಲ್ಲ; ಜನರ ಭಯವಂತೂ ಇಲ್ಲವೇಇಲ್ಲ. ಸಾಮಾನ್ಯವಾಗಿ ದರೋಡೆಕೋರರ ಲೀಡರು ದೋಚಿದ್ದರಲ್ಲಿ ಒಂದಿಷ್ಟು ದಾನವನ್ನ ಮಾಡುತ್ತಾನಂತೆ. ಹಾಗೆಯೇ ಅಂತಹ ಕರ್ನಾಟಕದ ಲೀಡರ್ ಉದ್ಯೋಗವೇ ಇಲ್ಲದ ಸಮಯದಲ್ಲಿ ಮೀಸಲಾತಿ ಹಂಚುತ್ತಿದ್ದಾರಲ್ಲ, ಥೂತ್ತೇರಿ.

****

ಈಜುಬಾರದೆ ಮುಳುಗುತ್ತಿರುವ ವ್ಯಕ್ತಿ ಕೈಗೆ ಸಿಕ್ಕಿದ್ದನ್ನೆಲ್ಲಾ ಹಿಡಿಯುವಂತೆ ಮನೆಗೆ ಹೊರಟಿರುವ ಬೊಮ್ಮಾಯಿ ಸಿಕ್ಕಸಿಕ್ಕವರಿಗೆಲ್ಲಾ ಮೀಸಲಾತಿ ಹಂಚುತ್ತ, ಬಿಜೆಪಿಗಳ ಅಜೆಂಡಾದಂತೆ ಮುಸ್ಲಿಮರನ್ನ ಸಂಪೂರ್ಣ ಮೀಸಲಾತಿಯಿಂದ ಹೊರಗಿಡಲು ನಿಂತಿದ್ದಾರಲ್ಲ. ಅವರ ತಟ್ಟೆಯಲ್ಲಿದ್ದ ನಾಲ್ಕು ಪೀಸು ಮಟನ್ ಎಗರಿಸಿ ಅದರಲ್ಲಿ ಲಿಂಗಾಯಿತರಿಗೆ ಎರಡು ಪೀಸು ಮತ್ತು ಒಕ್ಕಲಿಗರಿಗೆ ಎರಡು ಪೀಸು ಎಸೆದುಬಿಟ್ಟರಲ್ಲಾ. ಈ ಕೃತ್ಯದಿಂದ ಸಿಟ್ಟುಗೊಂಡು, ಒಕ್ಕಲಿಗ ಮತ್ತು ಲಿಂಗಾಯಿತರು ಇನ್ನೊಬ್ಬರಿಂದ ಕಸಿದುಕೊಟ್ಟದ್ದು ಬೇಡವೆಂದು ಭುಗಿಲೇಳುತ್ತಾರೆಂದು ಕಾದರೆ ಹಾಗೇನೂ ಆಗದೆ ಸುಮ್ಮನಿದ್ದಾರಂತಲ್ಲಾ. ಲಿಂಗಾಯಿತರು ಹಿಂದೆ ಬಸವ ತತ್ವವಿದೆ ಒಕ್ಕಲಿಗರ ಹಿಂದೆ ವಿಶ್ವಮಾನವ ತತ್ವವಿದೆ ಮತ್ತು ಸರ್ವಜನಾಂಗದ ಹಿತವಿದೆ ಎಂದು ಭಾವಿಸಿದ್ದವರೆಲ್ಲಾ ಬೇಸ್ತು ಬೀಳುವಂತೆ ಈ ಬಲಾಢ್ಯ ಕೋಮುಗಳು ಯಾರ ತಟ್ಟೆಯಿಂದ ಕಿತ್ತುಕೊಟ್ಟರೇನು, ಅಂತೂ ದಕ್ಕಿತಲ್ಲಾ ಎಂಬಂತೆ ಸುಮ್ಮನಾಗಿರುವಾಗ, ಸರಕಾರ ಸೃಷ್ಟಿಮಾಡುವ ಉದ್ಯೋಗದ ಕಡೆ ಸಾಮಾನ್ಯವಾಗಿ ಹೆಚ್ಚು ತಿರುಗಿ ನೋಡದ ಮುಸಲ್ಮಾನರು, ಇಂತಹ ಬಿಕ್ಕಟ್ಟಿನ ಸಮಯದಲ್ಲಿ, ತಮ್ಮ ಜನಾಂಗದ ರಾಜಕಾರಣಿಗಳು ಮತ್ತು ಮುಲ್ಲಾಗಳ ವ್ಯಾಪ್ತಿಗೆ ಮೀಸಲಾತಿ ವಿಷಯ ಬಿಟ್ಟು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರಂತಲ್ಲಾ, ಥೂತ್ತೇರಿ.

****

ಇಸ್ಲಾಂ ಧರ್ಮದಲ್ಲಿ ಬಡವರಿರಬಹುದು, ನಿರ್ಗತಿಕರೂ ಇದ್ದಾರೆ ಆದರೆ ಶ್ರೇಣಿಕರಣವಿಲ್ಲ. ಅಲ್ಲಿನ ಮಸೀದಿಯಲ್ಲಿ ಜಟಕಾ ಗಾಡಿ ಓಡಿಸುವ ಮುಸ್ಲಿಂ ವ್ಯಕ್ತಿಯ ಜೊತೆಗೆ ರತ್ನದ ವ್ಯಾಪಾರಿಯೂ ನಿಂತು ನಮಾಜು ಮಾಡುತ್ತಾನೆ, ಇಂತಹ ಸಮಾನತೆಗಾಗಿಯೇ ಆ ಧರ್ಮ ಜಗತ್ತಿನಾದ್ಯಂತ ವೇಗವಾಗಿ ಹಬ್ಬಿದ್ದು ಎನ್ನಲಾಗುತ್ತದೆ. ದುಡಿದು ತಿನ್ನುವಂತೆ ಪೈಗಂಬರರೇ ಶಾಸನಮಾಡಿರುವುದರಿಂದ ದುಡಿದು ತಿನ್ನುವ ಮುಸ್ಲಿಮರು ದೇಶದ ಸಂಪತ್ತು ಹೆಚ್ಚಿಸುವ ಶ್ರಮಜೀವಿಗಳು. ಅದಕ್ಕೆ ಅಲ್ಲಿ ಏನಾದರೊಂದು ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ಸಾಮಾನ್ಯ. ತನ್ನ ಓದಿಗೆ ತಕ್ಕ ಕೆಲಸ ಬೇಕೆಂದು ಹಠ ಹಿಡಿದು ಕೂತಿರುವ ಇತರ ಕೋಮುಗಳಲ್ಲೇ ನಿರುದ್ಯೋಗ ಜಾಸ್ತಿ. ಇನ್ನೊಂದು ಮುಖ್ಯ ಸಂಗತಿ ಯಾವುದೆಂದರೆ ಭಾರತದಲ್ಲಿ ನಿರುದ್ಯೋಗ ಭೀಕರವಾಗಿರುವುದು. ಹೀಗೆ ದುಡಿದು ತಿನ್ನುವ ಮುಸ್ಲಿಮರು ಎಲ್ಲ ಜನಾಂಗಕ್ಕೂ ಮಾದರಿಯಾದವರು. ಸಾಚಾರ್ ವರದಿಯ ನಂತರವೂ ಸರಕಾರ ಅವರ ಕಡೆ ತಿರುಗಿಯೂ ನೋಡದೆ ಇದ್ದ ನಾಲ್ಕು ಪರಸೆಂಟ್ ಮೀಸಲಾತಿ ಕಿತ್ತುಕೊಂಡರಲ್ಲಾ. ಹೀಗೆ ಕಿತ್ತುಕೊಳ್ಳಲು ಮುಂದಾದವರು, ಮಿಕವನ್ನು ಜೀವಂತವಾಗಿಯೇ ಹಿಂದಿನಿಂದ ಬಾಯಿಹಾಕಿ ತಿನ್ನುವ ಹೈನಾಗಳ ಮನಸ್ಥಿತಿಯವರಂಥಲ್ಲಾ, ಥೂತ್ತೇರಿ.

****

ಜೆಡಿಎಸ್ ಮತ್ತು ಕಾಂಗ್ರೆಸ್ ಪಾರ್ಟಿಗೆ ಬೇಡವಾದ ಶಿವರಾಮೇಗೌಡರನ್ನ ಬಿಜೆಪಿ ಆಹ್ವಾನಿಸಿದೆ. ಈಗಾಗಲೇ ಚುನಾವಣೆಗಾಗಿ ಸಿಕ್ಕಾಪಟ್ಟೆ ಹಣ ಚೆಲ್ಲಿರುವ ಫೈಟರ್ ರವಿ ಎಂಬ ಮೋದಿ ಅಭಿಮಾನಿ, ’ಯಾವ ಕಾರಣಕ್ಕೂ ನಾನು ಹಿಂದೆ ಸರಿಯುವುದಿಲ್ಲ ನನಗೇ ಬಿಜೆಪಿ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರಂತಲ್ಲಾ. ಆತನ ಮೇಲಿದ್ದ ಪೋಲಿಸ್ ಕೇಸುಗಳನ್ನು ಜ್ಞಾಪಿಸಿ ಸುಮ್ಮನಿರುವಂತೆ ಮಾಡುವುದು ಬಿಜೆಪಿಗೆ ಅಸಾಧ್ಯವಾದ ಕೆಲಸವೇನಲ್ಲ ಎಂದು ವಾದಿಸುತ್ತಿರುವ ಶಿವರಾಮೇಗೌಡರ ಕಡೆಯ ಪಡ್ಡೆ ಹುಡುಗರಾಗಲೇ, ಆ ಗಿರೀಶ್ ಕಾರ್ನಾಡ್ ನಮಗೆ ಸಿಗಬೇಕಿತ್ತು; ಈ ಸಾಹಿತಿಗಳು ಏನೇನೂ ಬಾಯಿಗೆ ಬಂದಂತೆ ಮಾತನಾಡುತ್ತಾರಂತೆ. ಉರಿಗೌಡ ನಂಜೇಗೌಡ ನಮ್ಮ ತಾಲೂಕಿನವರು. ಅದರಲ್ಲೂ ನಂಜೇಗೌಡ ನಮ್ಮ ಜನಾಂಗದ ಇತಿಹಾಸ ಸಂಶೋಧಕ ಹ.ಕ. ರಾಜೇಗೌಡರ ಊರಿನವನು. ಯಾರೂ ಕೊಲ್ಲಲಾಗದ ಟಿಪ್ಪು ಸುಲ್ತಾನನ ಎದೆಗೆ ಭರ್ಜಿ ಹಾಕಿ ಸಾಯಿಸಿದವರು ನಮ್ಮ ಉರಿಗೌಡ ನಂಜೇಗೌಡ ಗೊತ್ತ? ಎಂದು ಚುನಾವಣಾ ಪ್ರಚಾರವನ್ನೇ ಆರಂಭಿಸಿದ್ದಾರಂತಲ್ಲಾ. ಹಾಗಾದರೆ ಈ ಮುಗ್ದ ಹುಡುಗರು ಮುಂದೆ ಇನ್ನೂ ಏನೇನು ಮಾತನಾಡಬಹುದೆಂದು ಊಹಿಸಲಾಗದೆ, ಪ್ರಜ್ಞಾವಂತ ಜನ ಉರಿಯತ್ತಿಸಿಕೊಂಡು ಕಂಗಾಲಾಗಿದ್ದಾರಂತಲ್ಲಾ, ಥೂತ್ತೇರಿ.

****

ಎಡೂರಪ್ಪನವರ ರಾಜಕೀಯ ಇತಿಹಾಸದಲ್ಲಿ ಪಾರ್ಟಿಗಾಗಿ ಕೆಲವು ಜನಗಳ ಬಗ್ಗೆ ಕೆಲವು ಕೆಟ್ಟ ಮಾತುಗಳನ್ನು ಮಾತನಾಡಿರಬಹುದೇ ಹೊರತು ಎಂದೂ ಯಾವ ಜನಾಂಗವನ್ನ ನಿಂದಿಸಿದವರಲ್ಲ. ಹಾಗಾಗಿ ಶಿಕಾರಿಪುರದಲ್ಲಿ ಮುಸ್ಲಿಮರು ಮತ್ತು ಲಂಬಾಣಿಗರು ಅವರನ್ನ ಪೂರ್ಣ ಬೆಂಬಲಿಸುತ್ತಿದ್ದರು. ಅದರಲ್ಲೂ ಕುವೆಂಪು ಯೂನಿಯರ್ಸಿಟಿಯಲ್ಲಿ ನಡೆದ ಪೇಕ್ ಸರ್ಟಿಫಿಕೇಟ್ ಮಾರಾಟದ ದಂಧೆಯಲ್ಲಿ ಸಿಕ್ಕ ಮುಕ್ಕಾಲು ಜನ ಲಂಬಾಣಿಗರು; ಅವರನ್ನೆಲ್ಲಾ ಬಚಾವು ಮಾಡಲು ಓಡಾಡಿದವರು ರಾಘವೇಂದ್ರ. ಆದರೀಗ ಒಳಮೀಸಲು ಜಾರಿ ಶಿಫಾರಸ್ಸಿನಿಂದ ಸಿಟ್ಟಾದ ಲಂಬಾಣಿಗರು, ಎಡೂರಪ್ಪನ ಮನೆಗೆ ಎರ್ರಾಬಿರ್ರಿ ಕಲ್ಲು ಬೀರಿದ್ದಾರಲ್ಲಾ. ಒಳ ಮೀಸಲು ಜಾರಿ ಶಿಫಾರಸ್ಸು ಮಾಡಿದವರು ಬೊಮ್ಮಾಯಿ. ಕಲ್ಲು ಬೀಸಿಸಿಕೊಂಡವರು ಎಡೂರಪ್ಪ. ಈ ಕೃತ್ಯದಿಂದ ಜಮದಗ್ನಿಯುಂತಾಗಿರುವ ಎಡೂರಪ್ಪ ಯಾವಾಗ ಭುಗಿಲೇಳುತ್ತಾರೊ ಏನೋ ಅಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...