Homeಅಂಕಣಗಳುಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

ಮಾತು ಮರೆತ ಭಾರತ; ಸ್ವತಂತ್ರ ಪೂರ್ವ ಭಾರತದ ಕೆಲವು ದಲಿತ್ ಫೈಲ್ಸ್

- Advertisement -
- Advertisement -

1947ಕ್ಕೆ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಆದರೆ ಹಿಂದೂ ಮೇಲ್ಜಾತಿಗಳಿಂದ ದಲಿತರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಅದಕ್ಕೆ ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ ಘಟಿಸಬೇಕಿದೆ. ಇಲ್ಲವೇ ಮನುಸ್ಮೃತಿಯ ಪ್ರೇತಗಳು ಹೊಸರೂಪದಲ್ಲಿ ಭಾರತವನ್ನು ಆಳಲಿವೆ. ಇರಲಿ, ಇಲ್ಲಿ ನಾನಿಂದು ಹೇಳಲು ಹೊರಟಿರುವುದು 20ನೇ ಶತಮಾನದ ಮೊದಲರ್ಧ ಕಾಲಘಟ್ಟದ ದಲಿತ್ ಫೈಲ್ಸ್‌ಗಳನ್ನು. ಈ ಫೈಲ್ಸ್‌ಗಳಲ್ಲಿ ಬಹುತೇಕ ಘಟನೆಗಳು ನಿಮಗೆ ನೆನಪಿಗೆ ಬರಬಹುದು. ’ಮಾತು ಮರೆತ ಭಾರತ’ದಲ್ಲಿ ಈ ನಿಮ್ಮ ನೆನಪನ್ನು ಕೆದಕುವ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಅಷ್ಟೆ.

ನೀವು ಈ ಕೆಳಗಿನ ಪ್ರತಿಯೊಂದು ಘಟನೆಯನ್ನೂ ನಿನ್ನೆಮೊನ್ನೆ ಎಲ್ಲೋ ನಡೆದಿತ್ತಲ್ಲ? ಎಂದಂದುಕೊಂಡರೆ ಅದು ನಿಜ. ಏಕೆಂದರೆ ಭಾರತದ ಇತಿಹಾಸದುದ್ದಕ್ಕೂ ದಲಿತರ ಮೇಲೆ ಅಸ್ಪೃಶ್ಯತೆಯ ಕಾರಣಕ್ಕೆ ಹಿಂದೂ ಮೇಲ್ಜಾತಿಗಳು ಎಸಗಿರುವ ನೀಚ ಕೃತ್ಯಗಳು ಇಂದಿಗೂ ಹೆಚ್ಚೂಕಡಿಮೆ ಹಾಗೆಯೇ ಇವೆ ಎನಿಸುತ್ತದೆ. ಬೇಕಿದ್ದರೆ ಈ ಕೆಳಗಿನ ಘಟನೆಗಳನ್ನೊಮ್ಮೆ ಗಮನಿಸಿ.

12 ನೆಯ ಫೆಬ್ರವರಿ 1923ರ ’ಪ್ರತಾಪ್’ ಪತ್ರಿಕೆಯಿಂದ ಆಯ್ದುಕೊಂಡಿದ್ದು:

“ಆಗ್ರಾ ಜಿಲ್ಲೆಯಲ್ಲಿ ಬ್ರಾಹ್ಮಣನೊಬ್ಬ ತನ್ನ ಮನೆಯಲ್ಲಿ ವಿಷ್ಣುವಿನ ವಿಗ್ರಹವನ್ನು ಪೂಜಿಸುತ್ತಿದ್ದುದನ್ನು ಒಬ್ಬ ಚಮ್ಮಾರ ನೋಡಿದ್ದ. ಅಂತೆಯೇ ಅವನೂ ಮಾಡಲಾರಂಭಿಸಿದ. ಬ್ರಾಹ್ಮಣನಿಗೆ ಇದು ತಿಳಿದುಬಂದಾಗ ಅವನು ವಿಪರೀತ ಕ್ರುದ್ಧನಾದ ಮತ್ತು ಹಳ್ಳಿಯ ಇತರರ ಸಹಾಯ ಪಡೆದು ಈ ಪಾಪದ ಹರಿಜನನನ್ನು ಹಿಡಿದ. ಅವನಿಗೆ ಚೆನ್ನಾಗಿ ಬಡಿದು ಹೇಳಿದ: ’ವಿಷ್ಣುವಿನಂಥ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುವಷ್ಟು ಉದ್ಧಟತನ ಬಂತೇ ನಿನಗೆ?’ ಕಡೆಗೆ ಆ ಹರಿಜನರವನ ಬಾಯಿಗೆ ಒಂದಿಷ್ಟು ಹೊಲಸನ್ನು ತುರುಕಿ ಬಿಟ್ಟುಬಿಟ್ಟರು. ಒಣ ಹತಾಶೆಯಿಂದ ಕಡೆಗೆ ಆ ಚಮ್ಮಾರ ಹಿಂದೂ ಧರ್ಮವನ್ನು ಒಗೆದ, ಇಸ್ಲಾಂ ಧರ್ಮವನ್ನವಲಂಬಿಸಿದ.”

14ನೆಯ ಸೆಪ್ಟೆಂಬರ್ 1929ರ ’ಆರ್ಯ ಗೆಜೆಟ್’ ನಿಂದ:

“ಗುರ್ದಾಸ್ಪುರ ಜಿಲ್ಲೆಯ ಬೆರ್ಹಾಂಪುರ ಪಟ್ಟಣದ ಬಳಿ ಇರುವ ರಮಣಿ ಎಂಬ ಹಳ್ಳಿಯ ಹಿಂದೂ ರಜಪೂತರು ಆ ಊರಿನ ಅಸ್ಪೃಶ್ಯರನ್ನೆಲ್ಲಾ ಮನೆಗಳಿಂದ ಹೊರಬರುವಂತೆ ಹೇಳಿ ಆ ಕ್ಷಣವೇ ತಮ್ಮ ಪಾವನವಾದ ದಾರವನ್ನು ತೆಗೆದುಹಾಕಬೇಕೆಂದೂ ಮತ್ತೆ ಅದನ್ನೆಂದೂ ಧರಿಸುವುದಿಲ್ಲವೆಂದು ಆಣೆ ಇಡಬೇಕೆಂದೂ ಆಜ್ಞಾಪಿಸಿದರು. ಹಾಗೆ ಮಾಡದಿದ್ದಲ್ಲಿ ಅವರ ಪ್ರಾಣಕ್ಕೆ ಸಂಚು ಬರಬಹುದೆಂದೂ ಎಚ್ಚರಿಸಿದರು. ಇದಕ್ಕೆ ಅಸ್ಪೃಶ್ಯರು ಶಾಂತವಾಗಿ ಉತ್ತರ ಕೊಟ್ಟರು: ’ಮಹಾಸ್ವಾಮಿ ನೀವೇಕೆ ಇಷ್ಟು ಕೋಪಗೊಳ್ಳುತ್ತೀರಿ? ನಿಮ್ಮ ಸಹೋದರರೇ ಆದ ಆರ್ಯಸಮಾಜವಾದಿಗಳು ಈ ದಾರಗಳನ್ನು ಕೃಪೆಮಾಡಿ ನಮ್ಮ ಕೊರಳಿಗೆ ಹಾಕಿದ್ದಾರೆ ಮತ್ತು ಅವು ಹಿಂದೂಧರ್ಮದ ನೈಜ ಪ್ರತೀಕಗಳಾದ್ದರಿಂದ ಅವನ್ನು ಎಂದೆಂದಿಗೂ ರಕ್ಷಿಸಬೇಕೆಂದು ಅಪ್ಪಣೆ ನೀಡಿದ್ದಾರೆ. ಅದಕ್ಕೆ ನೀವು ಆಕ್ಷೇಪಿಸುವುದಾದರೆ ನಮ್ಮ ದೇಹದಿಂದ ಅವನ್ನು ನಿಮ್ಮ ಕೈಗಳಿಂದಲೇ ಹರಿದು ಹಾಕಿ’ ಇದರಿಂದ ಉದ್ವಿಗ್ನಗೊಂಡ ರಜಪೂತರು ಆ ಬಡಜನರ ಮೇಲೆರಗಿದರು. ಲಾಠಿಗಳಿಂದ ಚಚ್ಚಿದರು ಮತ್ತು ಬಹಳ ಕಾಲದವರೆಗೆ ಹಾಗೆ ಹೊಡೆಯುತ್ತಲೇ ಇದ್ದರು. ಈ ಪ್ರಹಾರಗಳನ್ನು ಅಸ್ಪೃಶ್ಯರು ಬಹಳ ಸ್ಥೈರ್ಯದಿಂದ ಸಹಿಸುತ್ತಿದ್ದರೇ ವಿನಾ ಅದನ್ನವರು ಪ್ರತಿಭಟಿಸಲೂ ಇಲ್ಲ ಅಥವಾ ವಿರೋಧಿಸಲೂ ಇಲ್ಲ. ಅವರ ಅಸಹಾಯಕ ಪರಿಸ್ಥಿತಿಯ ಬಗ್ಗೆ ಆ ಪೀಡಕರಿಗೆ ಯಾವ ಕನಿಕರವೂ ಮೂಡಲಿಲ್ಲ. ಮೂರು ನಾಲ್ಕು ಮಂದಿ ರಜಪೂತರು ಗೋರಿರಾಮ್ ಎಂಬ ಹರಿಜನರವನು ಧರಿಸಿದ್ದ ಪವಿತ್ರ ದಾರವನ್ನು ನಿಜಕ್ಕೂ ಕಿತ್ತೆಸೆದರು. ದಾರದ ಗುರುತನ್ನು ಅಣಕಿಸುವ ಅನುಕರಣದೋಪಾದಿಯಲ್ಲಿ ಒಂದು ಕಳೆಗುದ್ದಲಿಯಿಂದ ಅವನ ಮೈಮೇಲೆ ಗಾಯವನ್ನು ಉಂಟುಮಾಡಿದರು.”

12ನೆಯ ಅಕ್ಟೋಬರ್ 1929ರ ’ಮಿಲಾಪ್’ ಪತ್ರಿಕೆಯದ್ದು:

“ಒಂದು ಮದುವೆಯ ದಿಬ್ಬಣದ ಆಗಮನದ ವಿಷಯ ತಿಳಿಯಿತು. ಮದುವೆಯಾಗಲಿದ್ದವನು ಪಲ್ಲಕ್ಕಿಯನ್ನೇರಿದ್ದ. ಅಗಾಧ ಸಂಖ್ಯೆಯಲ್ಲಿ ಹಿಂದೂಗಳು ಮುನ್ನುಗ್ಗಿ ದಿಬ್ಬಣದವರನ್ನು ಸುತ್ತುವರಿದು ನಿಂತರು ಮತ್ತು ಅವರನ್ನು ಚೆನ್ನಾಗಿ ಹೊಡೆದರು. ಮದುವೆಯ ದಿಬ್ಬಣದವರನ್ನು ಕೊರೆಯುವ ಚಳಿಯಲ್ಲಿ ನಡುಗುವಂತೆ ದಿಗ್ಭಂಧಿಸಿ 24 ಗಂಟೆಗಳ ಕಾಲ ಯಾವ ಆಹಾರವೂ ದೊರೆಯದಂತೆ ತಡೆಹಿಡಿದರು. ದಿಬ್ಬಣದವರನ್ನು ಅಮಾನವೀಯವಾಗಿ ನಡೆಸಿಕೊಂಡು, ಪೊಲೀಸರು ಬಂದ ನಂತರವೇ ಈ ಕಷ್ಟದ ಸನ್ನಿವೇಶದಿಂದ ಅವರನ್ನು ಪಾರುಮಾಡಿದರು.”

ಕೆಳಗಿನದು 1936ನೆಯ ನವೆಂಬರ್ 4ರಂದು ’ಮುಂಬೈ ಸಮಾಚಾರ್’ ಪತ್ರಿಕೆಯಲ್ಲಿ ಪ್ರಕಟವಾಗಿದದ್ದು:

“(ಮಲಬಾರಿನಲ್ಲಿ) ಉಟ್ಟಪಾಲಂ ಎಂಬಲ್ಲಿ 17 ವರ್ಷ ವಯಸ್ಸಿನ ಶಿವರಾಮನ್ ಎಂಬ ಅಸ್ಪೃಶ್ಯ ಜಾತಿಯವನು ಉಪ್ಪು ಕೊಳ್ಳಲು ಸವರ್ಣೀಯ ಹಿಂದೂವೊಬ್ಬನ ಅಂಗಡಿಗೆ ಹೋಗಿ ಮಲಯಾಳಂ ಭಾಷೆಯಲ್ಲಿ ’ಉಪ್ಪು’ ಬೇಕೆಂದು ಕೇಳಿದ. ಮಲಬಾರಿನ ಸಂಪ್ರದಾಯದಂತೆ ಸವರ್ಣೀಯ ಹಿಂದೂಗಳು ಮಾತ್ರ ಉಪ್ಪಿಗೆ ’ಉಪ್ಪು’ ಎಂಬ ಪದ ಬಳಸಬಹುದು. ಹರಿಜನರವನಾಗಿ ಅವನು ’ಪುಲಿಜಾತನ್’ ಎಂಬ ಪದ ಬಳಸಬೇಕಿತ್ತು. ಅದರಿಂದ ಮೇಲ್ಜಾತಿಯ ಅಂಗಡಿಯವನು ಕೋಪಗೊಂಡು ಶಿವರಾಮನ್‌ಗೆ ಚೆನ್ನಾಗಿ ಥಳಿಸಿದನೆಂದೂ ಮತ್ತು ಅದರಿಂದ ಆತ ಮರಣ ಹೊಂದಿದನೆಂದೂ ಹೇಳಲಾಗಿದೆ”.

ಕೆಳಗಿನ ಘಟನೆಗಳನ್ನು ’ಸಮತಾ’ ಪತ್ರಿಕೆಯಿಂದ ಆಯ್ದುಕೊಳ್ಳಲಾಗಿದೆ (1932):

1) “(ಮಣೆ ಜಿಲ್ಲೆಯ) ಕಾಥಿ ಎಂಬಲ್ಲಿ ಜನ ಅಸ್ಪೃಶ್ಯರಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ; ಏಕೆಂದರೆ ಅಲ್ಲಿಯ ಅಸ್ಪೃಶ್ಯರು ’ರಾಂ ರಾಂ’ ಮತ್ತು ’ನಮಸ್ಕಾರ್’ ಹೇಳತೊಡಗಿದ್ದಾರೆ. ತಿಳಿದಿಲ್ಲದವರಿಗೆ ಗೊತ್ತುಪಡಿಸಲು ಹೇಳಬೇಕಾದದ್ದೇನೆಂದರೆ ಈ ರೀತಿ ನಮಸ್ಕಾರ ಹೇಳುವ ಪದ್ಧತಿಯು ಕೇವಲ ಮೇಲ್ಜಾತಿಯವರಿಗೆ ಮೀಸಲಾಗಿರುವ ಹಕ್ಕು. ಮಹಾರರು ಮತ್ತಿತರರು ’ಜೋಹಾರ್’ ಅಥವಾ ’ಪಾಯಾಲಾಗೂ’ (ನಿನ್ನ ಕಾಲು ಮುಟ್ಟುತ್ತೇನೆ) ಎಂದು ಹೇಳಬೇಕು”.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2) “(ಮಗ ಜಿಲ್ಲೆಯ) ಟಾವಿನಲ್ಲಿ ಅಸ್ಪೃಶ್ಯರು ಸ್ಪೃಶ್ಯ ಹಿಂದೂ ಜನರಂತೆ ನಡೆದುಕೊಳ್ಳಲು ಯತ್ನಿಸಿದರು. ಈ ಉದ್ಧಟತನದ ಅತಿಕ್ರಮಣದ ಫಲವಾಗಿ ಅವರಲ್ಲಿ ಅನೇಕರು ಹಳ್ಳಿಯನ್ನು ಬಿಡಬೇಕಾಗಿ ಬಂತು. ಅವರಲ್ಲಿ ಕೆಲವರು ಬಾವಾ ಎಂಬಲ್ಲಿಗೆ ವಲಸೆ ಹೋದರು”.

3) “(ಶೋಲಾಪುರ ಜಿಲ್ಲೆಯ) ವಾಲಾಪುರ ಎಂಬಲ್ಲಿ ಮಹಾರರಿಗೆ ಕಿರುಕುಳ ನೀಡಲಾಗುತ್ತಿದೆ: ಏಕೆಂದರೆ ಸ್ಪೃಶ್ಯರನ್ನು ’ಸಾಹೇಬ್’ ಎಂದು ಕರೆಯಲು ಮತ್ತು ನಮಸ್ಕಾರ ಹೇಳುವಾಗ ’ಪಾಯಾಲಾಗೂ’ (ನಿನ್ನ ಕಾಲು ಮುಟ್ಟುತ್ತೇನೆ) ಎನ್ನಲು ನಿರಾಕರಿಸುವಷ್ಟು ಧೈರ್ಯ ತೋರಿದ್ದಾರೆ.

ಕೆಳಗಿನದನ್ನು ’ಪ್ರಕಾಶ್’ ಪತ್ರಿಕೆಯ 1932ನೆಯ ಆಗಸ್ಟ್ 23ರ ಸಂಚಿಕೆಯಿಂದ ತೆಗೆದುಕೊಳ್ಳಲಾಗಿದೆ:

“’ಜಾಫರ್ವಾಲ್ ತಾಲ್ಲೂಕಿನ ಜಗ್ವಾಲ್’ ಎಂಬ ಹಳ್ಳಿಯಲ್ಲಿ ಆಗಸ್ಟ್ 6ರಂದು ಒಂದು ಕರುವು ಬಾವಿಯೊಳಕ್ಕೆ ಬಿದ್ದುಹೋಗಿತ್ತು. ಡೋಮ್ ಜಾತಿಗೆ ಸೇರಿದ ರಾಮ್ ಮಹಾಶಯ ಎಂಬುವನು ಅಲ್ಲೇ ಹತ್ತಿರದಲ್ಲಿ ನಿಂತಿದ್ದ. ಕೂಡಲೆ ಅವನು ಬಾವಿಯೊಳಕ್ಕೆ ಜಿಗಿದ ಮತ್ತು ಕರುವನ್ನು ತನ್ನ ಕೈಗಳಲ್ಲಿ ತಬ್ಬಿಕೊಂಡ. ಅಷ್ಟರಲ್ಲಿ ಮೂರು-ನಾಲ್ಕು ಮಂದಿ ಅವನ ಸಹಾಯಕ್ಕೆ ಬಂದರು ಮತ್ತು ಕರುವನ್ನು ಬಾವಿಯಿಂದ ಪಾರು ಮಾಡಲಾಯಿತು. ಆದರೆ ಹಳ್ಳಿಯ ಹಿಂದೂಗಳು ಒಂದು ದೊಡ್ಡ ಹುಯಿಲನ್ನೇ ಆರಂಭಿಸಿದರು. ಏಕೆಂದರೆ ಅವರ ಬಾವಿಯು ಅಪವಿತ್ರಗೊಂಡಿತ್ತು. ಅದಕ್ಕಾಗಿ ಆ ಪಾಪಿ ರಾಮ್ ಮಹಾಶಯನಿಗೆ ಬಲಿ ಹಾಕಲಾಗಿತ್ತು. ಅದೃಷ್ಟವೋ ಎಂಬಂತೆ ಆ ವೇಳೆಗೆ ಒಬ್ಬ ಬ್ಯಾರಿಸ್ಟರ್ ಅಲ್ಲಿಗೆ ಪ್ರವೇಶ ಮಾಡಿದ್ದ. ಸಾಧುರಾಮನನ್ನು ಗೋಳು ಹುಯ್ದುಕೊಳ್ಳುತ್ತಿದ್ದ ಅಲ್ಲಿನ ಜನರಿಗೆ ಅವನು ಚೆನ್ನಾಗಿ ಬೈಗುಳ ಸುರಿಸಿ ಅವರಿಗೆ ಬುದ್ಧಿ ನೆಟ್ಟಗಾಗುವಂತೆ ಮಾಡಿದ. ಹೀಗಾಗಿ ಆ ಸಾಧುರಾಮ ಉಳಿದುಕೊಂಡ, ಇಲ್ಲದಿದ್ದರೆ ಅವನ ಗತಿ ಏನಾಗುತ್ತಿತ್ತೋ ಕಂಡವರಾರು!”

1936ನೆಯ ಡಿಸೆಂಬರ್ 19ರಂದು ‘ಮುಂಬೈ ಸಮಾಚಾರ್’ ಪತ್ರಿಕೆಯು ಅಂಥದೇ ಇನ್ನೊಂದು ಘಟನೆಯನ್ನು ವರದಿ ಮಾಡಿತ್ತು:

“ಕಲ್ಲಿಕೋಟೆಯ ಬಳಿಯ ಕಾಲಡಿ ಎಂಬ ಹಳ್ಳಿಯಲ್ಲಿ ಯುವತಿಯೊಬ್ಬಳ ಮಗು ಬಾವಿಯೊಳಕ್ಕೆ ಬಿತ್ತು. ಆಕೆ ಜೋರಾಗಿ ಕೂಗಿಕೊಂಡಳಾದರೂ ಹತ್ತಿರದಲ್ಲೇ ಇದ್ದವರು ಯಾರೂ ಬಾವಿಯೊಳಗೆ ಜಿಗಿಯಲು ಧೈರ್ಯ ತೋರಲಿಲ್ಲ. ಅಲ್ಲೇ ಹಾದುಹೋಗುತ್ತಿದ್ದ ಒಬ್ಬ ವ್ಯಕ್ತಿ ಬಾವಿಗೆ ಧುಮುಕಿ ಮಗುವನ್ನು ಕಾಪಾಡಿದ. ಹೀಗೆ ಸಹಾಯಹಸ್ತ ನೀಡಿದ್ದ ವ್ಯಕ್ತಿಯನ್ನು ಅವನು ಯಾರೆಂದು ವಿಚಾರಿಸಲು ತಾನೊಬ್ಬ ಅಸ್ಪೃಶ್ಯನೆಂದು ಹೇಳಿದ. ಅದನ್ನು ಕೇಳಿ ಅವನಿಗೆ ಕೃತಜ್ಞತೆ ಸೂಚಿಸುವ ಬದಲು ಅವನನ್ನು ವಾಚಾಮಗೋಚರವಾಗಿ ಬೈದರು ಮತ್ತು ಚೆನ್ನಾಗಿ ಥಳಿಸಿದರು. ಕಾರಣ: ಅವನು ಬಾವಿಯನ್ನು ಮಲಿನಗೊಳಿಸಿದ್ದ.”

ಇವಿಷ್ಟು ಸ್ವಾತಂತ್ರ್ಯಪೂರ್ವದ ಕೆಲವೇ ಕೆಲವು ಘಟನೆಗಳು. ಇಂತಹ ಲೆಕ್ಕವಿಲ್ಲದಷ್ಟು ಘಟನೆಗಳಲ್ಲಿ ಕೆಲವನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ನಮೂದಿಸಿಟ್ಟಿದ್ದರು. ಈಗ ಅದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ 4ರಲ್ಲಿದೆ.

ಸ್ವಾತಂತ್ರ್ಯಪೂರ್ವದಲ್ಲಿ ’ದಲಿತರೆ ನೀವು ಮಡಗದಂಗಿರಬೇಕು’ ಎಂದು ಹಿಂದೂ ಮೇಲ್ಜಾತಿ ಹೇಳಿದ್ದನ್ನು ನಾನಾ ಕಾರಣಕ್ಕೆ ತಲೆಬಾಗಿ ಪಾಲಿಸಿಕೊಂಡು ಬಂದಿದ್ದ ದಲಿತ ಸಮೂಹ ಸ್ವತಂತ್ರ ಭಾರತದಲ್ಲಿ ಹಾಗಿಲ್ಲದೆ ಹರಿಜನ ಪ್ರಜ್ಞೆಯನ್ನು ಕಿತ್ತೆಸೆದು ಅಂಬೇಡ್ಕರ್ ಪ್ರಜ್ಞೆ ಬೆಳೆಸಿಕೊಂಡಿದ್ದನ್ನು ಸಹಿಸದ ಹಿಂದೂ ಮೇಲ್ಜಾತಿಗಳು ಅತ್ಯಂತ ಕ್ರೂರವಾಗಿ ಅವರನ್ನು ಬಲಿಹಾಕಿದವು. ಆ ಘಟನೆಗಳ ದಲಿತ್ ಫೈಲ್ಸ್ ಅನ್ನೂ ಮುಂದಿನ ಸಂಚಿಕೆಯಿಂದ ನೋಡೋಣವಂತೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...