Homeಮುಖಪುಟರಾಜಸ್ಥಾನ: ದಲಿತ ಯುವಕನ ಬರ್ಬರ ಗುಂಪು ಹತ್ಯೆ, ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಆಕ್ರೋಶ

ರಾಜಸ್ಥಾನ: ದಲಿತ ಯುವಕನ ಬರ್ಬರ ಗುಂಪು ಹತ್ಯೆ, ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಆಕ್ರೋಶ

- Advertisement -
- Advertisement -

ರಾಜಸ್ಥಾನದ ಹನುಮಾನ್‌ಘರ್ ಜಿಲ್ಲೆಯ ಪ್ರೇಂಪುರ ಎಂಬಲ್ಲಿ ದಲಿತ ಯುವಕನೊಬ್ಬನನ್ನು ಗುಂಪೊಂದು ತೀವ್ರ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಆರೋಪಿಗಳು ಯುವಕನನ್ನು ಹಲ್ಲೆ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಆಕ್ರೋಶಗೊಂಡ ಯುವಕನ ಕುಟುಂಬ ಮತ್ತು ದಲಿತ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ 11 ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಒಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.

ಹಲವು ದಲಿತ ಸಂಘಟನೆಗಳು ಯುವಕನ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ನಾಲ್ವರನ್ನು ಬಂಧಿಸಿ, ಉಳಿದ ಆರೋಪಿಗಳ ಬಂಧನದ ಆಶ್ವಾಸನೆ ನೀಡಿದ ಬಳಿಕವಷ್ಟೇ ಮೃತನ ಶವಸಂಸ್ಕಾರ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಜಗದೀಶ್ ಮೇಘವಾಲ್ ಎಂಬ ಯುವಕ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆತನಿಗೆ ಗುಂಪು ಕಟ್ಟಿ ಥಳಿಸಿ, ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಯುವಕನನ್ನು ಹೊಲಕ್ಕೆ ಎಳೆದೊಯ್ದು ಕೈಕಟ್ಟಿ ಮೊಣಕಾಲಿನಲ್ಲಿ ಕೂರಿಸಿ ದೊಣ್ಣೆಗಳಿಂದ ಮನಬಂದಂತೆ ಥಳಿಸಲಾಗಿದೆ. ಆತನ ಕೊನೆಯ ಉಸಿರಿರುವರೆಗೂ ಹಲ್ಲೆ ನಡೆಸಲಾಗಿದೆ. ನಂತರ ಶವವನ್ನು ಆತನ ಮನೆ ಮುಂದೆ ಎಸೆಯಲಾಗಿದೆ. ಆಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ.

ಈ ಘಟನೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದೆ. “ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ಹಲ್ಲೆಗಳು ಶೇ.21 ರಷ್ಟು ಹೆಚ್ಚಾಗಿವೆ. ಆದರೆ ಕೇಂದ್ರ ಕಾಂಗ್ರೆಸ್ ನಾಯಕರು ರಾಜಕೀಯ ಪ್ರವಾಸ ಮಾಡುತ್ತಿದ್ದಾರೆ. ಅವರಿಗೆ ರಾಜಸ್ಥಾನ ಕಾಣುತ್ತಿಲ್ಲ” ಎಂದು ಬಿಜೆಪಿ ಮುಖ್ಯಸ್ಥ ಸತೀಶ್ ಪುನಿಯಾ ಆರೋಪಿಸಿದ್ದಾರೆ.

ರಾಹುಲ್ ಜೀ, ಲಖಿಂಪುರದ ಬಗ್ಗೆ ಚಿಂತಿಸಬೇಡಿ, ಅಲ್ಲಿ ಯೋಗಿ ಸರ್ಕಾರದಲ್ಲಿದ್ದಾರೆ ಮತ್ತು ನೀವು ಪ್ರಿಯ ಗೆಹ್ಲೋಟ್ ಜೀ ಅಲ್ಲ. ರಾಜಸ್ಥಾನದ ಪ್ರೇಂಪುರದಲ್ಲಿ ನಡೆದ ದಲಿತ ಯುವಕನ ಕೊಲೆಯ ಬಗ್ಗೆ ಮಾತನಾಡಲು ಸ್ವಲ್ಪ ಧೈರ್ಯ ತೋರಿಸಿ. ಇದರಿಂದ ನೀವು ಎಷ್ಟು ಸತ್ಯವಂತರು ಎಂದು ಜನರಿಗೆ ತಿಳಿಯುತ್ತದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಕಾವತ್ ಕಿಡಿಕಾರಿದ್ದಾರೆ.

ಘಟನೆಯ ಕುರಿತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿ, “ರಾಜಸ್ಥಾನದ ದಲಿತ ವ್ಯಕ್ತಿಯ ಗುಂಪು ಹತ್ಯೆ ತೀರಾ ವಿಷಾಧನೀಯ ಮತ್ತು ಖಂಡನೀಯವಾಗಿದೆ. ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಏಕೆ ನಿಶಬ್ದವಾಗಿದೆ? ಪಂಜಾಬ್ ಮತ್ತು ಛತ್ತಿಸ್‌ಘಡ ಮುಖ್ಯಮಂತ್ರಿಗಳು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ 50 ಲಕ್ಷ ಪರಿಹಾರ ನೀಡುತ್ತಾರೆಯೇ? ಈ ಬಗ್ಗೆ ಕಾಂಗ್ರೆಸ್ ಉತ್ತರಿಸಬೇಕು ಇಲ್ಲ ದಲಿತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

“ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಲ್ಲಿ ಕೇವಲ ಪಕ್ಷಗಳ ವ್ಯತ್ಯಾಸವಿದೆ. ದಲಿತ ದಬ್ಬಾಳಿಕೆಯ ವಿಷಯದಲ್ಲಿ ಎರಡೂ ಸರ್ಕಾರಗಳು ಒಂದೇ ಆಗಿರುತ್ತವೆ. ಹನುಮಾನ್‌ಘರ್‌ನಲ್ಲಿನ ದಲಿತರ ಹತ್ಯೆ ನೋವಿನಿಂದ ಕೂಡಿದೆ. ಅಶೋಕ್ ಗೆಹ್ಲೋಟ್‌ರವರೆ ನೀವು ತಮಾಷೆ ನೋಡಲು ಕುಳಿತಿದ್ದೀರಾ? ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ” ಎಂದು ಅಜಾದ್ ಸಮಾಜ್ ಪಕ್ಷದ ಮುಖಂಡ ಚಂದ್ರಶೇಖರ್ ಅಜಾದ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ವಿರುದ್ಧದ ದೂರುಗಳ ಪರಿಶೀಲನೆ ಆರಂಭಿಸಿದ ಚುನಾವಣಾ ಆಯೋಗ

0
ಪ್ರತಿಪಕ್ಷಗಳು ಮತ್ತು ದೇಶದ ಜನರ ಒತ್ತಡದ ಹೆಚ್ಚಾದ ನಂತರ, 'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿದ ದ್ವೇಷ ಭಾಷಣದ...