ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಾಲ್ವರು ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಶಾಲಾ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಕೃತ್ಯಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಸೇರಿದಂತೆ 15 ಸಿಬ್ಬಂದಿಗಳ ವಿರುದ್ದ ರಾಜಸ್ಥಾನ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ದೌರ್ಜನ್ಯಕ್ಕೆ ತುತ್ತಾದ ವಿದ್ಯರ್ಥಿಯರು 3, 4, 6 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ತನ್ನ ಮೇಲೆ ಶಾಲೆಯ ಪ್ರಾಂಶುಪಾಲ ಮತ್ತು ಇತರ ಶಿಕ್ಷಕರು ಒಂದು ವರ್ಷದಿಂದ ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದಾರೆ. ಇಬ್ಬರು ಮಹಿಳಾ ಶಿಕ್ಷಕರು ಆ ಕೃತ್ಯದ ವಿಡಿಯೋಗಳನ್ನು ಕೂಡ ಮಾಡಿದ್ದಾರೆ” ಎಂದು 10ನೇ ತರಗತಿಯ ಸಂತ್ರಸ್ತ ವಿದ್ಯಾರ್ಥಿನಿ ದೂರಿದ್ದಾರೆ.
ಈ ಕೃತ್ಯದ ಬಗ್ಗೆ ಸಂತ್ರಸ್ತೆಯೊಬ್ಬರು ಮಹಿಳಾ ಶಿಕ್ಷಕರಿಗೆ ದೂರು ನೀಡಿದಾಗ, ಅವರೂ ಕೂಡ ಬಾಲಕಿಗೆ ಶಾಲಾ ಶುಲ್ಕ ಮತ್ತು ಪುಸ್ತಕಗಳನ್ನು ಕೊಡಿಸುವುದಾಗಿ ಆಮಿಷವೊಡ್ಡಿದರು ಮತ್ತು ಈ ಬಗ್ಗೆ ಯಾರಿಗೂ ದೂರು ನೀಡದಂತೆ ಕೇಳಿಕೊಂಡರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
“ನಾಲ್ವರು ಸಂತ್ರಸ್ತ ಅಪ್ರಾಪ್ತ ಬಾಲಕಿಯರ ಕುಟುಂಬದ ಸದಸ್ಯರು ಮಂಗಳವಾರ ರಾತ್ರಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಶಾಲೆಯ ಒಟ್ಟು ಸಿಬ್ಬಂದಿ 15 ಜನರ ವಿರುದ್ದ ಸಾಮೂಹಿಕ ಅತ್ಯಾಚಾರ ಮತ್ತು ಕಿರುಕುಳದ ಆರೋಪ ಹೊರಿಸಿದ್ದಾರೆ” ಎಂದು ಭಿವಾಡಿ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಮೂರ್ತಿ ಜೋಶಿ ತಿಳಿಸಿದ್ದಾರೆ.
ಪ್ರತಿಕಾರದ ಆರೋಪ?
“ಕಳೆದ ವರ್ಷ ಡಿಸೆಂಬರ್ 17 ರಂದು ಅದೇ ಶಾಲೆಯ ಶಿಕ್ಷಕರೊಬ್ಬರು ದಲಿತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಶಿಕ್ಷಕನನ್ನು ಬಂಧಿಸಿ, ಪ್ರಕರಣದ ಆರೋಪಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಆರೋಪಿ ಶಿಕ್ಷಕನಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದೆ. ಈಗ ಹೊಸದಾಗಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಸಿಬ್ಬಂದಿಗಳೆಲ್ಲರೂ ಆ ಆರೋಪಿ ಶಿಕ್ಷಕನ ವಿರುದ್ಧದ ಸಾಕ್ಷಿಯಾಗಿ ಹೇಳಿಕೆ ನೀಡಿದ್ದವರೇ ಆಗಿದ್ದಾರೆ. ಹೀಗಾಗಿ, ಇತ್ತೀಚೆಗೆ ದಾಖಲಾದ ಎಫ್‌ಐಆರ್‌ಗಳ ಹಿಂದೆ ಆತನ ಕೈವಾಡವಿದೆಯೇ ಎಂದು ಅನುಮಾನಿಸಲಾಗಿದೆ. ಅದಕ್ಕಾಗಿ, ನಾವು ಸಂಭವನೀಯ ಸಾಕ್ಷಿ, ಕಿರುಕುಳದ ಆಯಾಮವನ್ನು ಸಹ ತನಿಖೆ ಮಾಡುತ್ತಿದ್ದೇವೆ” ಎಂದು ಜೋಶಿ ಹೇಳಿದ್ದಾರೆ.
“ಇತ್ತೀಚಿನ ಪ್ರಕರಣವನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಏಕೆಂದರೆ ಎಲ್ಲಾ ಆರೋಪಿಗಳು ತಮ್ಮ ಮಾಜಿ ಸಹೋದ್ಯೋಗಿಯ ವಿರುದ್ಧ ಸಾಕ್ಷ್ಯ ನುಡಿದಿದ್ದಾರೆ. ಆ ಆರೋಪಿ ಶಿಕ್ಷಕ ನಿನ್ನೆ ಎಫ್‌ಐಆರ್ ದಾಖಲಿಸಲು ಬಾಲಕಿಯರ ಪೋಷಕರನ್ನು ಪೊಲೀಸ್ ಠಾಣೆಗೆ ಕರೆತಂದಿದ್ದಾನೆ. ಆತ ಪೊಲೀಸ್ ಠಾಣೆಗೆ ಪ್ರವೇಶಿಸಲಿಲ್ಲ. ಆದರೆ ಹೊರಗೆ ಕಾಯುತ್ತಿದ್ದ. ಇದು ಅನುಮಾನವನ್ನು ಹುಟ್ಟುಹಾಕಿದ್ದು, ನೈಜವಾಗಿ ಅಪರಾಧ ನಡೆದಿದೆಯೇ ಎಂಬುದನ್ನೂ ಒಳಗೊಂಡಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‌ಪಿ ಜೋಶಿ ತಿಳಿಸಿದ್ದಾರೆ.
ಈವರೆಗೆ ಯಾರನ್ನೂ ಬಂಧಿಸಿಲ್ಲ. ಐಪಿಸಿ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಜವಾಗಿಯೂ ವಿದ್ಯಾರ್ಥಿನಿಗಳ ಮೇಲೆ ಲೈಂಗಿಕ ಕಿರುಕುಳ ನಡೆದಿರುವ ಸಂಭವವೂ ಇದೆ. ಹಿಂದಿನ ಆರೋಪಿ ಶಿಕ್ಷಕ ಮತ್ತು ಹೀಗಿನ ಆರೋಪಿ ಶಿಕ್ಷಕರೆಲ್ಲಾ ಕೂಡಿಯೇ ವಿದ್ಯಾರ್ಥಿನಿಗಳ ಮೇಲೆ ಅತ್ಯಾಚಾರ ಎಸಗಿರುವ ಸಂಭವವೂ ಇದೆ. ತಾನು ಮಾತ್ರ ಸಿಕ್ಕಿಬಿದ್ದಿದ್ದು, ಉಳಿದವರು ತನ್ನ ವಿರುದ್ಧ ಸಾಕ್ಷಿ ಹೇಳಿದ್ದಾರೆ ಎಂದು ಆತ ಎಲ್ಲರ ಮೇಲೆ ದೂರು ನೀಡುವಂತೆ ಒತ್ತಾಯಿಸಿರುವ ಅನುಮಾನಗಳಿವೆ. ಹಾಗಾಗಿ ಈ ಪ್ರಕರಣವನ್ನು ಪೊಲೀಸರು ಕೂಲಂಕುಷವಾಗಿ ಪರಿಗಣಿಸಿ ಆರೋಪಿಗಿಗಳಿಗೆ ಶಿಕ್ಷೆ ಆಗುವಂತೆ ಮತ್ತು ಈ ರೀತಿಯ ಪ್ರಕರಣಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕಿದೆ.
ಇದನ್ನೂ ಓದಿ: ವಾರಣಾಸಿಯಲ್ಲಿ ಹೇಯ ಕೃತ್ಯ: 3 ನೇ ತರಗತಿ ಬಾಲಕಿ ಮೇಲೆ ಶಾಲಾ ಸಿಬ್ಬಂದಿಯಿಂದ ಅತ್ಯಾಚಾರ



ಬಂಧನ(ಸಂಸ್ಕೃತ)…. ಸೆರೆ(ಕನ್ನಡ)