ವಾಯು ಮತ್ತು ಶಬ್ದ ಮಾಲಿನ್ಯವನ್ನು ತಡೆಗಟ್ಟುವ ನಿರ್ದೇಶನವನ್ನು ಉಲ್ಲಂಘಿಸಿರುವ ರಾಜಸ್ಥಾನದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಿದೆ. ಉದಯಪುರ ಸರೋವರಗಳ ಸುತ್ತಲೂ ಸುಟ್ಟ ಪಟಾಕಿಗಳ ಬಗ್ಗೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ.
ಉದಯಪುರ ನಿವಾಸಿ ಭಾಗ್ಯಶ್ರೀ ಪಾಂಚೋಲಿ ಅವರು, ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುವ ನವೆಂಬರ್ 7, 2023 ರ ನ್ಯಾಯಾಲಯದ ನಿರ್ದೇಶನವನ್ನು ಅನುಸರಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ನಿಂದನೆ ಅರ್ಜಿ ಸಲ್ಲಿಸಿದರು.
ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರ ಪೀಠವು ಕಳೆದ ಸೋಮವಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಪರಿಸರ) ಅಪರ್ಣಾ ಅರೋರಾ, ಉದಯಪುರ ಜಿಲ್ಲಾಧಿಕಾರಿ ಅರವಿಂದ್ ಪೋಸ್ವಾಲ್, ಪೊಲೀಸ್ ವರಿಷ್ಠಾಧಿಕಾರಿ ಯೋಗೇಶ್ ಗೋಯಲ್ ಮತ್ತು ರಾಜಸ್ಥಾನ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಶರದ್ ಸಕ್ಸೇನಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಪಟಾಕಿ ನಿಷೇಧ ಕೋರಿ 2015ರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪಾಂಚೋಲಿ ಅರ್ಜಿ ಸಲ್ಲಿಸಿದ್ದರು. ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿಗಳ ಬಳಕೆ, ತಯಾರಿಕೆ ಮತ್ತು ದಾಸ್ತಾನು ಮಾಡುವುದನ್ನು ನಿಷೇಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ನವೆಂಬರ್ 7, 2023 ರಂದು, ನ್ಯಾಯಾಲಯವು ರಾಜಸ್ಥಾನಕ್ಕೆ ನಿರ್ದಿಷ್ಟವಾಗಿ ನಿರ್ದೇಶನವನ್ನು ನೀಡಿತು. “ಹಬ್ಬದ ಋತುವಿನಲ್ಲಿ ಮಾತ್ರವಲ್ಲದೆ ನಂತರವೂ ಗಾಳಿ ಅಥವಾ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು” ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯಕ್ಕೆ ಸೂಚನೆ ನೀಡಿದೆ.
ನ್ಯಾಯವಾದಿ ಪೂಜಾ ಧರ್ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪಾಂಚೋಲಿ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ ನ್ಯಾಯಾಲಯದ ಆದೇಶಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಉದಯಪುರ ಸರೋವರಗಳ ಸುತ್ತಲೂ ಪಟಾಕಿಗಳು ಬಿದ್ದಿರುವುದನ್ನು ತೋರಿಸುವ ಜನವರಿ 8 ರ ಸುದ್ದಿ ಲೇಖನವನ್ನು ಅವರು ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ಆದೇಶದ ಉಲ್ಲಂಘನೆಯ ಬಗ್ಗೆ ಪಾಂಚೋಲಿ ಉದಯಪುರದ ಜಿಲ್ಲಾ ಅಧಿಕಾರಿಗಳಿಗೆ ಸಂವಹನಗಳನ್ನು ಉಲ್ಲೇಖಿಸಿದ್ದಾರೆ. “ಆಪಾದಿತ ಅಪರಾಧಿಗಳ ಹಾನಿಕಾರಕ ಕ್ರಮಗಳು ಸಾರ್ವಜನಿಕ ಆರೋಗ್ಯ ಮತ್ತು ಉದಯಪುರದ ದುರ್ಬಲ ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಮಾತ್ರವಲ್ಲದೆ, ಈ ನ್ಯಾಯಾಲಯದ ಘನತೆ ಮತ್ತು ಅಧಿಕಾರವನ್ನು ದುರ್ಬಲಗೊಳಿಸುತ್ತದೆ” ಎಂದು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಅಕ್ಟೋಬರ್ 2018 ರಲ್ಲಿ, ಪ್ರಮುಖ ನಗರಗಳಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯದ ದೃಷ್ಟಿಯಿಂದ ಎಲ್ಲ ಸಾಂಪ್ರದಾಯಿಕ ಪಟಾಕಿಗಳ ಉತ್ಪಾದನೆಯನ್ನು ನ್ಯಾಯಾಲಯ ನಿಲ್ಲಿಸಿತು. ನ್ಯಾಯಾಲಯವು ಹಸಿರು ಕ್ರ್ಯಾಕರ್‌ಗಳು ಮತ್ತು ಸುಧಾರಿತ ಕ್ರ್ಯಾಕರ್‌ಗಳನ್ನು (ಕಡಿಮೆ ಹೊರಸೂಸುವಿಕೆಯೊಂದಿಗೆ) ಮಾತ್ರ ಅನುಮತಿಸಿತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಸುಧಾರಿತ ಕ್ರ್ಯಾಕರ್‌ಗಳ ತಯಾರಿಕೆಯಲ್ಲಿ ಬೇರಿಯಮ್ ನೈಟ್ರೇಟ್ ಅನ್ನು ಆಕ್ಸಿಡೈಸರ್ ಆಗಿ ಬಳಸಲು ಅನುಮತಿಸಲು ನ್ಯಾಯಾಲಯವು ನಿರಾಕರಿಸಿತು.
ಇದನ್ನೂ ಓದಿ; ಸಂಸದ ಪಪ್ಪು ಯಾದವ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ; ಸಲ್ಮಾನ್ ಖಾನ್ ಪ್ರಕರಣದಿಂದ ದೂರವಿರುವಂತೆ ಎಚ್ಚರಿಕೆ


