ಅಧಿಕಾರಾವಧಿ ಮುಗಿದು ಹೊರಹೋಗುವ ಸರಪಂಚರನ್ನೆ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳಾಗಿ ನೇಮಿಸುವ ಬಗ್ಗೆ ರಾಜಸ್ಥಾನದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದು, ಈ ಕ್ರಮವು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ವಿಳಂಬಗೊಳಿಸುತ್ತದೆ ಎಂದು ಆರೋಪಿಸಿದೆ. ರಾಜಸ್ಥಾನ
ರಾಜ್ಯ ಕಾಂಗ್ರೆಸ್‌ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಿ.ಬಿ. ಯಾದವ್ ಅವರು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರಿಗೆ ಪತ್ರ ಬರೆದು, ಸರ್ಕಾರವು ಸಕಾಲಿಕವಾಗಿ ಪಂಚಾಯತ್ ಚುನಾವಣೆಗಳನ್ನು ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಚುನಾವಣೆಗಳನ್ನು ವಿಳಂಬಗೊಳಿಸುವ ನಿರ್ಧಾರವು ಸಂವಿಧಾನದ 243-ಇ ವಿಧಿ ಮತ್ತು 1994 ರ ರಾಜಸ್ಥಾನ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 95 ರ ವಿರುದ್ಧವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
“ಐದು ವರ್ಷಗಳ ಅವಧಿ ಮುಗಿದ ನಂತರ ಯಾವುದೇ ಸಂದರ್ಭಗಳಲ್ಲಿ ಅಧಿಕಾರಾವಧಿಯನ್ನು ವಿಸ್ತರಿಸಲು ಅಥವಾ ಚುನಾವಣೆಗಳನ್ನು ಮುಂದೂಡಲು ಅನುಮತಿಸುವ ಯಾವುದೇ ನಿಬಂಧನೆ ಸಂವಿಧಾನ ಅಥವಾ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಇಲ್ಲ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಗುರುವಾರ, ರಾಜ್ಯ ಸರ್ಕಾರವು ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಗ್ರಾಮ ಪಂಚಾಯಿತಿಗಳಿಗೆ ಹೊರಹೋಗುವ ಸರಪಂಚರನ್ನು ಮಧ್ಯಂತರ ಆಡಳಿತಾಧಿಕಾರಿಗಳಾಗಿ ನೇಮಿಸುವ ಅಧಿಸೂಚನೆಯನ್ನು ಹೊರಡಿಸಿತ್ತು.
ರಾಜಸ್ಥಾನದಾದ್ಯಂತ 6,759 ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಜನವರಿ 17, 2024 ರಂದು ಕೊನೆಗೊಳ್ಳಲಿದೆ. ಅಧಿಕೃತ ಮೂಲಗಳ ಪ್ರಕಾರ, ಸರ್ಕಾರವು ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡಗಳಲ್ಲಿ ಜಾರಿಗೆ ತಂದಿರುವ ಇದೇ ರೀತಿಯ ಮಾದರಿಗಳನ್ನು ಅಧ್ಯಯನ ಮಾಡಿ ನಿರ್ಧಾರವನ್ನು ಅಂತಿಮಗೊಳಿಸಿದೆ. ಈ ಬಗ್ಗೆ ಕಾನೂನು ಸಲಹೆ ಪಡೆದು, ಸರಪಂಚ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಯಿತು. ಅವರು ಈ ಕ್ರಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಧಿಸೂಚನೆಯು, ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯತ್‌ಗಳಲ್ಲಿ ಆಡಳಿತಾಧಿಕಾರಿಗಳ ನೇಮಕಾತಿ ಮತ್ತು ಆಡಳಿತ ಸಮಿತಿಗಳ ರಚನೆಯ ಮೇಲ್ವಿಚಾರಣೆ ಮಾಡಬೇಕೆಂದು ಆದೇಶಿಸುತ್ತದೆ. ರಾಜಸ್ಥಾನದಲ್ಲಿ 11,000 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದರೂ, ಅವುಗಳ ಅಧಿಕಾರಾವಧಿ ಏಕರೂಪವಾಗಿ ಕೊನೆಗೊಳ್ಳುವುದಿಲ್ಲ. ಉದಾಹರಣೆಗೆ, 704 ಪಂಚಾಯತ್‌ಗಳ ಅಧಿಕಾರಾವಧಿ ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಲಿದ್ದು, 3,847 ಪಂಚಾಯತ್‌ಗಳ ಅವಧಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ಚುನಾವಣಾ ಪ್ರಕ್ರಿಯೆಯನ್ನು ಒಟ್ಟಗೂಡಿಸುವುದು ಮತ್ತು ಮಧ್ಯಂತರದಲ್ಲಿ ಸುಗಮ ಆಡಳಿತವನ್ನು ಖಚಿತಪಡಿಸುವುದು ಈ ನಿರ್ಧಾರದ ಗುರಿಯಾಗಿದೆ ಎಂದು ಬಿಜೆಪಿ ಸರ್ಕಾರ ಹೇಳಿಕೊಂಡಿದೆ. ಆದಾಗ್ಯೂ, ಅನಗತ್ಯವಾಗಿ ಚುನಾವಣೆಗಳನ್ನು ವಿಳಂಬ ಮಾಡುವ ಮೂಲಕ ಸರ್ಕಾರವು ಪ್ರಜಾಪ್ರಭುತ್ವ ತತ್ವಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಟೀಕಿಸುತ್ತಿದೆ. ಪ್ರಸ್ತುತ ವಿಚಾರವು ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದು, ಪಂಚಾಯತ್ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಸಾಂವಿಧಾನಿಕ ಆದೇಶಗಳನ್ನು ಪಾಲಿಸಬೇಕೆಂಬ ಕೂಗು ಕೇಳಿ ಬಂದಿದೆ.
ಇದನ್ನೂಓದಿ: ಇಡಿಯಿಂದ ಮುಡಾ ಸ್ಥಿರಾಸ್ತಿ ಮುಟ್ಟುಗೋಲು – ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ


