ರಾಜ್‍ದೀಪ್ ಸರ್‍ದೇಸಾಯಿ, ಇಂಡಿಯಾ ಟುಡೆಯ ಹಿರಿಯ ಪತ್ರಕರ್ತರು
ಅನುವಾದ: ಅನಿಲ್ ಕುಮಾರ್ ಚಿಕ್ಕದಾಳವಟ್ಟ
ಹೊಸ ಲೋಕಸಭಾ ರಚನೆಯಾದ ಸಮಯದಲ್ಲಿ … ಆಳುವ ಪಕ್ಷದವರ ‘ಜೈ ಶ್ರೀರಾಮ್’ ನಿನಾದ ಘೋಷಣೆಯೊಂದಿಗೆ ಹೊಸ ಶಾಸನ ನಿರ್ಮಾಪಕರು ಪ್ರಮಾಣ ಸ್ವೀಕರಿಸಿದರು. ಆ ಸಾಂವಿಧಾನಿಕ ಕಾರ್ಯವನ್ನು ನಿರ್ವಹಿಸಿದ ವಿರೋಧ ಪಕ್ಷದ ಎಂ.ಪಿ ಒಬ್ಬರು, ವಿಚಾರ ಮಗ್ನನಾಗಿ ನಿಧಾನವಾಗಿ ಸೆಂಟ್ರಲ್ ಹಾಲ್‍ಗೆ ಪ್ರವೇಶಿಸುತ್ತಾ ‘ಮೋದಿ ಸರ್ಕಾರಕ್ಕೆ ಹತ್ತು ವರ್ಷಗಳವರೆಗೆ ಅಧಿಕಾರವನ್ನು ಕೊಟ್ಟಹಾಗೆ ಕಾಣಿಸುತ್ತದೆ’ ಎಂದು ನಿಟ್ಟುಸಿರು ಬಿಟ್ಟರು. ಆ ಎಂ.ಪಿಯ ವ್ಯಾಕುಲತೆ ವಿಸ್ಮಯಕರವಾದ ವಿಷಯವೇನು ಅಲ್ಲ. ವಿರೋಧ ಪಕ್ಷದವರು ಕುಳಿತುಕೊಳ್ಳುವ ಸ್ಥಾನಗಳು ಖಾಲಿಯಾಗಿ ಕಾಣಿಸುತ್ತಿವೆ. ಈ ಹಿಂದೆ ಸಭೆಯಲ್ಲಿ ಕುಳಿತುಕೊಂಡ ಹಳೆಯ ಕಾವಲುಗಾರರು ಸಾಕಷ್ಟು ಮಂದಿ ಕಾಣಿಸುತ್ತಿಲ್ಲ. ತುಂಬುತನ, ಒಂದು ರೀತಿ ಖಾಲಿ ಖಾಲಿಯಾದಂತಿದೆ. ನಮ್ಮ ಗಣತಂತ್ರ ದೇಶದ ವರ್ತಮಾನದ ಅಸ್ತಿತ್ವವನ್ನು 17ನೇ ಲೋಕಸಭೆ ಪ್ರತಿಬಿಂಬಿಸುವುದಾದರೆ, ನಾವು ಒಂದು ಏಕಧ್ರುವ ಭಾರತ ದೇಶದೊಳಗಡೆ ಪ್ರವೇಶಿಸುತ್ತಿದ್ದೇವೆ ಎಂದು ಹೇಳದೆ ಇರಲಾಗದು. ದೇಶದ ಜನಜೀವನದಲ್ಲಿನ ವಿಲಕ್ಷಣ ವೈವಿದ್ಯಗಳೆಲ್ಲಾ ಕ್ರಮ ಕ್ರಮವಾಗಿ ಹಿಂದಕ್ಕೆ ಹೋಗುತ್ತಾ ಕೇಸರಿಕರಣ ಹೊಂದಿದ ರಾಷ್ಟ್ರ ವ್ಯವಸ್ಥೆಗೆ ದಾರಿ ತೋರುತ್ತಿವೆ.
ವಿರೋಧ ಪಕ್ಷಗಳು ಇಷ್ಟು ಅಧ್ವಾನವಾಗಿ, ಅಸ್ತವ್ಯಸ್ತವಾಗಿ, ನಿರುತ್ಸಾಹವಾಗಿ, ಬಹುಶಃ, ಭಾರತ ಸಂಸತ್ತಿನ ಇತಿಹಾಸದಲ್ಲಿ ಇದಕ್ಕೂ ಮುಂಚೆ ಎಂದೂ ಕಾಣಿಸಿಲ್ಲ ಎಂಬುದು ಸತ್ಯಕ್ಕೆ ದೂರವಾದದ್ದಲ್ಲ. 1984ರಲ್ಲಿಯೂ ಕೂಡ (ರಾಜೀವ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ 2019ರಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಬಿಜೆಪಿ ಪಡೆದುದ್ದಕ್ಕಿಂತ ಹೆಚ್ಚಿನ ಬಹುಮತ ಸಾಧಿಸಿತ್ತು) ವಿರೋಧ ಪಕ್ಷಗಳು ಇಂದಿನ ಹಾಗೆ ಸುಸ್ತಾಗಿ ಹೋಗಿರಲಿಲ್ಲ. ಆಗ ಕನಿಷ್ಟ ಅತಿರಥ ಮಹಾರಥರಾದ ವಿರೋಧ ಪಕ್ಷ ನಾಯಕರು ಕೆಲವರಾದರೂ ಇದ್ದರು. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ, ಜಾರ್ಜ್ ಫರ್ನಾಂಢೀಸ್, ಚಂದ್ರಶೇಖರ್ ಮೊದಲಾದವರು ಜನರ ಸಮಸ್ಯೆಗಳ ಬಗ್ಗೆ ಆವೇಶಭರಿತವಾಗಿ, ಅರ್ಥವತ್ತಾಗಿ ತಮ್ಮ ಧ್ವನಿ ಎತ್ತುತ್ತಿದ್ದರು. ಆಳುವವರಲ್ಲಿ ಚಲನೆ ತರುತ್ತಿದ್ದರು. ಬಿಜೆಪಿಯು ಸಹ ಸಾರ್ವಜನಿಕ ಜೀವನದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುತ್ತಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಲ್ಲಾ ವೇಳೆಯಲ್ಲೂ ಇದಕ್ಕೆ ಬೆಂಬಲವಾಗಿ ಇರುತ್ತಿತ್ತು. ವಿರೋಧ ಪಕ್ಷಗಳ ಮಹಾ ಚುರುಕಾದ ಕ್ರಿಯಾಶೀಲತೆ ಸ್ವಲ್ಪವೂ ಸಹ ಕಡಿಮೆಯಾಗದ ಕಾಲವದು.
ಎನ್.ಟಿ. ರಾಮಾರಾವ್, ರಾಮಕೃಷ್ಣ ಹೆಗ್ಡೆಯಂತಹ ಪ್ರಾದೇಶಿಕ ಅಧಿನಾಯಕರು ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಹೊಡೆತ ನೀಡಿದ್ದು ಕಡೆಗಣಿಸಲು ಸಾಧ್ಯವಿಲ್ಲದ ಇತಿಹಾಸ. ಅದಕ್ಕೂ ಮುಂಚೆ ನೆಹರು, ಇಂದಿರಾ ದಿನಗಳಲ್ಲಿಯೂ ಸಹ ದೊಡ್ಡ ವಿರೋಧ ಪಕ್ಷದ ನಾಯಕರು ಇದ್ದರು. ಪ್ರಭುತ್ವದ ನೀತಿಗಳಿಗೆ ವಿರುಧ್ಧವಾಗಿ ತರ್ಕಬಧ್ಧವಾದ ವಾದಗಳನ್ನು ಮಾಡಿ ಜನಸಾಮಾನ್ಯರನ್ನು ಅಲ್ಲದೇ ಆಳುವವರನ್ನು ಕೂಡ ಒಪ್ಪಿಸುತ್ತಿದ್ದರು.
ಮತ್ತೆ ಇಂದಿನ ವಿರೋಧ ಪಕ್ಷಗಳ ಪರಿಸ್ಥಿತಿ ಏನು? ಮಹಾ ಶೋಚನೀಯ. ಅವುಗಳ ಅವಸ್ಥೆಗಳಿಗೆ ಮಿತಿಯಿಲ್ಲ. ಅವುಗಳು ಏಕೆ ಆಳುವ ಬಿಜೆಪಿಯನ್ನು ಸಮರ್ಥವಾಗಿ ಎದುರುಗೊಳ್ಳದೇ ಹೋಗುತ್ತಿವೆ? ಅನಿಶ್ಚಿತತೆ, ಅರಾಜಕತ್ವದಲ್ಲಿ ಕಾಂಗ್ರೆಸ್ ಪಕ್ಷ ಕೊಚ್ಚಿ ಹೋಗುತ್ತಿರುವ ಹಾಗೆ ಅನಿಸುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಪದವಿಯನ್ನು ಪರಿತ್ಯಜಿಸಬೇಕೆಂದು ರಾಹುಲ್ ಗಾಂಧಿ ತೆಗೆದುಕೊಂಡ ನಿರ್ಣಯ ಪಕ್ಷದಲ್ಲಿ ಒಂದು ಶೂನ್ಯವನ್ನು ಸೃಷ್ಟಿಸಿದೆ. ಅಂತರ್ಗತ ಅಸ್ತವ್ಯಸ್ತ ಇನ್ನಷ್ಟು ತೀವ್ರವಾಗುವ ಮುನ್ನ ಈ ಶೂನ್ಯ ಭರ್ತಿಯಾಗುವ ಅವಕಾಶ ಯಾವುದೇ ಕಾರಣಕ್ಕೂ ಇಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರಾತಿನಿಧ್ಯ ವಹಿಸುತ್ತಿರುವ ಸದಸ್ಯರ್ಯಾರು ದೇಶಾದ್ಯಂತ ಸುಪರಿಚಿತರಾದ, ಸುಪ್ರಸಿದ್ದರಾದ ನಾಯಕರಲ್ಲ. ಸಂಸತ್ತಿನ ವ್ಯವಹಾರಗಳಲ್ಲಿ ಅಷ್ಟೊಂದು ಅನುಭವವಿಲ್ಲದವರೆ ಪ್ರಸ್ತುತ ಎಂ.ಪಿಗಳಾಗಿದ್ದಾರೆ. ರಾಜ್ಯಸಭೆಯಲ್ಲಿ ಡಾಕ್ಟರ್ ಮನಮೋಹನ್ ಸಿಂಗ್ ಇದ್ದರೂ, ಅವರ ಸದಸ್ಯತ್ವ ಕಾಲ ಮುಗಿಯುತ್ತಿರುವುದರಿಂದ ದೊಡ್ಡವರ ಸಭೆಯಲ್ಲಿ ಕಾಂಗ್ರೆಸ್ ದೊಡ್ಡವರನ್ನೆ ಕಳೆದುಕೊಳ್ಳಲಿದೆ. ಸಂಸತ್ತಿನಲ್ಲಿ ಅನುಸರಿಸಬೇಕಾದ ವ್ಯೂಹದ ಬಗ್ಗೆ ಕಾಂಗ್ರೆಸ್‍ನಲ್ಲಿ ಇರುವ ಅಯೋಮಯ ಈ ಪಕ್ಷದಲ್ಲಿ ಅಂತರ್ಗತವಾಗಿ ಇರುವ ನಿರ್ಣಯ ರಾಹಿತ್ಯವನ್ನು ಪ್ರತಿಬಿಂಬಿಸುತ್ತದೆ.
ಇತರೆ ವಿರೋಧ ಪಕ್ಷಗಳ ಪರಿಸ್ಥಿತಿ ಕೂಡ ಉತ್ತಮವಾಗಿಲ್ಲ. ಅವುಗಳೂ ದುರ್ಬಲ, ಅನಿಶ್ಚಿತತೆಯ ಭವಿಷ್ಯತ್ತನ್ನೆ ಎದುರುಗೊಳ್ಳುತ್ತಿವೆ. ಒಂದು ಕಾಲದಲ್ಲಿ ರಾಜಕೀಯ ಆಂದೋಲನಗಳು, ಉದ್ಯಮಗಳಲ್ಲಿ ಮುಂದಿದ್ದ ಎಡ ಪಕ್ಷಗಳು ಈಗ ಲೋಕಸಭೆಯಲ್ಲಿ ಮೂರು ಸ್ಥಾನಗಳಿಗೆ ಸೀಮಿತವಾಗಿವೆ. ಸಂಸತ್ತಿನಲ್ಲಿ ಮೂರನೇ ಅತಿದೊಡ್ಡ ಪಕ್ಷವಾದ ತೃಣಮೂಲ ಕಾಂಗ್ರೆಸ್ ಬಿಜೆಪಿಯಿಂದ ಎದುರಾಗುತ್ತಿರುವ ಸವಾಲುಗಳ ಜೊತೆ ಸೆಣಸಾಡುವುದರಲ್ಲಿ ಮುಳುಗಿದೆ. ತನ್ನ ಭದ್ರಕೋಟೆ ಬಂಗಾಳದಲ್ಲಿ ಈ ರಾಷ್ರೀಯ ಪಕ್ಷ ಅನೇಕ ಸ್ಥಾನಗಳನ್ನು ಗೆದ್ದುಕೊಂಡಿರುವುದರಿಂದ ತೃಣಮೂಲ ತೀವ್ರ ದಿಗ್ಭ್ರಾಂತಿಗೆ ಗುರಿ ಮಾಡಿದೆ. ಆ ದಿಗ್ಬ್ರಾಂತಿಯಿಂದ ಆ ಪಕ್ಷ ಪೂರ್ತಿಯಾಗಿ ಹೊರಬಂದಿಲ್ಲ. ಬಂಗಾಳದಲ್ಲಿ ಬಿಜೆಪಿ ಪ್ರಗತಿಯ ಬಗ್ಗೆ ಅಧಿನಾಯಕಿ, ಮುಖ್ಯಮಂತ್ರಿ ಮಮತ ಬ್ಯಾನರ್ಜಿ ತೀವ್ರವಾಗಿ ಗೊಂದಲಕ್ಕೊಳಗಾಗಿದ್ದಾರೆ. ತನ್ನ ಸರ್ಕಾರದ ಅಸ್ತಿತ್ವವೇ ಪ್ರಮಾದದಲ್ಲಿ ಬಿದ್ದಿದೆ ಎನ್ನುವ ರೀತಿಯಲ್ಲಿ ಅವರ ಪ್ರತಿಕ್ರಿಯೆಗಳು ಇವೆ.
ಒಂದು ಪ್ರಬಲ ಪರ್ಯಾಯ ಶಕ್ತಿಯಾಗಿ ರೂಪುಗೊಳ್ಳುವ ಮೊದಲೇ ಬಹುಜನ ಸಮಾಜ ಪಕ್ಷ – ಸಮಾಜವಾದಿ ಪಾರ್ಟಿ ಮೈತ್ರಿಕ ಕಥೆ ಮತ್ತೆ ಮೊದಲಿನಂತಾಗಿದೆ. ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳಾದ ವೈ.ಎಸ್.ಆರ್ ಕಾಂಗ್ರೆಸ್ ಪಾರ್ಟಿ, ತೆಲಂಗಾಣ ರಾಷ್ಟ್ರ ಸಮಿತಿ, ಬಿಜು ಜನಾತದಳ ತಮ್ಮ ತಮ್ಮ ರಾಜ್ಯಗಳ ಪ್ರಯೋಜನಗಳಿಗೆ ಪ್ರಾಧಾನ್ಯತೆ ಕೊಟ್ಟು ಕೇಂದ್ರದಲ್ಲಿನ ಅಧಿಕಾರ ಪಕ್ಷದ ಜೊತೆ ಸಖ್ಯವಾಗಿ ವ್ಯವಹರಿಸುತ್ತಿವೆ.
17ನೇ ಲೋಕಸಭೆ ‘ವಿರೋಧ ಪಕ್ಷವಿಲ್ಲದ’ (ಅಪೋಜಿಷನ್ ಮುಕ್ತ್) ಸಂಸತ್ತಿನಂತೆ ಕಾಣಿಸುತ್ತದೆ. ನಿರಂಕುಶ ಅಳುವವನ ನೇತೃತ್ವದಲ್ಲಿ ಒಂದು ಅಧಿಕಾರ ಪಕ್ಷ ಸಕಲ ವ್ಯವಹಾರಗಳನ್ನು ನಿರ್ದೇಶಿಸಲಿದೆ. ಕ್ಯಾಬಿನೆಟ್ ಮಂತ್ರಿಗಳ ಆಯ್ಕೆಯಲ್ಲಿ ಪ್ರಧಾನಿ ಮೋದಿ ತೀರ್ಮಾನವು ಮುಖ್ಯವಾಗಿದೆ. ಸಂಸದೀಯ ವ್ಯವಸ್ಥೆಯ ಮೇಲೆ ಅಧ್ಯಕ್ಷ ತರಹದ ಆಳ್ವಿಕೆಯ ಮಾದರಿಯನ್ನು ಹೇರಲು ಆತ ಸಂಕಲ್ಪಿಸಿರುವಂತೆ ಸ್ಪಷ್ಟವಾಗಿ ಕಾಣುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸವಾಲ್ ಹಾಕುವ ಸಮರ್ಥ ನಾಯಕ ಒಬ್ಬನಾದರೂ ಸರ್ಕಾರದಲ್ಲಾಗಲಿ, ಸರ್ಕಾರದ ಹೊರಗಾಗಲಿ ಇರುವಂತೆ ಕಾಣಿಸುತ್ತಿಲ್ಲ.
ಮೋದಿ ತೀರ್ಮಾನಗಳನ್ನು ಪ್ರಶ್ನಿಸುವ ಧೈರ್ಯ ಸಾಹಸಗಳು ಯಾವ ಕ್ಯಾಬಿನೆಟ್ ಮಂತ್ರಿಗೂ ಇಲ್ಲ. ಪ್ರಧಾನಿ ಆದೇಶವನ್ನು ಮೌನವಾಗಿ ಪಾಲಿಸಲೇಬೇಕಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಅಧಿಕೃತವಾಗಿ ‘ದ್ವೀತಿಯ’ ಸ್ಥಾನದಲ್ಲಿರುವ ವಿವಿಧ ಪ್ರಮುಖ ಕ್ಯಾಬಿನೆಟ್ ಕಮಿಟಿಗಳಲ್ಲಿ ಸ್ಥಾನ ಕಲ್ಪಿಸದೆ ಇದ್ದರೂ ಪ್ರಶ್ನಿಸುವವರು ಯಾರು ಇಲ್ಲದೇ ಇದರುವುದು ಅದಕ್ಕೆ ನಿದರ್ಶನ. ತಾವು ಕೇಳಿದ ಇಲಾಖೆಯ ಮಂತ್ರಿ ಸ್ಥಾನಗಳನ್ನು ಕೊಟ್ಟಿಲ್ಲವೆಂದು ಅಸಂತೃಪ್ತಿಯಿಂದ ಉರಿಯುತ್ತಿರುವ ನಿತಿಶ್ ಕುಮಾರ್ (ಜೆಡಿಯು), ಉದ್ದಾವ್ ಠಾಕ್ರೆ (ಶಿವಸೇನಾ)ರಂತಹ ಮಿತ್ರಪಕ್ಷಗಳ ನಾಯಕರು ಸಹ ಮೌನವಾಗಿ ಇದ್ದುಬಿಡುಬೇಕಾದ ಪರಿಸ್ಥಿತಿ.
ಹೀಗೆ ‘ವಿರೋಧ ಪಕ್ಷವಿಲ್ಲದ’ ಸಂಸತ್ತ್ ಅನ್ನುವುದು ನಮ್ಮ ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಒಂದು ತೀವ್ರತರವಾದ ಸಾಂಸ್ಥಿಕ ಸಂಕ್ಷೋಭೆಗೆ, ಒಂದು ಸೂಚನೆ! ಮತ್ತು ಅಮೂಲ್ಯ ಆಳ್ವಿಕೆಗೆ ಕೊಡುಗೆ ಕೊಡುವಂತೆ ಮಾಡುವ ಪ್ರಜಾಪ್ರಭುತ್ವದ ಪ್ರತಿರೋಧದ ಸಮತೋಲನ (ಚೆಕ್ಸ್ ಅಂಡ್ ಬ್ಯಾಲೆನ್ಸೆಸ್) ತೀವ್ರ ಒತ್ತಡಕ್ಕೆ ಒಳಗಾಗದೆ ಹೇಗಿರುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಸ್ತಂಭವಾದ ಮಾಧ್ಯಮ, ಸರ್ಕಾರದ ನೀತಿಗಳು, ಕಾರ್ಯಕ್ರಮಗಳನ್ನು ಸಣ್ಣ ಮಟ್ಟದಲ್ಲಿ ವಿಮರ್ಶೆ ಮಾಡುವಲ್ಲಿಯೂ ಸಹ ಘೋರವಾಗಿ ವಿಫಲವಾಗಿದೆ ಎಂದು 2019ರ ಸಾರ್ವತ್ರಿಕ ಚುನಾವಣೆಗಳ ಪ್ರಚಾರ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಹೆಚ್ಚು ಪತ್ರಿಕೆಗಳು, ಚಾನೆಲ್‍ಗಳು ಹೇಡಿತನದಿಂದ ವ್ಯವಹರಿಸಿದವು. ನಿಜಾಂಶಗಳನ್ನು ಎತ್ತಿ ತೋರಿಸದೇ ಹೋದವು. ತಮ್ಮ ಕ್ರಿಯಾತ್ಮಕ ಧರ್ಮ ನಿರ್ವಹಣೆಯನ್ನು ದೊಡ್ಡಮಟ್ಟದಲ್ಲಿ ಉಪೇಕ್ಷಿಸದವು. ಸಾಂವಿಧಾನಿಕ ಸ್ಫೂರ್ತಿಯಿಂದ ವ್ಯವಹರಿಸುತ್ತಿರುವ ವ್ಯವಸ್ಥೆಯಾಗಿ ನ್ಯಾಯ ವ್ಯವಸ್ಥೆಯನ್ನು ಜನರು ಅಮಿತವಾಗಿ ಗೌರವಿಸುತ್ತಿದ್ದರು. ಆದರೆ ಇತ್ತೀಚೆಗೆ ನ್ಯಾಯ ವ್ಯವಸ್ಥೆಯ ಪ್ರಾಮಾಣಿಕತೆಯ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಹಿರಿಯ ನ್ಯಾಯಾಧೀಶರು ಸಾಕಷ್ಟು ಅನೌಚಿತ್ಯದಿಂದ ವ್ಯವಹರಿಸಿರುವುದೇ ಅದಕ್ಕೆ ಕಾರಣ.
ನೀತಿ ನಿರ್ಣಯಗಳೆಲ್ಲವನ್ನು ‘ಸರ್ವೋನ್ನತ ನಾಯಕನೆ’ ತೆಗೆದುಕೊಳ್ಳುವುದು ಪರಿಪಾಟವಾಗಿದೆ. ಅಧಿಕಾರಗಳೆಲ್ಲವು ಆತನದೆ. ಆತನದೆ ಕೊನೆಯ ಮಾತು. ಇಂತಹ ಆಳ್ವಿಕೆಯ ಮಾದರಿ ಹಾನಿಕಾರಕ ಪ್ರಭಾವಗಳು 16ನೇ ಲೋಕಸಭಾ ಆಳ್ವಿಕೆಯ ಸಮಯದಲ್ಲಿ ಪ್ರಜೆಗಳ ಅನುಭವಕ್ಕೆ ಬಂದಿವೆ. ಯಾವುದೇ ಚರ್ಚೆಯಿಲ್ಲದೇ ಕೇಂದ್ರ ಬಡ್ಜೆಟ್ ಅನ್ನು ಅನುಮೋದನೆ ಮಾಡುವುದು; ಆಧಾರ್‍ನಂತಹ ಪ್ರಮುಖವಾದ ಮಸೂದೆಗಳನ್ನು ವಿತ್ತಿಯ ಮಸೂದೆಗಳಂತೆ ಸಂಸತ್ ಅನುಮೋದನೆ ಪಡೆಯುವುದು ಸಂವಿಧಾನಿಕವಾದ ಒಳಗೊಳ್ಳುವಿಕೆಯೇ ಅಲ್ಲಾ. ಹಿರಿಯ ಮಂತ್ರಿಗಳಿಗೆ ಕೂಡ, ತಾವು ನಿರ್ವಹಿಸುತ್ತಿರುವ ಇಲಾಖೆಗಳ ಬಗೆಗಿನ ನಿರ್ಣಯಗಳು ಮೊದಲೇ ತಿಳಿಯದೇ ಇರುವುದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳೋಣ? ನೋಟು ರದ್ದತಿಯಂತಹ ವಿವೇಕರಹಿತ ನಿರ್ಣಯಗಳು ಪ್ರಜೆಗಳನ್ನು ಇನ್ನಿಲ್ಲದ ಅವಸ್ಥೆಗಳಿಗೆ ಗುರಿಮಾಡಿದರೂ ಕೂಡ, ಅದಕ್ಕೆ ವಿರುದ್ಧವಾಗಿ ಕಾರ್ಯಸಾಧಕ ಹೋರಾಟಗಳನ್ನು ಪ್ರತಿಪಕ್ಷಗಳು ಕಟ್ಟದೇ ಹೋದವು. ಈ ಪರಿಣಾಮಗಳು ನಮ್ಮ ಸಂವಿಧಾನಾತ್ಮಕವಾದ ಪ್ರಜಾಪ್ರಭುತ್ವವನ್ನು ತೀವ್ರ ಒತ್ತಡಕ್ಕೆ ಗುರಿ ಮಾಡುತ್ತಿವೆ ಎಂಬುವುದಕ್ಕೆ ಯಾವ ಸಂದೇಹವೂ ಇಲ್ಲ.
ಪತ್ರಕರ್ತರ ಮೇಲೆ ಭೌತಿಕ ದಾಳಿಗಳು ಬೆಳೆದುಹೋದವು; ಹಲವು ಪತ್ರಕರ್ತರಿಗೆ ಜೈಲು ಶಿಕ್ಷೆ ವಿಧಿಸಿದರು. ಜಮ್ಮು ಮತ್ತು ಕಾಶ್ಮೀರ ಶಾಸನ ಸಭೆಯಲ್ಲಿ ಪಾತ್ರಿನಿಧ್ಯ ಜನಸಂಖ್ಯೆಯಲ್ಲಿ ಬದಲಾವಣೆಗೆ ರಹಸ್ಯ ಪ್ರಯತ್ನಗಳು ನಡಿಯುತ್ತಿವೆ. ಆರ್ಥಿಕ ವ್ಯವಸ್ಥೆಯ ಪ್ರಗತಿ ಸರಾಗವಾಗಿಲ್ಲ; ಒಟ್ಟು ದೇಶೀಯ ಉತ್ಪನ್ನ ಅಂಕಿಅಂಶಗಳು ಸಕ್ರಮವಾದವು ಅಲ್ಲಾ… ಮತ್ತು ಈ ಹಗರಣಗಳಿಗೆ, ಅಕ್ರಮಗಳಿಗೆ ವಿರುದ್ದವಾಗಿ ದನಿಯೆತ್ತುವುದು ಯಾರು? ನರೇಂದ್ರ ಮೋದಿ ಮೊದಲನೇ ಸರ್ಕಾರದ ಆಳ್ವಿಕೆಯಲ್ಲಿ ಟ್ರಿಪಲ್ ತಲಾಖ್, ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಮುಂತಾದ ವಿವಾದಾಸ್ಪದ ಅಂಶಗಳ ಮೇಲೆ ಕಾರ್ಯನಿರ್ವಾಹಕ ವರ್ಗ ಚಲಾಯಿಸಿದ ಅಪರಿಮಿತ ಅಧಿಕಾರಗಳನ್ನು ರಾಜ್ಯಸಭೆ ತೀವ್ರವಾಗಿ ಪ್ರತಿಭಟಿಸಿದ್ದು ನಡೆದಿದೆ. ಮೋದಿ ಸರ್ಕಾರಕ್ಕೆ ರಾಜ್ಯ ಸಭೆಯಲ್ಲಿ ಬಹುಮತ ಇಲ್ಲದಿರುವುದರಿಂದಲೇ ಆ ಪ್ರತಿರೋಧಕ್ಕೆ ಅವಕಾಶವಾಯಿತು. ಸಂಸದೀಯ ಪ್ರಕ್ರಿಯೆಗಳನ್ನು ಮೋದಿ ಸರ್ಕಾರ ಉಲ್ಲಂಘಿಸಲು ಸಾಧ್ಯವಾಗಿಲ್ಲ. ಆದರೆ ಬರುವ ವರ್ಷ ಅವರು ರಾಜ್ಯಸಭೆಯಲ್ಲಿ ಸಂಪೂರ್ಣ ಬಹುಮತ ಸಂಪಾದಿಸಿಕೊಳ್ಳಲಿದ್ದಾರೆ.
ಉಭಯ ಸಭೆಗಳಲ್ಲಿ ಸಂಪೂರ್ಣ ಬಹುಮತ ಇರುವ ಕಾರಣಕ್ಕೆ ಆಳುವವರು ನಿರ್ಭಯವಾಗಿ ಅಧಿಕಾರ ದುರುಪಯೋಗಕ್ಕೆ ಮುಂದಾಗುವ ಅವಕಾಶ ಇದೆ. ಆದರೆ ಅಂತಹ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಸವಾಲುಗಳು ಎಲ್ಲಿಂದಾ ಬರಬೇಕು? ರಾಜೀವ್ ಗಾಂಧಿ ಆಳ್ವಿಕೆಯಲ್ಲಿ ಸರ್ಕಾರದ ಒಳಗಿನಿಂದಲೇ ಅಂತಹ ಸವಾಲು ಬಂತು. ರಕ್ಷಣಾ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ವಿರುಧ್ಧವಾಗಿ ವಿಶ್ವನಾಥ್ ಪ್ರತಾಪ್ ಸಿಂಗ್ ದನಿಯೆತ್ತಿದರು. 1987ರಲ್ಲಿ ಆತ ಸರ್ಕಾರದಿಂದ ಹೊರನಡೆದು, ಕಾಂಗ್ರೆಸ್‍ನಿಂದ ನಿರ್ಗಮಿಸಿದಾಗ ರಾಜೀವ್ ಸರ್ಕಾರ ಅತ್ಮರಕ್ಷಣೆಯಲ್ಲಿ ಬಿದ್ದಿತು. 1971ರಲ್ಲಿ ಇಂದಿರಾಗಾಂಧಿ ಐತಿಹಾಸಿಕವಾದ ವಿಜಯ ಸಾಧಿಸಿದರು. ಆದರೆ ಕೆಲ ಸಮಯಕ್ಕೆ ಹೆಚ್ಚಿಹೋದ ಭ್ರಷ್ಟಾಚಾರ, ಹೆಚ್ಚುತ್ತಿರುವ ಬೆಲೆಗಳಿಗೆ ವಿರುಧ್ಧವಾಗಿ ಜನಸಾಮಾನ್ಯರಲ್ಲಿ ತೀವ್ರವಾದ ಅಸಂತೃಪ್ತಿ, ಆಗ್ರಹಾವೇಶಗಳು ವ್ಯಕ್ತವಾದವು. ಆ ನಂತರ ಇಂದಿರಾ ತುರ್ತು ಪರಿಸ್ಥಿತಿಯನ್ನು ವಿಧಿಸಿದರು. ಇವೆಲ್ಲಾ ಆಕೆಯ ವಿರುಧ್ಧವಾಗಿ ವಿರೋಧ ಪಕ್ಷಗಳು ಒಟ್ಟಾಗಲು ಅನುಕೂಲವಾಯಿತು.
ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಘನ ವಿಜಯ ಸಾಧಿಸಿದ ನರೆಂದ್ರ ಮೋದಿ ತನ್ನ ಅಧಿಕಾರ ಪ್ರಭಾವದಲ್ಲಿ ನಿಸ್ಸಂದೇಹವಾಗಿ ಇಂದಿರಾಗಾಂಧಿಗಿಂತ ಶಕ್ತಿವಂತ. ಅಲ್ಲದೇ ವಿರೋಧ ಪಕ್ಷಗಳು ಸಂಪೂರ್ಣವಾಗಿ ಅಪಖ್ಯಾತಿಗೊಳಗಾಗಿಬಿಟ್ಟಿವೆ. ಮತ್ತೆ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರದ ನೀತಿಗಳನ್ನು ಗಟ್ಟಿಯಾಗಿ ಪ್ರಶ್ನಿಸುವುದು ಯಾರು? ಇದಕ್ಕೆ ನಾಗರಿಕ ಸಮಾಜವೇ ತೊಡಗಿಸಿಕೊಳ್ಳಬೇಕಿದೆ. ‘ದೇಶದ್ರೋಹಿ’ ಅನ್ನುವ ನಿಂದನೆಯನ್ನು ಎದುರಿಸಲು ಸಿದ್ದವಾಗಿ ಇರಬೇಕಿದೆ. ಜನಸಾಮಾನ್ಯರಿಗೆ ಒಳಿತಾಗದ, ಜನವಿರೋಧಿಯಾದ ಆರ್ಥಿಕ ನೀತಿಗಳನ್ನು, ಸಂವಿಧಾನದಲ್ಲಿ ಬದಲಾವಣೆಗಳನ್ನು ತರಲು ನಡೆಯುವ ಪ್ರಯತ್ನಗಳನ್ನು ಜನರೇ ಪ್ರಶ್ನಿಸಿ ತೀರಬೇಕು.


