ರಾಜೇಂದ್ರ ಚೆನ್ನಿ ಕನ್ನಡದ ವಿಶಿಷ್ಟ ಸಂಸ್ಕೃತಿ ಚಿಂತಕರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ವಿಮರ್ಶೆಗಳನ್ನು ಬರೆದಿರುವುದಲ್ಲದೆ, ಪ್ರಸಕ್ತ ಸಾಮಾಜಿಕ ಸನ್ನಿವೇಶದ ಸವಾಲುಗಳನ್ನು ಜಗತ್ತಿನ ವಿವಿಧ ಭಾಗಗಳಲ್ಲಿ ಮೂಡಿರುವ ಸಾಹಿತ್ಯ ಮತ್ತು ಚಿಂತನೆಗಳಿಗೆ ಒರೆಗಚ್ಚಿ ತಮ್ಮ ಬರಹಗಳ ಮೂಲಕ ಪ್ರತಿಕ್ರಿಯೆ ದಾಖಲಿಸುತ್ತಾ ಬಂದಿರುವವರು.
ರಾಜೇಂದ್ರ ಚೆನ್ನಿ ಅವರ ಬರಹದ ಹರವು ಬಹಳ ವಿಸ್ತಾರವಾದದ್ದು. 2004ರಲ್ಲಿ ಬಂದಿದ್ದ ಅವರ ವಿಮರ್ಶಾ ಪ್ರಬಂಧಗಳ ಸಂಕಲನ ‘ನಡುಹಗಲಿನಲ್ಲಿ ಕಂದೀಲುಗಳು’ವಿನಲ್ಲಿ ಬಾಬಾಬುಡನ್‍ಗಿರಿಯಲ್ಲಿ ಹಿಂದುತ್ವದ ಕೋಮುವಾದಿಗಳು ಸೌಹಾರ್ದವನ್ನು ಕೆಡವಲು ನಡೆಸಿದ್ದ ವಿದ್ಯಮಾನಕ್ಕೆ ಪ್ರತಿರೋಧವನ್ನು ದಾಖಲಿಸುವುದರಿಂದ ಹಿಡಿದು, ಕುವೆಂಪು, ಬೇಂದ್ರೆ, ಕಾರಂತ, ಕುವೆಂಪು, ದೇವನೂರು ಮಹದೇವ, ತೇಜಸ್ವಿ, ಕಂಬಾರ ಮುಂತಾದ ಬರಹಗಾರರ ಸಾಹಿತ್ಯದ ಅವಲೋಕನದೊಂದಿಗೆ, ಚಾಮ್‍ಸ್ಕಿ ರಾಜಕೀಯ ಬರಹಗಳ ವಿರಾಟ್ ಕಥನ, ಅನಂತಮೂರ್ತಿ ಮತ್ತು ಶಶಿ ದೇಶಪಾಂಡೆಯವರ ಸಂದರ್ಶನ ಹೀಗೆ ವೈವಿಧ್ಯಮಯವಾದ ಮತ್ತು ಸಂಸ್ಕೃತಿ ಚಿಂತನೆಯ ಬರಹಗಳಿಂದ ಕೂಡಿತ್ತು.
ಈಗ 2020ರ ಕೊನೆಯ ಭಾಗದಲ್ಲಿ ಮೂಡಿರುವ ‘ಲೋಕವಿಮರ್ಶೆ’ ಕೂಡ ಅಂತಹ ವೈವಿಧ್ಯಮಯ ಬರಹಗಳಿಂದ ಕೂಡಿದೆ. ಹೆಸರೇ ಸೂಚಿಸುವಂತೆ ಇಂದಿನ ವರ್ತಮಾನದ ಬಿಕ್ಕಟ್ಟಿಗೆ ಸ್ಪಂದಿಸುವ ಬರಹಗಳನ್ನು ಹೆಚ್ಚೆಚ್ಚು ಒಳಗೊಂಡ ಸಂಕಲನ ಇದು. ಅವರು ಸಾಮಾಜಿಕ ಕಾರ್ಯಕರ್ತರೂ ಆಗಿ ಕೋಮುಸೌಹಾರ್ದ ವೇದಿಕೆ ಸೇರಿದಂತೆ ಮುಂತಾದ ವೇದಿಕೆಗಳಲ್ಲಿ ಕೆಲಸ ಮಾಡಿದ್ದು ತಮ್ಮ ಹಿಂದಿನ ಕೆಲವು ಸಂಕಲನಗಳ ಬರಹಗಳಲ್ಲಿ ಪ್ರತಿಫಲಿಸಿದ್ದಂತೆ, ದಕ್ಷಿಣಾಯನದ ಸಂಚಾಲಕರಾಗಿ ತೀವ್ರ ಬಲಪಂಥೀಯ ರಾಜಕೀಯಕ್ಕೆ ಬದಲಿ ಸೃಷ್ಟಿಸುವ ವೇದಿಕೆಯಾಗಿ ಚೆನ್ನಿಯವರು ನಡೆಸುತ್ತಿರುವ ಚಿಂತನೆಗಳು ಪ್ರಸಕ್ತ ಸಂಕಲನದಲ್ಲಿ ಪ್ರತಿಫಲಿಸಿವೆ.
ಲಂಕೇಶ್, ಮೊಗಳ್ಳಿ ಗಣೇಶ್, ಮೂಡ್ನಾಕೂಡು ಚಿನ್ನಸ್ವಾಮಿ, ಎ ಕೆ ರಾಮಾನುಜನ್ ಮುಂತಾದ ಸಾಹಿತಿಗಳ ಬಗೆಗಿನ ವಿಮರ್ಶಾ ಲೇಖನಗಳ ಜೊತೆಗೆ ಇಂದು ಭಾರತದಲ್ಲಿ ತಲೆದೋರಿರುವ ಸರ್ವಾಧಿಕಾರಿ ಧೋರಣೆಯ ಪ್ರಭುತ್ವಕ್ಕೆ – ಆಡಳಿತ ವ್ಯವಸ್ಥೆಗೆ ಪ್ರತಿಕ್ರಿಯೆಯಾಗಿ ಹಲವು ಪತ್ರಿಕೆಗಳಲ್ಲಿ ಬರೆದಿರುವ ಈ ಲೇಖನಗಳು ಇಂದು ಯುವಜನತೆ ಓದಲೇಬೇಕಿರುವಂತಹವು. ಬ್ರೆಕ್ಟ್ ಕಾವ್ಯ, ಎರಿಕ್ ಫಾರ್ಮ್, ಟಾಲ್‍ಸ್ಟಾಯ್, ಪ್ರತಿಮಾ ರಾಜಕೀಯ, ರಾಷ್ಟ್ರ, ರಾಷ್ಟ್ರೀಯತೆ ಮತ್ತು ನಾಗರಿಕರು, ಗಾಂಧಿ ಕಟ್ಟಿಕೊಟ್ಟ ರಾಷ್ಟ್ರೀಯತೆ, ಹಿಂಸೆಯ ವ್ಯಾಖ್ಯಾನಗಳು, ಫ್ಯಾಸಿಸಂನ ನೈಜಮುಖ ಹೀಗೆ ಹಲವು ಪ್ರಬಂಧಗಳಲ್ಲಿ ಇಂದು ಜಗತ್ತಿನೆಲ್ಲೆಡೆ ಬೀಡುಬಿಡುತ್ತಿರುವ ತೀವ್ರ ಬಲಪಂಥೀಯ ಮತ್ತು ಸರ್ವಾಧಿಕಾರಿ ಧೋರಣೆಯ ಸರ್ಕಾರಗಳು ಮತ್ತು ಅದನ್ನು ಒಪ್ಪಿಕೊಳ್ಳುತ್ತಿರುವ ಜನಸಾಮಾನ್ಯರ ಮನಸ್ಥಿತಿಗೆ ರಾಜೇಂದ್ರ ಚೆನ್ನಿ ಮುಖಾಮುಖಿಯಾಗುತ್ತಾರೆ.
ಅಧಿಕಾರ ಕೇಂದ್ರಗಳನ್ನು ಸದಾ ಪ್ರಶ್ನಿಸಿ ಜನಸಾಮಾನ್ಯರ ಮತ್ತು ಶೋಷಿತರ ಪರವಾಗಿ ನಿಲ್ಲುವ ನಿಜ ಅರ್ಥದ ಲೋಕವಿರೋಧಿಗಳು, ಕಲಾವಿದರ, ಬರಹಗಾರರ ವಲಯದಲ್ಲಿ ಕ್ಷೀಣಿಸುತ್ತಿರುವ ಸಮಯದಲ್ಲಿ ರಾಜೇಂದ್ರ ಚೆನ್ನಿ ಅವರು ದಿಟ್ಟತನದಿಂದ ಯುವಜನತೆಗೆ ತಮ್ಮ ಚಿಂತನೆಗಳ ಮೂಲಕ ಎಚ್ಚರಿಸುತ್ತಿರುವ ಕಾರಣಕ್ಕೆ ಅವರ ಬರಹಗಳನ್ನು ಓದುವ ಮೂಲಕ ನಾವು ಅವರನ್ನು ಅಭಿನಂದಿಸಬೇಕಿದೆ.
ಲೋಕವಿಮರ್ಶೆ
(ಪ್ರಬಂಧಗಳ ಸಂಕಲನ)
ರಾಜೇಂದ್ರ ಚೆನ್ನಿ
ಮುದ್ರಣ: 2020 ಪುಟ: 344 ಬೆಲೆ: 300/-
ಪ್ರಕಾಶನ: ಅಭಿರುಚಿ, ಮೈಸೂರು


