ಗಾಂಧಿ ಜಯಂತಿಗೆ ಹಿಂದೆಂದೂ ಇರದ ಪ್ರಾಮುಖ್ಯತೆ ಬಂದೇತಿ ಅಂತ ಈ ವರ್ಷ ಅನಿಸಾಕ ಹತ್ತೆತಿ. ಆದರ ಪ್ರತಿ ವರ್ಷ ಹಿಂಗ ಅನ್ನಿಸತೇತಿ. ಅದೂ ಖರೇನ.

ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಅವರು ಈಗ ಇರಬೇಕಾಗಿತ್ತು ಅಂತ ಬೇರೆ ಬೇರೇ ಕ್ಷೇತ್ರದೊಳಗ ಇರುವರಿಗೆ ಅನ್ನಿಸೋದು ಸಹಜ.

ಟಿವಿ ಚಾನೆಲ್‍ಗಳು ಸಾರಾಸಗಟು ಗಾಂಜಾ ಗಂಜಿ ಕೇಂದ್ರಗಳಾಗಿ ಹೋಗಿರೋದರಿಂದ ನಾವು ಈಗ ಗಾಂಧೀಜಿ ಅವರು ಪತ್ರಕರ್ತರಾಗಿ ಇರಬೇಕಾಗಿತ್ತು ಅಂತ ಅಂದುಕೋಬಹುದು.

ಗಾಂಧೀಜಿ ಅವರು ಜನನಾಯಕರಾಗುವ ಅನೇಕ ವರ್ಷ ಮೊದಲೇ ಪತ್ರಕರ್ತರಾಗಿದ್ದರು. ತಮ್ಮ ಜೀವನದ ಅರ್ಧಕ್ಕಿಂತಲೂ ಹೆಚ್ಚು ಕಾಲ, ಅಂದರೆ ಸುಮಾರು 50 ವರ್ಷ ಅವರ ವರದಿಗಾರರು ಅಥವಾ ಸಂಪಾದಕರಾಗಿದ್ದರು. ಅವರು ಶುರು ಮಾಡಿದ, ಸಂಪಾದಕರಾಗಿದ್ದ, ಅಥವಾ ಲೇಖನ ಬರೆದ ಪತ್ರಿಕೆಗಳು ಒಟ್ಟು ಏಳು.

ದಕ್ಷಿಣ ಆಫ್ರಿಕಾದಲ್ಲಿ ಅವರು ಶುರು ಮಾಡಿದ ಮೊದಲ ಪತ್ರಿಕೆ `ಇಂಡಿಯನ್ ಒಪೀನಿಯನ್’. ಅಲ್ಲಿನ ವರ್ಣ ಬೇಧ ನೀತಿಯ ವಿರುದ್ಧ ಹೋರಾಟ ಸೃಜನಶೀಲ ಹಾಗೂ ರಚನಾತ್ಮಕವಾಗಿ ಇರಬೇಕು ಅಂತ ಅವರಿಗೆ ತೀವ್ರವಾಗಿ ಅನ್ನಿಸಿದ್ದರಿಂದ ಈ ಪತ್ರಿಕೆಯನ್ನು ಅವರು ಜನಸಂವಹನದ ದಾರಿಯಾಗಿ ಹಾಗೂ ಸರ್ಕಾರದ ವಿರೋಧದ ಮಾಧ್ಯಮವಾಗಿ ಬಳಸಿಕೊಂಡರು. ಇದೂ ಸೇರಿದಂತೆ, ‘ಯಂಗ್ ಇಂಡಿಯಾ’ ಹಾಗೂ ‘ಹರಿಜನ’ ಇವು ಇಂಗ್ಲಿಷ್ ಪತ್ರಿಕೆಗಳು. ‘ನವಜೀವನ’ ಗುಜರಾತಿ ಹಾಗೂ ಹಿಂದಿ ಪತ್ರಿಕೆ. ‘ಹರಿಜನ ಬಂಧು’ ಗುಜರಾತಿ, ‘ಹರಿಜನ ಸೇವಕ’ ಹಿಂದಿ ಪತ್ರಿಕೆ. ಅಂದ ಹಂಗ ಹರಿಜನ ಅನ್ನೋದು ಗಾಂಧಿ ಅವರು ಕಂಡುಹಿಡಿದ ಪದ ಅಲ್ಲ. ಅದನ್ನು ಮೊದಲಿಗೆ ಬಳಸಿದವರು ಗುಜರಾತಿನ ಹದಿನೈದನೇ ಶತಮಾನದ ಸಂತ ಕವಿ ನರ್ಸಿ ಮೆಹ್ತಾ.

ನಂಗ ಈ ವಿಷಯಾದಾಗ ಏನೋ ಹೇಳೋದು ಐತಿ. ಆದರ ಯಾರಿಗೆ ಹೇಳಬೇಕು ಅಂತ ಗೊತ್ತಿಲ್ಲ ಅಂತ ಗೋಳಾಡುವ ಅಸಂಖ್ಯ ಕಾಲೇಜು ಹುಡುಗರ ಹಂಗ ಗಾಂಧೀಜಿ ಅವರು ಸಹಿತ ಇಂಗ್ಲಂಡ್‍ದಾಗ ಇದ್ದಾಗ ಒಡ್ಡಾಡಿದರು. ಅಲ್ಲಿನ ಪತ್ರಿಕೆಗಳಿಗೆ ಪತ್ರ ಬರೆದರು. ಭಾರತದ ನಾಗರಿಕರ ಪರಿಸ್ಥಿತಿ ತಿಳಿಸಿ ಹೇಳಲಿಕ್ಕೆ ಸಾಧ್ಯ ಆದಷ್ಟು ಪ್ರಯತ್ನ ಮಾಡಿದರು. “ನೀವು ಎಲ್ಲಾ ನಿಮ್ಮ ನಾಗರಿಕ ಹಕ್ಕುಗಳ ಬಗ್ಗೆ ಅಷ್ಟೊಂದು ಜಾಗೃತರಾಗಿ ಇರೋರು ಭಾರತದಲ್ಲಿ ನಿಮ್ಮದೇ ಸರಕಾರ ಅನೇಕ ಅನ್ಯಾಯ ಅಕ್ರಮಗಳನ್ನು ಮಾಡುತ್ತಾ ಇದ್ದರೂ ನೀವು ಸುಮ್ಮನೆ ಇದ್ದೀರಲ್ಲಾ” ಅಂತ ಹೇಳಿ ಅವರಲ್ಲಿ ಆತ್ಮ ವಿಮರ್ಶೆ ಹುಟ್ಟಿಸುವ ಪ್ರಯತ್ನ ಮಾಡಿದರು.

ಅಲ್ಲಿಂದ ಶುರು ಆದ ಅವರ ಪತ್ರಿಕೋದ್ಯಮದ ನಂಟು, ಅವರ ಕೊನೆಯ ದಿನದವರೆಗೂ ಸಾಗಿತು. ಅವರು ಹತ್ಯೆಗೆ ಈಡಾಗುವ ಸ್ವಲ್ಪ ಹೊತ್ತಿನ ಮುಂಚೆ ಅವರು ಒಂದು ಪತ್ರ ಹಾಗೂ ಒಂದು ಲೇಖನ ಬರೆದಿದ್ದರು.

ಅವರು ಬರೆದ ಪತ್ರಗಳು, ಪುಸ್ತಕಗಳು, ಮಾಡಿದ ಭಾಷಣಗಳು, ಮತ್ತು ಎಲ್ಲಾ ಲೇಖನ ಸೇರಿದರ ಸುಮಾರು 10 ಸಾವಿರ ಪುಟ ಆಗಬಹುದು ಅಂತ ಅಂದಾಜು ಐತಿ. ಅವರ ಕೃತಿಗಳ ಡಿಜಿಟಲ್ ಪ್ರತಿಗಳು ‘ಗಾಂಧಿ ಹೆರಿಟೇಜ್ ಪೋರ್ಟಲ್’ದಾಗ ಸಿಗತಾವ.

photo courtesy : Communication Studies Blog By Sis Michelle-Blogger

ಅಷ್ಟೊಂದು ವರ್ಷ, ಇಷ್ಟೊಂದು ಪುಟ ಬರದರೂ ಅವರಿಗೆ ಯಾಕ್ ಬೋರು ಆಗಲಿಲ್ಲ? ಒಂದು ಪತ್ರಿಕೆಯಿಂದ ಇನ್ನೊಂದಕ್ಕೆ, ಚಾನೆಲ್‍ನಿಂದ ಚಾನೆಲ್‍ಗೆ, ಸುದ್ದಿಯಿಂದ ಮನೋರಂಜನೆಗೆ ಜಿಗಿಯುವ ಈಗಿನ ಹುಡುಗ- ಹುಡುಗಿಯರಿಗೆ ಯಾಕೆ ಅಷ್ಟು ಜಲ್ದಿ ಬೋರು ಬರ್ತದ? ಯಾಕ್ ಅಂದ್ರ ಗಾಂಧಿ ಅವರು ಜನರಿಗೆ ಬೇಕಾದ ವಿಷಯದ ಬಗ್ಗೆ ಬರೀತಾ ಇದ್ದರು. ಈಗಿನವರು ಮಾರ್ಕೆಟ್ ಟ್ರೆಂಡ್‍ಗೆ ಅನುಗುಣವಾಗಿ ಬರಿತಾರ. ಅವರಿಗೆ ಮನಸು ಇಲ್ಲ ಅಂದ್ರು ಕೂಡ ಅವರ ಮಾಲೀಕರು ಅವರ ಕೈ ಹಿಡಿದು ಬರಸ್ತಾರ.

ಈಗಿನ ಪತ್ರಕರ್ತರಿಗೂ ಅವರಿಗೂ ಇರುವ ಇತರ ವ್ಯತ್ಯಾಸ ಏನು ಅನ್ನೋದು ನೋಡೋಣು.

ಮೊದಲನೆಯದಾಗಿ ಗಾಂಧೀಜಿ ಅವರು ಹೊಟ್ಟೆ ಪಾಡಿಗೆ ಪತ್ರಕತ್ರರಾಗಿರಲಿಲ್ಲ. ಅವರು ಆತ್ಮದ ಹಸಿವಿಗಾಗಿ ಕೆಲಸ ಮಾಡಿದವರು. ಯಾವುದೋ ಹೊಸ ವಿಷಯದ ಬಗ್ಗೆ ಜನರಿಗೆ ತಿಳಿಸಿ ಹೇಳಲಿಕ್ಕೆ ಪತ್ರಿಕೆ ಬಳಸಿಕೊಂಡರು. ಉದಾಹರಣೆಗೆ – ಆಡಿನ ಹಾಲು ಕುಡಿಯುವ ಬಗ್ಗೆ, ಹಳ್ಳಿಗರು ಹತ್ತಿ ಬಿಟ್ಟು ರಾಗಿ ಬೆಳೆಯುವ ಬಗ್ಗೆ, ನೂಲುವ ಬಗ್ಗೆ, ಖಾದಿ ಬಟ್ಟೆಯಿಂದ ಗಾಂಧಿ ಟೋಪಿ ತಯಾರು ಮಾಡುವ ಬಗ್ಗೆ, ಹಿತ್ತಲಿನಲ್ಲಿ ಗೊಬ್ಬರ ತಯಾರು ಮಾಡುವ ಬಗ್ಗೆ, ಹೊಸ ರೀತಿಯ ಅಂಬರ ಚರಕದ ಉಪಯೋಗಗಳ ಬಗ್ಗೆ, ಇಂಡಿಗೋ ಬಣ್ಣದ ಸುಂಕದ ಬಗ್ಗೆ, ಮುಂತಾದ ಅನೇಕ ವಿಷಯ ತಿಳಿಹೇಳಲು ಅವರು ಬರೆದರು.

ಇದು ಅವರಿಗೆ ಸಾಧ್ಯವಾಗಿದ್ದು ಕೆಲವು ಕಾರಣಗಳಿಂದ – ಎಲ್ಲ ಜನರಿಗೆ ಎಲ್ಲಾ ವಿಷಯ ತಿಳಿಯಬೇಕು ಅನ್ನೋ ದೊಡ್ಡ ಮನಸ್ಸು ಅವರಿಗೆ ಇತ್ತು. ಕೆಲವರಿಗೆ ಮಾತ್ರ ಎಲ್ಲಾ ತಿಳಿದಿರಬೇಕು ಅನ್ನೋ ಮನೋಭಾವ ಇರಲಿಲ್ಲ. ಅವರಿಗೆ ಸರಳ ಭಾಷೆಯ ಮಹತ್ವ ಗೊತ್ತಿತ್ತು. ಅದನ್ನು ಬಳಸೊ ಅವಶ್ಯಕತೆ ಐತಿ ಅನ್ನೋದು ಗೊತ್ತಿತ್ತು. ತಾನೇ ಶಾಣೆ ಅನ್ನೋ ಹುಂಬತನ ಅವರ ಒಳಗ ಇರಲಿಲ್ಲ. ತನ್ನ ಬುದ್ಧಿಮಟ್ಟ ತೋರಿಸಲಿಕ್ಕೆ ಕಠಿಣ ಭಾಷೆ ಬಳಸಬೇಕು ಅನ್ನೋ ದುರಹಂಕಾರ ಇರಲಿಲ್ಲ.

ನಮ್ಮ ಈಗಿನ ಪತ್ರಕರ್ತರಲ್ಲಿ ಜನರಿಗೆ ಹೊಸ ವಿಷಯ ತಿಳಿಸಿಕೊಡಬೇಕು ಅನ್ನುವ ರೂಢಿನ ಇಲ್ಲ. `ಇದು ನಂಗ ಗೊತ್ತು, ನಿಮಗ ಗೊತ್ತಿರಲೇಬೇಕು’ ಅಂತನೋ, ಅಥವಾ `ನನಗ ಗೊತ್ತಿಲ್ಲ, ನಿಮಗೂ ಗೊತ್ತಿರಬೇಕಾಗಿಲ್ಲ’ ಅಂತನೋ ಅವರು ಆಲ್‍ರೈಟ್ ಅಂತ ಮುಂದಕ್ಕ ಹೋಗಿಬಿಡತಾರ.

ಇನ್ನ ಬ್ರಿಟಿಷ್ ಸರ್ಕಾರದ ನೀತಿಗಳ ಬಗ್ಗೆ ಇತರ ಹೋರಾಟಗಾರರ ಮತ ತಿಳಿಯಲು, ಅದರ ವಿರುದ್ಧ ಜನಾಭಿಪ್ರಾಯ ರೂಪಿಸಲು, ಹೋರಾಟದ ಮನೋಭೂಮಿಕೆ ತಯಾರು ಮಾಡಲು, ಬ್ರಿಟಿಷರ ತಪ್ಪುಗಳನ್ನು ಅವರದೇ ಭಾಷೆಯಲ್ಲಿ ಎತ್ತಿ ತೋರಿಸಲು, ಪತ್ರಿಕೆಗಳನ್ನು ಬಳಸಿಕೊಂಡರು. ಇದಕ್ಕ ಬೇಕಾಗಿದ್ದು ಧೈರ್ಯ, ಜನ ಪರ ಮನೋಭಾವ, ಹಾಗೂ ಸರಳ ಭಾಷೆ.

ಮೊನ್ನೆ ಮೊನ್ನೆ ಸುಪ್ರೀಂ ಕೋರ್ಟು ಪ್ರಶಾಂತ್ ಭೂಷಣ ಅವರಿಗೆ ಶಿಕ್ಷೆ ನೀಡಿದಾಗ ಗಾಂಧಿ ಚಿತ್ರದ ಒಂದು ತುಣುಕು ಸೋಷಿಯಲ್ ಮೀಡಿಯಾದಾಗ ಓಡಾಡುತ್ತಿತ್ತು.

ಅದು ಎನಪಾ ಅಂದ್ರ ಅಂದಿನ ಸುಪ್ರೀಂ ಕೋರ್ಟು ಗಾಂಧಿ ಅವರಿಗೆ ಜೈಲು ಹಾಗೂ ದಂಡ ಎರಡೂ ವಿಧಿಸಿದಾಗ ಅವರು `ಈ ನಿರ್ಣಯ ತಪ್ಪು. ಇದನ್ನು ನಾನು ಒಪ್ಪುವಿದಿಲ್ಲ. ದಂಡ ಕೊಡುವುದಿಲ್ಲ. ಜೈಲಿಗೂ ಹೋಗುವುದಿಲ್ಲ. ಬಲವಂತವಾಗಿ ಹಾಕಿದರೆ ಆಮರಣ ಉಪವಾಸ ಮಾಡುತ್ತೇನೆ’ ಅಂತ ಹೇಳೋದು. ಆ ನಂತರ ಅವರನ್ನು ಎರಡೂ ಶಿಕ್ಷೆಗಳಿಂದ ಮುಕ್ತ ಮಾಡಲಾಯಿತು. ಇದಕ್ಕೆ ಬೇಕಾಗಿದ್ದು ನೈತಿಕ ಧೈರ್ಯ. ಇದು ಅವರಲ್ಲಿ ಅಪರಿಮಿತವಾಗಿ ಇತ್ತು. ಇಂದಿನ ಎಷ್ಟು ಜನ ಪತ್ರಕರ್ತರ ಬಗ್ಗೆ ಈ ಮಾತು ಹೇಳಬಹುದು?

ಮತ್ತೊಂದು ಸರಳ ಭಾಷೆ. ಅವರು ಬರೆದ ಹತ್ತು ಸಾವಿರ ಪುಟದಾಗ ನೀವು ಕಣ್ಣಾಗ ಕಣ್ಣು ಹಾಕಿ ಎಷ್ಟು ಹುಡುಕಿದರೂ ಕೂಡ “ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಸಬಾಲಟರ್ನ್ ನವಯೋತ್ತರ ವಸಾಹತುಶಾಹಿಯ ಸಮಜೋ- ರಾಜಕಿಯೊ-ಆರ್ಥಿಕೋ- ಸಾಂಸ್ಕೃತಿಕೋ- ಭವಿತವಿಗಳು- ಒಂದು ಅವಲೋಕನ’’ ಅನ್ನುವ ಸಾಲುಗಳು ಸಿಗೋದಿಲ್ಲ. ಅನೇಕ ದಶಕಗಳಿಂದ “ಪಟ್ಟಭದ್ರ ಹಿತಾಸಕ್ತಿ’’, ಅನ್ನೋ ಪದ ಬಳಸಿ ತಲೆಬರಹ ಕೊಟ್ಟ ಸಹಾಯಕ ಸಂಪಾದಕರಿಗೆ ಅದರ ಸಂಪೂರ್ಣ ಅರ್ಥ ಗೊತ್ತಿರೋದಿಲ್ಲ. ಆ ಮಟ್ಟಿಗೆ ಅವರು ಅಸಹಾಯಕ ಸಂಪಾದಕರು.

photo courtesy : DNA India

ಇನ್ನು ಪತ್ರಿಕೆಗಳ ಸಂದೇಶವಾಹಕ ಗುಣದ ಸದ್‍ಬಳಕೆ

ಇದನ್ನ ನಾವು ಉತ್ತರ ಕರ್ನಾಟಕದ ಭಾಷಾದಾಗ “ಅವರ ದಮ್ಮಡಿ ಅವರಿಗೇನ ಕೊಟ್ಟು ಪೈಸಾ ವಸೂಲು ಮಾಡೋದು’’ ಅಂತೇವಿ.

ಇದರ ಹಿಂದ ಒಂದು ಕತಿ ಅದ.

ಗಾಂಧಿ ಅವರು ಗೋಪಾಲ ಕೃಷ್ಣ ಗೋಖಲೆ ಅವರನ್ನು ಮೊದಲ ಸಾರಿ ಭೇಟಿ ಆದಾಗ ಒಂದು ಪ್ರಶ್ನೆ ಕೇಳತಾರ. “ಭಾರತಕ್ಕೆ ಸ್ವಾತಂತ್ರ್ಯ ಕೊಡಿ ಅಂತ ನೀವು ಪದೇ ಪದೇ ಇಂಗ್ಲಂಡಿನ ರಾಣಿಗೆ ಪತ್ರ ಬರೀತಾ ಇರತೀರಲ್ಲಾ, ಅದರಿಂದ ಏನು ಉಪಯೋಗ? ಅವರ ಮನಸ್ಸಂತೂ ನಿಮ್ಮ ಪತ್ರಗಳನ್ನು ಓದಿ ಬದಲಾಗುವುದಿಲ್ಲ, ಅಲ್ಲವೇ?”.

ಆಗ ಅವರು “ಅಯ್ಯೋ, ನಾನು ಅವರಿಗೋಸ್ಕರ ಅಂತ ಎಲ್ಲಿ ಪತ್ರ ಬರೀತೇನೆ? ಪತ್ರ ಅವರಿಗೆ ಬರೆದದ್ದಾದರೂ ಅದನ್ನು ನಮ್ಮ ಜನ ಓದಲಿ, ಅವರಲ್ಲಿ ಜಾಗೃತಿ ಮೂಡಲಿ ಅಂತ ಬರೆಯುತ್ತೇನೆ. ಪ್ರತಿ ಬಾರಿ ಪತ್ರ ಬರೆದಾಗಲೂ ಅವರು ಮಾಡುತ್ತಿರುವ ಅನ್ಯಾಯವನ್ನು ಅದರಲ್ಲಿ ಸವಿವರವಾಗಿ ಹೇಳಿರುತ್ತೇನೆ. ಅದನ್ನು ಓದಿದ ನಮ್ಮ ಜನರಿಗೆ ಅದು ತಿಳಿದು, ಬ್ರಿಟಿಷ ಸರಕಾರದ ದುರಾಡಳಿತದ ಬಗ್ಗೆ ನಮ್ಮ ಜನರಿಗೆ ಗೊತ್ತಾಗಲಿ ಅಂತಲೇ ಸಾಲು ಸಾಲು ಪತ್ರಗಳನ್ನು ಬರೆಯುತ್ತೇನೆ. ಅವುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡುತ್ತೇನೆ. ಇದು ಅದರ ಆನುಷಂಗಿಕ ಫಲ” ಅಂತ ತಿಳಿಹೇಳತಾರ. ಇದೇ ಮಾದರಿಯೊಳಗ ಗಾಂಧೀಜಿ ತಮ್ಮ ಬರಹಗಳಿಂದ ತಮ್ಮ ಜನರಲ್ಲಿ ಅಭಿಪ್ರಾಯ ಕ್ರೋಢೀಕರಣ ಮಾಡಿದ್ರು. ಈಗಿನ ಸಂಪಾದಕರು ಈ ಮಾರ್ಗವನ್ನು ಸಹಿತ ಬಳಸಲಿಕ್ಕೆ ಹತ್ತಿಲ್ಲ.

ಇನ್ನೊಂದು ವಿಶೇಷ ಅಂದ್ರ ಗಾಂಧೀಜಿ ಅವರ ಪತ್ರಿಕೆಗಳು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪತ್ರಿಕೆಗಳಾಗಿದ್ದವು. ಈಗಿನ ಹಂಗ ನ್ಯಾಷನಲ್ ಚಾನೆಲ್ ಅಂತ ಹೆಸರು ಇಟ್ಟಗೊಂಡು ಬರೆ ಬಾಲಿವುಡ್ ನಟಿಯರ ಮಾಸ್ಕ್‌ನ ಬಣ್ಣದ ಬಗ್ಗೆ 24 ತಾಸು ಸುದ್ದಿ ತೋರಿಸೋ ಮಾಧ್ಯಮಗಳು ಆಗಿರಲಿಲ್ಲ. ಅಫ್ಘಾನಿಸ್ತಾನದ ಗಡಿಯಿಂದ ಹಿಡದು ಬರ್ಮಾದ ಗಡಿಯವರೆಗೂ ಹಬ್ಬಿದ ಭಾರತದ ಎಲ್ಲ ಮೂಲೆಗಳ ಸುದ್ದಿ ಅವರು ಬರೀತಾ ಇದ್ದರು. ಅವರಿಗೆ ದೇಶದ ಯಾವುದೇ ಮೂಲೆ ದೂರ ಎನ್ನಿಸಲಿಲ್ಲ. ಈಗಿನ ಕಾಲದಾಗ ಹಂಗ ಇಲ್ಲ. ಬಡವರ ಸೇವೆಗಾಗಿ ಜೀವನದ ಸವೆಸಿದ ಬಸವ ಕಲ್ಯಾಣದ ಶಾಸಕ ಬಸಂತಪುರ ನಾರಾಯಣ ರಾವು ಅವರು ತೀರಿಹೋದಾಗ ಬೆಂಗಳೂರಿನ ಅನೇಕ ಹಿರಿಯ ಪತ್ರಕರ್ತರು ಇಂಥವರೂ ಇದ್ದಾರೆ ಅಂತ ನನಗೆ ಗೊತ್ತಿರಲೇ ಇಲ್ಲ ಅಂತ ಉದ್ಘಾರ ತೆಗೆದರು. ಕನಿಷ್ಟ ಪಕ್ಷ ಹಿಂಗ ಅಂತ ಒಪ್ಪಿಕೊಂಡ ಅವರು ಪ್ರಾಮಾಣಿಕರು. ಅದನ್ನು ಬಹಿರಂಗವಾಗಿ ಒಪ್ಪಿಕೊಂಡರ ಮರ್ಯಾದಿ ಹೋಗತದ ಅಂತ ಸುಮ್ಮನೆ ಇದ್ದವರು ಎಷ್ಟೋ ಏನೋ?

photo courtesy : Wikimedia Commons

ಗಾಂಧೀಜಿ ಅವರು ಜಗತ್ತಿನ ಎಲ್ಲ ಜನರ ಪರವಾಗಿ ಇದ್ದರು. ವಿಶ್ವ ವಂದ್ಯ ಸಮಾಜ ಸುಧಾರಕ ನಾರಾಯಣ ಗುರು ಅವರ ಜೊತೆ ಸೇರಿ ಬಡವರ ಸೇವೆ ಮಾಡಿದ್ದ ದೀನಬಂಧು ಚಾರ್ಲಿ ಅಂಡರೂಸ್ ಅವರು ಫಿಜಿ ದೇಶದಲ್ಲಿ ಕೂಲಿಕಾರರ, ರೈತರ, ರೋಗಿಗಳ ಸೇವೆಗೆ ನಿಂತಾಗ ಗಾಂಧೀಜಿ ಅವರು ಅವರ ಪರವಾಗಿ ಬರೆದರು.

ಅಮೆರಿಕದ ಜವಳಿ ಗಿರಣಿಯ ಕೆಲಸಗಾರರ ಬಗ್ಗೆ, ಶ್ರೀಲಂಕಾದ ತಮಿಳರ ಬಗ್ಗೆ, ಅರೆಬಿಯಾದ ಮತೀಯ ಅಲ್ಪಸಂಖ್ಯಾತರ ಬಗ್ಗೆ, ಅವರು ದನಿಎತ್ತಿದರು. ಇದು ಅವರಿಗೆ ಸಾಧ್ಯವಾದದ್ದು ಅವರ ಸಂತಾಪ ಮತ್ತು ಸೈರಣೆಯಿಂದಾಗಿ.

ಭಾರತದ ಘಟನೆಗಳನ್ನು ಉದಾಹರಣೆಯಾಗಿ ತೊಗೊಂಡು ಇಡೀ ಜಗತ್ತಿನ ಬ್ರಿಟಿಷ್ ಕಾಲನಿಗಳ ಬಗ್ಗೆ ಅಥವಾ ಅಲ್ಲಿನ ಮಹಿಳೆಯರ, ಹಿಂದುಳಿದವರ, ಬಡವರ, ದಮನಿತರ ಸಮಸ್ಯೆಗಳ ಬಗ್ಗೆ ಬರೆದರು. ನಂದಗೋಕುಲದ ಕಂದನ ಬಾಯಲ್ಲಿ ಕಂಡ ವಿಶ್ವದಾ ಹಂಗ ಇದು ಸಾಬೀತು ಆತು.

`ಮನುಷ್ಯ ಎಷ್ಟು ವಿಭಿನ್ನ ವಿಷಯಗಳ ಬಗ್ಗೆ ಬರೆದರೂ ಕೊನೆಗೆ ಅವನು ಬರಕೊಳ್ಳೋದು ತನ್ನ ಬಗ್ಗೆ ಮಾತ್ರ’ ಅಂತ ಒಂದು ಮಾತು ಅದ. ಅದರಂತೆ ಗಾಂಧೀಜಿ ಅವರು ಬರೆದ ಎಲ್ಲಾ ಲೇಖನಗಳಲ್ಲೂ ಅವರ ವ್ಯಕ್ತಿತ್ವದ ಛಾಪು ಕಂಡೇ ಕಾಣತದ. ಆದರ ಈಗಿನ ಕಾಲದ ಪತ್ರಿಕೆಗಳ ಲೇಖನ ಓದಿದರ ಅವನ್ನು ಮನುಷ್ಯರು ಬರೆದರೋ ಅಥವಾ ಕೃತಕ ಬುದ್ಧಿಮತ್ತೆಯ ರೋಬೋಟುಗಳು ಲೇಖನ ಬರಿಲಿಕ್ಕೆ ಶುರು ಮಾಡಿದಾವೋ ಗೊತ್ತಾಗೋದಿಲ್ಲ.

ಗಾಂಧಿ ನಂತರದ ಭಾರತ ಇದ್ದಂಗ, ಇದು ಗಾಂಧಿ ನಂತರದ ಪತ್ರಿಕೋದ್ಯಮ, ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಗಾಂಧಿ ಜಯಂತಿಯಂದು ಕೃಷಿ ಮಸೂದೆ ವಿರೋಧಿಸಿ ’ಅನ್ನದಾತ’ರ ಉಪವಾಸ ಸತ್ಯಾಗ್ರಹ

LEAVE A REPLY

Please enter your comment!
Please enter your name here