ಪ್ರಧಾನಿಯವರ ಮೌನ - ನಮ್ಮ ಹೆಣ್ಣುಮಕ್ಕಳಿಗೆ ಅಪಾಯ: ಚಂದ್ರಶೇಖರ್ ಆಜಾದ್
PC: HuffPost India

ಹತ್ರಾಸ್ ದಲಿತ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಕುಟುಂಬಕ್ಕೆ ಶವ ಕೊಡದೇ ಇರುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಭೀಮ್ ಆರ್ಮಿ ಮುಖ್ಯಸ್ಥರಾದ ಚಂದ್ರಶೇಖರ್ ಆಜಾದ್ ಒತ್ತಾಯಿಸಿದ್ದಾರೆ. ಆಜಾದ್ ಇಂದು ಸಂಜೆ 5 ಗಂಟೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಆಜಾದ್, ಭಾವನಾತ್ಮಕವಾಗಿ ಮಾತನಾಡಿ, “ಪ್ರಧಾನಿಯವರ ಮೌನ – ನಮ್ಮ ಹೆಣ್ಣುಮಕ್ಕಳಿಗೆ ಅಪಾಯ” ಎಂದು ಹೇಳಿದ್ದಾರೆ. ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಹತ್ರಾಸ್ ಯುವತಿ ಸಾವನ್ನಪ್ಪಿದ ನಂತರ, ಆಜಾದ್ ಮುಂದಾಳತ್ವದಲ್ಲಿ ಭೀಮ್ ಆರ್ಮಿ ಪ್ರತಿಭಟಿಸಿತ್ತು.

“ಮೋದಿಯವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಿದ (ವಾರಣಾಸಿ) ಅದೇ ಉತ್ತರಪ್ರದೇಶದಲ್ಲಿ ಹತ್ರಾಸ್ ಮೂಲದ ಹೆಣ್ಣುಮಗಳ ಮೇಲೆ ದೌರ್ಜನ್ಯ ನಡೆದಿದೆ. ಆಕೆಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಅವಳ ಮೂಳೆಗಳನ್ನು ಮುರಿದು, ಮೃತದೇಹವನ್ನು ಕಸದಂತೆ ಸುಡಲಾಗಿದೆ. ಉತ್ತರಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ ಪ್ರಧಾನಿ ಒಂದು ಮಾತನ್ನೂ ಆಡುವುದಿಲ್ಲವೇಕೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉನ್ನಾವೊ: ಅತ್ಯಾಚಾರದ ದೂರು ದಾಖಲಿಸಲು ವಿಫರಾಲದ ಜಿಲ್ಲಾಧಿಕಾರಿ ವಿರುದ್ದ ಕ್ರಮಕ್ಕೆ ಸಿಬಿಐ ಶಿಫಾರಸ್ಸು

“ಪ್ರಧಾನಮಂತ್ರಿಗಳೇ, ಅತ್ಯಾಚಾರಕ್ಕೊಳಗಾದ ಯುವತಿಯ ರೋಧನೆ ನಿಮಗೆ ಕೇಳಲಿಲ್ಲವೇ ಅಥವಾ ಆಕೆಯ ಕುಟುಂಬದವರ ರೋಧನೆ ನಿಮಗೆ ತಲುಪಲಿಲ್ಲವೇ? ನೀವು ಇನ್ನೂ ಎಷ್ಟು ದಿನ ಮೌನವಾಗಿರುತ್ತೀರಿ? ನೀವು ಉತ್ತರವನ್ನು ನೀಡಲೇಬೇಕು. ಉತ್ತರ ಕೇಳಲು ಇಂದು ಸಂಜೆ 5 ಗಂಟೆಗೆ ನಾವು ಬರುತ್ತಿದ್ದೇವೆ. ನಿಮ್ಮ ಮೌನ ನಮ್ಮ ಹೆಣ್ಣುಮಕ್ಕಳಿಗೆ ಅಪಾಯ” ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಆಜಾದ್ ಇಂದು ಸಂಜೆ 5 ಗಂಟೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆಗೆ ಕರೆ ನೀಡಿದ್ದರು. ಆದರೆ ಇಂಡಿಯಾ ಗೇಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಗುಂಪು ಸೇರುವಿಕೆಯನ್ನು ನಿಷೇದಿಸಿರುವುದರಿಂದ ಪ್ರತಿಭಟನೆಯು ಜಂತರ್ ಮಂತರ್‌ಗೆ ಸ್ಥಳಾಂತರಗೊಂಡಿದೆ ಎಂದು ಹೇಳಿದರು.

ಭೀಮ್ ಆರ್ಮಿಯ ಪ್ರತಿಭಟನಾಕಾರರೊಂದಿಗೆ ನೂರಾರು ಕಾರ್ಯಕರ್ತರು ಮತ್ತು ನಾಗರೀಕರು ಸೇರಿಕೊಳ್ಳುವ ನಿರೀಕ್ಷೆಯಿದೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಪ್ರತಿಭಟನೆಯನ್ನು ಬೆಂಬಲಿಸಿ ಟ್ವೀಟ್ ಮಾಡಿತ್ತು. ಇದು ಇಂಡಿಯಾ ಗೇಟ್ ಬಳಿ ಗುಂಪು ಸೇರುವಿಕೆಯ ನಿಷೇದಕ್ಕೆ ಕಾರಣವಾಯಿತು.

ಇದನ್ನೂ ಓದಿ: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: NCRB

ಹತ್ರಾಸ್ ದುರಂತದ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದ ಪ್ರಧಾನ ಮಂತ್ರಿಯನ್ನು ಗುರಿಯಾಗಿಸಿಕೊಂಡು ಆಜಾದ್ ಎರಡು ಬಾರಿ ವಾಗ್ದಾಳಿ ನಡೆಸಿದ್ದರು. “ಪ್ರಧಾನಿ ಯಾಕೆ ಪ್ರತಿಕ್ರಿಯಿಸಲಿಲ್ಲ? ಇನ್ನು ಉತ್ತರಪ್ರದೇಶದಲ್ಲಂತೂ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದು ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿದರು.

ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಯುವತಿ ತನ್ನ ಹೊಲದಲ್ಲಿ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಆಕೆಯ ಬಟ್ಟೆಯಿಂದಲೇ ಕಟ್ಟಿ ಪಕ್ಕದ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಲಾಗಿತ್ತು.

ಇದನ್ನೂ ಓದಿ: ಲಾಕಪ್ ಡೆತ್: ಉತ್ತರ ಪ್ರದೇಶದಲ್ಲಿ ಅತಿಹೆಚ್ಚು ಪ್ರಕರಣ ದಾಖಲು!

ಈ ಪ್ರಕರಣದ ನಾಲ್ವರು ಅತ್ಯಾಚಾರ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ಮೃತ ಯುವತಿ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅತ್ಯಾಚಾರ ಆರೋಪಿಗಳು ಮೇಲ್ಜಾತಿಯವರು ಎನ್ನಲಾಗಿದೆ. ಈ ಘಟನೆ ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಗೆ ಸಾಕ್ಷಿಯಾಗಿದ್ದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ನಾಲ್ವರು ಆರೋಪಿಗಳಾದ ಸಂದೀಪ್, ರಾಮು, ಲವ ಕುಶ್ ಮತ್ತು ರವಿ ಮೇಲೆ ಸಾಮೂಹಿಕ ಅತ್ಯಾಚಾರ, ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳನ್ನು ಹಾಕಲಾಗಿದೆ.

ಆರಂಭದಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿದ್ದ ಪೊಲೀಸರು, ಯುವತಿಯ ಔಪಚಾರಿಕ ಹೇಳಿಕೆಯ ನಂತರವೇ ಅತ್ಯಾಚಾರ ಆರೋಪಗಳನ್ನು ಸೇರಿಸಿದ್ದರು. ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಸಂತ್ರಸ್ತರ ಮನವಿಗೆ ಸ್ಪಂದಿಸಿರಲಿಲ್ಲ.


ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here