ರಾಜ್ಯಸಭಾ ಸಂಸದ ಮತ್ತು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಕೊನೆಯುಸಿರೆಳೆದಿದ್ದಾರೆ. 64 ವರ್ಷದ ಅಮರ್ ಸಿಂಗ್ ಬಹಳ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕೆಲವು ತಿಂಗಳುಗಳಿಂದ ಸಿಂಗಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದಕ್ಕೂ ಮೊದಲು ಅಮರ್ ಸಿಂಗ್‌ರವರು 2013 ರಿಂದಲೇ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು.
ಇಂದು ಬೆಳಿಗ್ಗೆ ಕೂಡ ಅವರು ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ್ ತಿಲಕ್ ಅವರಿಗೆ ಟ್ವಿಟ್ಟರ್‌ನಲ್ಲಿ ಗೌರವ ಸಲ್ಲಿಸಿದ್ದರು. ತಮ್ಮ ಎಲ್ಲಾ ಅನುಯಾಯಿಗಳಿಗೆ ಈದ್ ಮುಬಾರಕ್ ಎಂದು ಶುಭ ಹಾರೈಸಿದ್ದರು.
ಅಮರ್ ಸಿಂಗ್ ಅವರ ಟ್ವಿಟ್ಟರ್ ಪ್ರೊಫೈಲ್ ಅವರು ಅನಾರೋಗ್ಯದ ಹೊರತಾಗಿಯೂ ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದರು ಎಂದು ಸೂಚಿಸುತ್ತದೆ.
ಅವರು ಮಾರ್ಚ್ 22 ರಂದು ಆಸ್ಪತ್ರೆಯ ಹಾಸಿಗೆಯಿಂದಲೇ ಟ್ವಿಟ್ಟರ್ ನಲ್ಲಿ ಕಿರು ವಿಡಿಯೋ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸುವಂತೆ ಅವರು ತಮ್ಮ ಎಲ್ಲಾ ಅನುಯಾಯಿಗಳಿಗೆ ವೀಡಿಯೊದಲ್ಲಿ ಮನವಿ ಮಾಡಿದ್ದರು.
ಮಾರ್ಚ್ 2 ರಂದು ಅವರು ನಿಧನ ಹೊಂದಿದ್ದಾರೆ ಎಂಬ ವದಂತಿಗಳನ್ನು ಕೊನೆಗೊಳಿಸಲು ಅವರು ಮತ್ತೊಂದು ವೀಡಿಯೊ ಸಂದೇಶವನ್ನು ಪೋಸ್ಟ್ ಮಾಡಿದ್ದರು.
“ಟೈಗರ್ ಜಿಂದಾ ಹೈ,” ಎಂದು ಅವರು ವೀಡಿಯೊದೊಂದಿಗೆ ಪೋಸ್ಟ್ ಮಾಡಿದ ಸಂದೇಶದಲ್ಲಿ ಬರೆದಿದ್ದರು.
ಸಮಾಜವಾದಿ ಪಕ್ಷವನ್ನು ತೊರೆದ ನಂತರ ರಾಜಕಾರಣಿಯಾಗಿ ಸಿಂಗ್ ಅವರ ಪ್ರಾಮುಖ್ಯತೆ ಕಡಿಮೆಯಾಗಿತ್ತು. ಅವರನ್ನು ಒಮ್ಮೆ ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಅವರ ಆಪ್ತರು ಎಂದು ಪರಿಗಣಿಸಲಾಗಿತ್ತು. ಅವರು ಎಸ್‌ಪಿಗೆ ಹಿಂತಿರುಗುವುದಿಲ್ಲ ಎಂದು ಅವರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.
ಜನವರಿ 6, 2010 ರಂದು ಸಿಂಗ್ ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ನಂತರ ಅವರನ್ನು ಪಕ್ಷದಿಂದ ಹೊರಹಾಕಲಾಗಿತ್ತು.
ಇದನ್ನೂ ಓದಿ: ಅಕ್ಕಿಬೇಳೆಯಿಂದ ಪಿಪಿಇ ಕಿಟ್‌ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ: ರವಿಕೃಷ್ಣಾರೆಡ್ಡಿ ಸಂದರ್ಶನ


