ಯಜಾಕಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನೂರಾರು ಉದ್ಯೋಗಿಗಳನ್ನು ಕಾನೂನುಬಾಹಿರವಾಗಿ ವಜಾಗೊಳಿಸಿದೆ. ಡಿಸೆಂಬರ್ 26, 2022 ರಿಂದ ಇಲ್ಲಿಯವರೆಗೂ ಸಂಸ್ಥೆಯ ಗೇಟಿನ ಬಳಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸ್ಥೆಯಿಂದಾಗಲಿ, ಅಥವಾ ಸರ್ಕಾರದಿಂದಾಗಲಿ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಇಂದು ಕಾರ್ಮಿಕರ ಸಂಘಟನೆಗಳು ರ್ಯಾಲಿ ನಡೆಸಲು ಮುಂದಾಗಿವೆ.
ಅರಿಷಿನಕುಂಟೆ ಬೈಪಾಸ್‌ನಿಂದ ಯಜಾಕಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿವರೆಗೆ ಈ ರ್ಯಾಲಿ ನಡೆಯುತ್ತಿದೆ. ಕೆಲಸದಿಂದ ಕೈಬಿಟ್ಟಿರುವ ನೌಕರರನ್ನು ಈ ಕೂಡಲೇ ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿರುವ ಕಾರ್ಮಿಕರು, ರ್ಯಾಲಿ ನಡೆಸುವ ಮೂಲಕ ಕಾರ್ಮಿಕರು ತಮ್ಮ ಸಮಸ್ಯೆಯನ್ನು ಸಂಸ್ಥೆ ಮತ್ತು ಸರ್ಕಾರದ ಮುಂದಿಡಲು ನಿರ್ಧರಿಸಿದ್ದಾರೆ.
ಡಿಸೆಂಬರ್ ನಲ್ಲಿ ಸುಮಾರು 150 ಕಾರ್ಮಿಕರನ್ನು ವಜಾಮಾಡಲಾಗಿತ್ತು. ನಿರಂತರವಾಗಿ ಹೋರಾಟ ನಡೆಸುತ್ತಿರುವದರಿಂದ ಅವರನ್ನು ಮತ್ತೆ ಫ್ಯಾಕ್ಟರಿಯ ಆಡಳಿತವು ಕೆಲಸಕ್ಕೆ ಪುನರ್ ನೇಮಿಸಿಕೊಳ್ಳುವುದಾಗಿ ಈ ಹಿಂದಿನ ಸಭೆಯಲ್ಲಿ ತಿಳಿಸಿತ್ತು. ಆದರೆ, ಇಲ್ಲಿಯವರೆಗೆ 30 ಕಾರ್ಮಿಕರನ್ನು ಮಾತ್ರವೇ ಪುನರ್ ನೇಮಿಸಿಕೊಂಡಿದೆ.
120 ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಂಡಿಲ್ಲ ಹಾಗಾಗಿ ಮುಷ್ಕರವನ್ನು ಮುಂದುವರೆಸಿದ್ದಾರೆ. ಈ ಸಂಸ್ಥೆಯ ಆಡಳಿತ ಮಂಡಳಿಯು ಬೇಕಂತಲೇ ಈ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಒಂದೂವರೆ ತಿಂಗಳಿನಿಂದ ವೇತನ ಪಡೆಯದ ಕಾರ್ಮಿಕರು ಕಷ್ಟದಲ್ಲಿ ಸಿಲುಕಿದ್ದಾರೆ. ಈ ಕಾರ್ಮಿಕರೆಲ್ಲ ಉತ್ತರ ಕರ್ನಾಟಕ ಭಾಗದಿಂದ ಬಂದಿರುವವರಿರಾಗಿದ್ದು, ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಎಐಸಿಸಿಟಿಯು ಮುಖಂಡರಾದ ವಿಜಯ್ ಅವರು ಮಾತನಾಡಿ, “ಕೆಲಸದಿಂದ ವಜಾಗೊಳಿಸಿರುವ ಕಾರ್ಮಿಕರನ್ನು ಈ ಕೂಡಲೇ ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ, ರ್ಯಾಲಿ ನಡೆಸುತ್ತಿದ್ದೇವೆ. ಈಗಾಗಲೇ ಕಾರ್ಮಿಕ ಸಚಿವರಿಗೆ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಸುಮಾರು 2 ತಿಂಗಳಿನಿಂದ ಈ ಹೋರಾಟ ನಡೆಯುತ್ತಿದೆ. ಈ ವರೆಗೂ ಈ ಕಂಪನಿಯ ಆಡಳಿತ ಮಂಡಳಿಯೂ ಸರಿಯಾಗಿ ಸ್ಪಂದಿಸಿಲ್ಲ” ಎಂದು ಹೇಳಿದರು.
“ಉತ್ತರ ಕರ್ನಾಟಕದ ನಾನಾಭಾಗದಿಂದ ಬಂದಿರುವ ಕಾರ್ಮಿಕರು, ಈ ಕೆಲಸವನ್ನೇ ನಂಬಿಕೊಂಡು ಬಹಳ ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇದೀಗ ಕಾರಣವೇ ಇಲ್ಲದೆ ಕೆಲಸದಿಂದ ತಗೆದುಹಾಕಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರ್ಮಿಕರೊಂದಿಗೆ ಇದೀಗ ಸರ್ಕಾರ ನಿಲ್ಲಬೇಕಿದ್ದು, ಸಂಸ್ಥೆಯು ಶೀಘ್ರವೇ ಅವರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು” ಎಂದು ವಿಜಯ್ ಒತ್ತಾಯಿಸಿದ್ದಾರೆ.


