ಆಗಸ್ಟ್ 5 ರಂದು ನಡೆಯಲಿರುವ ರಾಮ ಮಂದಿರ ನಿರ್ಮಾಣ ಕಾರ್ಯದ ಭೂಮಿ ಪೂಜೆ ಮಾಡುವ ಅರ್ಚಕನಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದೆ. ಅರ್ಚಕರ ಜೊತೆಗೆ 16 ಮಂದಿ ಭದ್ರತಾ ಸಿಬ್ಬಂದಿಗಳೂ ಕೊರೋನಾ ಪಾಸಿಟಿವ್ ಆಗಿದ್ದಾರೆ.
ಪ್ರದೀಪ್ ದಾಸ್ ಕೊರೋನಾ ಸೋಂಕು ಕಾಣಿಸಿಕೊಂಡಿರುವರಾಗಿದ್ದಾರೆ. ಇವರು ಆಚಾರ್ಯ ಸತ್ಯೇಂದ್ರ ದಾಸ್ ಅವರ ಶಿಷ್ಯರಾಗಿದ್ದು, ರಾಮ ಜನ್ಮ ಭೂಮಿಗೆ ನಿರಂತರವಾಗಿ ಪೂಜೆ ಸಲ್ಲಿಸುವ ನಾಲ್ವರು ಅರ್ಚಕರಲ್ಲಿ ಪ್ರದೀಪ್ ದಾಸ್ ಸಹ ಒಬ್ಬರಾಗಿದ್ದಾರೆ.
ಕೊರೋನಾ ಸೋಂಕಿತ ಅರ್ಚಕರನ್ನು ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗಿದೆ. ಪ್ರದೇಪ್ ದಾಸ್ ಅವರನ್ನು ಬುಧವಾರ ಸಂದರ್ಶನ ಮಾಡಿದ್ದ ಕೆಲವು ಮಾಧ್ಯಮ ಸಿಬ್ಬಂದಿ ಕೂಡ ಆತಂಕದಲ್ಲಿದ್ದಾರೆ.
ಅಯೋಧ್ಯೆಯಲ್ಲಿ ಬುಧವಾರ ಒಟ್ಟು 66 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ಉತ್ತರ ಪ್ರದೇಶ ಆರೋಗ್ಯ ಇಲಾಖೆಯ ಇತ್ತೀಚಿನ ಮಾಹಿತಿ ಹೇಳಿದೆ. ಇಲ್ಲಿಯವರೆಗೆ 605 ಮಂದಿ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 375 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 13 ಮಂದಿ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ 5ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸುವ ಹಿನ್ನೆಲೆ, ಎಲ್ಲೆಡೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾತ್ ಹಾಗೂ ದೇಶದ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಓದಿ: ರಾಮಮಂದಿರ ನಿರ್ಮಾಣದ ಟ್ರಸ್ಟ್ ಮುಖ್ಯಸ್ಥನಾಗಿ ನೇಮಕವಾದ ರಾಜೀವ್ ಗಾಂಧಿ ಆಪ್ತ


