ಡೊಳ್ಳಿನ ಪದಗಳ `ಹುಡುಗಿಯರ’ ಹಾಡಿಕೆಗೆ ಘನತೆ ತಂದ ಸುಮಿತ್ರ ಮುಗಳಿಹಾಳ

0
27

ಬಿ.ಎ, ಬಿ.ಎಡ್ ಮಾಡಿಯೂ ಶಿಕ್ಷಕಿ ಆಗಬೇಕೆನ್ನುವ ಕನಸಿಗಿಂತ ಪಿ.ಎಸ್.ಐ ಆಗಬೇಕೆಂದು ಹುಡುಗಿ ಕನಸು ಕಟ್ಟುತ್ತಾಳೆ. ಅದಕ್ಕಾಗಿ ಕೋಚಿಂಗ್ ಹೋಗುತ್ತಾಳೆ. ಕಷ್ಟಪಟ್ಟು ಓದುತ್ತಾಳೆ. ತುಂಬಾ ಕಡಿಮೆ ಅಂತರದಲ್ಲಿ ಆಯ್ಕೆ ತಪ್ಪಿಹೋಗುತ್ತದೆ. ಎರಡು ಮೂರು ಬಾರಿ ಹೀಗೆಯೇ ಆಗುತ್ತದೆ. ಕೊನೆಗೆ ಈ ಹುಡುಗಿ ಸರಕಾರಿ ನೌಕರಿಗೆ ಹೋಗಬಾರದೆಂದು ನಿರ್ಧರಿಸುತ್ತಾಳೆ.

ಈ ಹುಡುಗಿ ಆ ಹೊತ್ತಿಗಾಗಲೆ ಡೊಳ್ಳಿನ ಹಾಡಿಕೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯಳಾಗಿದ್ದಳು. ಹಾಗಾಗಿ ತನ್ನ ಡೊಳ್ಳಿನ ಹಾಡಿಕೆ ಮೇಳಕ್ಕೆ ಮತ್ತಷ್ಟು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾಳೆ. ಇದೀಗ ಹದಿನೈದಕ್ಕಿಂತ ಹೆಚ್ಚಿನ ಡೊಳ್ಳಿನ ಮೇಳಗಳಿಗೆ ಗುರುವಾಗಿದ್ದಾರೆ. ಈತನಕ ನಾಲ್ಕೈದು ಸಾವಿರಕ್ಕೂ ಹೆಚ್ಚು ಹಾಡಿಕೆ ಪ್ರದರ್ಶನ ಕೊಟ್ಟಿದ್ದಾರೆ. ಕನಿಷ್ಠ ತಿಂಗಳಿಗೆ ಒಂದು ಲಕ್ಷದಷ್ಟು ಆದಾಯವಿದೆ.

ಯೂಟೂಬಲ್ಲಿ ಒಂದೊಂದು ಹಾಡಿಗೆ ನಾಲ್ಕೈದು ಲಕ್ಷ ವೀಕ್ಷಣೆಗಳಿವೆ. ಒಟ್ಟಾರೆ ಇವರ ಹಾಡಿಕೆಗೆ ಮೂರು ಕೋಟಿಗಿಂತ ಹೆಚ್ಚು ವೀಕ್ಷಣೆಗಳಾಗಿವೆ. ಅಂತೆಯೇ ನೂರಾರು ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರಲು ಪ್ರೇರಣೆಯಾಗಿದ್ದಾರೆ. ವಾಗ್ವಾದಕ್ಕೆ ನಿಂತರೆ ಗಂಡಸರ ಮೇಳಗಳು ಬೆದರುತ್ತವೆ. ಆ ಹುಡುಗಿಯೇ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಮುಗಳಿಹಾಳದ ಹಾಲುಮತದ ಯಲ್ಲಪ್ಪ-ಯಲ್ಲವ್ವರ ನಾಲ್ಕನೆ ಮಗಳು ಸುಮಿತ್ರ.

ಕುರುಬ ಸಮುದಾಯದ ಹಾಲುಮತದ ಪ್ರಸಾರಕ್ಕಾಗಿ ಹುಟ್ಟಿಕೊಂಡ ಡೊಳ್ಳಿನ ಹಾಡುಗಳು ಜನಪದ ಗೀತ ಸಂಪ್ರದಾಯದಲ್ಲಿ ವಿಶಿಷ್ಟವಾಗಿವೆ. ಉತ್ತರ ಕರ್ನಾಟಕದಿಂದ ಮಹಾರಾಷ್ಟ್ರದವರೆಗಿನ ಹಳ್ಳಿಗಳಲ್ಲಿ ಡೊಳ್ಳಿನ ಹಾಡುಗಳಿಗೆ ಪ್ರಮುಖ ಸ್ಥಾನವಿದೆ. ಡೊಳ್ಳಿನ ಹಾಡುಗಳನ್ನು ಬರೆಯುವ ನೂರಾರು ಕವಿಗಳಿದ್ದಾರೆ.

ಕಳೆದ ಒಂದೆರಡು ದಶಕದಿಂದ ಗಂಡಸರ ಪಾರಮ್ಯವೇ ಆಗಿದ್ದ ಡೊಳ್ಳಿನ ಹಾಡಿಕೆಗೆ ಮಹಿಳೆಯರ ಪ್ರವೇಶವಾಗಿದೆ. ಎಂಬತ್ತರ ದಶಕದಲ್ಲಿ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯ ಅಂಧ ಅಜ್ಜಿ ನೀಲವ್ವ ಬಿರಡಿ ಡೊಳ್ಳಿನ ಹಾಡುಗಳನ್ನು ಹಾಡುತ್ತಿದ್ದರು. ಇದರ ಪ್ರಭಾವ ಎಂಬಂತೆ ಮಣ್ಣೂರಿನ ರೇಣುಕಾ ಮತ್ತು ಅಕ್ಷತಾ ಹಾಡಿಕೆಗೆ ಬಂದರು. ಇಲ್ಲಿಂದ ಹುಡುಗಿಯರು ಡೊಳ್ಳಿನ ಹಾಡಿಕೆಗೆ ಬರುವಿಕೆ ಶುರುವಾಯಿತು. ಈಗ ಆರೇಳು ವರ್ಷದ ಮಕ್ಕಳಿಂದಿಡಿದು ಇಪ್ಪತ್ತೈದರ ವಯೋಮಾನದ ಹುಡುಗಿಯರತನಕ ಐವತ್ತಕ್ಕೂ ಹೆಚ್ಚು ಹುಡುಗಿಯರು ಡೊಳ್ಳಿನ ಪದಗಳನ್ನು ಹಾಡುತ್ತಿದ್ದಾರೆ. ಇದೊಂದು ಹೊಸ ಟ್ರೆಂಡ್ ಆಗಿ ಬದಲಾಗಿದೆ.

ಸುಮಿತ್ರ ಮುಗಳಿಹಾಳ ಡೊಳ್ಳಿನ ಹಾಡಿಕೆಗೆ ಬರುವ ಮುನ್ನ ರೇಣುಕಾ ಮೀನಾಕ್ಷಿ ಮೊದಲಾದವರು ಮೇಷ್ಟ್ರುಗಳು ಬರೆದ ಹಾಡುಗಳನ್ನು ಹಾಡುತ್ತಿದ್ದರಷ್ಟೆ. ವಾಗ್ವಾದ ಚರ್ಚೆ ಬಂದಾಗ ಪದಕಟ್ಟಿದ ಮೇಷ್ಟ್ರು ಚರ್ಚೆ ಸಂವಾದ ಮಾಡುತ್ತಿದ್ದರೆ ವಿನಃ ಹಾಡಿದ ಹುಡುಗಿಯರು ಚರ್ಚೆಸುತ್ತಿರಲಿಲ್ಲ. ಸುಮಿತ್ರ ಹಾಡುತ್ತಾ ಹಾಡುತ್ತಾ, ಹಾಡಿನ ಸಾಹಿತ್ಯಕ್ಕೆ ಪೂರಕವಾದ ಹಾಲುಮತ ಪುರಾಣ ಮತ್ತು ಸಂಶೋಧನೆಗಳನ್ನು ಓದಲು ತೊಡಗುತ್ತಾಳೆ. ಹಾಗಾಗಿ ರಾಮಾಯಣ, ಮಹಾಭಾರತ, ಹಾಲುಮತ ಪುರಾಣ, ಕುರುಬ ಸಮುದಾಯದ ಅಧ್ಯಯನ, ವಚನಕಾರರ, ದಾಸರ, ತತ್ವಪದಕಾರರ ಪುಸ್ತಕಗಳ ಸಂಗ್ರಹ ಸುಮಿತ್ರಾ ಅವರಲ್ಲಿದೆ.

ಪ್ರತಿಬಾರಿ ಹೊಸ ಪದ ಕಟ್ಟುವಾಗ ಹಾಲುಮತದ ಪುರಾಣ ಮುಂತಾದ ಪುಸ್ತಕಗಳನ್ನು ಅಧ್ಯಯನ ಮಾಡುತ್ತಾರೆ. ಹೀಗೆ ಸಾಹಿತ್ಯದ ಓದಿನಿಂದ ಸ್ವತಃ ಡೊಳ್ಳಿನ ಪದಗಳನ್ನು ರಚಿಸುತ್ತಾಳೆ. ಹೀಗಾಗಿ ತಾನೇ ಸ್ವತಃ ರಚಿಸಿದ ಹಾಡನ್ನು ಹಾಡುತ್ತಿದ್ದರಿಂದ ಯಾರೇ ವಾಗ್ವಾದ ಮಾಡಿದರೂ ಅದಕ್ಕೆ ಸುಮಿತ್ರಾಳೇ ಉತ್ತರ ಕೊಡತೊಡಗುತ್ತಾಳೆ. ಸುಮಿತ್ರ ಅವರ ಈ ವಾಗ್ವಾದದ ಮಾದರಿಯ ಪ್ರಭಾವ ಈಗಿನ ಹುಡುಗಿಯರಲ್ಲಿ ಕಾಣುತ್ತಿದೆ.

“ಅಜ್ಜನು ಡೊಳ್ಳಿನ ಪದಗಳನ್ನು ಹಾಡತಿದ್ರು. ಕೌಜಲಗಿ ನಿಂಗಮ್ಮ ನಮ್ಮಜ್ಜನ್ನ ಕರಕೊಂಡು ಹಾಡತಿದ್ದರಂತೆ, ಹಂಗಾಗಿ ನಮ್ಮ ಅಪ್ಪ ಡೊಳ್ಳಿನ ಪದ ಹಾಡಾಕ ಹತ್ತಿದ್ರು. ಹಿಂಗಾಗಿ ಮೊದಲಿನಿಂದ್ಲೂ ಮನಿಯಾಗ ಹಾಡಿಕಿ ಸಂಪ್ರದಾಯವಿತ್ತು. ನಾನು ಸಣ್ಣಾಕಿ ಇದ್ದಾಗ ಹಾಡಿಕೆ ಕೇಳೋದು ನೋಡೋದು ಮಾಡತಿದ್ದೆ. ನಾನು ಹಾಡ್ತೀನಿ ಅಂದ್ರ, ಸಮಾಜದಲ್ಲಿ ಹಂಗ್ ಅಂತಾರ ಹಿಂಗ್ ಅಂತಾರ ಗಂಡಸರ ಮಧ್ಯೆ ನಿಂತು ಹಾಡಬಾರದು ಅನ್ತಿದ್ರು. ಒಟ್ಟ ಡೊಳ್ಳಿನ ಪದದ ಸಪ್ಪಳ ಕೇಳತಂದ್ರ ರಾತ್ರೆಲ್ಲ ನಿದ್ದೆ ಅತ್ತಾಂಗಿಲ್ಲರೀ..ಅದು ಬಂದ್ ಆಗೋಮಟ ಮನಿಯಾಗ ಎದ್ದ ಕುಂದರತಿದ್ದೆ. ದಾಟಿಗಳು ತಲೀಯಾಗ ಉಳೀತಿತ್ತು.

ನೀ ಹಿಂಗ್ ಹಾಡವ್ವಾ, ಹಿಂಗ್ ದಾಟಿ ಬರಕೋ ಅಂತ ಯಾರೂ ಕಲಿಸಿಲ್ಲ. ಅವ್ವ ಸಣ್ಣಾಕಿದ್ದಾಗ ರಾಮಾಯಣ ಮಹಾಭಾರತದ ಕತಿ ಹೇಳತಿದ್ಲು ಅದು ನನ್ನ ತಲಿಯಾಗಿತ್ತು. ನಾನು ಹಾಡೋದಕ್ಕ ಕಾಕಾಗಳು ವಿರೋಧಿಸಿದ್ರು, ಊರಾಗ ವಿರೋಧಿಸಿದ್ರು, ಬಾಳಂದ್ರ ಬಾಳ ಕಾಡಿದ್ರು. ಅದನ್ನ ಹೇಳಿದ್ರ ಕಣ್ಣಾಗ ನೀರು ಬರ್ತಾವ. ಹೆಣ್ಣ ಆದರೂ ಒಂದು ಗಂಡಿನ ರೂಪದಲ್ಲಿ ತೋರಿಸಬೇಕಪಾ ಅಂತೇಳಿ ಎಲ್ಲರ ವಿರೋಧ ಮೀರಿ ಇಲ್ಲಿಗೆ ಬಂದು ನಿಂತೀನಿ” ಎಂದು ಸುಮಿತ್ರ ಹಾಡಿಕೆ ಪಯಣ ನೆನೆಯುತ್ತಾರೆ.

ಮಾಳಿಂಗರಾಯನ ಇತಿಹಾಸದಲ್ಲಿ ಎದುರುಬದುರು ಹಾಡುವಾಗ ಗಂಡಿನವರು ಮಾಳಿಂಗರಾಯನ ಪವಾಡ ಹೇಳಿದರೆ, ಇವರು ಮಾಳಿಂಗರಾಯನ ತಾಯಿಯ ಬಗ್ಗೆ ಹೇಳುತ್ತಾರೆ. ಗಂಡಿನ ಪಾರ್ಟಿ ಮಾಳಿಂಗರಾಯ ನನ ಅಪ್ಪ ಹುಲಿಹಾಲ ತಂದು ಬೀರಪ್ಪನಿಗೆ ಉಣಿಸ್ಯಾನೋ ಅಂತ ಹೇಳಿದ್ರೆ, ಮಾಳಿಂಗರಾಯ ಹುಲಿಹಾಲ ಉಣಿಸಬೇಕಾದ್ರೆ ತಾಯಿ ಹಡದಾಳ, ಉಲುಜಂತಿ ಗ್ರಾಮದಲ್ಲಿ ತಾಯಿ ಕನ್ನವ್ವನ ಆಶೀರ್ವಾದ ತಗಂಡು ಹುಲಿಹಾಲ ತರೋಕ ಹೋಗ್ಯಾನ’ ಅಂತ ಹೇಳತಾ, ಮಾಳಿಂಗರಾಯ ಹೆಚ್ಚು ಎನ್ನುವಾಗಲೂ ಮಾಳಿಂಗರಾಯನ ತಾಯಿಯನ್ನು ಇವರು ಎತ್ತಿ ಹಿಡಿಯುತ್ತಾರೆ. ಇಷ್ಟರಮಟ್ಟಿಗೆ ಒಂದು ಜನಪದ ಪಠ್ಯದ ಹಾಡಿಕೆಗೆ ಹೆಣ್ಣಿನ ಕಣ್ಣೋಟ ಸಾಧ್ಯವಾಗಿದೆ.

ಸುಮಿತ್ರಾರ ಹಾಡುಗಳಲ್ಲಿ ಹೆಣ್ಣು ಗಂಡು ಹೇಳಿದಂಗೆ ಕೇಳಿಕೊಂಡು ಚೆಂದನ ಸಂಸಾರ ಮಾಡಬೇಕು ಎನ್ನುವಂತಹ ಯಥಾಸ್ಥಿತಿಯ ಆಶಯವೂ ಇದೆ. ಆದರೆ ಎದುರು ಗಂಡಿನ ಮೇಳ ಹೆಣ್ಣನ್ನು ಕುಹಕ ಮಾಡಿದಾಗ ನಡೆಯುವ ಬಿರುಸಿನ ಚರ್ಚೆಯಲ್ಲಿ ಸುಮಿತ್ರಾ ಹೆಣ್ಣಿಲ್ಲದೆ ಕೇವಲ ಗಂಡಿಗೆ ಅಸ್ತಿತ್ವವಿಲ್ಲ ಎನ್ನುವುದನ್ನು ತುಂಬಾ ಖಡಕ್ ಆಗಿ ನಿರೂಪಿಸುತ್ತಾರೆ.

ಡೊಳ್ಳಿನ ಹಾಡಿನ ಏರುಧ್ವನಿಯಲ್ಲಿ ಹೆಣ್ಣಿನ ಕೋಮಲ ಧ್ವನಿ ಸಪ್ಪೆಯೆನಿಸುತ್ತದೆ. ಹಾಗಾಗಿ ಸುಮಿತ್ರಾರ ಧ್ವನಿ ಗಂಡಿನಂತೆ ಬಿರುಸು. ಸ್ಟೇಜಿನ ದೇಹಭಾಷೆಯೂ ಗಂಡನ್ನು ಮೀರಿಸುವಂಥದ್ದು. ಹೀಗೆ ಡೊಳ್ಳಿನ ಹಾಡಿನ ನುಡಿಗಟ್ಟನ್ನು ಬದಲಿಸುತ್ತಿರುವ ಸುಮಿತ್ರಾರ ಹಾಡಿಕೆ ಪಯಣಕ್ಕೆ ಡೊಳ್ಳಿನ ಪದದ ಕವಿ ಕೇದಾರ ಕೆಂಪಟ್ಟಿ ಮಾಸ್ತರರ ಮಾರ್ಗದರ್ಶನವಿದೆ. ತನ್ನ ಮೂರುಜನ ಅಕ್ಕಂದಿರಾದ ರೇಣುಕಾ, ಸರೋಜಿನಿ, ಉದ್ದವ್ವರನ್ನು ಮದುವೆ ಮಾಡಿಕೊಟ್ಟು ಮನೆ ಜವಾಬ್ದಾರಿ ಹೊರಲು ಗಂಡು ಮಗನಿರಬೇಕು ಎನ್ನುವ ನಂಬಿಕೆಯನ್ನು ಸುಮಿತ್ರ ಬದಲಿಸಿದ್ದಾರೆ. ಸುಮಿತ್ರಾ ಅವರ ಹಾಡಿಕೆ ಪಯಣ ಮತ್ತಷ್ಟು ಜನರನ್ನು ತಲುಪಲಿ ಎಂದು ಪತ್ರಿಕೆ ಶುಭ ಹಾರೈಸುತ್ತದೆ.

ಸುಮಿತ್ರಾ ಮುಗಳಿಹಾಳ ಎಂದು ಟೈಪಿಸಿದರೆ, ಯೂಟೂಬಿನಲ್ಲಿ ನೂರಾರು ವೀಡಿಯೋಗಳು ನೋಡಲು ಸಿಗುತ್ತವೆ.

ಅರುಣ್ ಜೋಳದಕೂಡ್ಲಿಗಿ


ಓದಿ:

ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here