ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಶಿಷ್ಟಾಚಾರದ ದುರ್ಬಳಕೆ ಮತ್ತು ಇದರಲ್ಲಿ ರನ್ಯಾ ಅವರ ಮಲ ತಂದೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಕೆ.ರಾಮಚಂದ್ರ ರಾವ್ ಅವರ ಪಾತ್ರದ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಮಂಗಳವಾರ (ಮಾ.11) ಆದೇಶಿಸಿದೆ.
ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದ್ದು, ತಕ್ಷಣ ತನಿಖೆ ಆರಂಭಿಸಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ರನ್ಯಾ ಅವರು ಚಿನ್ನ ಸಾಗಣೆ ಮಾಡುವಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆಯೂ ತನಿಖೆ ನಡೆಸುವಂತೆ ಸರ್ಕಾರ ಪ್ರತ್ಯೇಕವಾಗಿ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಆದೇಶಿಸಿದೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿಜಿಪಿ ರಾವ್ ಅವರ ಮಲಮಗಳು ರನ್ಯಾ (33) ಅವರನ್ನು ಮಾರ್ಚ್ 3ರಂದು ಬಂಧಿಸಲಾಗಿತ್ತು. ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಪ್ರಕಾರ, ರನ್ಯಾ ಅವರ ಬಳಿ 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ವಿದೇಶಿ ಮೂಲದ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ.
ವಿದೇಶದಿಂದ ಆಗಮಿಸುವಾಗ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಿಂದ ಬೆಂಗಾವಲು ಪಡೆಯಲು ರನ್ಯಾ ತನ್ನ ತಂದೆಯ ಹೆಸರನ್ನು ಬಳಸಿಕೊಂಡಿದ್ದನ್ನು ಡಿಆರ್‌ಐ ಕಂಡುಹಿಡಿದಿದೆ. ಹಾಗಾಗಿ, ತಂದೆಯ ಪ್ರಭಾವ ಬಳಸಿಕೊಂಡೇ ಆಕೆ ವಿಮಾನ ನಿಲ್ದಾಣದ ತಪಾಸಣೆಯಿಂದ ತಪ್ಪಿಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೈಕ್ರೋ ಫೈನಾನ್ಸ್, ಗ್ರೇಟರ್ ಬೆಂಗಳೂರು ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರ


