ಭೀಮಾ ಕೋರೆಗಾಂವ್ ಹಿಂಸಾಚಾರದ ಆರೋಪದಲ್ಲಿ ಮುಂಬೈನ ತಾಲೋಜ ಜೈಲಿನಲ್ಲಿದ್ದ ಕ್ರಾಂತಿಕಾರಿ ಕವಿ ಹಾಗೂ ಸಾಮಾಜಿಕ ಕಾರ್ಯಕರ್ತ ವರವರ ರಾವ್ ಕೊರೊನಾ ವೈರಸ್ ಪಾಸಿಟಿವ್ ಆಗಿದ್ದಾರೆ. ಪ್ರಸ್ತುತ ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 81 ವರ್ಷ ವಯಸ್ಸಿನ ಕವಿಯನ್ನು ನಗರದ ಸೇಂಟ್ ಜಾರ್ಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಾವ್ ಅವರನ್ನು ಈ ಹಿಂದೆ ನೆರೆಯ ನವೀ ಮುಂಬಯಿಯ ತಾಲೋಜ ಜೈಲಿನಲ್ಲಿ ದಾಖಲಿಸಲಾಗಿತ್ತು, ಮತ್ತು ಸೋಮವಾರ ರಾತ್ರಿ ದಕ್ಷಿಣ ಮುಂಬೈನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ರಾವ್ ಅವರನ್ನು ಸೋಮವಾರ ರಾತ್ರಿ ಜೈಲಿನಿಂದ ವೈದ್ಯಕೀಯ ಸೌಲಭ್ಯಕ್ಕೆ ಕರೆತಂದ ನಂತರ ಅವರನ್ನು ನರವಿಜ್ಞಾನ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಜೆಜೆ ಆಸ್ಪತ್ರೆಯ ಡೀನ್ ಡಾ.ರಂಜೀತ್ ಮಾಂಕೇಶ್ವರ ಹೇಳಿದ್ದಾರೆ.
ಈ ಸಮಯದಲ್ಲಿ ಕೊರೊನಾ ಪರೀಕ್ಷೆಗೆ ಮಾದರಿಗಳನ್ನು ಸಹ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿದೆ.
ರಾವ್ ಅವರ ಕುಟುಂಬ ಸದಸ್ಯರು, ಹಲವಾರು ಬರಹಗಾರರು ಮತ್ತು ಕಾರ್ಯಕರ್ತರೊಂದಿಗೆ, ಅವರ ಆರೋಗ್ಯದ ಹದಗೆಡುತ್ತಿರುವುದನ್ನು ಉಲ್ಲೇಖಿಸಿ ಅವರನ್ನು ತಕ್ಷಣ ಚಿಕಿತ್ಸೆಗೆ ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಈ ಹಿಂದೆ ಕೇಳಿದ್ದರು.
81 ವರ್ಷದ ಕ್ರಾಂತಿಕಾರಿ ಕವಿ ವರವರ ರಾವ್ ಸುಮಾರು 22 ತಿಂಗಳು ಜೈಲಿನಲ್ಲಿದ್ದು, ಈ ಹಿಂದೆ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವನ್ನು ಸಂಪರ್ಕಿಸಿ, ಕೊರೊನಾ ಪರಿಸ್ಥಿತಿ ಹಾಗೂ ವೈದ್ಯಕೀಯ ಆಧಾರದ ಮೇಲೆ ಜಾಮೀನು ಕೋರಿದ್ದರು.
ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಮಹಾರಾಷ್ಟ್ರ ಸಚಿವ ಜಿತೇಂದ್ರ ಅವಾದ್ ಕೂಡ ಒತ್ತಾಯಿಸಿದ್ದರು.
ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ರಾವ್ ಮತ್ತು ಇತರ ಒಂಬತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ, ಪ್ರಕರಣವನ್ನು ಮೊದಲಿಗೆ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದರಾದರೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಪತನಗೊಂಡ ನಂತರ ಕೇಂದ್ರದ ಅಡಿಯಲ್ಲಿರುವ ಎನ್ಐಎಗೆ ವರ್ಗಾಯಿಸಲಾಯಿತು.
ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಇವರು ಉದ್ವೇಗಕಾರಿ ಭಾಷಣ ಮಾಡಿದ್ದರಿಂದ ಮರುದಿನ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿತ್ತು. ಅಲ್ಲದೆ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಇವರು ಸಂಚು ರೂಪಿಸಿದ್ದರು ಎಂಬ ಆರೋಪ ಕೂಡಾ ಮಾಡಲಾಗಿದೆ.
ಓದಿ: ದಲಿತ ಚಿಂತಕರನ್ನು ಮುಗಿಸಲು ಎಲ್ಗರ್ ಪರಿಷತ್ ಪ್ರಕರಣ ವರ್ಗಾವಣೆ: ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ


