ಎಲ್ಗರ್ ಪರಿಷತ್ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಸುರೇಂದ್ರ ಗ್ಯಾಡ್ಲಿಂಗ್ ಮತ್ತು ಸುಧೀರ್ ಧವಾಲೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಬಾಂಬೆ ಹೈಕೋರ್ಟ್ ಮಂಗಳವಾರ ಎನ್ಐಎ, ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಂದ ಪ್ರತಿಕ್ರಿಯೆ ಕೋರಿದೆ.
ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಅಭಯ್ ಅಹುಜಾ ಅವರ ವಿಭಾಗೀಯ ಪೀಠವು ಕೇಂದ್ರ ಸರ್ಕಾರ, ಎನ್ಐಎ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮ ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶನ ನೀಡಿತು ಹಾಗೂ ಹೆಚ್ಚಿನ ವಿಚಾರಣೆಯನ್ನು ಜುಲೈ 14 ರಂದು ಮುಂದೂಡಿದೆ.
ಭೀಮಾ ಕೊರೆಗಾವ್ ಹಿಂಸಾಚಾರದ ಆರೋಪದಲ್ಲಿ ಬಂಧಿತರಾಗಿ, ನವೀ ಮುಂಬಯಿಯ ತಾಲೋಜ ಜೈಲಿನಲ್ಲಿರುವ ಮಾನವ ಹಕ್ಕುಗಳ ವಕೀಲ ಗ್ಯಾಡ್ಲಿಂಗ್ ಮತ್ತು ಸಾಮಾಜಿಕ ಕಾರ್ಯಕರ್ತ ಧವಾಲೆ ಅವರು ಈ ಅರ್ಜಿಯನ್ನು ಸಲ್ಲಿಸಿದ್ದರು.
ಗ್ಯಾಡ್ಲಿಂಗ್ ಮತ್ತು ಧವಾಲೆ ಕಳೆದ ವಾರ ವಕೀಲ ಎಸ್ ಬಿ ತಾಲೇಕರ್ ಅವರ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ, ತನಿಖೆಯ ವರ್ಗಾವಣೆಯು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.
“ಹಿಂದೂತ್ವ ಸಂಘಟನೆಯೊಂದಿಗೆ ಅಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಪುಣೆಯ ಭೀಮಾ ಕೊರೆಗಾಂವ್ ನಲ್ಲಿ ನಡೆದ ಹಿಂಸಾಚಾರದ ಘಟನೆಯನ್ನು ಮಾವೋವಾದಿ ಚಟುವಟಿಕೆಯ ಭಾಗ ಎಂದು ಎಲ್ಗರ್ ಪರಿಷತ್ ಸಭೆಯನ್ನು ತೋರಿಸುವ ಮೂಲಕ ಪ್ರಭಾವಿ ದಲಿತ ಚಿಂತಕರನ್ನು ಗುರಿಯಾಗಿಸಲು ಬಳಸಿಕೊಂಡಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ, ಇತರ ಹಲವಾರು ಮಾನವ ಹಕ್ಕು ಕಾರ್ಯಕರ್ತರನ್ನು ಬಂಧಿಸಿ, ಮಾವೋವಾದಿ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ, ತನಿಖೆಯನ್ನು ಜನವರಿ 24 ರಂದು ಪುಣೆ ಪೊಲೀಸರಿಂದ ಎನ್‌ಐಎಗೆ ವರ್ಗಾಯಿಸಲಾಗಿತ್ತು.
ಇವರೊಂದಿಗೆ ರೋನಾ ವಿಲ್ಸನ್, ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖಾ, ಶೋಮಾ ಸೇನ್, ವೆರ್ನಾನ್ ಗೊನ್ಸಾಲ್ವೆಸ್, ವರವರ ರಾವ್, ಅರುಣ್ ಫೆರೀರಾ ಮತ್ತು ಸುಧಾ ಭಾರದ್ವಾಜ್ ಮುಂತಾದವರನ್ನು ಬಂಧಿಸಲಾಗಿತ್ತು.