ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ವಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಕಿಟ್‌ಗಳು ಸಾಕಾಗುತ್ತಿಲ್ಲ ಮತ್ತು ಸಿಗುತ್ತಿಲ್ಲ ಎಂದು ಮೂವರು ವೈದ್ಯರು ನಡೆಸಿದ ಆನ್‌ಲೈನ್ ಸಮೀಕ್ಷೆಯು ಒತ್ತಿ ಹೇಳಿದೆ.
ದೇಶದೆಲ್ಲೆಡೆ ನೂರಾರು ವೈದ್ಯರು ಸಹ ಕೊರೊನಾಗೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಈ ಸಮೀಕ್ಷೆ ಮಹತ್ವವಿದ್ದು, ಸರ್ಕಾರ ಕೂಡಲೇ ವೈದ್ಯರ ನೆರವಿಗೆ ಧಾವಿಸಬೇಕು. ಅಗತ್ಯ ಪಿಪಿಇಗಳನ್ನು ಒದಗಿಸಬೇಕು ಎಂಬ ಒತ್ತಾಯ ಜೋರಾಗಿದೆ.
ವೈಧ್ಯಕೀಯ ವೃತ್ತಿಪರರಾದ ಡಾ.ಸಾವಿತ್ರಿ ದೇವಿ, ಡಾ.ಶ್ರೀನಿಧಿ ದತ್ತಾರ್ ಮತ್ತು ಡಾ.ಸುಭಾಶ್ರಿ ಬಿಯವರು ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 392 ಮಂದಿ ಪ್ರತಿಕ್ರಿಯಿಸಿದ್ದಾರೆ. ಇವರಲ್ಲಿ 155 ವೈದ್ಯರು, 103 ಸ್ನಾತಕೋತ್ತರ ನಿವಾಸಿಗಳು ಮತ್ತು ಇಂಟರ್ನಿಗಳು, 34 ದಾದಿಯರು ಮತ್ತು 27 ಸಮುದಾಯ ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ. ಅರ್ಧಕ್ಕಿಂತ ಹೆಚ್ಚು (58.4%) ಜನರು ಸಾರ್ವಜನಿಕ ವಲಯದ ಸೌಲಭ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಒಪಿಡಿ (31.9%) ನಲ್ಲಿ ಕೆಲಸ ಮಾಡುವವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಎನ್ 95 ಮಾಸ್ಕ್‌ಗಳು ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಕೇವಲ 20% ಜನರು ಮಾತ್ರ ತಮಗೆ ಸಾಕಷ್ಟು ಸಂಖ್ಯೆಯ ಮಾಸ್ಕ್‌ಗಳು ಸಿಗುತ್ತಿವೆ ಎಂದರೆ ಉಳಿದ 80% ಜನ ಮಾಸ್ಕ್ ಲಭ್ಯತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ವೇಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು (392 ರಲ್ಲಿ 147, 37.5%) ಜನರು ತಮ್ಮ ಪಿಪಿಇ ಅನ್ನು ಮರುಬಳಕೆ ಮಾಡಿದ್ದಾರೆಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಪಿಪಿಇ ಇಲ್ಲದೆ ಆಸ್ಪತ್ರೆಗೆ ಹೋಗುವುದಕ್ಕಿಂತ ಹಳೆಯದನ್ನೇ ಧರಿಸಿ ಹೋಗುವುದು ಉತ್ತಮ ಎಂದು ಅವರು ತಿಳಿಸಿದ್ದಾರೆ. ಕೆಲವರು ಬಿಸಿಲು ಮತ್ತು ಗಾಳಿಯಲ್ಲಿ ಒಣಗಿಸಿದ ಮರುಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.”
ಪಿಪಿಇ ಮರುಬಳಕೆಯನ್ನು ಡಬ್ಲ್ಯುಎಚ್‌ಒ “ಪಿಪಿಇಯ ಗಂಭೀರ ಕೊರತೆ ಇರುವಲ್ಲಿ ಅಥವಾ ಪಿಪಿಇ ಲಭ್ಯವಿಲ್ಲದಿರುವ ಪ್ರದೇಶಗಳಲ್ಲಿ ಮಾತ್ರ ಅಳವಡಿಸಿಕೊಳ್ಳಬೇಕಾದ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೊನೆಯ ತಾತ್ಕಾಲಿಕ ಉಪಾಯ ಕ್ರಮಗಳು” ಎಂದು ಕರೆದಿದೆ. ಆದರೂ, “ಯಾವುದೇ ವಸ್ತುವಿನ ಮರುಬಳಕೆ ಮಾಡುವುದು ಅಸಮರ್ಪಕ ಮತ್ತು ಅಸುರಕ್ಷಿತವೆಂದು ಪರಿಗಣಿಸಲಾಗುತ್ತದೆ” ಎಂದು ಅದು ಎಚ್ಚರಿಕೆ ನೀಡಿದೆ.
ಹೆಚ್ಚಿನ ಪ್ರತಿಸ್ಪಂದಕರು (392 ರಲ್ಲಿ 345, 88%) ತಮ್ಮ ಕೆಲಸಕ್ಕೆ ಅನುಗುಣವಾಗಿ ಹೇಗೆ ಪಿಪಿಇ ಬಳಸಬೇಕೆಂಬ ತಿಳುವಳಿಕೆ ಇಲ್ಲ ಎಂದು ಅಧ್ಯಯನ ಎತ್ತಿ ತೋರಿಸಿದೆ. “ಅರ್ಧದಷ್ಟು ಜನರು ಪಿಪಿಇ ಬಳಕೆಯ ಬಗ್ಗೆ ಯಾವುದೇ ತರಬೇತಿಯನ್ನು ಪಡೆದಿಲ್ಲ ಎಂದು ವರದಿ ಮಾಡಿದ್ದಾರೆ, ಐದರಲ್ಲಿ ಒಬ್ಬರು ತಾವು ಸ್ವಯಂಕಲಿತಿದ್ದಾರೆ ಅಥವಾ ಗೆಳೆಯರು ಮತ್ತು ಸಹೋದ್ಯೋಗಿಗಳು ಅನೌಪಚಾರಿಕವಾಗಿ ಕಲಿಸಿದ್ದಾರೆ ಎಂದು ವರದಿ ಮಾಡಿದೆ.”
ತಾವು ಬಳಸಿದ ಪಿಪಿಈ ಸುರಕ್ಷಿತವಾಗಿತ್ತು ಎಂಬ ಬಗ್ಗೆ ನಿಮಗೆ ನಂಬಿಕೆಯಿದೆಯೇ ಎಂಬ ಪ್ರಶ್ನೆಗೆ ಅರ್ಧಕ್ಕಿಂತ ಹೆಚ್ಚು ಜನ ಸಂದೇಹ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಿಪಿಇ ವಿತರಣೆಯ ಪ್ರಕ್ರಿಯೆಯಲ್ಲಿ ತಾರತಮ್ಯವಿದೆ ಎಂದು ಪ್ರತಿಕ್ರಿಯಿಸಿದವರಲ್ಲಿ ಮೂರನೇ ಒಂದು ಭಾಗದಷ್ಟು (37.24%) ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಗಂಭೀರತೆಯನ್ನು ಪ್ರದರ್ಶಿಸಬೇಕಿದ್ದು, ಜೀವ ರಕ್ಷಿಸುವ ವೈದ್ಯರ, ಆರೋಗ್ಯ ಕಾರ್ಯಕರ್ತರ ಜೀವ ರಕ್ಷಣೆಗೆ ಮುಂದಾಗಬೇಕಿದೆ.
ಇದನ್ನೂ ಓದಿ: ಕೊರೊನಾಗೆ ಪತಂಜಲಿ ಔಷಧಿ: ಜಾಹೀರಾತು ನಿಲ್ಲಿಸುವಂತೆ ಬಾಬಾ ರಾಮ್‌ದೇವ್‌ಗೆ ತಾಕೀತು