ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ ಅತ್ಯಾಚಾರ ಆರೋಪಿ ಅಪ್ರಾಪ್ತ ಸಂತ್ರಸ್ತೆಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ.
ಸೆಪ್ಟೆಂಬರ್ 18ರಂದು ರಾತ್ರಿ 10.30ರ ಸುಮಾರಿಗೆ ಸಂತ್ರಸ್ತೆ ತನ್ನ ತಾಯಿ ಮತ್ತು ಸಹೋದರನೊಂದಿಗೆ ತನ್ನ ಗ್ರಾಮಕ್ಕೆ ಹೋಗುತ್ತಿದ್ದಾಗ ತನ್ನ ತಾಯಿಯ ಚಿಕ್ಕಪ್ಪನ ಜೊತೆಯಲ್ಲಿದ್ದ ಆರೋಪಿ, ಸಂತ್ರಸ್ತೆಯನ್ನು ಅಡ್ಡಗಟ್ಟಿ ದಾಳಿ ನಡೆಸಿದ್ದಾನೆ ಎಂದು ಸಂಭಾಲ್ ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಬಾಲಕಿಗೆ ಎರಡು ಬಾರಿ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ಸಹೋದರ ಮತ್ತು ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಂದು ಪೊಲೀಸರು ಹೇಳಿದ್ದಾರೆ.
“ದಾಳಿಯ ನಂತರ ಪರಾರಿಯಾಗಿರುವ ಹಂತಕನನ್ನು ಬಂಧಿಸಲು ನಾವು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ರಚಿಸಿದ್ದೇವೆ. ಆತನ ಸಂಭಾವ್ಯ ಅಡಗುತಾಣಗಳ ಮೇಲೆ ನಮ್ಮ ತಂಡ ದಾಳಿ ನಡೆಸಿದೆ. ಆದರೆ, ಆತ ಪತ್ತೆಯಾಗಿಲ್ಲ” ಎಂದು ಸಂಭಾಲ್‌ನ ಪೊಲೀಸ್ ಅಧೀಕ್ಷಕ ಕೃಷ್ಣ ಕುಮಾರ್ ಬಿಷ್ಣೋಯ್ ವಿವರಿಸಿದ್ದಾರೆ.
ಅಪರಾಧಿ ಬಾಲಕಿಯ ಜೊತೆಯಲ್ಲಿದ್ದ ಆಕೆಯ ತಾಯಿ ಮತ್ತು ಸಹೋದರ ಮೇಲೆ ಏಕೆ ದಾಳಿ ಮಾಡಿಲ್ಲ. ಬಾಲಕಿಯನ್ನು ಮಾತ್ರ ಏಕೆ ಗುರಿಯಾಗಿಸಿದ್ದಾನೆ ಎಂಬುವುದರ ಬಗ್ಗೆಯೂ ನಾವು ತನಿಖೆ ಮಾಡುತ್ತಿದ್ದೇವೆ ಎಂದು ಬಿಷ್ಣೋಯ್ ತಿಳಿಸಿದ್ದಾರೆ.
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿಯನ್ನು ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು.ಅಪರಾಧಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಆತನ ತಾಯಿಯ ಚಿಕ್ಕಪ್ಪನನ್ನು ಕೂಡ ಬಂಧಿಸಲಾಗಿತ್ತು. ಕೆಲ ದಿನಗಳ ಹಿಂದೆ ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: 42 ದಿನಗಳ ನಂತರ ಕರ್ತವ್ಯಕ್ಕೆ ಮರಳಿದ ಕಿರಿಯ ವೈದ್ಯರು


