ಎಂಟು ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿದ ಪ್ರಕರಣದ ಮೂವರು ಅಪರಾಧಿಗಳಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಮರಣದಂಡನೆ ಹಾಗೂ 1.20 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಜಯ್ ಸಿಂಗ್ (21), ಮುಕೇಶ್ ಸಿಂಗ್ (20) ಮತ್ತು ಜಾರ್ಖಂಡ್‌ನ ರಾಂಚಿಯ ಮನೀಷ್ ತಿರ್ಕಿ (33) ಶಿಕ್ಷೆಗೊಳಗಾದವರು.
ಪ್ರಕರಣದ ವಿವರ : ಮಂಗಳೂರು ನಗರದ ಹೊರವಲಯ ಉಳಾಯಿಬೆಟ್ಟು ಬಳಿಯ ತಿರುವೈಲು ಗ್ರಾಮದ ಪರಾರಿಯಲ್ಲಿರುವ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಕುಟುಂಬದ ಎಂಟು ವರ್ಷದ ಹೆಣ್ಣು ಮಗಳು 2021ರ ನವೆಂಬರ್ 20ರಂದು ಸಂಜೆ ಕಾಣೆಯಾಗಿದ್ದಳು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಲಕಿಯ ಪೋಷಕರು ಮತ್ತು ಊರಿನವರು ಬಾಲಕಿಗಾಗಿ ಹುಡುಕಾಟ ನಡೆಸಿದಾಗ, ನಾಪತ್ತೆಯಾದ ದಿನವೇ ರಾತ್ರಿ ಫ್ಯಾಕ್ಟರಿಯ ಹಿಂಭಾಗದ ಚರಂಡಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯನ್ನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರೇ ಅತ್ಯಾಚಾರಗೈದು ಕೊಲೆ ಮಾಡಿದ್ದ ಅನುಮಾನ ವ್ಯಕ್ತವಾದ ಹಿನ್ನೆಲೆ, ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಈ ಸಂದರ್ಭದಲ್ಲೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜಯ್ ಸಿಂಗ್, ಮುಕೇಶ್ ಸಿಂಗ್, ಮನೀಷ್ ತಿರ್ಕೆ ಮತ್ತು ಮುನೀಮ್ ಸಿಂಗ್ ನಾಪತ್ತೆಯಾಗಿದ್ದರು.
ಹಾಗಾಗಿ, ಇವರೇ ಕೃತ್ಯವೆಸಗಿರುವುದು ಪೊಲೀಸರಿಗೆ ಖಚಿತವಾಗಿತ್ತು. ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನೂ ಬಂಧಿಸಿದ್ದರು. ವಿಚಾರಣೆ ವೇಳೆ ಈಗ ಶಿಕ್ಷೆಗೊಳಗಾದ ಮೂವರು ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದರೆ, ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಅವರಿಗೆ ಸಹಕಾರ ನೀಡಿರುವುದು ಬಯಲಾಗಿತ್ತು.
ಫ್ಯಾಕ್ಟರಿಗೆ ರಜೆ ಇದ್ದ ದಿನ (2021 ನವೆಂಬರ್ 21) ಅಲ್ಲಿಯೇ ಆಟವಾಡಿಕೊಂಡಿದ್ದ ಬಾಲಕಿಯನ್ನು ಸಿಹಿ ತಿನಿಸು ನೀಡಿ, ಸಿಸಿಟಿವಿ ಕ್ಯಾಮರಾ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿದ್ದ ಅಪರಾಧಿಗಳು, ಅಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಈ ವೇಳೆ ಬಾಲಕಿ ನೋವಿನಿಂದ ಕೂಗಿಕೊಂಡಿದ್ದಕ್ಕೆ ಜಯ್ ಸಿಂಗ್ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಪ್ರಕರಣದ ತನಿಖೆ ನಡೆಸಿದ್ದ ಮಂಗಳೂರು ಗ್ರಾಮಾಂತರ ಠಾಣೆಯ ಆಗಿನ ಇನ್‌ಸ್ಪೆಕ್ಟರ್ ಜಾನ್ಸನ್ ಡಿಸೋಜ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಒಟ್ಟು 30 ಸಾಕ್ಷಿದಾರರ ವಿಚಾರಣೆ, 74 ದಾಖಲೆಗಳನ್ನು ಪರಿಶೀಲನೆ ನಡೆಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್ ಅವರು, ಗುರುವಾರ (ನವೆಂಬರ್ 7, 2024) ಮೂವರು ಅಪರಾಧಿಗಳಿಗೆ ಮರಣದಂಡನೆ ಮತ್ತು ದಂಡ ವಿಧಿಸಿ ಆದೇಶಿಸಿದ್ದಾರೆ.
ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪ್ರಕರಣದ ವಿಚಾರಣೆ ವೇಳೆ, ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದಾನೆ. ಹಾಗಾಗಿ, ಆತನಿಗೆ ಇನ್ನೂ ಶಿಕ್ಷೆ ವಿಧಿಸಿಲ್ಲ.
ಅಪರಾಧಿಗಳಿಂದ ಸಂಗ್ರಹಿಸಿದ ದಂಡದ ಮೊತ್ತ 1.20 ಲಕ್ಷ ರೂ. ಮೃತ ಬಾಲಕಿಯ ಪೋಷಕರಿಗೆ ಪಾವತಿಸುವಂತೆ ಹಾಗೂ ಸಂತ್ರಸ್ತರ ಪರಿಹಾರ ಯೋಜನೆಯಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬಾಲಕಿಯ ಪೋಷಕರಿಗೆ 3.80 ಲಕ್ಷ ರೂ. ಹೆಚ್ಚುವರಿಯಾಗಿ ನೀಡುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಮಂಗಳೂರಿನ ಪೋಕ್ಸೋ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದ ಪ್ರಥಮ ಪ್ರಕರಣ ಇದಾಗಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಡಿಕೆ ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ; ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್


