ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಸೋಮವಾರದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋಗೆ ಸಂಬಂಧಪಟ್ಟಂತೆ ವಿಡಿಯೊದಲ್ಲಿರುವ ನಿಜವಾದ ಯುವತಿ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಝಾರಾ ಪಟೇಲ್ ಎಂಬ ಯುವತಿ ಲಿಫ್ಟ್‌ನಲ್ಲಿ ಪ್ರವೇಶ ಮಾಡುತ್ತಿರುವ ವಿಡಿಯೊ ಇಟ್ಟುಕೊಂಡು ಯಾರೊ ಕಿಡಿಗೇಡಿಗಳು, ರಶ್ಮಿಕಾ ಮಂದಣ್ಣ ಮುಖ ಜೋಡಿಸಿ ವಿಡಿಯೊ ಮಾಡಿ ಹರಿಬಿಟ್ಟಿದ್ದರು. ಈ ವಿಡಿಯೋ ನೋಡಿದ ಎಷ್ಟೋ ಜನರು ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂದು ನಂಬಿಕೊಂಡಿದ್ದರು. ಆದರೆ ಈ ಫೇಕ್ ವಿಡಿಯೋ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಮಧ್ಯೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಇಬ್ಬರೂ ಅಪರಾಧಿಗಳ ವಿರುದ್ಧ ಕಾನೂನು ಕ್ರಮಕ್ಕೆ ಕರೆ ನೀಡಿದ್ದರು.
ಇದೊಂದು ಡೀಪ್‌ಫೇಕ್ ವಿಡಿಯೊ ಆಗಿದ್ದು ಹೊರದೇಶದಲ್ಲಿರುವ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೇನ್ಸರ್ ಝಾರಾ ಪಟೇಲ್ ಎನ್ನುವ ಯುವತಿಗೆ ಸಂಬಂಧಿಸಿದ್ದು ಎಂದು ಬಹಿರಂಗವಾಗಿದೆ.
ಝಾರಾ ಪಟೇಲ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದು, ”ವಿಡಿಯೊ ನೋಡಿ ನನ್ನ ಮನಸ್ಸು ತೀವ್ರ ಆಘಾತಗೊಂಡಿದೆ” ಎಂದು ಹೇಳಿದ್ದಾರೆ.

”ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಭವಿಷ್ಯದ ಬಗೆಗಿನ ಚಿಂತೆಯನ್ನು ಈ ವಿಡಿಯೊ ಹುಟ್ಟುಹಾಕಿದೆ. ಭವಿಷ್ಯ ನೋಡಿದರೆ ತುಂಬಾ ಭಯವಾಗುತ್ತಿದೆ” ಎಂದಿದ್ದಾರೆ.
”ನನ್ನ ವಿಡಿಯೋಗೆ ಭಾರತದ ಜನಪ್ರಿಯ ನಟಿಯೊಬ್ಬರ ಮುಖವನ್ನು ಡೀಪ್‌ಫೇಕ್ ಮಾಡಿ ವಿಡಿಯೊ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ಮಾಡಿರುವುದರಲ್ಲಿ ನನ್ನ ಪಾತ್ರವಿಲ್ಲ. ಇಂಟರ್‌ನೆಟ್‌ನಲ್ಲಿರುವುದೆಲ್ಲ ನಿಜವಲ್ಲ. ಅನುಮಾನ ಬರುವ ವಿಷಯಗಳನ್ನು ದಯವಿಟ್ಟು ಫ್ಯಾಕ್ಟ್ ಚೆಕ್‌ಗೆ ಒಳಪಡಿಸಿ” ಎಂದು ಮನವಿ ಮಾಡಿದ್ದಾರೆ.
ಝಾರಾ ಪಟೇಲ್ ಅವರು ಲಂಡನ್‌ನಲ್ಲಿ ಇರುವ ಒಬ್ಬ ಬ್ರಿಟಿಷ್ ಇಂಡಿಯನ್ ಇನ್‌ಫ್ಲುಯೆನ್ಸರ್ ಆಗಿದ್ದು ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 4.5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳು ಇದ್ದಾರೆ.
ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ’ರ ಡೀಪ್‌ಫೇಕ್ ವಿಡಿಯೋ ಡಿಲೀಟ್ ಮಾಡಲು ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರದ ಸಲಹೆ


