ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯಾತೀತ ಗಣರಾಜ್ಯ ಸ್ಥಾಪಿಸಿದ್ದೇವೆ ಎಂದಲ್ಲ, ಸ್ಥಾಪಿಸಬೇಕಿದೆ ಎಂದು ಅದರ ಅರ್ಥ. ಅದೊಂದು ಆದರ್ಶ, ಅಂತಹ ಆದರ್ಶ ಸ್ಥಾಪನೆಯ ಪ್ರಕ್ರಿಯೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಶಿಕ್ಷಣ ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ.
ಆದರೆ ನಾವು ಪಡೆದ ಇದುವರೆಗಿನ ಎಲ್ಲಾ ರೀತಿಯ (ಔಪಚಾರಿಕ -ಅನೌಪಚಾರಿಕ) ಶಿಕ್ಷಣದಲ್ಲಿಯೂ ದೇವರು, ಧರ್ಮ, ಪುನರ್ಜನ್ಮ, ಕರ್ಮಸಿದ್ದಾಂತ, ಅದೃಷ್ಟ, ಸ್ವರ್ಗ-ನರಕಗಳ ಮೌಢ್ಯಗಳ ಒಳನುಸುಳುವಿಕೆಯಿಂದ ಮೌಢ್ಯಗಳ ಮನಸ್ಥಿತಿಯನ್ನು ಸೃಷ್ಟಿಸಿದೆ. ಇದು ಸಾಮಾಜಿಕ ಪೂರ್ವಾಗ್ರಹಗಳನ್ನು ಕಲಿಸುತ್ತಿದ್ದು, ಸಾಮಾಜಿಕ ಪೂರ್ವಾಗ್ರಹಗಳಿಂದ ಬಿಡುಗಡೆಗೊಳಿಸುವಂತಹ, ಸಮಾನತೆಗಾಗಿ ಸಮಾನ ಶಿಕ್ಷಣ ಅನುಷ್ಟಾನದ ಬಗ್ಗೆ ಗಂಭೀರವಾಗಿ ಚಿಂತನ-ಮಂಥನ ನಡೆಯಬೇಕು.
ಶಬ್ದ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಕಳೆದುಹೋದಾಗ ವೈಚಾರಿಕತೆ ಮತ್ತು ಚಿಂತನೆ ಕೇವಲ ಹತಾಶೆಯ ತತ್ವಜ್ಞಾನಗಳಾಗುತ್ತವೆ. ಬಹುಶಃ ಇಂದಿನ ಎಲ್ಲಾ ಚಿಂತನೆ ವೈಚಾರಿಕತೆಗಳು ಕೂಡ, ಬದುಕಿನ ವಾಸ್ತವ ಸ್ಥಿತಿಯಿಂದ ಸಂಬಂಧ ಕಳೆದುಕೊಳ್ಳುವುದಕ್ಕೆ ಇದೇ ಕಾರಣವಾಗಿದೆ.
ಶಬ್ಧ ಮತ್ತು ಪ್ರಜ್ಞೆಗೆ ಇರುವ ಸಂಬಂಧ ಎಂದರೆ ಏನು? ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು, ಸಂಪುಟ 3ರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. “ಕ್ರಾಂತಿಯು ಎಲ್ಲಾ ತತ್ವಜ್ಞಾನಗಳ ಜನನಿ, ಅದು ಬೆಳಕನ್ನು ಬೀರುವ ಜ್ಯೋತಿ”, ಒಂದು ಬದಲಾವಣೆಯು ಅತ್ಯಮೂಲ್ಯವಾದ ತತ್ವಜ್ಞಾನವನ್ನು ಸೃಷ್ಟಿಸುತ್ತದೆಯೇ ವಿನಃ ತತ್ವಜ್ಞಾನ ಇಟ್ಟುಕೊಂಡು ಬದಲಾವಣೆಗೆ ಕಾಯವುದು, ಪರಿವರ್ತನೆಯನ್ನು ಮುಂದೂಡುತ್ತಲೇ ಇರುತ್ತದೆ.

ಆದ್ದರಿಂದ ಇಲ್ಲಿಯವರೆಗಿನ ಎಲ್ಲಾ ಚಿಂತನೆ ಮತ್ತು ವೈಚಾರಿಕತೆಯನ್ನು ಬದಿಗಿರಿಸಿ, ನಾವು ಯಾವ ವಿಚಾರದಲ್ಲಿ ಬದಲಾಗಬೇಕೆಂಬುದನ್ನು ಗುರುತಿಸಿಕೊಳ್ಳದಿದ್ದರೆ ಎಲ್ಲಾರೂ ಬೋಧಗುರುಗಳಾಗುತ್ತವೆ.
ಇದಕ್ಕೆ ಸಂತ ಕೈವಾರ ನಾರಾಯಣತಾತ ಒಂದೆಡೆ,
“ಬೋದೆ ಗುರುಗಳ ಮಾತು,
ಬದುಕು ಚಪಲವಾಯಿತು
ಇದ್ದ ಮತಿ ನೆಗೆದೋಯಿತು
ಪಾಮರನಾದೆ” ಎಂದೆನ್ನುತ್ತಾರೆ.
ನೈಜ ಬದುಕಿನ ವಸ್ತುಸ್ಥಿತಿ ಮತ್ತು ಅದರ ಸಂಕೀರ್ಣಗಳು ಪ್ರತಿಕ್ರಿಯೆಯಲ್ಲಿರುತ್ತವೆಯೇ ವಿನಃ ಪರಿವರ್ತನೆಯಾಗಲು ಬಳಕೆಯಾಗಿದ್ದು ತೀರ ಕಡಿಮೆಯೆನ್ನಬಹುದು. ಅಂಬೇಡ್ಕರ್ ಚಿಂತನೆಯನ್ನು ಸವಕಲು ಮಾತಿನಲ್ಲಿ ಮಂಡಿಸುವವರು ಅದರ ಮಹತ್ವವನ್ನು ಕಡಿಮೆಯಾಗಿಸುತ್ತಿರುತ್ತಾರೆ. ದಲಿತ ಮೂಲಭೂತವಾದ ಕೂಡ ಅಂಬೇಡ್ಕರ್ ವಿಚಾರಗಳನ್ನು ಅವುಗಳ ಪರಿಣಾಮವನ್ನು ಮಂಕಾಗಿಸುತ್ತಿರುತ್ತದೆ. ಯಥಾವತ್ತಾಗಿ ಅನುಷ್ಠಾನಗೊಳ್ಳದ ಸಂವಿಧಾನ ಲಿಖಿತರೂಪದಲ್ಲಿ ಜಾರಿಯಲ್ಲಿದೆಯೆಂದು ಹೇಳುವ ನಮಗೆ ಮನುಧರ್ಮಶಾಸ್ತ್ರದ ಗುಲಾಮ ಮನಸ್ಸಿನ ಗುಣಗಳು, ಮನ-ಮನೆಯಲ್ಲಿ ನಿರಂತರವಾಗಿ ಮುಂದುವರೆದಿರುವುದು ಸೋಜಿಗದ ಸಂಗತಿಯೇ ಸರಿ.
ಹೇಗೆಂದರೆ… ’ನಾವು ಬಾಗಿಲು ಕಿಟಕಿಗಳಲ್ಲಿ ಗೂಡುಕಟ್ಟುವ ಒಂದು ಬಗೆಯ ’ಕಣಜ’ದ ಕೀಟವನ್ನು ಎಲ್ಲರೂ ನೋಡಿರುತ್ತೀರಿ. ಕೀಟ ಮಣ್ಣಿನಿಂದ ಚಿಕ್ಕಗೂಡನ್ನು ಕಟ್ಟಿ ಅದರೊಳಗೆ ಮೊಟ್ಟೆಗಳನ್ನಿಟ್ಟು, ಅವು ಮರಿಗಳಾಗಿ ಬೆಳವಣಿಗೆಯಾಗುವವರೆಗೆ, ಮರಿಗಳಿಗೆ ಬೇಕಾಗುವಷ್ಟು ಆಹಾರವನ್ನು ಶೇಖರಿಸಿ ಮಣ್ಣಿನ ಬಾಗಿಲನ್ನು ಮುಚ್ಚಿಹೊರಟುಹೋಗುತ್ತದೆ. ಆ ಕೀಟವು ತನ್ನ ಕೋಟೆಯ ಹತ್ತಿರ ಎಂದಿಗೂ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಅದರ ಜೀವಿತಾವಧಿ ಕೊನೆಯಾಗಿರುತ್ತದೆ. ಗೂಡಿನೊಳಗಿರುವ ಮೊಟ್ಟೆಗಳು ಒಡೆದು ಮರಿಗಳಾಗಿ ಅಮ್ಮನು ಕೂಡಿಟ್ಟ ಆಹಾರವನ್ನು ತಿಂದು ಬೆಳೆದು ಲಾರ್ವ ಹಂತ ಮುಟ್ಟಿ, ರೆಕ್ಕೆಪುಕ್ಕ ಬಂದು ಕಣಜ ಕೀಟಗಳಾಗಿ ಪರಿವರ್ತಿತವಾಗಿ ಕೋಟೆಯ ಬಾಗಿಲನ್ನು ಸೀಳಿಕೊಂಡು ಹೊಸ ಜಗತ್ತಿಗೆ ಬಂದ ಕೂಡಲೆ ಅವು ಎಂದೂ ನೋಡಿರದ ಬದುಕಿನ ವಿಧಾನಗಳಲ್ಲಿ ಅಮ್ಮನನ್ನು ಅನುಕರಿಸುತ್ತವೆ!’
ಇದು ಹೇಗೆ ಸಾಧ್ಯ?
ಇದರ ಶಾಲೆ ಯಾವುದು?
ವಂಶದಿಂದ ವಂಶಕ್ಕೆ ಹರಿದು ಬರುತ್ತಿರುವ ತಿಳಿವಿನ ರೀತಿ-ನೀತಿಯಾದರು ಎಂತಹುದು ?
ಅಂಬೇಡ್ಕರ್ ಮನುಧರ್ಮಶಾಸ್ತ್ರವನ್ನು ಭೌತಿಕವಾಗಿ ಸುಟ್ಟರೂ ಅದರ ಸಾರ ಅಳಿಯದೆ ಮಾನಸಿಕವಾಗಿ ಉಳಿದು ನಡವಳಿಕೆಯಲ್ಲಿ ಜೀವಂತಿಕೆಯಾಗಿರಲು ಸಾಧ್ಯವಾಗಿದ್ದಾದರೂ ಹೇಗೆ?
ಅಂಬೇಡ್ಕರ್‌ವಾದವೆಂದರೆ ಕೇವಲ ಒಬ್ಬ ವ್ಯಕ್ತಿಯ ವಾದವಲ್ಲ, ಅದು ಬುದ್ಧ ಬಸವಾದಿಯಾಗಿ ಎಲ್ಲ ಸಂತ, ಶರಣ, ದಾಸರ ಸಾಮಾಜಿಕ ಪರಿವರ್ತನೆಕಾರರ ಸಿದ್ಧಾಂತವಾಗಿದೆ.
ಇಂದು ಅಂಬೇಡ್ಕರ್ ದಲಿತರಿಗೆ ಹುಚ್ಚು ಕುರುಡು ಪ್ರೀತಿಯಾಗಿದ್ದಾರೆಯೇ ವಿನಃ ಒಬ್ಬ ತತ್ವಜ್ಞಾನಿಯಾಗಿ, ಸೈದ್ಧಾಂತಿಕವಾದಿಯಾಗಿ ದಲಿತ ಸಮಾಜದ ವಿಮೋಚಕನಾಗಿ ಕಂಡಿಲ್ಲ. ಅಂಬೇಡ್ಕರ್ ಮೂರ್ತಿಗಳನ್ನು ಭಗ್ನಗೊಳಿಸಿದಾಗ, ಅವರನ್ನು ಯಾರಾದರೂ ಬೈದಾಗ ಮಾತ್ರ ದಲಿತರು ಸಿಡಿದು ಸಿಟ್ಟಾಗಿ ಭಾವುಕರಾಗುತ್ತಾರೆ. ಈ ಎಚ್ಚರ ಭಾವುಕತೆಯ ಪರಿಧಿ ಮೀರಿ ತಾತ್ವಿಕ ನೆಲೆಗಟ್ಟಿನಲ್ಲಿ ದಲಿತರ ಎದೆ-ಎದೆಗೆ ತಲುಪಬೇಕಿದೆ. ಬಾಬಾಸಾಹೇಬರನ್ನು ವಿಗ್ರಹ-ಅನುಗ್ರಹ ರೂಪಗಳಲ್ಲಿ, ಆವೇಶಭರಿತ (Emotional) ಸಂಭ್ರಮಗಳ ರೂಪದಲ್ಲಿಯೂ ಚಿಂತಿಸುವುದು ಒಂದು ಅಮಲಿನಂತೆ ಸರಿ. ಏಕೆಂದರೆ ಬಾಬಾಸಾಹೇಬ ಅವುಗಳಲ್ಲಿ ಇಲ್ಲ.
ನಾವು ಮಾಡುವ ಯಾವುದೇ ಕಾರ್ಯ-ಕಾರಣ-ಪರಿಣಾಮಗಳನ್ನು ವಿವೇಕಶೀಲರಾಗಿ ನೋಡುವ ಕಿಂಚಿತ್ತು ವ್ಯವಧಾನ ಇಲ್ಲದಾಗಿದ್ದು ಇಂದ್ರಿಯಗಳ ಪ್ರಲೋಭನೆಗೆ ಒಳಗಾಗಿ ಸುಖಸಂತೋಷ ತೃಪ್ತಿಗಳೆಂಬ ಇಲ್ಲದ ಭ್ರಮೆಗಳ ದಾಸರಾಗಿ ನಿಸರ್ಗಸಹಜ ಬದುಕು ಇಲ್ಲದಾಗಿದೆ.
ಎಸ್.ಕೆ.ಥೋರಟ್ ಎಂಬ ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಡುವಂತೆ ‘Birth is nothing, environment is everything’. ಬೆಳೆಯುವ ಮಗುವಿನ ಮನಸ್ಸು, ಪೂರ್ಣಬದುಕನ್ನು ಪರಿಸರ ರೂಪಿಸುತ್ತದೆ ಎನ್ನುವ ಮಾತು ಸಾರ್ವಕಾಲಿಕ ಸತ್ಯ.

ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ಪಾಠ ಕಲಿತ
ಜನರು ಧನ್ಯರು!
ಸಾಮಾಜಿಕ ಪರಿಸರದಲ್ಲಿನ ತಮ್ಮ ಸಂಬಂಧಗಳನ್ನು ಗುರುತಿಸಿಕೊಳ್ಳಲು ಬಳಸುವ ಸಂಕೇತಗಳು, ಆಚರಣೆಗಳು, ಮೇಲು-ಕೀಳು, ಎಡ-ಬಲ, ಹೆಚ್ಚು-ಕಡಿಮೆ, ಸ್ಪೃಶ್ಯ-ಅಸ್ಪೃಶ್ಯ, ಸಹ್ಯ-ಅಸಹ್ಯ ಹೀಗೆ ಒಂದು ಬೇಧವು ಇಲ್ಲದ ಬೇಧಗಳನ್ನು ಉದ್ದೀಪಿಸಬಲ್ಲದಾಗಿರುತ್ತದೆ.
ಇದು ಮಗುವಿನ ಆಲೋಚನಾಕ್ರಮದ ಮೇಲೆ ಸೂಕ್ಷ್ಮ ಹಾಗೂ ಪರೋಕ್ಷ ಪರಿಣಾಮ ಬೀರುತ್ತಿರುತ್ತದೆ. ಶಿಕ್ಷಣವು ಮಗವಿನ ಸರ್ವತೋಮುಖ ಅಭಿವೃದ್ಧಿಯ ಪರಮೋಚ್ಛಗುರಿಯಾಗಿದ್ದು, ಶೋಷಣೆಯ ಅಸ್ತ್ರಗಳನ್ನು ಗುರುತಿಸಿಕೊಳ್ಳವ, ಧಾರ್ಮಿಕ ಅಚರಣೆಯ ಮುಖವಾಡಗಳನ್ನು ಕಳಚಿ ಗುಲಾಮತನದಿಂದ ವಿಮುಕ್ತಿ ಪಡೆಯುವಂತಿರಬೇಕು. ಶಿಕ್ಷಣತಜ್ಞ ಯಶಪಾಲ್‌ರ ಪ್ರತಿಪಾದನೆಯಂತೆ ’ಜೀವನ ಮೌಲ್ಯಗಳು ಕಲಿಕೆಯ ಭಾಗವಾಗಬೇಕು; ಜ್ಞಾನಾರ್ಜನೆ ಜೀವನದ ಭಾಗವಾಗಬೇಕು’. ಶಿಕ್ಷಣಕ್ಷೇತ್ರವು ವೈಜ್ಞಾನಿಕದೃಷ್ಟಿ ಮತ್ತು ನೈತಿಕ ನೆಲಗಟ್ಟಿನ ಮೇಲೆ ರೂಪಿಸಲ್ಪಟ್ಟಾಗ ವೈಚಾರಿಕತೆ ಮನೋಭಾವ ಬೆಳೆಯಲು ಸಾದ್ಯವಾಗುತ್ತದೆ.
ಮೇಲ್ಜಾತಿ ಮನಸ್ಸುಗಳು ನಮ್ಮನ್ನು ಹೊರಗಿಟ್ಟು ನೋಡುತ್ತಿರುವಂತೆ, ನಾವು ಅಂಬೇಡ್ಕರ್‌ರ ಆಶಯಗಳನ್ನು ಹೊರಗಿಟ್ಟಿದ್ದೇವೆ. ಇದು ಕೇವಲ ಮೂರ್ತಿಪೂಜೆ, ದಿನಾಚರಣೆಗಳಿಗೆ, ಚರ್ಚೆಗಳಿಗೆ ಸೀಮಿತವಾಗಿದೆ. ಹೀಗಾಗಿ ಬಾಬಾಸಾಹೇಬರು ಹೇಳುವ ಶಿಕ್ಷಣ-ಸಂಘಟನೆ-ಹೋರಾಟ-ಕ್ರಾಂತಿ ಇವೆಲ್ಲವೂ ಕೂಡ ಬುದ್ಧಿಮತ್ತೆಯಿಂದ ಕೆಳಗಿಳಿದು ನಡೆಗಳಲ್ಲಿ ಬರಬೇಕಿದೆ.

ಹ.ಮಾ.ರಾಮಚಂದ್ರ
ಅವಿಭಜಿತ ಕೋಲಾರ ಜಿಲ್ಲೆಯ ದಲಿತ ಚಳವಳಿಯ ಹಿರಿಯ ನಾಯಕರಲ್ಲೊಬ್ಬರು. ಪ್ರಸ್ತುತ ಕೋಲಾರದ ಆದಿಮದ ಜವಾಬ್ದಾರಿಯನ್ನು ಹೊತ್ತಿದ್ದಾರೆ.


