Homeಮುಖಪುಟಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು - ಧನಂಜಯ್ ಎನ್

ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು – ಧನಂಜಯ್ ಎನ್

ಕುವೆಂಪುರಂಥ ಚಿಂತಕರು ಎಲ್ಲಾ ಸಾಧ್ಯತೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಸೂಕ್ಷ್ಮಮತಿಗಳಾಗಿ ರಾಜಕೀಯ ಕ್ರಾಂತಿಯ ಕಡೆಗೆ ಮುಖ ಮಾಡದಲೇ, ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ್ದನ್ನ ನಾವೆಲ್ಲರೂ ಅಷ್ಟೇ ಸೂಕ್ಷ್ಮತೆಯಿಂದ ಅರಿತುಕೊಳ್ಳಬೇಕು.

- Advertisement -
- Advertisement -

ಶಬ್ದಗಳೆಲ್ಲಾ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತಿವೆ; ಅದರಿಂದ ಸತ್ಯವಾದುದನ್ನು ಹೇಳುವುದಕ್ಕೆ ಸಾಧ್ಯವಾಗದಂತೆ ಭಾಷೆ ಬೆಳೆಯುತ್ತಿದೆ’

ಜಾರ್ಜ್ ಆರ್ವೆಲ್ ತನ್ನ “ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲಾಂಗ್ವೇಜ್” ಅನ್ನೋ ಲೇಖನದಲ್ಲಿ ಈ ಮಾತನ್ನ ಬರೆದ ಕಾಲಕ್ಕೂ ಈಗಿನ ಕಾಲಕ್ಕೂ ಅಂತಹ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ.

ಹಿರಿಯ ಚಿಂತಕರು ತಮ್ಮ ಅನುಭವಗಳ ಜತೆಗೆ ಯುವಕರೊಂದಿಗೆ ಸಂವಾದ ಚರ್ಚೆಗಳನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಅಥವಾ ಹೊಸ ಚಿಂತನೆಯ ತರಂಗಗಳನ್ನು ನಮ್ಮ ಸುತ್ತ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವ ಅಂಶ, ಈಗಿನ ದುರಿತ ರಾಜಕೀಯ ವ್ಯವಸ್ಥೆಯಲ್ಲಿ ಅದರಲ್ಲೂ ಮೌಢ್ಯ ತುಂಬಿದ ಆಲೋಚನೆಗಳ ನಡುವೆ ನಮ್ಮ ಗಮನಕ್ಕೆ ಬರುತ್ತಿದೆ ಎಂದರೆ, ಬಹುಶಃ ಇದು ಬದಲಾವಣೆಯನ್ನು ಬಯಸುತ್ತಿರುವ ಕಾಲ ಅನಿಸುತ್ತದೆ.

ಕಳೆದುಹೋಗುತ್ತಿರುವ ಕೊಂಡಿಗಳ ಜೊತೆಗೆ ಮುಂದಿನ ಪೀಳಿಗೆಯ ಜತೆ ನಂಟು ಬೆಳೆಸಿಕೊಡಬೇಕಾದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳು, ಜವಾಬ್ದಾರಿಗಳನ್ನು ಮರೆತು ಕಾಲಹರಣ ಮಾಡುತ್ತಿರುವುದರಿಂದಲೇ ಬೌದ್ಧಿಕತೆ ಕಡೆಗೆ ತುಡಿಯಬೇಕಾದ ನಮ್ಮಗಳ ಬುದ್ಧಿ ಅಗತ್ಯವಾದ ಸಂವಹನ ಭಾಷೆಯನ್ನು ಕಳೆದುಕೊಂಡು ದಿಕ್ಕು ಕಾಣದ ಅನಾಥನಂತೆ ಇಂದು ಬೀದಿಬೀದಿ ಅಲೆಯುತ್ತಿದೆ.

ಈಗ ನಮ್ಮ ಎದುರಿಗೆ ಕಾಣಿಸುತ್ತಿರುವ ಒಂದಷ್ಟು ಹಿರಿಯರು ಕೊಂಚಮಟ್ಟಿಗಿನ ವಿವೇಕವುಳ್ಳವರು ಎಂದು ಅವರ ಜತೆಗಿನ ಒಡನಾಟದಿಂದ ನಮಗೇನಾದರೂ ಅನ್ನಿಸಿದರೆ ಅದಕ್ಕೆ ಕಾರಣ ಅವರ ಕಾಲದ ಚಿಂತಕರು ಅವರೊಡನೆ ಬಿಟ್ಟುಹೋಗಿರುವ ಬೌದ್ಧಿಕ ಚಿಂತನೆಯೇ ಅಡಿಪಾಯ.

1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕುವೆಂಪುರವರು ಮಾಡಿದ ಭಾಷಣ ಇಂಥದ್ದೊಂದು ಆಲೋಚನೆಯನ್ನ ಹುಟ್ಟಿಸುತ್ತದೆ.

ಅಂದು ಸಮಾಜಕ್ಕೆ ಒದಗಿದ್ದ ದುಃಸ್ಥಿತಿಗೆ ಕನ್ನಡಿ ಹಿಡಿಯುತ್ತಾ ವಿದ್ಯಾರ್ಥಿ ಜೀವನದಿಂದ ಉತ್ತೀರ್ಣರಾಗಿ ಮತ್ತೊಂದು ಜವಾಬ್ದಾರಿಯುತ ಕಾಯಕಕ್ಕೆ ಹೆಜ್ಜೆ ಇಡುತ್ತಿದ್ದ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ವಾಸ್ತವದಲ್ಲಿ ನಮ್ಮೆದುರಿಗಿದ್ದ ಸಮಸ್ಯೆಗಳನ್ನು ಮುಂದಿಡುತ್ತ ನಿಮಗೆಲ್ಲಾ ಎಂತಹ ಹೋರಾಟ ಕಾದಿದೆಯೋ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ರಾಜಕೀಯವಾಗಿ ಒಬ್ಬ ಬರಹಗಾರನ ಜವಾಬ್ದಾರಿ ಎಷ್ಟಿದೆ ಎಂಬುದನ್ನ ಮರೆತು ಕವಿತೆ ಕಥೆಗಳ ಸುತ್ತ ಗಿರಕಿ ಹೊಡೆಯುತ್ತಾ ಹಂದಿಗಳು ಮರಿಹಾಕುವಂತೆ ತಮ್ಮ ಮುಂಬರುವ ಎಲ್ಲಾ ಸಂಕಲನಗಳ ಮುಖಪುಟದಲ್ಲಿ, ಇಂಥಾ ಪ್ರಶಸ್ತಿ ಪುರಸ್ಕೃತ ಎಂದು ಅಚ್ಚು ಹಾಕಿಸಿ ಸಂಭ್ರಮಿಸುವುದನ್ನೇ ಸಾಹಿತ್ಯ ಬೆಳವಣಿಗೆ ಎಂದು ತಿಳಿದ ನಮ್ಮ ಕಾಲದ ಚಿಂತಕರ ಮುಂದೆ ಕುವೆಂಪುರವರ ಭಾಷಣ ಈಗಲೂ ಅತ್ಯಂತ ಪರಿಣಾಮಕಾರಿಯಾಗಿಯೂ, ಜೀವಂತವಾಗಿಯೂ ಕಾಣಿಸುತ್ತಿದೆ.

ನನ್ನ ಉಪದೇಶದಿಂದ ಮಹತ್ಸಾಧನೆಯಾಗಿಬಿಡುತ್ತದೆ ಎಂಬ ನಂಬಿಕೆಯೇನೂ ನನಗಿಲ್ಲ ಎಂದು ಹೇಳುತ್ತಲೇ ಮಾತು ಶುರುಮಾಡುವ ಅವರು, ಆ ಹಿಂದೆ ನಡೆದಂಥ ಅಂಥವೇ ಒಂದಷ್ಟು ಘಟಿಕೋತ್ಸವ ಭಾಷಣಗಳು ಯುವಕರಲ್ಲಿ ಮಹಾನ್ ಬದಲಾವಣೆ ಏನೂ ತಂದಿರಲಿಲ್ಲ ಎಂಬುದನ್ನು ಅಷ್ಟೇ ಅಸಹಾಯಕತೆಯಿಂದ ಒಪ್ಪಿಕೊಂಡಿದ್ದರು.

ಅಂದಿನ ದಿನಕ್ಕೆ, ಆ ಅಸಹಾಯಕತೆ ಅನ್ನುವ ಪದ ಪರಿಣಾಮಕಾರಿಯಾದ ಕೆಲಸಗಳು ಆಗುತ್ತಿಲ್ಲವಲ್ಲ ಎನ್ನುವ ನೋವಿನಿಂದ ಬಂದಿದ್ದಾದರೆ, ಇಂದಿನ ದಿನಕ್ಕೆ ಪ್ರಭುತ್ವದ ವಿರುದ್ಧ ಕನಿಷ್ಠ ಮಟ್ಟದ ಪ್ರತಿರೋಧವೂ ಹುಟ್ಟುತ್ತಿಲ್ಲವಲ್ಲ ಎನ್ನುವ ಆತಂಕವನ್ನು ಸೂಚಿಸುತ್ತಿರುವ ಅರ್ಥ ಹುಟ್ಟುತ್ತದೆ.

ಕುವೆಂಪು ಅವರ ಮಾತುಗಳನ್ನ ಕೇಳಿದರೆ, ಸ್ವಾತಂತ್ರ ಬಂದ ಹೊಸತರಲ್ಲಿ ಗಾಂಧಿಯ ತತ್ವಗಳನ್ನೆಲ್ಲಾ ಗಾಳಿಗೆ ತೂರಿ ನಮ್ಮನ್ನು ಆಳಿದ ಅಂದಿನ ಸರಕಾರ ತೆಗೆದುಕೊಂಡ ನಿರ್ಧಾರಗಳು ಇಂದಿಗೂ ಸರಿಪಡಿಸಲಾಗದ ಅಸಮಾನತೆಯನ್ನು ಸೃಷ್ಟಿಸುತ್ತದೆ ಎಂದು ಬಹುಶಃ ಯಾರೂ ಯೋಚಿಸಿರಲಿಲ್ಲ.

ಬಡವ ಮತ್ತು ಶ್ರೀಮಂತರ ನಡುವೆ ಈಗಿರುವ ಕಂದಕ ಇಷ್ಟು ಆಳವಾಗಿ ಒಡಕುಗಳನ್ನು ಸೃಷ್ಟಿಸಿಕೊಂಡಿದೆ ಎಂದರೆ, ಅಂದು ಪಾಶ್ಚಾತ್ಯ ದೇಶಗಳ ಅನುಕರಣೆ ಮಾಡಿದ ನಮ್ಮ ಹಿರಿಯರ ಆತುರದ ನಿರ್ಧಾರಗಳೇ ಕಾರಣವಾ?

ಹಸಿವನ್ನೇ ಬಂಡವಾಳ ಮಾಡಿಕೊಂಡು ಗೆಲುವಿನ ತಂತ್ರ ಹೆಣೆಯುವ ರಾಜಕಾರಣಿಗಳು ಹೊಸತೊಂದು ಗುಲಾಮಗಿರಿಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ.

ಸ್ವಾತಂತ್ರ ಗಳಿಸಿಕೊಳ್ಳುವುದಕ್ಕೂ ಮುಂಚೆ, ಜಾತಿ ಅಸ್ಪೃಶ್ಯತೆಗಳಿಂದ ನರಳಿ ರೋಗ ಹೆಚ್ಚಿಸಿಕೊಂಡಿದ್ದ ನಮ್ಮ ಭಾರತ, ಸ್ವಾತಂತ್ರ‍್ಯಾನಂತರ ಆ ಅಸ್ಪೃಶ್ಯತೆಯ ಜತೆಗೆ ರಾಜಕೀಯ ಗುಲಾಮಿತನವನ್ನೂ ಸಹಿಸಿಕೊಂಡು ಮುನ್ನಡೆಯಬೇಕಾಯಿತು.

ಹಾಗೆ ನೋಡಿದರೆ, ಅಸ್ಪೃಶ್ಯತೆಯ ಹೋರಾಟದ ಹಿನ್ನೆಲೆಯಿಂದ ಬಂದ ನಾವು ಹೊಸ ಆಲೋಚನೆಗಳ ಕಿಚ್ಚು ಹತ್ತಿಸಿಕೊಂಡು ಉರಿದು ಹೊಸ ಬೆಳಕಲ್ಲಿ ಅಸ್ಪೃಶ್ಯತೆಗಳನ್ನು ಗುಲಾಮಗಿರಿಯನ್ನು ಸುಟ್ಟು ಬೂದಿ ಮಾಡಿ ಹೊಸ ಜೀವನಕ್ಕೆ ಹಾತೊರೆಯಬೇಕಾಗಿತ್ತು.

ಅಧಿಕಾರಶಾಹಿ ಪುರೋಹಿತಶಾಹಿಗಳ ಸುಳಿಗೆ ಸಿಕ್ಕು ಅವುಗಳನ್ನೇ ಹೆಚ್ಚಿನ ಮಟ್ಟಿಗೆ ಆರಾಧಿಸಿಕೊಂಡು, ಗುಲಾಮಗಿರಿಯನ್ನು ತಿರಸ್ಕರಿಸಿಯೂ ಒಪ್ಪಿಕೊಂಡಂತೆ ಈ ಬದುಕನ್ನ ಅತ್ಯಂತ ಸುಲಭವಾಗಿ ಸ್ವೀಕರಿಸಬಾರದಾಗಿತ್ತು.

ಆ ಸ್ವೀಕಾರದ ಫಲವೇ ಅಂದಿನಕಾಲದ ರಾಜಕೀಯಕ್ಕೆ ಹೋಲಿಸಿದರೆ, ಅದಕ್ಕಿಂತಲೂ ನೂರರಷ್ಟು ಹೆಚ್ಚು ವಿಷ ತುಂಬಿಕೊಂಡ ಈಗಿನ ಸಂಘ ಪರಿವಾರದ ಸರಕಾರವನ್ನ ಎರಡನೇ ಬಾರಿಗೆ ಆರಿಸಿ ನಮ್ಮಗಳ ಮೌಢ್ಯತೆಯನ್ನು, ಗುಲಾಮಗಿರಿಯನ್ನು ನೂರಕ್ಕೆ ನೂರರಷ್ಟು ಹೆಚ್ಚಿಸಿಕೊಂಡು ತಲೆ ತಗ್ಗಿಸಿ ಬಾಳುತ್ತಿದ್ದೇವೆ ಅನ್ನಿಸುತ್ತಿದೆ.

ಹೌದು, ಏಕೆ ಹೀಗಾಯಿತು? ಸಮಾಜವಾದವೇ ನಮ್ಮ ಗುರಿ ಎಂದು ಘೋಷಿಸಿಕೊಂಡಿದ್ದೆವು, ಪ್ರಜಾಸತ್ತೆಯೆ ನಮ್ಮ ವಿಧಾನಮಾರ್ಗ ಎಂದು ಸಾರಿಸಾರಿ ಪ್ರತಿಜ್ಞೆ ಮಾಡಿಕೊಂಡಿದ್ದೆವು.

ಆದರೂ ಹೀಗೆಲ್ಲಾ ಆಯಿತು.

ಉಗ್ರ ಕ್ರಾಂತಿಯಿಂದ ನೀವು ಚುನಾವಣೆಯನ್ನ ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ ಸಮಯಸಾಧಕರೂ ಗೂಂಡಾಗಳು ಖದೀಮರೂ ನಮ್ಮನ್ನು ಆಳುತ್ತಾರೆ ಎಂದು ಕುವೆಂಪುರಂಥ ಚಿಂತಕರು ಎಚ್ಚರಿಸಿದ್ದರೂ ಸಹ, ಸದೃಢವಾದ ಬೆಳವಣಿಗೆಯನ್ನು ಗಳಿಸಿಕೊಳ್ಳಬೇಕಾದ ನಾವು, ಈಗಲೂ ನಿಂಬೆಹಣ್ಣಿನ ಪವಾಡಗಳ ಹಿಂದೆ ಬಿದ್ದ ದಡ್ಡ ಶಿಖಾಮಣಿಗಳನ್ನು ಜಾತಿ ಆಧಾರದ ಮೇಲೆ ಆರಿಸಿ ಕಳಿಸುತ್ತಿದ್ದೇವೆ, ಸಂವಿಧಾನ ಹೇಳಿರುವ ಮೂಲಕರ್ತವ್ಯಗಳನ್ನು ಲೆಕ್ಕಿಸದ ಅಪ್ರಾಜ್ಞರನ್ನು ಒಂದು ರಾಜ್ಯದ ಮುಖ್ಯಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ದೇವೆ, ಭಯೋತ್ಪಾದನೆ ಆರೋಪ ಹೊತ್ತಿರುವವರನ್ನು ಸಂಸದರನ್ನಾಗಿ ಮಾಡಿದ್ದೇವೆ.

ಅಭಯಹಸ್ತ ನೀಡಬೇಕಾದ ಸರ್ಕಾರದ ಕಡತಗಳನ್ನೇ ಯಾರೋ ಕದ್ದೊಯ್ದರು ಎಂದರೆ ಅಮಾಯಕರಾಗಿ ಅದನ್ನು ಅನುಮೋದಿಸಿದ್ದೇವೆ, ಜೈಲಿಗೆ ಹೋಗಿ ಬಂದ ಸಮಾಜಘಾತುಕರಿಗೆ ಈ ದೇಶದ ಅತ್ಯುನ್ನತ ಮಂತ್ರಿ ಸ್ಥಾನ ಕೊಟ್ಟು ಗೌರವಿಸಿದ್ದೇವೆ, ಉನ್ನತ ಗೌರವ ಹೊಂದಿದ್ದ ನ್ಯಾಯಾಲಯಗಳ ತೀರ್ಪಿನಲ್ಲಿ ದೋಷ ಕಂಡಾಗಲೂ ಶಿರಸಾವಹಿಸಿ ಅದನ್ನು ಒಪ್ಪಿಕೊಂಡಿದ್ದೇವೆ.

ಮೀಸಲಾತಿಯನ್ನು ವಿರೋಧಿಸಿಕೊಂಡು ಇಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳುವಾಗ, ಅಲ್ಲಿ ಇಡೀ ದೇಶದ ಒಟ್ಟು ಆದಾಯದ ಮೂಲ ಕೆಲವೇ ಕೆಲವರ ಜೇಬಿನಲ್ಲಿ ತುಂಬಿದೆ ಎನ್ನುವ ಕಹಿ ಸತ್ಯವನ್ನ ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದೇವೆ.

“ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟ ಕೀಳಬನ್ನಿ”

ಎಂಬಂತಹ ಕರೆಗಳಿಗೆ ಚೆಂದನೆ ಫ್ರೇಮು ಹಾಕಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಬಿಟ್ಟಿಯಾಗಿ ಹಂಚಿ ಆ ಸಾಲುಗಳಲ್ಲಿ ಅಡಗಿರುವ ಸೌಂದರ್ಯದ ಗುಣಗಾನ ಮಾಡುತ್ತಿದ್ದೇವೆಯೇ ಹೊರತು, ಕನಿಷ್ಠ ಆ ಕರೆಗೆ ಶೇಕಡಾ ಒಂದರಷ್ಟು ಬೆಲೆಯನ್ನೂ ನಾವು ಕೊಡಲಿಲ್ಲ.

ಬಹುಶಃ “ಚಿಂತಕರಿರಲಿ ಸಮಾಜದ ತುಂಬಾ” ಎಂದು ಹೇಳುವ ಕಾಲ ಈಗ ಬಂದಂತಿದೆ.

ಆ ಚಿಂತಕರ ವಿಚಾರವಾಗಿ ಹೇಳುವುದಾದರೆ…

ನಮ್ಮಲ್ಲಿ ಎರಡು ರೀತಿಯ ಚಿಂತಕರು ಕಾಣಿಸುತ್ತಿದ್ದಾರೆ.

ಮೊದಲ ರೀತಿಯ ಚಿಂತಕರು ಇತಿಹಾಸ ವರ್ತಮಾನ ಭವಿಷ್ಯ ಎಲ್ಲವುಗಳ ಶೋಧನೆಗಿಳಿದು ರಾಜಕೀಯವಾಗಿಯೂ ವೈಜ್ಞಾನಿಕವಾಗಿಯೂ ಹಲವು ವಿಚಾರಗಳನ್ನ ಅರಿತವರು ಅಥವಾ ಹಾಗೆ ಅರಿತಿದ್ದೇವೆ ಎಂದು ನಂಬಿಕೊಂಡವರು.

ಈ ಚಿಂತಕರಿಗೆ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಯಾವುದೇ ಮನಸ್ಸಿಲ್ಲ. ಯಾವುದಾದರೊಂದು ಪತ್ರಿಕೆ, ವೇದಿಕೆ ಅಥವಾ ನಾಲ್ಕು ಜನ ಸೇರಿದ ಜಾಗದಲ್ಲಿ ಇವರ ಬೌದ್ಧಿಕ ಅಹಂಕಾರದ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಸಾಕು, ಅವರೊಳಗಿನ ಚಿಂತಕ ಅಷ್ಟಕ್ಕೇ ಸಮಾಧಾನಿಸಿಕೊಂಡು ತನ್ನ ಕ್ರಾಂತಿ ಇಲ್ಲಿಗೆ ಮುಗಿಯಿತೆಂದು ನಿರ್ಧರಿಸಿಬಿಡುತ್ತಾನೆ.

ಇನ್ನು ಎರಡನೇ ರೀತಿಯ ಚಿಂತಕರು ಮೊದಲ ರೀತಿಯ ಚಿಂತಕರು ಕಟ್ಟಿಕೊಂಡ ಎಲ್ಲಾ ಗೋಡೆಗಳನ್ನು ಒಡೆದುಕೊಂಡು ಒಂದು ಹೆಜ್ಜೆ ಮುಂದಿಡುತ್ತಾರಾದರೂ, ಎದುರಾಳಿ ಶಕ್ತಿಗಳ ದಾಳಿಗೆ ತುತ್ತಾಗಿ ಜೈಲು, ಅವಮಾನ, ಶಕ್ತಿ ಕುಂದಿಸಿಕೊಳ್ಳುವ ಪ್ರಯೋಗಗಳಿಗೆ ಸಿಲುಕಿ ಅಸಹಾಯಕತೆಯಿಂದ ಒಂದು ಕಡೆ ಕೂತುಬಿಡುತ್ತಾರೆ.

ವಿಶ್ವಮಾನವ ಸಂದೇಶ ಸಾರಿದಂಥ ಕುವೆಂಪುರವರು ನೀಡಿದ ವಿಚಾರಕ್ರಾಂತಿಯ ಆಹ್ವಾನವನ್ನ, ನಮ್ಮ ಈ ಕಾಲದ ಯುವಕರು ಈ ಎಲ್ಲಾ ತಡೆಗಳನ್ನು ಬೇಧಿಸಿಕೊಂಡು ಸ್ವೀಕರಿಸಬೇಕಿದೆ.

1974ರ ಆಹ್ವಾನ 2020ರಲ್ಲಿ ನಮ್ಮೆಲ್ಲರನ್ನು ತಲುಪುವ ವೇಳೆಗೆ ಆಹ್ವಾನ ಕೊಟ್ಟ ಚಿಂತಕರೇ, ಒಂದು ಮೇಲ್ಜಾತಿ ಸೂಚಕವಾಗಿ ನಮಗೆ ಕಾಣಿಸುತ್ತಿದ್ದಾರೆ ಎಂದರೆ, “Politics is the first resort of a scoundrel” ಎಂಬ ಹರಿತವಾದ ಮಾತು ಅದೆಷ್ಟು ಸತ್ಯ ಅನ್ನಿಸುತ್ತದೆ ಅಲ್ಲವೇ… ?

ಹೌದು ಅಜ್ಞಾನಜನ್ಯವಾದ ಮತಭಾವನೆ ನಮ್ಮೆಲ್ಲರನ್ನೂ ಆಕ್ರಮಿಸಿ, ವರ್ಣಜಾತಿ ಪಂಥ ಕೋಮು ಪಂಗಡಗಳೆಂಬ ನೂರಾರು ಭೇಧಭಾವನೆಗಳ ಬಿರುಕು ಒಡಕುಗಳಿಗೆ ಸಿಲುಕಿಸಿ ಛಿದ್ರಛಿದ್ರವಾಗುವಂತೆ ಮಾಡಿದೆ.

ಈ ಭೇದಭಾವಗಳೂ ಛಿದ್ರಗಳೂ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಯಾವ ವಿಚಾರಧಾರೆಗಳೂ, ಯಾವ ವಿಶ್ವಮಾನವ ಕುವೆಂಪುಗಳೂ ನಮ್ಮನ್ನು ಪ್ರಭಾವಿಸುವುದಿಲ್ಲ.

ಮಾರ್ಗದರ್ಶಕ ಮಂತ್ರದೀಪವಾಗಿ ನಮಗೆ ದಾರಿತೋರಿಸುವುದಿಲ್ಲ.

ಅವಶ್ಯವಾಗಿ ಬೇಕಾಗಿರುವ ಶಿಕ್ಷಣ ಸ್ವರೂಪ, ದೇಶಭಾಷಾ ಶಿಕ್ಷಣ ಮಾಧ್ಯಮ, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ, ನಿರುದ್ಯೋಗ, ಬೆಲೆಏರಿಕೆ ಇತ್ಯಾದಿ ಬಿಸಿಬಿಸಿ ಯಾವ ಸಮಸ್ಯೆಗಳೂ ನಮ್ಮಲ್ಲಿ ಆಗುವ ಚರ್ಚೆಗಳನ್ನು ಮುಟ್ಟುವುದಿಲ್ಲ.

ಇಂತಹ ಪರಿಸ್ಥಿತಿಯ ಆಸ್ತಿಗೆ ಇವತ್ತು ನಾವುಗಳೆಲ್ಲಾ ಹಕ್ಕುದಾರರು.

ಇದೆಲ್ಲವನ್ನೂ ವಿಮರ್ಶಿಸಿ ನೋಡುವುದಾದರೆ ಈ ಹೊತ್ತಿಗೆ ಸಮುದಾಯಿಕವಾಗಿ ನಮಗೆ ಬೇಕಾಗಿರುವುದು ಪ್ರಭುತ್ವವನ್ನು ವಿರೋಧಿಸುವಂತಹ ಚಿಂತಕರ ಸಮೂಹ.

ವಚನಕಾರರಿಂದ ಹಿಡಿದು ಬಸವಣ್ಣ, ಗಾಂಧಿ, ಟ್ಯಾಗೋರ್ , ಕುವೆಂಪುರನ್ನು ಒಳಗೊಂಡು ಪ್ರಭುತ್ವವನ್ನು ಪ್ರಶ್ನಿಸುವಂಥಹ ಚಿಂತಕರು ಸಾಲುಗಟ್ಟಿ ನಿಲ್ಲುತ್ತಾರೆ.

ಇಲ್ಲಿ ಒಂದು ಪ್ರಮುಖ ಅಂಶವನ್ನು ಗಮನಿಸಿ ನೋಡುವುದಾದರೆ ಈ ಸಾಲಿನಲ್ಲಿ ಯಾರೂ ಕೂಡಾ ರಾಜಕೀಯ ಕ್ರಾಂತಿಗೆ ಆಹ್ವಾನ ನೀಡದೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿರುವುದು.

ರಾಜಕೀಯ ಕ್ರಾಂತಿಗಳು ರಾತ್ರೋರಾತ್ರಿ ವ್ಯವಸ್ಥೆಗಳನ್ನು ಬದಲಿಸುವಂಥ ಅಪಾಯಗಳನ್ನು ಮುಂದಿಡುತ್ತವೆ, ಮತ್ತು ಸರ್ವಾಧಿಕಾರಿಗಳನ್ನು ಸೃಷ್ಟಿಸುತ್ತವೆ.

ಈ ರೀತಿಯ ರಾಜಕೀಯ ಕ್ರಾಂತಿಗಳನ್ನು ಹಲವಾರು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಕಾಣಬಹುದು.

ಕುವೆಂಪುರಂಥ ಚಿಂತಕರು ಈ ಎಲ್ಲಾ ಸಾಧ್ಯತೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಸೂಕ್ಷ್ಮಮತಿಗಳಾಗಿ ರಾಜಕೀಯ ಕ್ರಾಂತಿಯ ಕಡೆಗೆ ಮುಖ ಮಾಡದಲೇ, ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ್ದನ್ನ ನಾವೆಲ್ಲರೂ ಅಷ್ಟೇ ಸೂಕ್ಷ್ಮತೆಯಿಂದ ಅರಿತುಕೊಳ್ಳಬೇಕು.

ಹಾಗೆ ನೋಡಿದರೆ ಸಮೂಹ ಕೇಂದ್ರೀತ ವ್ಯವಸ್ಥೆಗಳು ಈ ಮುಂಚಿನಿಂದಲೂ ವ್ಯಕ್ತಿ ಕೇಂದ್ರಿತ ಸಂವಿಧಾನವನ್ನು ಆಕ್ರಮಿಸಿ ಅದನ್ನು ಕೊಂದು ತನ್ನ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಲೇ ಇವೆ.

ಕಳೆದ 20, 30 ವರ್ಷಗಳಿಂದ ಈ ಪ್ರಯತ್ನಗಳು ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿವೆ.

ಅಂಬೇಡ್ಕರರು ರಚಿಸಿದ ನಮ್ಮ ಸಂವಿಧಾನ, ವ್ಯಕ್ತಿ ಕೇಂದ್ರೀತವಾದದ್ದು.

ಗಾಂಧಿಯ ಆದರ್ಶಗಳು ವ್ಯಕ್ತಿ ಕೇಂದ್ರಿತವಾಗಿ ಮೂಡಿದ್ದಂತವು.

ಕುವೆಂಪು ನೀಡಿದ ವಿಚಾರಕ್ರಾಂತಿಯು ವ್ಯಕ್ತಿ ಕೇಂದ್ರಿತವಾಗಿ ರೂಪುಗೊಂಡಿದ್ದು.

ಇಲ್ಲಿ ನಮಗೆಲ್ಲಾ ಬೇಕಿರುವುದು, ಗಾಂಧಿ ಮತ್ತು ಕುವೆಂಪುರ ವ್ಯಕ್ತಿ ಕೇಂದ್ರಿತ ಕ್ರಾಂತಿ ಮತ್ತು ಅಂಬೇಡ್ಕರರ ಪ್ರತಿಪಾದಿಸಿದ ಸಂವಿಧಾನಿಕ ನೈತಿಕತೆಯೇ ಹೊರತು ರಾಜಕೀಯ ಕ್ರಾಂತಿಯಲ್ಲ.

ಒಕ್ಕೂಟ ರಾಷ್ಟ್ರದ ಕಲ್ಪನೆಯಲ್ಲಿ ವ್ಯಕ್ತಿ ಬದಲಾಗುವುದೇ ಅತೀದೊಡ್ಡ ಕ್ರಾಂತಿ ಎಂಬ ಮಾತು ಅಷ್ಟು ಸುಲಭಕ್ಕೆ ಸುಳ್ಳಾಗುವುದೂ ಇಲ್ಲ. ವ್ಯಕ್ತಿ ಮುನ್ನೆಲೆಗೆ ಬರುವುದೇ ನಮ್ಮ ಬೆಳವಣಿಗೆಯ ಮೂಲ.

” ಓ ನನ್ನ ಚೇತನ,

ಆಗು ನೀ ಅನಿಕೇತನ”

ಎನ್ನುವ ಕುವೆಂಪುರವರ ಸಾಲಿನಲ್ಲಿ ಧಾರ್ಮಿಕ , ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಬೇಧ ಭಾವಗಳಿಂದ ಅತೀತವಾಗಿ ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಬ್ರಾತೃತ್ವದ ಭಾವನೆಯನ್ನು ಬೆಳೆಸುವ ಸಂವಿಧಾನದ ಮೂಲಕರ್ತವ್ಯಗಳ ಒಳನೋಟವಿದೆ.

“ನೂರು ಮತದ ಹೊಟ್ಟ ತೂರಿ,

ಎಲ್ಲ ತತ್ವದೆಲ್ಲೆ ಮೀರಿ,

ನಿರ್ದಿಗಂತವಾಗಿ ಏರಿ, ”

ಎನ್ನುವ ಸಾಲುಗಳು ನಮ್ಮ ಸಾರ್ವಭೌಮತ್ವವನ್ನೂ ಐಕ್ಯತೆಯನ್ನು ಅಖಂಡತೆಯನ್ನೂ ಎತ್ತಿ ಹಿಡಿದಿವೆ.

“ವಿಚಾರ ಕ್ರಾಂತಿಗೆ ಆಹ್ವಾನ” ಎನ್ನುವ ಒಂದು ಚಿಂತನೆಯ ಭಾಷಣ ಇಷ್ಟು ವರ್ಷಗಳು ಕಳೆದಮೇಲೂ ನಮ್ಮನ್ನು ತಲುಪಲು ಹರಸಾಹಸ ಪಡುತ್ತಿದೆ ಎಂದಮೇಲೆ, ಅದರ ಪ್ರಭಾವ ಸಮಾಜದ ಮೇಲೆ ಬೀರುವುದಕ್ಕೆ ಇನ್ನೆಷ್ಟು ಕಾಲ ಹಿಡಿದೀತು ಎಂಬುದೇ ಈ ಹೊತ್ತಿನ ತಲ್ಲಣ.

(ಲೇಖಕರು ಯುವ ಬರಹಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...