Homeಮುಖಪುಟಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ.

- Advertisement -
- Advertisement -

-ಅಭಿಜಿತ್ ಅಯ್ಯರ್-ಮಿತ್ರ

ಅನುವಾದ: ನಿಖಿಲ್ ಕೋಲ್ಪೆ

ಕೊರೋನಾ ಬಿಕ್ಕಟ್ಟನ್ನು ಉಂಟುಮಾಡಿರುವ ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಘೋಷಿಸಲಾಗಿರುವ 21 ದಿನಗಳ ದಿಗ್ಭಂದನ ಅಥವಾ ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿದ ಎರಡನೇ ಭಾಷಣವು ಅವರು ಹಿಂದಿನ ತಪ್ಪುಗಳಿಂದ ಕಲಿತಿಲ್ಲ ಅಥವಾ ಅವರಿಗೆ ಕಲಿಯುವ ಮನಸ್ಸೇ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಅವರು ಚುನಾವಣೆಗಳನ್ನು ಗೆಲ್ಲಬಹುದು; ಬೇರೇನನ್ನೂ ಮಾಡಲು ಅಸಮರ್ಥ ಎಂದೂ ಈ ಭಾಷಣ ತೋರಿಸಿಕೊಟ್ಟಿದೆ.

ದೇಶದ ನಾಡಿ ಮಿಡಿತವನ್ನು ಕಂಡುಕೊಂಡ ವ್ಯಕ್ತಿಯೊಬ್ಬರು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಅದನ್ನು ಸಂಪೂರ್ಣ ಕಳೆದುಕೊಳ್ಳುವುದಾದರೂ ಹೇಗೆ? ಆದರೆ, 21 ದಿನಗಳ ಕೊರೋನಾ ವೈರಸ್ ಲಾಕ್‌ಡೌನ್ ಕುರಿತು ನರೇಂದ್ರ ಮೋದಿಯ ಮಂಗಳವಾರದ ಭಾಷಣ ಅದು ಸಾಧ್ಯ ಎಂದು ತೋರಿಸಿದೆ.

ಬಿಕ್ಕಟ್ಟಿನ ಸಮಯದಲ್ಲಿ ಎರಡು ರೀತಿಯ ಭಾಷಣಗಳನ್ನು ಮಾಡಲಾಗುತ್ತದೆ. ಮೊದಲನೆಯದು- ವಿನ್‌ಸ್ಟನ್ ಚರ್ಚಿಲ್‌ರ ಯುದ್ಧಕಾಲದ ಭಾಷಣಗಳಂತೆ ಮನೋಬಲ ಹೆಚ್ಚಿಸುವಂತವುಗಳು ಮತ್ತು ಎರಡನೆಯವು ನಿರ್ದಿಷ್ಟವಾಗಿ ಏನು ಮಾಡಬೇಕು ಎಂದು ಸೈನಿಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತವುಗಳು. ಮೊದಲನೆಯದು ಅಸ್ಪಷ್ಟವಾಗಿದ್ದರೆ, ಎರಡನೆಯದು ನಿಖರ ಮತ್ತು ನಿರ್ದಿಷ್ಟ ವಿವರಗಳನ್ನು ಒಳಕೊಡಿರುವಂತದ್ದಾಗಿರುತ್ತದೆ. ಸಮಸ್ಯೆಯೆಂದರೆ ನೋವೆಲ್ ಕೊರೋನಾ ವೈರಸ್ ಅಥವಾ ಕೋವಿಡ್-19 ಸಂದರ್ಭದಲ್ಲಿ ನಾವು ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸೈನಿಕರಾಗಬೇಕಾಗುತ್ತದೆ. ನಮಗೆ ಮಾನೋಬಲ ಹೆಚ್ಚಿಸುವಂತವುಗಳೂ ಬೇಕು; ನಿರ್ದಿಷ್ಟ ವಿವರ, ನಿರ್ದೇಶನ ನೀಡುವಂತವುಗಳೂ ಬೇಕು. ಈ ನಿಟ್ಟಿನಲ್ಲಿ ಮೋದಿಯವರ ಮಂಗಳವಾರದ ಭಾಷಣ ದಯನೀಯವಾಗಿ ಸೋತಿತು.

ಅವರ ಹಿಂದಿನ ಭಾಷಣ “ಒಗ್ಗಟ್ಟಿನ ದಿನ” ಅಥವಾ “ಜನತಾ ಕರ್ಫ್ಯೂ”- ಸ್ಥೈರ್ಯದ ಕುರಿತು ಇದ್ದರೆ, ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಎರಡನೇ ಭಾಷಣವು ಮಿಲಿಟರಿ ಮಾದರಿ ಕಾರ್ಯಾಚರಣೆಯ ಕುರಿತಂತೆ ಇತ್ತು. ಇದನ್ನು ಅವರು ದಿಲ್ಲಿ ಗಲಭೆಗಳನ್ನು ಹೇಗೆ ನಿಭಾಯಿಸಿದರು ಎಂಬುದರ ಜೊತೆ ಜೋಡಿಸಿಕೊಂಡರೆ, ಒಂದು ನಿರ್ದಿಷ್ಟ ಮಾದರಿಯು ಗೋಚರಿಸುತ್ತದೆ. ಅದು ಈ ಮೂರು ವಿಷಯಗಳಲ್ಲಿ ಒಂದನ್ನು ತೋರಿಸುತ್ತದೆ: ಕೆಟ್ಟ ನಿರ್ವಹಣೆ, ಸೋಮಾರಿತನ ಅಥವಾ ದುರಂಹಂಕಾರ.

ಗುಜರಾತ್ ಗಲಭೆಗಳು

ಈ ಮಾದರಿ ಹೀಗಿದೆ: ಸಂದೇಶ ನೀಡುವುದು, ಕಾನೂನು ಮತ್ತು ಶಿಸ್ತು ಹಾಗೂ ಕೈಕಾಲು ಬಿಡುವುದು. ಪ್ರತಿಯೊಂದು ಸಂದರ್ಭದಲ್ಲಿ ಹಿಂದಿನ ತಪ್ಪುಗಳನ್ನು ಮತ್ತೆಮತ್ತೆ ಮಾಡಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಹೀಗಿದ್ದರೂ, ಇವು ವಾಸ್ತವವಾಗಿ ತಪ್ಪುಗಳಲ್ಲ; ಉದ್ದೇಶಪೂರ್ವಕವಾಗಿ ಮಾಡಿದಂತವುಗಳು ಎಂಬ ಕಂಗೆಡಿಸುವ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ.

ಮೋದಿ ಸಂದೇಶ ನೀಡುವುದರಲ್ಲಿ ನಿಷ್ಣಾತರು ಮತ್ತು ತನ್ನ ವಿಚಾರಗಳನ್ನು ಹೇಗೆ ಪ್ಯಾಕೇಜ್ ಮಾಡಿ ಮಾರಬೇಕು ಎಂಬುದು ಅವರಿಗೆ ಗೊತ್ತಿದೆ ಎಂಬುದಕ್ಕೆ ಸಂಸತ್ತಿನಲ್ಲಿ 303 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿ. ಹೀಗಿದ್ದರೂ ಅವರ ಸಂದೇಶ ಪ್ರಭಾವ ಬೀರುವುದು ಮುಖ್ಯವಾಗಿ ಕೆಳಹಂತದ ಜನಸಾಮಾನ್ಯರ ಮೇಲೆ ಮಾತ್ರ.

ಗುಜರಾತ್ ಗಲಭೆಯ ಚಿತ್ರ

ಇದನ್ನು ಪರಿಗಣಿಸಿ: ಮೋದಿ ಮುಖ್ಯಮಂತ್ರಿಯಾಗಿದ್ದಾಗ ನಡೆದ 2002ರ ಗೋದ್ರಾ ಗಲಭೆಗಳ ನಂತರ ಎರಡು ಹಂತಗಳ ಸಂದೇಶಗಳನ್ನು ನೀಡಲಾಗಿತ್ತು. ವಿದೇಶಿ ಮತ್ತು ದೇಶಿ ಮಾಧ್ಯಮಗಳ ಮಟ್ಟಿಗೆ ಈ ಗಲಭೆಗಳಲ್ಲಿ ಸರಕಾರದ ಶಾಮೀಲಾತಿ ಇತ್ತು. ಆದರೆ, ಮಾಧ್ಯಮಗಳನ್ನು ನಂಬದವರಿಗೆ (ತೀವ್ರವಾದ ಜಾತಿ ಸಂಘರ್ಷದ ಪ್ರದೇಶವಾದ ದಕ್ಷಿಣ ಆರ್ಕಾಟ್‌ನಲ್ಲಿ ನಡೆದ ಗಲಭೆಗಳನ್ನು ಬಾಲ್ಯದಲ್ಲಿ ಕಂಡ ನಾನು, ನನ್ನನ್ನು ಈ ಗುಂಪಿನಲ್ಲಿ ಸೇರಿಸುತ್ತೇನೆ) ಇದು ಯಾವುದೇ ಸುಳಿವಿಲ್ಲದ, ತಿಳುವಳಿಕೆ ಇಲ್ಲದ ಮಾಧ್ಯಮಗಳಿಂದ ದಾಳಿಗೊಳಗಾದ ವ್ಯಕ್ತಿಯೊಬ್ಬನ ಕತೆಯಾಗಿತ್ತು.

ದಿಲ್ಲಿ ಗಲಭೆಗಳು

ಈ ಎರಡು ರೀತಿಯ ತದ್ವಿರುದ್ಧ ನಿರೂಪಣೆಯು ಮೋದಿಗೆ ಚೆನ್ನಾಗಿ ಉಪಯೋಗಕ್ಕೆ ಬಂತು. ಅದು ಆತನಿಗೆ 2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ದಾರಿ ತೋರಿಸಿತು. ಗುಜರಾತ್ ಗಲಭೆಗಳು ಭಾರತ, ಗುಜರಾತ್ ಮತ್ತು ಸ್ವತಃ ಮೋದಿಗೆ ಉಂಟುಮಾಡಿದ ಗೌರವಹಾನಿಯು ಮೋದಿ ದಿಲ್ಲಿ ಗಲಭೆಗಳನ್ನು ನಿಭಾಯಿಸಿದ ರೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ತರಲಿಲ್ಲ. ಸುರಕ್ಷಾ ಬಲಗಳನ್ನು ನಿಯೋಜಿಸುವುದರಲ್ಲಿ ಅದೇ ವಿಳಂಬ, ಅದೇ ರೀತಿಯಲ್ಲಿ ಪೊಲೀಸರು ಒಂದೇ ಪಕ್ಷವನ್ನು ವಹಿಸಿ ಸಕ್ರಿಯವಾಗಿ ದೊಂಬಿಯಲ್ಲಿ ಭಾಗವಹಿಸಿದುದು ಮತ್ತು ಅದೇ ಹತ್ಯಾಕಾಂಡದ ಅರೋಪಗಳು. ವ್ಯತ್ಯಾಸಗಳೇನಿಲ್ಲ.

ಇಲ್ಲೊಂದು ಮಾದರಿ ಗಮನಿಸಿ

ಒಮ್ಮೆ ಮುಖ್ಯಮಂತ್ರಿಯಾಗಿ, ಮತ್ತೊಮ್ಮೆ ಪ್ರಧಾನಿಯಾಗಿ ಎರಡು ಗಲಭೆಗಳ ಅಧ್ಯಕ್ಷತೆ ವಹಿಸಿದ ಹೊರತಾಗಿಯೂ ಮೋದಿ ಮಾಡದೇ ಇರುವ ಅಚ್ಚರಿಕಾರಕ ವಿಷಯವೊಂದಿದೆ. ಅದೆಂದರೆ, ಯಾವುದೇ ರೀತಿಯ ಪೊಲೀಸ್ ಸುಧಾರಣೆ ಆರಂಭಿಸದಿರುವುದು ಅಥವಾ ನಿರ್ದಿಷ್ಟ ಕಾರ್ಯಸೂಚಿಯನ್ನು ರೂಪಿಸದೇ ಇರುವುದು. ಗುಂಪನ್ನು ನಿಯಂತ್ರಿಸಲು ಅತೀ ಮುಖ್ಯವಾದುದೆಂದರೆ, ಮೊತ್ತ ಮೊದಲಾಗಿ ಗುಂಪು ಸೇರುವುದನ್ನು ತಡೆಯುವುದು ಎಂದು ಯಾವುದೇ ವೃತ್ತಿಪರ ಕಾನೂನು ಮತ್ತು ಶಿಸ್ತು ತಜ್ಞರು ನಿಮಗೆ ಹೇಳುತ್ತಾರೆ. ಒಮ್ಮೆ ಗುಂಪು ಸೇರಿಬಿಟ್ಟರೆ ಮುಗಿಯಿತು; ಆಗಲೇ ಆಟ ಸೋತಂತೆ. ಹೀಗಿದ್ದರೂ, ನಾವು ಯಾವುದೇ ಗುಪ್ತಚರ ಅಥವಾ ಕಣ್ಗಾವಲು ಸುಧಾರಣೆಗಳನ್ನು ಮೋದಿ ಅಡಿಯಲ್ಲಿ ನೋಡಿಲ್ಲ.

ಒಂದೋ ಮೋದಿ ಆಲಿಸುವುದಿಲ್ಲ, ಇಲ್ಲವೇ ಅವರಿಗೆ ಅದು ಬೇಕಾಗಿಲ್ಲ. ಇನ್ನೊಂದು ಕಳವಳಕಾರಿ ತೀರ್ಮಾನಕ್ಕೆ ಬರಬಹುದು: ಅದೆಂದರೆ, ಅವರುಗೆ ಬೇಕಾಗಿರುವುದು ಅದೇ. ದಿಲ್ಲಿಯಲ್ಲಿ ಏನು ನಡೆಯಿತು ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಸರಿಯಾದ ಸರಕಾರಿ ವಿವರಣೆ ದೊರೆತಿಲ್ಲ ಎಂಬ ವಾಸ್ತವವು, ಮೋದಿಗೆ ಈಗ ನೀಡಲಾಗುತ್ತಿರುವ ಹತ್ಯಾಕಾಂಡದ ವಿವರಣೆಯಿಂದ ಸಾಕಷ್ಟು ಸಂತೋಷವಾಗಿದೆ ಎಂಬುದನ್ನು ಸೂಚಿಸುವಂತಿದೆ. ಆತ ಇದರ ಲಾಭವನ್ನು ಬಾಚಿಕೊಳ್ಳಬಹುದು. ಆದರೆ, ಭಾರತ ಮಾತ್ರ ನಷ್ಟ ಅನುಭವಿಸಬೇಕಾಗುತ್ತದೆ.

ಒಂದು ಸ್ಥಾಪಿತ ಮಾದರಿ

ಮೋದಿಯ ಭಾಷಣದ ನಂತರ ರಾತ್ರಿ ಭಾರತದಾದ್ಯಂತ ಜನರು ಭಯದಿಂದ ಸರಕುಗಳನ್ನು ಕೊಳ್ಳಲು ನುಗ್ಗಿದುದರಲ್ಲಿ ನಾವು ಇದೇ ಮಾದರಿಯನ್ನು ನೋಡುತ್ತೇವೆ. 2016ರಲ್ಲಿ ತನ್ನ ನಾಯಕತ್ವದಲ್ಲೇ ನಡೆದ ನೋಟು ಅಮಾನ್ಯೀಕರಣವು ಉಂಟುಮಾಡಿದ ಭಯ ಮತ್ತು ಗೊಂದಲವನ್ನು ಕಂಡಿರುವ ಮೋದಿಗೆ ತನ್ನ ಭಾಷಣವು ಯಾವ ರೀತಿಯ ಭಯ ಮತ್ತು ಗೊಂದಲ ಉಂಟುಮಾಡುವುದು ಎಂಬುದು ಗೊತ್ತಿರಬೇಕಿತ್ತು ಮತ್ತು ಗೊತ್ತಿರಬೇಕಾದುದು ಅವರ ಕರ್ತವ್ಯವೂ ಆಗಿತ್ತು. ಮೋದಿ ಭಾಷಣವನ್ನು ಲೈವ್ ಟ್ವೀಟ್ ಮಾಡುತ್ತಿದ್ದಂತೆಯೇ ಭದ್ರತೆ ಮತ್ತು ಗುಂಪು ನಿಯಂತ್ರಣದಲ್ಲಿ ನನಗಿರುವ ಅಲ್ಪ ತರಬೇತಿಯೂ, ಭಯದ ಖರೀದಿ ಅನಿವಾರ್ಯ ಎಂದು ಸೂಚಿಸಿತ್ತು. ಹೀಗಿದ್ದರೂ ಭದ್ರತೆ ಮತ್ತು ಸಾಮಾಜಿಕ ತಜ್ಞರ ವಸ್ತುಶಃ ದಂಡಿನಿಂದಲೇ ಸುತ್ತುವರಿಯಲ್ಪಟ್ಟಿರುವ ಈ ಮನುಷ್ಯನಿಗೆ ಇದನ್ನು ಊಹಿಸಲು ಸಾಧ್ಯವಾಗಿಲ್ಲವೆ? ಒಂದೋ ಆತ ಆಲಿಸುವುದಿಲ್ಲ ಇಲ್ಲವೇ ಆತನಿಗೆ ಚಿಂತೆಯಿಲ್ಲ ಅಥವಾ ಆತನಿಗೆ ನಿಜಕ್ಕೂ ಬೇಕಾಗಿರುವುದು ಇದೇ.

ನಮಗೆ ಇನ್ನೊಂದು ಮಾದರಿಯ ಪರಿಚಯವಿದೆ. ಅದೆಂದರೆ, ‘ಮೊದಲ ದಿನ ಗರಿಷ್ಟ ಆಘಾತ’ ಎಂಬಂತಹ, ಹೆಚ್ಚು ಮಹತ್ವ ಇರುವ ಎರಡನೇ ಮತ್ತು ಮೂರನೇ ಹಂತದ ಪರಿಣಾಮಗಳನ್ನು ಸಂಪೂರ್ಣ ಕಡೆಗಣಿಸುವ ಮನೋಭಾವದ ಆತುರದ ಧೋರಣೆಗಳು. ಇದನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ- ಕೆಲವನ್ನೇ ಹೆಸರಿಸಬೇಕೆಂದರೆ: ಅಮಾನ್ಯೀಕರಣ, ಜಿಎ‌ಸ್‌ಟಿ, ಬಾಲಕೋಟ್ ಮತ್ತು ವಿಧಿ 370.

ಚುಟುಕಾಗಿ ಹೇಳುವುದಾದರೆ, ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ. ಅಕಾಡೆಮಿಕ್ ಆಗಿ ಒಂದು ಮಾದರಿಯನ್ನು ನಿರೂಪಿಸಿಲು ಮೂರು ನಿದರ್ಶನಗಳು ಬೇಕಾಗುತ್ತವೆ. ಈಗ ನಮ್ಮ ಬಳಿ ನಾಲ್ಕು ಇವೆ: ಗೋದ್ರಾ, ಅಮಾನ್ಯೀಕರಣ, ದಿಲ್ಲಿ ಗಲಭೆಗಳು ಮತ್ತು ಇದೀಗ ಕೊರೋನಾ ವೈರಸ್ ಲಾಕ್‌ಡೌನ್. ಮೋದಿ ಚುನಾವಣೆಗಳನ್ನು ಗೆಲ್ಲಬಹುದು, ಬೇರೇನನ್ನೂ ಮಾಡಲು ಅಸಮರ್ಥ.

(ಲೇಖಕರು ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಎಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್ ಸಂಸ್ಥೆಯಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ಅಭಿಪ್ರಾಯಗಳು ಲೇಖಕರವು.)

ಕೃಪೆ: ದಿ ಪ್ರಿಂಟ್ ಡಾಟ್ ಇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!

ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತಾದ ಕಾಳಿಘಾಟ್ ನಿವಾಸದ ಹೊರಭಾಗದಲ್ಲಿ ಶುಕ್ರವಾರ ನಡುರಾತ್ರಿ ಭಾರಿ ಹೈಡ್ರಾಮಾವೊಂದು ಸಂಭವಿಸಿದೆ. 2...

́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20 ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ...

ಯೂಟರ್ನ್ ಹೊಡೆದ ಚುನಾವಣಾ ಆಯೋಗ : SIR ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವು

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಎಸ್‌ಐಆರ್ ವೇಳೆ ಡಿಲೀಟ್ ಪಟ್ಟಿಗೆ (ಎಎಸ್‌ಡಿಡಿ) ಬಿದ್ದ ಅರ್ಹ ಮತದಾರರು ತಮ್ಮ ಹಕ್ಕು ಮರಳಿ...

‘ಪ್ರಧಾನಿ ಮೋದಿಯನ್ನು ಗೊಂದಲಕ್ಕೀಡುಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ!’: ಅಮಿತ್ ಷಾಗೆ ರಾಹುಲ್ ಗಾಂಧಿ ಆಗ್ರಹ!

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ...

‘ಅಮೆರಿಕ ಅಧ್ಯಕ್ಷರ ಹತ್ಯೆ ಮಾಡುವಂತೆ ಧ್ವನಿ ಕೇಳಿಸುತ್ತಿತ್ತು’: ವೈಟ್ ಹೌಸ್ ಬಳಿ ಮಾರಕಾಸ್ತ್ರಗಳಿದ್ದ ಕಾರಿನೊಂದಿಗೆ ವೆನಿಜುವೆಲ್ಲಾ ಪ್ರಜೆ ಬಂಧನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ...

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...

ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ : ಕೇಂದ್ರದಿಂದ ಸ್ಪಷ್ಟನೆ ಕೋರಿದ ಕರ್ನಾಟಕ ಸರ್ಕಾರ

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು...

ಸಿಜೆಐ ಸೂರ್ಯ ಕಾಂತ್ ವಿರುದ್ಧದ ಪೋಸ್ಟ್ ಪ್ರಕರಣ: ಕೇರಳ ಕಾಂಗ್ರೆಸ್ ನಾಯಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್...

ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಪಡೆಯುವುದು ಫಲಾನುಭವಿಗಳ ಹಕ್ಕಲ್ಲ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ

'ಗೃಹಲಕ್ಷ್ಮಿ' ಒಂದು ಕಲ್ಯಾಣ (ಪರೋಪಕಾರಿ) ಯೋಜನೆಯಾಗಿದ್ದು, ಇದರ ಅನುಷ್ಠಾನವು ಹೆಚ್ಚಾಗಿ ಆಡಳಿತಾತ್ಮಕ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಈ ಯೋಜನೆಯ ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನ್ಯಾಯಾಂಗದ ಹಸ್ತಕ್ಷೇಪದ...