HomeಅಂಕಣಗಳುKarnataka against SIRಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

- Advertisement -
- Advertisement -

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ ಗುರುವಾರ (ನ.5) ಹಮ್ಮಿಕೊಂಡಿದ್ದ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ನಾವು ಕೇವಲ ಚುನಾವಣಾ ಆಯೋಗದ ವಿರುದ್ಧ ಮಾತ್ರ ಹೋರಾಟ ಮಾಡುತ್ತಿಲ್ಲ. ಚುನಾವಣಾ ಆಯೋಗದ ಹಿಂದೆ ಇರುವ ಬಿಜೆಪಿಯ ಹುನ್ನಾರದ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ ಎಂದರು.

ಜನಸಾಮಾನ್ಯರ ಮತಗಳನ್ನು ಉಳಿಸುವ ವಿಚಾರದಲ್ಲಿ ನಮಗೆ ಬದ್ಧತೆಯಿದೆ. ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಎಲ್ಲ ಬಿಎಲ್‌ಒಗಳಿಗೆ ಹೇಳಲು ಬಯಸುತ್ತೇನೆ. ಮತಗಳ್ಳತನಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ, ಯಾರು ಅರ್ಜಿಗಳನ್ನು ತಂದುಕೊಟ್ಟಿದ್ದಾರೆ ಎಂಬುದಕ್ಕೆ ಸಿಸಿಟಿವಿ ದಾಖಲೆಗಳಿವೆ. ಈ ಬಗ್ಗೆ ಪ್ರಕರಣ ದಾಖಲಿಸಿ ಸಮಾಜಕ್ಕೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮತಗಳ್ಳತನ ಮಾಡಿದೆ

ಬಿಜೆಪಿ ಮತಗಳ್ಳತನ ಮಾಡಿದೆ. ಅಂತಹ ಪಕ್ಷದ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ನಮ್ಮ ಬದುಕು. ನಮ್ಮ ಹಕ್ಕಿಗಾಗಿ ಇಂದು ನಾವೆಲ್ಲರೂ ಹೋರಾಟ ಮಾಡಲು ಇಲ್ಲಿ ಸೇರಿದ್ದೇವೆ ಎಂದು ಹೇಳಿದರು.

ಫ್ರೀಡಂ ಪಾರ್ಕ್ ದೇಶದ ರಾಜಕೀಯ ಬದಲಾವಣೆಯ ಹಾಗೂ ಐತಿಹಾಸಿಕ ಹೋರಾಟಗಳ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಈ ಹಿಂದೆ ಇದೇ ಸ್ಥಳದಲ್ಲಿ ಮಹಾದೇವಪುರ, ಗಾಂಧಿನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಮತದಾರರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಹೋರಾಟ ಆರಂಭಿಸಲಾಗಿತ್ತು. ಆ ಹೋರಾಟ ದೇಶಕ್ಕೆ ದೊಡ್ಡ ಸಂದೇಶ ನೀಡಿತ್ತು ಎಂದು ಸ್ಮರಿಸಿದರು.

ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಬಿಎಲ್‌ಒ ಅಧಿಕಾರ ನೀಡಿಸಿ, ಲಕ್ಷಾಂತರ ಮತಗಳನ್ನು ತೆಗೆದುಹಾಕುವ ಮತ್ತು ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ರಾಜ್ಯದ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸಿದ್ದರು. ಈ ಎಲ್ಲ ಪ್ರಯತ್ನಗಳ ನಡುವೆಯೂ ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸ್ಥಾನಗಳನ್ನು ನೀಡಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು ಎಂದರು.

ಕರ್ನಾಟಕ ಮಾತ್ರವಲ್ಲದೆ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ ಮತ್ತು ತಮಿಳುನಾಡಿನಲ್ಲಿಯೂ ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಮತದಾರರ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಸಿಎಂ, ಚುನಾವಣಾ ಆಯೋಗವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುವ ಬದಲು, ಒಂದು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ದೆಹಲಿ ಪ್ರತಿಭಟನೆ ವೇಳೆ ಯುವಕ- ಯುವತಿಯರನ್ನು ನಡೆಸಿಕೊಂಡ ಬಗೆ ನಾಚಿಕೆಗೇಡು

ದೆಹಲಿ ಹೋರಾಟದಲ್ಲಿ ಯುವಕ-ಯುವತಿಯರನ್ನು ನಡೆಸಿಕೊಂಡ ರೀತಿ ನಾಚಿಕೆಗೇಡಿನ ಸಂಗತಿ. ಮತಗಳ್ಳತನದ ವಿರುದ್ಧ ಹೋರಾಡುವ ಶಕ್ತಿ ದೇಶದ ಯುವಜನರಿಗಿದೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸವಾಗಿದ್ದು, ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಮತ್ತು ನ್ಯಾಯ ಒದಗಿಸುವ ವ್ಯವಸ್ಥೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಸ್ಥಿತಿಯನ್ನು ತೋರಿಸುತ್ತದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಂಡಿಯಾ ಒಕ್ಕೂಟದ ನಾಯಕರು ಮತದಾರರ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತುತ್ತಿದ್ದಾರೆ. ಚುನಾವಣಾ ಆಯೋಗವು ಮತಗಳ್ಳತನಕ್ಕೆ ಬುನಾದಿ ಹಾಕಿಕೊಡುತ್ತಿದೆ ಎಂದು ಆರೋಪಿಸಿದರು.

ಮತಗಳ್ಳತನದ ಕುರಿತು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಪ್ರಕಾಶ್ ರಾಜ್, ನೂರ್ ಶ್ರೀಧರ್ ಅವರ ನೇತೃತ್ವದ ತಂಡ ನೀಡಿದ ವರದಿಯು ಹಲವು ಅಕ್ರಮಗಳನ್ನು ಬಹಿರಂಗಪಡಿಸಿದೆ. ಈ ತಂಡ ನೂರಾರು ಕ್ಷೇತ್ರಗಳಿಗೆ ಭೇಟಿ ನೀಡಿ, ಪ್ರತಿ ಮತಗಟ್ಟೆಯಲ್ಲಿನ ಅನ್ಯಾಯಗಳನ್ನು ದಾಖಲಿಸಿತ್ತು. ವರದಿಯ ಆಧಾರದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಯಿತು ಎಂದು ತಿಳಿಸಿದರು.

ಬಿಜೆಪಿ ಕಚೇರಿಯಿಂದಲೇ ಫಾರಂ-7ನ್ನು ಮುದ್ರಿಸಿ, ಮತದಾರರ ಹೆಸರು, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ದೂರವಾಣಿ ಸಂಖ್ಯೆಗಳೊಂದಿಗೆ ಕ್ಷೇತ್ರಗಳ ನಾಯಕರಿಗೆ ಕಳುಹಿಸಲಾಗಿತ್ತು. ಅರ್ಜಿಯಲ್ಲಿ ಕೇವಲ ಅರ್ಜಿ ಸಲ್ಲಿಸುವವರ ಹೆಸರನ್ನು ಭರ್ತಿ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಪ್ರತಿ ಕ್ಷೇತ್ರದಲ್ಲಿ 10ರಿಂದ 20 ಸಾವಿರ ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಅಳಿಸಲು ಸಂಚು ರೂಪಿಸಲಾಗಿತ್ತು ಎಂದು ಹೇಳಿದರು.

ಕಲಬುರ್ಗಿ, ವಿಜಯಪುರ, ಬೆಂಗಳೂರಿನ ಸೌಮ್ಯಾ ರೆಡ್ಡಿ ಅವರ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾವಿರಾರು ಮತಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿತ್ತು. ಈ ಅಕ್ರಮದ ಬಗ್ಗೆ ಮುನ್ಸೂಚನೆ ನೀಡಿದ ಕಾರ್ಯಕರ್ತರ ವರದಿಯಿಂದ ದೊಡ್ಡ ಅನಾಹುತ ತಪ್ಪಿತು ಎಂದು ತಿಳಿಸಿದರು.

ಫಾರಂ-7ರ ಅಕ್ರಮದ ವಿರುದ್ದ ಸಚಿವ ಸಂಪುಟದ ಸದಸ್ಯರ ಜೊತೆ ಚುನಾವಣಾ ಆಯೋಗದ ಕಚೇರಿಗೆ ತೆರಳಿ, ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ನಾನು ಪ್ರತಿಭಟನೆ ನಡೆಸಿದೆವು. ಕ್ರಮ ಕೈಗೊಳ್ಳುವವರೆಗೂ ವಾಪಸ್ ಹೋಗುವುದಿಲ್ಲ, ಇಲ್ಲೇ ಮಲಗುತ್ತೇವೆ ಎಂದು ಪಟ್ಟು ಹಿಡಿದ ನಂತರ ಚುನಾವಣಾ ಆಯೋಗವು ಕೊನೆಗೆ ಫಾರಂ-7ರ ಮೂಲಕ ಬರದ ಮನವಿಗಳನ್ನು ಪರಿಗಣಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿತು. ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸುವಂತೆ ಮತ್ತು ದುರುಪಯೋಗದ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು ಎಂದರು.

ಅರ್ಜಿಗಳ ದುರುಪಯೋಗದ ಬಗ್ಗೆ ಪ್ರಕರಣ ದಾಖಲಾದ ಬಳಿಕ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ರಕ್ಷಿಸಲು ಚುನಾವಣಾ ಆಯೋಗ ಮತ್ತು ಪೊಲೀಸ್ ಅಧಿಕಾರಿಗಳ ಮುಂದೆ ಹೋಗುತ್ತಿದ್ದಾರೆ. ಮತದಾರರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.

ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಪ್ರಜಾಪ್ರಭುತ್ವದ ಕೊಲೆಗೆ ಸಮಾನ. ಮತಗಳ್ಳತನಕ್ಕೂ ಕೊಲೆ ಯತ್ನದಂತಹ ಗಂಭೀರ ಅಪರಾಧಗಳಿಗೂ ವ್ಯತ್ಯಾಸವಿಲ್ಲ. ಬಿಹಾರದಲ್ಲಿ 65 ಲಕ್ಷ, ಕರ್ನಾಟಕದಲ್ಲಿ ಸುಮಾರು 1 ಕೋಟಿ, ಹರಿಯಾಣದಲ್ಲಿ 25 ಲಕ್ಷ ಮತಗಳ ಅಳಿಸಲಾಗಿದೆ. ಆದರೂ ಕೇಂದ್ರ ಸರ್ಕಾರ ಈ ವೈಫಲ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಎಸ್‌ಐಆರ್ ಪ್ರಕ್ರಿಯೆಯಿಂದಲೂ ನ್ಯಾಯ ದೊರೆಯುತ್ತಿಲ್ಲ ಎಂದು ಟೀಕಿಸಿದರು.

ಎಸ್ಐಆರ್ ಪ್ರಕ್ರಿಯೆ ವಿರುದ್ಧ ಹೋರಾಟ ಮುಂದುವರಿಯಲಿದೆ

ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ರೀತಿಯನ್ನು ನಾವು ಒಪ್ಪುವುದಿಲ್ಲ. ಈ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ ಹಾಗೂ ದೃಢವಾಗಿದೆ. ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಮತದಾರರ ಹೆಸರುಗಳನ್ನು, ಮೃತಪಟ್ಟವರನ್ನು ಹೊರತುಪಡಿಸಿ, ಮತ್ತೆ ಸೇರ್ಪಡೆ ಮಾಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಸಿಎಂ ತಿಳಿಸಿದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಎಲ್ಲರಿಗೂ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ನಾಯಕರು ದೃಢ ನಿಲುವು ತೆಗೆದುಕೊಂಡಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರನಿಗೂ ನ್ಯಾಯ ಸಿಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ನ್ಯಾಯ ಸಿಗುವವರೆಗೂ ಹೋರಾಟ

ಎಸ್ಐಆರ್ ಪ್ರಕ್ರಿಯೆಯಲ್ಲಿ ಅನ್ಯಾಯಕ್ಕೊಳಗಾದ ಮತದಾರರಿಗೆ ನ್ಯಾಯ ದೊರೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಸಿಜೆಪಿ ನಾಯಕರಾದ ಸೌರವ್ ದಾಸ್ – ಅಶುತೋಷ್ ರಾಂಕಾ ವಿಚಾರಣೆ ನಡೆಸಿದ ಕ್ರೈಂ ಬ್ರಾಂಚ್

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು, ಗುರುವಾರ (ನ.5) ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ...

ಬೆಂಗಳೂರು : ಇಂಡಿಯಾ ಒಕ್ಕೂಟದಿಂದ ಬೃಹತ್ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆ

'ಮತ ಉಳಿಸಿ, ದೇಶ ಉಳಿಸಿ' ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ ಒಕ್ಕೂಟ'...

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ನೇಮಕಾತಿ ಮಾಡುವುದರ ಜೊತೆಗೆ, ಕರ್ನಾಟಕದ ಖಾಸಗಿ ಕಂಪನಿಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಬೇಕು. ಪ್ರತಿಭಾವಂತ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ....

‘ನೀವು ನಮ್ಮೊಂದಿಗಿದ್ದೀರಾ, ಇಲ್ಲ ನಮ್ಮ ವಿರುದ್ಧ ಇದ್ದೀರಾ’: ಇರಾನ್ ತೈಲ ವ್ಯಾಪಾರಕ್ಕೆ ನೆರವು ಆರೋಪ; ಭಾರತ ಮೂಲದ ದಂಪತಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು ನೀಡುವ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವ ಹಲವು ಕಂಪನಿಗಳ ವಿರುದ್ಧ...

ಆರು ರಾಜ್ಯಗಳು – ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಎಸ್‌ಆರ್’ ಪ್ರಕ್ರಿಯೆ ಘೋಷಿಸಿದ ಚುನಾವಣಾ ಆಯೋಗ

ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision -...

ಅಂಕಿತಾ ಭಂಡಾರಿ ಕೊಲೆ ಪ್ರಕರಣ : ರಾಜ್‌ಘಾಟ್‌ನಲ್ಲಿ ಧರಣಿ ಕುಳಿತಿದ್ದ ಪೋಷಕರನ್ನು ತೆರವುಗೊಳಿಸಿದ ಪೊಲೀಸರು

ಉತ್ತರಾಖಂಡದ ರೆಸಾರ್ಟ್‌ನಲ್ಲಿ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಪೋಷಕರು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದು, ಬುಧವಾರ (ನ.4) ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಸಾರ್ವಜನಿಕ ದ್ವಾರದ ಬಳಿ ಧರಣಿ ಕುಳಿತಿದ್ದ ಅವರನ್ನು ಪೊಲೀಸರು...

40% ಕಮಿಷನ್ ಜಾಹೀರಾತು : ಸಿದ್ದರಾಮಯ್ಯ, ಡಿಕೆಶಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್

ʼಶೇಕಡ 40 ಕಮಿಷನ್ ಸರ್ಕಾರ’ ಎಂದು ಆರೋಪಿಸಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನೀಡಿದ್ದ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ (ನ.4) ರದ್ದುಪಡಿಸಿದೆ. ಕರ್ನಾಟಕ...

‘ಔಪಚಾರಿಕ ಬಂಧನವಲ್ಲ, ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ’: ಸುಪ್ರೀಂ ಮಹತ್ವದ ತೀರ್ಪು; ನಾಲ್ವರು ಆರೋಪಿಗಳ ಬಿಡುಗಡೆಗೆ ಆದೇಶ

ನವದೆಹಲಿ: ಪೊಲೀಸರು ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಸಾಂವಿಧಾನಿಕ ಗಡುವು ಆರಂಭವಾಗುತ್ತದೆ. ಔಪಚಾರಿಕವಾಗಿ ಬಂಧನ ದಾಖಲಿಸಿದ ಸಮಯದಿಂದ ಈ ಅವಧಿಯನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ...

ಹಳೆಯ ವಿದ್ಯಾರ್ಥಿಗೆ ‘ದಲಿತ ಅಸ್ಪೃಶ್ಯ ಮೂರ್ಖ’ ಎಂದು ನಿಂದನೆ; ಕ್ಷಮೆಯಾಚನೆಯೊಂದಿಗೆ ಪ್ರಕರಣ ಮುಕ್ತಾಯಕ್ಕೆ ಪ್ರಯತ್ನ

ಹೈದರಾಬಾದ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯ್ ರಾಮದಾಸ್ ಮಂಡಲಾ ಅವರು ಇಮೇಲ್ ಮೂಲಕ ತಮ್ಮನ್ನು 'ದಲಿತ ಅಸ್ಪೃಶ್ಯ ಮೂರ್ಖ' ಎಂದು ನಿಂದಿಸಿದ್ದಾರೆ ಮತ್ತು ಬಿಹಾರ ಹಾಗೂ ಜಾರ್ಖಂಡ್‌ನ ವಿದ್ಯಾರ್ಥಿಗಳನ್ನು...