‘ಮತ ಉಳಿಸಿ, ದೇಶ ಉಳಿಸಿ’ ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ ಒಕ್ಕೂಟ’ ದಿಂದ ಕರ್ನಾಟಕ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಗುರುವಾರ (ನ.5) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಿತು.
ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಶನ್, ಸಮಾಜವಾದಿ ಪಕ್ಷ, (ಎಸ್ಪಿ), ಮುಸ್ಲಿಂ ಲೀಗ್ (ಐಯುಎಂಎಲ್) ಸೇರಿದಂತೆ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಡಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.
ನಾವು ಕೇವಲ ಚುನಾವಣಾ ಆಯೋಗದ ವಿರುದ್ಧ ಮಾತ್ರ ಹೋರಾಟ ಮಾಡುತ್ತಿಲ್ಲ. ಚುನಾವಣಾ ಆಯೋಗದ ಹಿಂದೆ ಇರುವ ಬಿಜೆಪಿಯ ಹುನ್ನಾರದ ವಿರುದ್ಧವೂ ಹೋರಾಟ ಮಾಡುತ್ತಿದ್ದೇವೆ ಎಂದರು.
ಜನಸಾಮಾನ್ಯರ ಮತಗಳನ್ನು ಉಳಿಸುವ ವಿಚಾರದಲ್ಲಿ ನಮಗೆ ಬದ್ಧತೆಯಿದೆ. ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಎಲ್ಲ ಬಿಎಲ್ಒಗಳಿಗೆ ಹೇಳಲು ಬಯಸುತ್ತೇನೆ. ಮತಗಳ್ಳತನಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ, ಯಾರು ಅರ್ಜಿಗಳನ್ನು ತಂದುಕೊಟ್ಟಿದ್ದಾರೆ ಎಂಬುದಕ್ಕೆ ಸಿಸಿಟಿವಿ ದಾಖಲೆಗಳಿವೆ. ಈ ಬಗ್ಗೆ ಪ್ರಕರಣ ದಾಖಲಿಸಿ ಸಮಾಜಕ್ಕೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮತಗಳ್ಳತನ ಮಾಡಿದೆ. ಅಂತಹ ಪಕ್ಷದ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಮತ ನಮ್ಮ ಹಕ್ಕು, ನಮ್ಮ ಮತ ನಮ್ಮ ಬದುಕು. ನಮ್ಮ ಹಕ್ಕಿಗಾಗಿ ಇಂದು ನಾವೆಲ್ಲರೂ ಹೋರಾಟ ಮಾಡಲು ಇಲ್ಲಿ ಸೇರಿದ್ದೇವೆ ಎಂದು ಹೇಳಿದರು.
ಫ್ರೀಡಂ ಪಾರ್ಕ್ ದೇಶದ ರಾಜಕೀಯ ಬದಲಾವಣೆಯ ಹಾಗೂ ಐತಿಹಾಸಿಕ ಹೋರಾಟಗಳ ಸಾಕ್ಷಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಈ ಹಿಂದೆ ಇದೇ ಸ್ಥಳದಲ್ಲಿ ಮಹಾದೇವಪುರ, ಗಾಂಧಿನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಮತದಾರರ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಹೋರಾಟ ಆರಂಭಿಸಲಾಗಿತ್ತು. ಆ ಹೋರಾಟ ದೇಶಕ್ಕೆ ದೊಡ್ಡ ಸಂದೇಶ ನೀಡಿತ್ತು ಎಂದು ಸ್ಮರಿಸಿದರು.
ಬೆಂಗಳೂರಿನಲ್ಲಿ ಚಿಲುಮೆ ಸಂಸ್ಥೆಯ ಮೂಲಕ ಬಿಜೆಪಿ ಸರ್ಕಾರ ತನ್ನ ಕಾರ್ಯಕರ್ತರಿಗೆ ಬಿಎಲ್ಒ ಅಧಿಕಾರ ನೀಡಿಸಿ, ಲಕ್ಷಾಂತರ ಮತಗಳನ್ನು ತೆಗೆದುಹಾಕುವ ಮತ್ತು ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಂಚು ರೂಪಿಸಿತ್ತು. ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ರಾಜ್ಯದ ಮತದಾರರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸಿದ್ದರು. ಈ ಎಲ್ಲ ಪ್ರಯತ್ನಗಳ ನಡುವೆಯೂ ರಾಜ್ಯದ ಜನತೆ ಕಾಂಗ್ರೆಸ್ಗೆ 136 ಸ್ಥಾನಗಳನ್ನು ನೀಡಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು ಎಂದರು.
ಕರ್ನಾಟಕ ಮಾತ್ರವಲ್ಲದೆ ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ ಮತ್ತು ತಮಿಳುನಾಡಿನಲ್ಲಿಯೂ ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಮತದಾರರ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗವು ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುವ ಬದಲು ಒಂದು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಎಸ್ಐಆರ್ ಕಾನೂನು ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಈ ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು ಮತ್ತು ಸಿಇಸಿ ಗ್ಯಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆ ತರುವ ಯಾವುದೇ ಪ್ರಯತ್ನಗಳನ್ನು ಸಹಿಸಲು ಸಾಧ್ಯವಿಲ್ಲ ಎಂದರು.
ಎಸ್ಐಆರ್ ರದ್ದತಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಎಂಬ ಎರಡು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದಾದ್ಯಂತ ಹೋರಾಟ ನಡೆಯುತ್ತಿದೆ. ನವೆಂಬರ್ 1ರಂದು ದೆಹಲಿಯಲ್ಲಿ ಈ ಸಂಬಂಧ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿದ್ದು, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳು ಹೋರಾಟವನ್ನು ಮುಂದುವರಿಸಿವೆ. ಇದು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರವಲ್ಲ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಮಹತ್ವದ ಹೋರಾಟವಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ಸಿಪಿಐನ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್, ಸಿಪಿಐಎಂಎಲ್ ಪಕ್ಷದ ಕ್ಲಿಪ್ಟನ್ ಡಿ ರೊಜಾರಿಯೋ, ಫಾರ್ವಡ್ ಬ್ಲಾಕ್ನ ಶಿವಶಂಕರ್, ಬಹುಭಾಷಾ ನಟ ಪ್ರಕಾಶ್ ರಾಜ್, ಸಿಪಿಐ(ಎಂ) ಹಾಗೂ ಜನವಾದಿ ಮಹಿಳಾ ಸಂಘಟನೆಯ ನಾಯಕಿ ಕೆ.ಎಸ್ ವಿಮಲಾ, ಕಾಂಗ್ರೆಸ್ನ ಪಲ್ಲಂರಾಜು, ಮಾಜಿ ಸಚಿವ ದಿನೇಶ್ ಗುಂಡೂರಾವ್, ಸರ್ವೋದಯ ಕರ್ನಾಟಕದ ವೀರಸಂಗಯ್ಯ, ಜಾಗೃತ ಕರ್ನಾಟಕ ಸಂಘಟನೆಯ ಡಾ.ಬಿ.ಸಿ ಬಸವರಾಜು, ಮೈ ವೋಟ್ ಮೈ ರೈಟ್ ಅಭಿಯಾನ ವಿನಯ್ ಶ್ರೀನಿವಾಸ್, ಉಡುಪಿ ಮುಸ್ಲಿಂ ಒಕ್ಕೂಟದ ಯಾಸೀನ್ ಮಲ್ಪೆ, ಎಐಎಸ್ಎಫ್ನ ರಾಜ್ಯಾಧ್ಯಕ್ಷೆ ವೀಣಾ ನಾಯಕ್, ಡಿವೈಎಫ್ಐನ ರಾಜ್ಯ ಕಾರ್ಯದರ್ಶಿ ಸಂತೋಷ್ ಬಜಾಲ್, ಎಐಎಸ್ಎನ ಶರತ್ ಮಾತನಾಡಿದರು.


