ಉತ್ತರಾಖಂಡದ ರೆಸಾರ್ಟ್ನಲ್ಲಿ ಕೊಲೆಯಾದ ಯುವತಿ ಅಂಕಿತಾ ಭಂಡಾರಿ ಪೋಷಕರು ನ್ಯಾಯಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದು, ಬುಧವಾರ (ನ.4) ದೆಹಲಿಯ ರಾಜ್ಘಾಟ್ನಲ್ಲಿರುವ ಮಹಾತ್ಮಗಾಂಧಿ ಸ್ಮಾರಕದ ಸಾರ್ವಜನಿಕ ದ್ವಾರದ ಬಳಿ ಧರಣಿ ಕುಳಿತಿದ್ದ ಅವರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದ್ದಾರೆ.
ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸಿಕ್ಕಿಂ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದನ್ನು ವಿರೋಧಿಸಿ ಅಂಕಿತಾ ಪೋಷಕರು ಅ.14ರಂದು ಇಂಡಿಯಾ ಗೇಟ್ ಬಳಿ ಆಹೋರಾತ್ರಿ ಧರಣಿ ನಡೆಸಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ಆ ಬಳಿಕ ಇದು ಪೊಲೀಸ್ ಬಲಪ್ರಯೋಗದ ಎರಡನೇ ಘಟನೆಯಾಗಿದೆ.
ಅ.14ರ ಧರಣಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಸಾಥ್ ನೀಡಿದ್ದರು. ಮಹಿಳಾ ದೌರ್ಜನ್ಯದ ವಿರುದ್ದದ ಹೋರಾಟಗಾರ್ತಿ ಯೋಗಿತಾ ಭಯನಾ ಅವರು ಅಂಕಿತಾ ಪೋಷಕರ ಹೋರಾಟಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಅವರಿಗೆ ಇತರ ಹೋರಾಟಗಾರರು ಸಾಥ್ ನೀಡುತ್ತಿದ್ದಾರೆ.
ಯೋಗಿತಾ ಭಯಾನ ಅವರು ಈ ಹಿಂದೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಕೊಡಿಸುವಲ್ಲಿಯೂ ಹೋರಾಟ ನಡೆಸಿದ್ದರು. ಅತ್ಯಾಚಾರಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಶಿಕ್ಷೆ ಅಮಾನತು ಪ್ರಶ್ನಿಸಿ ಸಂತ್ರಸ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿದಾಗ ಯೋಗಿತಾ ಆಕೆಯ ಜೊತೆ ನಿಂತಿದ್ದರು.
ಅಂಕಿತಾ ಭಂಡಾರಿ ಪೋಷಕರು ಬುಧವಾರ ರಾಜ್ಘಾಟ್ಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದರು ಹಾಗೂ ಮಾಧ್ಯಮಗಳೊಂದಿಗೆ ಮಾತನಾಡಿದರು. ನಂತರ ಅವರು, ಪ್ರತಿಭಟನೆಗೆಂದು ನಿಗದಿಪಡಿಸದ ಸ್ಥಳವಾದ ಸಾರ್ವಜನಿಕ ಪ್ರವೇಶ ದ್ವಾರದ ಬಳಿ, ಇತರ ಇಬ್ಬರೊಂದಿಗೆ ಸೇರಿ ಧರಣಿ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸ್ಮಾರಕದ ದ್ವಾರದಲ್ಲಿ ಧರಣಿ ನಡೆಸುವಂತೆ ಪದೇ ಪದೇ ಮನವಿ ಮಾಡಿದರೂ ಅವರು ಕದಲಿಲ್ಲ. ಕೊನೆಗೆ ಅವರನ್ನು ಅಲ್ಲಿಂದ ತೆರವುಗೊಳಿಸಲಾಯಿತು. ವಶಕ್ಕೆ ಪಡೆದಿಲ್ಲ ಎಂದು ಪೊಲೀಸರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಪೊಲೀಸರು ಬಲವಂತವಾಗಿ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ ಅಂಕಿತಾ ತಾಯಿ ಸೋನಿ ದೇವಿ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಅವರನ್ನು ವೈದ್ಯಕೀಯ-ಕಾನೂನು ಪರೀಕ್ಷೆಗಾಗಿ (ಎಂಎಲ್ಸಿ) ಬುರಾರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಮತ್ತು ಅವರ ಪತಿ ಇಬ್ಬರೂ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ನಿರಾಕರಿಸಿದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಬುರಾರಿಯ ಎಎಪಿ ಶಾಸಕ ಸಂಜೀವ್ ಝಾ ಮತ್ತು ಅವರ ಬೆಂಬಲಿಗರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಂಕಿತಾ ಪೋಷಕರು ಶಾಸಕರೊಂದಿಗೆ ಆಸ್ಪತ್ರೆಯಿಂದ ತೆರಳಿದ್ದಾರೆ.
ಋಷಿಕೇಶದ ‘ವನಂತರ ರೆಸಾರ್ಟ್’ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ ಅಂಕಿತಾ ಭಂಡಾರಿಯನ್ನು ಸೆ. 18, 2022ರಂದು ಕೊಲೆ ಮಾಡಲಾಗಿತ್ತು. ನಾಲ್ಕು ದಿನಗಳ ನಂತರ, ಚಿಲ್ಲಾ ಕಾಲುವೆಯಿಂದ ಅವರ ಮೃತದೇಹವನ್ನು ಹೊರತೆಗೆಯಲಾಗಿತ್ತು.
ಈ ಪ್ರಕರಣದಲ್ಲಿ, ಬಿಜೆಪಿ ಮಾಜಿ ನಾಯಕ ವಿನೋದ್ ಆರ್ಯ ಅವರ ಪುತ್ರ ಹಾಗೂ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ರೆಸಾರ್ಟ್ಗೆ ಬಂದಿದ್ದ ವಿಐಪಿಯೊಬ್ಬರಿಗೆ ಹೆಚ್ಚುವರಿ ಸರ್ವಿಸ್ (ಲೈಂಗಿಕವಾಗಿ ಸಹಕರಿಸುವಂತೆ) ಕೊಡುವಂತೆ ಅಪರಾಧಿಗಳು ಅಂಕಿತಾಗೆ ಒತ್ತಾಯಿಸಿದ್ದರು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚುವರಿ ಸರ್ವಿಸ್ ಕೇಳಿದ ವಿಐಪಿ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಎಂದು ಆರೋಪಿಸಲಾಗಿದೆ. ಗೌತಮ್ ಅವರನ್ನು ಬಿಜೆಪಿ ಸರ್ಕಾರ ಉತ್ತಾರಖಂಡದ ರಾಜ್ಯಪಾಲರಾಗಿ ಇತ್ತೀಚೆಗೆ ನೇಮಿಸಿದೆ.
ಅಂಕಿತಾ ಪ್ರಕರಣದಲ್ಲಿ ಕೊಲೆ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಆದರೆ, ಸರ್ವಿಸ್ ಕೇಳಿದ ವ್ಯಕ್ತಿಗೆ ಶಿಕ್ಷೆಯಾಗಿಲ್ಲ ಮತ್ತು ಆ ಆಯಾಮದಲ್ಲಿ ತನಿಖೆ ನಡೆದಿಲ್ಲ. ಹಾಗಾಗಿ, ನಮಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ ಎಂದು ಪೋಷಕರು ಹೇಳಿಕೊಂಡಿದ್ದಾರೆ.


