ಕರ್ನಾಟಕದ 226 ತಾಲೂಕುಗಳಲ್ಲಿ ಬರದ ಭೀಕರತೆಯಿಂದ ತತ್ತರಿಸಿರುವ ಲಕ್ಷಾಂತರ ರೈತರನ್ನು ರಕ್ಷಿಸಲು ತಕ್ಷಣವೇ ಬೃಹತ್ ಮಟ್ಟದ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಸುದೀರ್ಘ ಪತ್ರ ಬರೆದಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಪರಿಷ್ಕರಿಸಿರುವ ವಿಪತ್ತು ನಿರ್ವಹಣಾ ಮಾನದಂಡಗಳ ಅನ್ವಯ ರಾಜ್ಯದ ಬರ ಪರಿಹಾರದ ಒಟ್ಟು ಅಗತ್ಯತೆಯು ಈಗ ಬರೋಬ್ಬರಿ ₹22,400.58 ಕೋಟಿಗೆ ಏರಿಕೆಯಾಗಿದೆ ಎಂದು ಅವರು ಈ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು 2026-27 ರಿಂದ 2030-31 ರ ಅವಧಿಗೆ ರಾಜ್ಯ ವಿಪತ್ತು ಶಮನ ನಿಧಿ (SDRF) ಮತ್ತು ರಾಷ್ಟ್ರೀಯ ವಿಪತ್ತು ಶಮನ ನಿಧಿ (NDRF) ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಈ ಹೊಸ ಪರಿಷ್ಕರಣೆಯ ನಂತರ, ರಾಜ್ಯದ ಬೆಳೆ ನಷ್ಟದ ಇನ್ಪುಟ್ ಸಬ್ಸಿಡಿ ಅಗತ್ಯವೊಂದೇ ₹6,128.70 ಕೋಟಿಯಿಂದ ₹7,943.55 ಕೋಟಿಗೆ ಹೆಚ್ಚಳವಾಗಿದೆ. ಅಂದರೆ ಬರೋಬ್ಬರಿ ₹1,814.85 ಕೋಟಿಯಷ್ಟು ಹೆಚ್ಚುವರಿ ಅನುದಾನ ಬೇಕಾಗಿದ್ದು, ಒಟ್ಟು ಬರ ಪರಿಹಾರದ ಬೇಡಿಕೆಯನ್ನು ₹22,400.58 ಕೋಟಿಗೆ ಪರಿಷ್ಕರಿಸಲಾಗಿದೆ.
ಕೇಂದ್ರ ಸರ್ಕಾರವು SDRF ಮತ್ತು NDRF ನಿಧಿಗಳ ಪರಿಹಾರದ ದರಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿರುವುದನ್ನು ಉಪಮುಖ್ಯಮಂತ್ರಿಗಳು ಸ್ವಾಗತಿಸಿದ್ದರೂ, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಅಭೂತಪೂರ್ವ ವೆಚ್ಚದ ಏರಿಕೆಗೆ ಹೋಲಿಸಿದರೆ ಈ ನೆರವು ‘ಕಣ್ಣೊರೆಸುವ ತಂತ್ರ’ದಂತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೀಡಾಗಿದ್ದು, ರೈತರು ₹62,481.88 ಕೋಟಿಯಷ್ಟು ಭಾರಿ ಬಂಡವಾಳ ಹಾಗೂ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಪರಿಷ್ಕೃತ ನಿಯಮಗಳ ಪ್ರಕಾರ, ಮಳೆ ಆಶ್ರಿತ ಬೆಳೆಗಳಿಗೆ ಹೆಕ್ಟೇರ್ಗೆ ₹11,000, ನೀರಾವರಿ ಬೆಳೆಗಳಿಗೆ ₹22,000 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ₹30,000 ಮಾತ್ರ ಸಿಗಲಿದೆ. ಬಿತ್ತನೆ ಬೀಜ, ಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಮತ್ತು ನೀರಾವರಿ ವೆಚ್ಚ ಏರಿರುವ ಈ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಈ ಅಲ್ಪ ನೆರವು ರೈತನ ನೈಜ ನಷ್ಟದ ಮುಂದೆ ಅತ್ಯಂತ ಸಣ್ಣ ಮಟ್ಟದ್ದಾಗಿದೆ ಎಂದು ಡಿಸಿಎಂ ಆಕ್ಷೇಪಿಸಿದ್ದಾರೆ.
ಹಳೆಯ ಗಣತಿ ಬಿಟ್ಟು ‘FRUITS’ ತಂತ್ರಜ್ಞಾನ ಬಳಸಿ!
ಇದಲ್ಲದೆ, ಬರ ಪರಿಹಾರ ವಿತರಣೆಯಲ್ಲಿ ಎದುರಾಗುತ್ತಿರುವ ಮತ್ತೊಂದು ದೊಡ್ಡ ಸಾಂಸ್ಥಿಕ ದೋಷವನ್ನು ಡಾ. ಜಿ. ಪರಮೇಶ್ವರ ಅವರು ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ. ಇಂದಿಗೂ ಕೇಂದ್ರ ಸರ್ಕಾರವು ದಶಕದಷ್ಟು ಹಳೆಯದಾದ 2015-16 ರ ಕೃಷಿ ಗಣತಿಯನ್ನು ಆಧರಿಸಿ ಫಲಾನುಭವಿಗಳನ್ನು ನಿಗದಿಪಡಿಸುತ್ತಿರುವುದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೀವ್ರ ಅನ್ಯಾಯ ಉಂಟುಮಾಡುತ್ತಿದೆ. ಕರ್ನಾಟಕ ಸರ್ಕಾರವು ತಂತ್ರಜ್ಞಾನ ಆಧಾರಿತ ಅತ್ಯಂತ ನವೀಕೃತ ಮತ್ತು ಪರಿಶೀಲಿಸಲ್ಪಟ್ಟ ‘ಫ್ರೂಟ್ಸ್’ (FRUITS) ಡೇಟಾಬೇಸ್ ಅನ್ನು ಹೊಂದಿದ್ದು, ನೈಜ ರೈತರನ್ನು ಗುರುತಿಸಲು ಇದು ಸೂಕ್ತ ಆಧಾರವಾಗಿದೆ. ದಶಕದಷ್ಟು ಹಳೆಯ ದತ್ತಾಂಶವನ್ನು ಆಧರಿಸಿ ಪರಿಹಾರ ನಿರ್ಧರಿಸುವ ಬದಲು, ರೈತರ ಇಂದಿನ ಜೀವನೋಪಾಯದ ವಾಸ್ತವಿಕತೆಗೆ ಅನುಗುಣವಾಗಿ ಕರ್ನಾಟಕದ ‘ಫ್ರೂಟ್ಸ್’ ಡೇಟಾಬೇಸ್ ಅನ್ನು ಅಳವಡಿಸಿಕೊಂಡು ತಕ್ಷಣವೇ ಅಗತ್ಯ ಅನುದಾನವನ್ನು ಅನುಮೋದಿಸಿ ಬಿಡುಗಡೆ ಮಾಡಬೇಕು ಎಂದು ಅವರು ಪ್ರಧಾನ ಮಂತ್ರಿಯವರನ್ನು ಪತ್ರದ ಮೂಲಕ ಕೋರಿದ್ದಾರೆ.


