ಪಂಜಾಬ್ ವಿಧಾನಸಭಾ ಚುನಾವಣೆಗೆ (2027) ಮುನ್ನ ಆಮ್ ಆದ್ಮಿ ಪಾರ್ಟಿ (ಎಎಪಿ) ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ಸೋಮವಾರ (ನ.2) ಮೂವರು ಶಾಸಕರಾದ ಹರ್ಮೀತ್ ಸಿಂಗ್ ಪಠಾನ್ಮಜ್ರಾ, ಚೇತನ್ ಸಿಂಗ್ ಜೌರಾಮಜ್ರಾ ಮತ್ತು ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ವಿಧಾನಸಭಾ ಚುನಾವಣೆಗೆ 40 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಎಪಿ ಪ್ರಕಟಿಸಿದ ಬೆನ್ನಲ್ಲೇ, ಪಠಾನ್ಮಜ್ರಾ ಮತ್ತು ಜೌರಾಮಜ್ರಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯು ಪಕ್ಷದೊಳಗೆ ಅಸಮಾಧಾನ ಹೆಚ್ಚುತ್ತಿರುವ ನಡುವೆಯೇ ನಡೆದಿದೆ.
ಇದಕ್ಕೂ ಮುನ್ನ, ಎಎಪಿಯಿಂದ ಅಮಾನತುಗೊಂಡಿದ್ದ ಶಾಸಕ ಮತ್ತು ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ಪಂಜಾಬ್ ವಿಧಾನಸಭೆಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದರು. ಅಮೃತಸರ ಉತ್ತರ ಕ್ಷೇತ್ರದ ಶಾಸಕರಾಗಿರುವ ಸಿಂಗ್ ಅವರು, ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ಕಳುಹಿಸಿರುವುದಾಗಿ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಸನೌರ್ ಶಾಸಕ ಪಠಾನ್ಮಜ್ರಾ, ಸಮಾನಾ ಶಾಸಕ ಜೌರಾಮಜ್ರಾ ಮತ್ತು ಅಮೃತಸರ ಉತ್ತರದ ಸಿಂಗ್ ಅವರು, ಪಂಜಾಬ್ ಬಿಜೆಪಿ ಉಸ್ತುವಾರಿ ಸತೀಶ್ ಪೂನಿಯಾ, ಸಹ-ಉಸ್ತುವಾರಿ ವೀರೇಂದ್ರ ಸಚ್ದೇವ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಕೇವಲ್ ಸಿಂಗ್ ಧಿಲ್ಲೋನ್ ಅವರ ಸಮ್ಮುಖದಲ್ಲಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಮಾತನಾಡಿದ ಕುನ್ವರ್ ವಿಜಯ್ ಪ್ರತಾಪ್ ಸಿಂಗ್, ಎಎಪಿಯ ಕಳೆದ ಐದು ವರ್ಷಗಳನ್ನು ಒಂದು “ಇಂಟರ್ನ್ಶಿಪ್ ಅವಧಿ” ಎಂದು ಬಣ್ಣಿಸಿದ್ದಾರೆ. “ಇಂದು ಎಎಪಿಯಲ್ಲಿನ ನನ್ನ ಐದು ವರ್ಷಗಳ ಇಂಟರ್ನ್ಶಿಪ್ ಕೊನೆಗೊಂಡಿದೆ ಮತ್ತು ನಾನು ಅಧಿಕೃತವಾಗಿ ಬಿಜೆಪಿಯನ್ನು ಸೇರುತ್ತಿದ್ದೇನೆ. ನಮ್ಮ ಅನುಭವವನ್ನು ಬಳಸಿಕೊಂಡು, ಪಂಜಾಬ್ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ” ಎಂದು ಹೇಳಿದ್ದಾರೆ.
ಪಂಜಾಬ್ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ ಎಂದಿರುವ ಸಿಂಗ್, “ಪಂಜಾಬ್ ಸಿಂಧ್ ಗುಜರಾತ್ ಮರಾಠ” ಎಂಬ ಸಾಲುಗಳನ್ನು ಉಲ್ಲೇಖಿಸಿ, “ಪಂಜಾಬ್ಗೆ ಆದ್ಯತೆ ನೀಡಲಾಗಿತ್ತಾದರೂ, ಇಂದು ಅದು ಶೋಚನೀಯ ಸ್ಥಿತಿಯಲ್ಲಿದೆ” ಎಂದು ಹೇಳಿಕೆ ನೀಡಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರ ದೂರದೃಷ್ಟಿಯೊಂದಿಗೆ ಪಂಜಾಬ್ನಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ಮರುಸ್ಥಾಪಿಸಬಹುದು. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸಿವೆ ಎಂಬುದನ್ನು ನಾವು ನೋಡಿದ್ದೇವೆ. ನಮಗೆ ವಹಿಸಲಾಗುವ ಯಾವುದೇ ಜವಾಬ್ದಾರಿಯನ್ನು ನಾವು ಶ್ರದ್ಧೆಯಿಂದ ನಿರ್ವಹಿಸುತ್ತೇವೆ” ಎಂದು ಸಿಂಗ್ ತಿಳಿಸಿದ್ದಾರೆ.
ಪಂಜಾಬ್ “ದೇವರ ನಾಡು” ಎಂದು ಹೇಳಿದ ಜೌರಾಮಜ್ರಾ, ಕಳೆದ ಐದು ವರ್ಷಗಳಲ್ಲಿ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ ಎಂದಿದ್ದಾರೆ. ರಾಜ್ಯದಲ್ಲಿ ಗಣಿಗಾರಿಕೆ ಮಾಫಿಯಾ ಹಾಗೂ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಹಗರಣಗಳು ನಡೆಯುತ್ತಿವೆ ಎಂದು ಆರೋಪಿಸಿದ ಅವರು, ರಾಜ್ಯವನ್ನು ಸುಸ್ಥಿರಗೊಳಿಸಲು ಇಲ್ಲಿ “ಡಬಲ್ ಇಂಜಿನ್” ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ದಾರೆ.
ಪಠಾನ್ಮಜ್ರಾ ಅವರು ಎಎಪಿ ಸರ್ಕಾರದ ಕೆಲಸಗಳನ್ನು ಟೀಕಿಸುತ್ತಾ, ಪಂಜಾಬ್ ಈಗ “ಉಡ್ತಾ ಪಂಜಾಬ್” (ಮಾದಕವಸ್ತುಗಳ ಪಿಡುಗಿಗೆ ತುತ್ತಾದ ಪಂಜಾಬ್) ಎಂದು ಕರೆಯಲ್ಪಡುತ್ತಿದೆ. ಆರಂಭದಲ್ಲಿ ಎಎಪಿ ಆಕರ್ಷಕ ದೃಷ್ಟಿಕೋನವನ್ನು ಮುಂದಿಟ್ಟಿತ್ತಾದರೂ, ಧ್ವನಿ ಎತ್ತಿದವರನ್ನು ಕಡೆಗಣಿಸಲಾಯಿತು. ಪಂಜಾಬ್ “ಉಭರ್ತಾ ಪಂಜಾಬ್” (ಅಭಿವೃದ್ಧಿ ಹೊಂದುತ್ತಿರುವ ಪಂಜಾಬ್) ಆಗಿ ಬದಲಾಗಬೇಕು ಎಂದಿದ್ದು, ಸರ್ಕಾರವು ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಾಲ ಪಡೆದು, ರಾಜ್ಯವನ್ನು “ನಾಶಪಡಿಸಿದೆ” ಎಂದು ದೂರಿದ್ದಾರೆ.
ಪೂನಿಯಾ ಅವರು ಎಎಪಿ ಮೂವರು ಬಂಡಾಯ ನಾಯಕರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಅವರ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯು ಪಕ್ಷವನ್ನು ಹಾಗೂ ಪಂಜಾಬ್ನಲ್ಲಿ ಪಕ್ಷದ ಗೆಲುವಿನ ಅಭಿಯಾನವನ್ನು ಬಲಪಡಿಸಲಿದೆ ಎಂದಿದ್ದಾರೆ. ಪಂಜಾಬ್ನಲ್ಲಿ ಬಿಜೆಪಿ ಪರವಾದ ಒಲವು ಹಾಗೂ ಆಡಳಿತಾರೂಢ ಎಎಪಿ ವಿರುದ್ಧ ಅಸಮಾಧಾನದ ಅಲೆ ಇದೆ. ಮಾದಕವಸ್ತುಗಳ ಹಾವಳಿ ಪಂಜಾಬ್ನಲ್ಲಿರುವ ಅತಿದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ.


