ಯುಪಿ, ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರಗಳೇ ಬದಿಗೊತ್ತಿದ ‘SIR’ ಪಟ್ಟಿಯನ್ನು ಕರ್ನಾಟಕ ಸರ್ಕಾರವೂ ಕೈಬಿಡಬೇಕು!
ಕೇಂದ್ರ ಚುನಾವಣಾ ಆಯೋಗವು ‘ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯ ಅಂತಿಮ ಪಟ್ಟಿ ಪ್ರಕಟಿಸಿದ ನಂತರವೂ ಲಕ್ಷಾಂತರ ಅರ್ಹ ಮತದಾರರನ್ನು ಅಕ್ರಮವಾಗಿ ಪಟ್ಟಿಯಿಂದ ಹೊರಗಿಟ್ಟಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿರುವ ಜನಪರ ಸಂಘಟನೆಗಳು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಅಸಂವಿಧಾನಿಕ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಮುಂಬರುವ ಜನವರಿ ತಿಂಗಳಿನಲ್ಲಿ ಬಹುದಿನಗಳಿಂದ ಬಾಕಿಯಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ರಾಜ್ಯ ಸರ್ಕಾರ ಸಜ್ಜಾಗುತ್ತಿದೆ. ಆದರೆ, ಈ ಚುನಾವಣೆಗಳಿಗೆ ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಈ ಅಂತಿಮ ಎಸ್‌ಐಆರ್ ಪಟ್ಟಿಯನ್ನೇ ಅನ್ವಯಿಸಿಕೊಳ್ಳಬೇಕೇ ಅಥವಾ ಬದಿಗೊತ್ತಬೇಕೇ ಎಂಬ ಸಂವಿಧಾನಿಕ ಚರ್ಚೆ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ನಡುವೆ, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ನಿದರ್ಶನಗಳನ್ನು ಹೋರಾಟಗಾರರು ಮುನ್ನೆಲೆಗೆ ತಂದಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿದ್ದ ಈ ಎಸ್‌ಐಆರ್ ಪಟ್ಟಿಯನ್ನು ಸ್ವತಃ ಬಿಜೆಪಿ ಆಡಳಿತದ ರಾಜ್ಯಗಳೇ ಒಪ್ಪಲು ತಯಾರಿರಲಿಲ್ಲ ಮತ್ತು ತಮ್ಮ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆ ಪಟ್ಟಿಯನ್ನು ಬಳಸಲು ನಿರಾಕರಿಸಿದ್ದವು. ಭಾರತೀಯ ಸಂವಿಧಾನದ ವಿಧಿ 243K ಅಡಿಯಲ್ಲಿ ರಾಜ್ಯ ಚುನಾವಣಾ ಆಯೋಗಗಳಿಗೆ ಇರುವ ಸಾಂವಿಧಾನಿಕ ಸ್ವತಂತ್ರ ಅಧಿಕಾರವನ್ನು ಬಳಸಿ, ಆ ರಾಜ್ಯಗಳು ಸ್ಥಳೀಯ ಚುನಾವಣೆಗೆ ಹಳೆಯ ಅಥವಾ ಸ್ವತಂತ್ರ ಪಟ್ಟಿಯನ್ನು ಕಾಯ್ದುಕೊಂಡು ತಮ್ಮ ಮತದಾರರ ಹಕ್ಕನ್ನು ರಕ್ಷಿಸಿದ್ದವು. ಹೀಗಿದ್ದಾಗ, ಸ್ವತಃ ಬಿಜೆಪಿ ಆಡಳಿತದ ರಾಜ್ಯಗಳೇ ಅಸಂವಿಧಾನಿಕವೆಂದು ಬದಿಗೊತ್ತಿರುವ ಈ SIR ಆಧಾರಿತ ಪಟ್ಟಿಯನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಕೂಡ ಯಾವುದೇ ಕಾರಣಕ್ಕೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಳಸಬಾರದು ಎಂದು ಒಕ್ಕೂಟದ ನಾಯಕರು ಬಲವಾಗಿ ಪ್ರತಿಪಾದಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ಮತಕಾವಲು ಸಮಿತಿಯ ಪ್ರಮುಖ ನಾಯಕರು, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರ ವರದಿಗಳನ್ನು ಸಂಪೂರ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಒಟ್ಟು ಮತದಾರರ ಸಂಖ್ಯೆ 5.54 ಕೋಟಿಯಿಂದ 4.55 ಕೋಟಿಗೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ವಿವಿಧ ನೆಪಗಳನ್ನು ನೀಡಿ ಬರೋಬ್ಬರಿ 99.32 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದ್ದು, ನಗರ ಪ್ರದೇಶವಾದ ಬೆಂಗಳೂರಿನಲ್ಲೇ ಶೇಕಡಾ 43.2 ರಷ್ಟು ಅಂದರೆ ಸರಿಸುಮಾರು 1 ಕೋಟಿಯಷ್ಟಿದ್ದ ಮತದಾರರ ಪೈಕಿ 59 ಲಕ್ಷಕ್ಕೆ ಕುಸಿದಿರುವುದು ಇಡೀ ಪ್ರಕ್ರಿಯೆಯ ಮೇಲೆಯೇ ಮಹಾ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಡ್ಯೂಪ್ಲಿಕೇಟ್ ಮತ್ತು ಅನರ್ಹ ಮತದಾರರನ್ನು ಹೊರತುಪಡಿಸಿ ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಕರ್ನಾಟಕದಲ್ಲಿ ಕನಿಷ್ಠ 75 ಲಕ್ಷ ಅರ್ಹ ಮತದಾರರ ಹೆಸರುಗಳು ನಿಯಮಬಾಹಿರವಾಗಿ ಮತ್ತು ತಪ್ಪು ಗ್ರಹಿಕೆಯಿಂದ ಡಿಲೀಟ್ ಆಗಿರಬಹುದು ಎಂಬುದು ಹೋರಾಟಗಾರರ ಅಂದಾಜಾಗಿದೆ. ಮನೆ ಬದಲಾಯಿಸಿದವರಿಗೆ ಫಾರಂ 8 ನೀಡಿ ಮತ ವರ್ಗಾಯಿಸುವ ಬದಲು ಸಾರಾಸಾಗಟಾಗಿ ಹೆಸರುಗಳನ್ನು ಡಿಲೀಟ್ ಮಾಡಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿರುವ ನಾಯಕರು, ಕೇವಲ ಬೆರಳೆಣಿಕೆಯ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವ ನೆಪದಲ್ಲಿ ಕೋಟ್ಯಾಂತರ ಭಾರತೀಯ ಪ್ರಜೆಗಳ ಮತದಾನದ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ದೂರಿದ್ದಾರೆ.
ಹೀಗಾಗಿ, ಜಿಪಂ-ತಾಪಂ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿರುವ ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗವು ಈ ಆಕ್ಷೇಪಣೆಗಳನ್ನು ಪರಿಗಣಿಸಿ, ಸಂವಿಧಾನದ ವಿಧಿ 243K ಅಡಿಯಲ್ಲಿ ಯುಪಿ-ರಾಜಸ್ಥಾನ ಮಾದರಿಯನ್ನು ಅನುಸರಿಸುತ್ತದೆಯೇ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ SIR ಪಟ್ಟಿಯನ್ನು ಬದಿಗೊತ್ತಿ ಹಳೆಯ ಅಥವಾ ಪರಿಷ್ಕೃತ ಪಟ್ಟಿಯನ್ನೇ ಬಳಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


