Homeಮುಖಪುಟ“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್‌ಯುನಲ್ಲಿ 500ಕ್ಕೂ...

“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್‌ಯುನಲ್ಲಿ 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಮುಷ್ಕರ

- Advertisement -
- Advertisement -

ನವದೆಹಲಿ: ಕಾನೂನುಬಾಹಿರ ವೇತನ ಕಡಿತ, ಶಾಸನಬದ್ಧ ಬೋನಸ್ ಪಾವತಿಸದಿರುವುದು, ಕಾರ್ಮಿಕರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸುವುದು ಮತ್ತು ಸಿಬ್ಬಂದಿ ಕೊರತೆಯಿಂದ ಹೆಚ್ಚುತ್ತಿರುವ ಕೆಲಸದ ಹೊರೆ ಸೇರಿದಂತೆ ಹಲವು ಕಾರ್ಮಿಕ ಹಕ್ಕುಗಳ ಉಲ್ಲಂಘನೆಗಳನ್ನು ಖಂಡಿಸಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಮೂರನೇ ದಿನವೂ ಮುಷ್ಕರ ಮುಂದುವರಿಸಿದ್ದಾರೆ. ವಿಶ್ವವಿದ್ಯಾಲಯದ ನೈರ್ಮಲ್ಯ, ಮೆಸ್, ಭದ್ರತೆ, ತೋಟಗಾರಿಕೆ ಮತ್ತು ನಿರ್ವಹಣಾ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರು, ತಿಂಗಳುಗಳಿಂದ ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಆಡಳಿತದ ಬಾಗಿಲು ತಟ್ಟಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಕಾರ್ಮಿಕರ ಹೋರಾಟಕ್ಕೆ ವಿದ್ಯಾರ್ಥಿಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿರುವ ಅವರು, ತಮ್ಮ ಶ್ರಮದ ಮೇಲೆ ನಿಂತಿರುವ ವಿಶ್ವವಿದ್ಯಾಲಯವೇ ತಮ್ಮ ಹಕ್ಕುಗಳನ್ನು ನಿರಾಕರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಕ್ತೂಬ್ ಮೀಡಿಯಾ ವರದಿ ಮಾಡಿದೆ.

ಕಾರ್ಮಿಕರ ಪ್ರಕಾರ, ಹಲವು ತಿಂಗಳುಗಳಿಂದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರ ಗಮನಕ್ಕೆ ತಮ್ಮ ಸಮಸ್ಯೆಗಳನ್ನು ತಂದಿದ್ದರೂ ಅವುಗಳನ್ನು ಪರಿಹರಿಸುವ ಪ್ರಯತ್ನ ನಡೆದಿಲ್ಲ. ಈ ಹಿನ್ನೆಲೆಯಲ್ಲಿ 2026ರ ಸೆಪ್ಟೆಂಬರ್ 10ರಂದು 500ಕ್ಕೂ ಹೆಚ್ಚು ಕಾರ್ಮಿಕರು ಸಹಾಯಕ ಕಾರ್ಮಿಕ ಆಯುಕ್ತರಿಗೆ ತಮ್ಮ ಬೇಡಿಕೆಗಳ ವಿವರವಾದ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ಸೆಪ್ಟೆಂಬರ್ 24 ಮತ್ತು 25ರಂದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಇದರ ಬೆನ್ನಲ್ಲೇ ಕಾರ್ಮಿಕ ಸಂಘಟನೆ, ಆಲ್ ಇಂಡಿಯಾ ಜನರಲ್ ಕಮರ್ಷಿಯಲ್ ಯೂನಿಯನ್ (AIGKU), ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (AICCTU) ಮತ್ತು ಜೆಎನ್‌ಯು ಆಡಳಿತ ಮಂಡಳಿಯನ್ನು ಒಳಗೊಂಡಂತೆ ಕಾರ್ಮಿಕ ಆಯುಕ್ತರ ಕಚೇರಿ ಔಪಚಾರಿಕ ವಿಚಾರಣೆ ನಡೆಸಿತ್ತು.

ಆ ಸಂದರ್ಭದಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು. ಆಡಳಿತ ಮಂಡಳಿ ಅನುಸರಣಾ ಸುತ್ತೋಲೆ ಹೊರಡಿಸುವುದಾಗಿಯೂ ತಿಳಿಸಿತ್ತು. ಈ ಭರವಸೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಕಾರ್ಮಿಕರು ಮುಂದೂಡಿದ್ದರು. ಆದರೆ, ಸುಮಾರು ಎರಡು ತಿಂಗಳು ಕಳೆದರೂ ರಾಜಿ ಸಂಧಾನದ ವೇಳೆ ನೀಡಲಾಗಿದ್ದ ಪ್ರಮುಖ ನಿರ್ದೇಶನಗಳನ್ನು ಜಾರಿಗೆ ತಂದಿಲ್ಲ ಎಂಬುದು ಕಾರ್ಮಿಕರ ಆರೋಪ. ಭರವಸೆಗಳು ಕೇವಲ ಕಾಗದದಲ್ಲೇ ಉಳಿದಿದ್ದು, ಕೆಲಸದ ಸ್ಥಳದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ದೂರಿರುವ ಅವರು, ಸೋಮವಾರ ಸಬರಮತಿ ಟಿ-ಪಾಯಿಂಟ್‌ನಲ್ಲಿ ಮುಷ್ಕರ ಆರಂಭಿಸಿದ್ದಾರೆ.

ಕಾರ್ಮಿಕರ ಪ್ರಮುಖ ಬೇಡಿಕೆಗಳಲ್ಲಿ ಕಾನೂನುಬಾಹಿರ ವೇತನ ಕಡಿತವನ್ನು ತಕ್ಷಣ ನಿಲ್ಲಿಸುವುದು, ಬಾಕಿ ಇರುವ ಶಾಸನಬದ್ಧ ಬೋನಸ್‌ಗಳನ್ನು ಪಾವತಿಸುವುದು, ಕೆಲಸದಿಂದ ತೆಗೆದುಹಾಕಿರುವ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದು ಮತ್ತು ಯಾವುದೇ ಸೂಕ್ತ ವಿಚಾರಣೆ ನಡೆಸದೆ ಕಾರ್ಮಿಕರನ್ನು ಅಮಾನತುಗೊಳಿಸುವ ಕ್ರಮಕ್ಕೆ ಅಂತ್ಯ ಹಾಡುವುದು ಸೇರಿವೆ. ಇದರ ಜೊತೆಗೆ ಸಿಬ್ಬಂದಿ ಕೊರತೆಯಿಂದ ಉಂಟಾಗುತ್ತಿರುವ ವಿಪರೀತ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಹೆಚ್ಚುವರಿ ಕಾರ್ಮಿಕರನ್ನು ನೇಮಿಸಬೇಕು, ಶಾಸನಬದ್ಧ ವೇತನ ಮತ್ತು ಸಾಂದರ್ಭಿಕ ರಜೆಗಳನ್ನು ನೀಡಬೇಕು, ರಜಾದಿನಗಳಲ್ಲಿ ಕೆಲಸ ಮಾಡಿಸಿದರೆ ಅದಕ್ಕೆ ಸೂಕ್ತ ಸಂಭಾವನೆ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕುಂದುಕೊರತೆ ಪರಿಹಾರ ಸಮಿತಿ ರಚಿಸಬೇಕು ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ತತ್ವವನ್ನು ಜಾರಿಗೊಳಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಈ ಹೋರಾಟದ ನಡುವೆ ಜೆಎನ್‌ಯು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕಾರ್ಮಿಕರು ಬರೆದಿರುವ ಭಾವನಾತ್ಮಕ ಪತ್ರ ಗಮನ ಸೆಳೆದಿದೆ. ವಿದ್ಯಾರ್ಥಿಗಳನ್ನು ‘ಭೈಯಾ’ ಮತ್ತು ‘ದೀದಿ’ ಎಂದು ಸಂಬೋಧಿಸಿರುವ ಕಾರ್ಮಿಕರು, ವಿಶ್ವವಿದ್ಯಾಲಯದ ಆಡಳಿತ ಮತ್ತು ಗುತ್ತಿಗೆದಾರರು ತಮ್ಮನ್ನು ಜೆಎನ್‌ಯು ಕುಟುಂಬದ ಭಾಗವೆಂದು ಪರಿಗಣಿಸದಿದ್ದರೂ ವಿದ್ಯಾರ್ಥಿಗಳು ತಮ್ಮನ್ನು ಆ ಸಮುದಾಯದ ಭಾಗವೆಂದು ಸ್ವೀಕರಿಸುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸಿದ್ದಾರೆ.

“ನಾವು ಜೆಎನ್‌ಯುವಿನ ಗುತ್ತಿಗೆ ಕಾರ್ಮಿಕರು. ಗುತ್ತಿಗೆದಾರರು ಮತ್ತು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನಮ್ಮನ್ನು ಜೆಎನ್‌ಯು ಕುಟುಂಬದ ಭಾಗವೆಂದು ಪರಿಗಣಿಸದಿರಬಹುದು. ಆದರೆ, ನೀವು ನಮ್ಮನ್ನು ನಿಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತೀರಿ ಎಂಬ ನಂಬಿಕೆ ನಮಗಿದೆ. ನಾವು ಪ್ರತಿದಿನ ನಿಮ್ಮನ್ನು ಭೇಟಿಯಾಗುತ್ತೇವೆ. ವಿಶ್ವವಿದ್ಯಾಲಯದಲ್ಲಿ ನಿಮ್ಮ ಬದುಕು ಸುಗಮವಾಗಿ ಸಾಗಲು ಅಗತ್ಯವಿರುವ ಮೂಲಭೂತ ಸೇವೆಗಳನ್ನು ಒದಗಿಸುವವರು ನಾವೇ. ನಿಮ್ಮ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರು, ನಿಮಗಾಗಿ ಆಹಾರ ತಯಾರಿಸುವವರು ಮತ್ತು ನಿಮ್ಮ ಭದ್ರತೆಯ ಜವಾಬ್ದಾರಿ ಹೊತ್ತವರು ನಾವೇ” ಎಂದು ಪತ್ರದಲ್ಲಿ ಬರೆದಿದ್ದಾರೆ.

ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಎದುರಿಸುತ್ತಿರುವ ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟದ ಸಮಸ್ಯೆಗಳಿಗೆ ಕಾರ್ಮಿಕರು ಕಾರಣರಲ್ಲ, ಬದಲಿಗೆ ತೀವ್ರ ಸಿಬ್ಬಂದಿ ಕೊರತೆ ಮತ್ತು ಆಡಳಿತದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ. ಸಾಕಷ್ಟು ಕಾರ್ಮಿಕರಿಲ್ಲದ ಕಾರಣ ಕೆಲವರು ಹಲವು ಜನರ ಕೆಲಸವನ್ನು ಒಬ್ಬರೇ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. “ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು. ಆದರೆ, ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವ ಯಾವುದೇ ಉದ್ದೇಶ ಜೆಎನ್‌ಯು ಆಡಳಿತಕ್ಕೆ ಇದ್ದಂತೆ ಕಾಣುತ್ತಿಲ್ಲ. ಇದರಿಂದ ಕ್ಯಾಂಪಸ್‌ನಾದ್ಯಂತ ಸ್ವಚ್ಛತೆ ಕಾಪಾಡುವುದು ಮತ್ತು ಆಹಾರದ ಗುಣಮಟ್ಟವನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

“ನಮ್ಮನ್ನು ನಂಬಿ, ನಿಮಗೆ ಎದುರಾಗುತ್ತಿರುವ ಸಮಸ್ಯೆಗಳಿಗೆ ನಾವು ಸರಿಯಾಗಿ ಕೆಲಸ ಮಾಡದಿರುವುದು ಕಾರಣವಲ್ಲ. ಸಾಕಷ್ಟು ಸಿಬ್ಬಂದಿ ಇಲ್ಲದಿದ್ದರೂ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ” ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ವಿಶ್ವವಿದ್ಯಾಲಯದ ಸೇವೆಗಳು ಸುಗಮವಾಗಿ ನಡೆಯಲು ಹಗಲಿರುಳು ದುಡಿಯುವ ತಮ್ಮ ಶ್ರಮವನ್ನು ಆಡಳಿತ ಗುರುತಿಸುತ್ತಿಲ್ಲ ಎಂಬುದು ಅವರ ಅಸಮಾಧಾನ.

ಕಾರ್ಮಿಕರ ಪತ್ರದಲ್ಲಿ ಅವರ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಖಾಯಂ ಉದ್ಯೋಗಿಗಳು ನಿರ್ವಹಿಸುವುದೇ ರೀತಿಯ ಕೆಲಸಗಳನ್ನು ತಾವು ಮಾಡುತ್ತಿದ್ದರೂ, ಅವರಿಗೆ ಸಿಗುವ ವೇತನದ ಕಾಲು ಭಾಗದಷ್ಟು ಮಾತ್ರ ತಮಗೆ ದೊರೆಯುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಹಬ್ಬದ ಸಂದರ್ಭಗಳಲ್ಲಿ ನೀಡಬೇಕಾದ ಬೋನಸ್‌ಗಾಗಿ ಹಲವು ಬಾರಿ ಮನವಿ ಮಾಡಿದರೂ ಭರವಸೆಗಳು ಈಡೇರಿಲ್ಲ ಎಂದು ಹೇಳಿದ್ದಾರೆ.

ವಿಶೇಷವಾಗಿ ದೀಪಾವಳಿ ಸಂದರ್ಭದಲ್ಲಿ ತಮ್ಮ ಮಕ್ಕಳ ಆಸೆಗಳನ್ನು ಈಡೇರಿಸಲು ಸಾಧ್ಯವಾಗದ ನೋವನ್ನು ಅವರು ಪತ್ರದಲ್ಲಿ ಹಂಚಿಕೊಂಡಿದ್ದಾರೆ. “ಪ್ರತಿ ದೀಪಾವಳಿಯಂದು ನಮ್ಮ ಮಕ್ಕಳ ಕಣ್ಣುಗಳಲ್ಲಿ ಈಡೇರದ ಆಸೆ ಮತ್ತು ನಿರಾಶೆಯನ್ನು ನೋಡಿದಾಗ ನಮ್ಮ ಹೃದಯ ಒಡೆಯುತ್ತದೆ. ನಮ್ಮ ಕುಟುಂಬದವರು ಮತ್ತು ನಮ್ಮೊಂದಿಗೆ ಈ ಸಂಕಷ್ಟಗಳನ್ನು ಹಂಚಿಕೊಳ್ಳುವ ಪ್ರೀತಿಪಾತ್ರರ ನೋವು ನಮ್ಮನ್ನು ಕಾಡುತ್ತದೆ. ನಮಗೆ ಸಂತೋಷ, ಸಂಭ್ರಮ ಮತ್ತು ಭರವಸೆಯನ್ನು ಏಕೆ ನಿರಾಕರಿಸಲಾಗುತ್ತಿದೆ? ನಾವು ಸೃಷ್ಟಿಸದ ಸಮಸ್ಯೆಗಳಿಗೆ ನಾವೇಕೆ ಬೆಲೆ ತೆರಬೇಕು? ಆದರೆ, ಆ ಸಮಸ್ಯೆಗಳ ಪರಿಣಾಮವನ್ನು ಅನುಭವಿಸಬೇಕಾಗಿರುವುದು ನಾವೇ” ಎಂದು ಪ್ರಶ್ನಿಸಿದ್ದಾರೆ.

ತಮ್ಮ ಹಕ್ಕುಗಳಿಗಾಗಿ ಹೋರಾಡುವುದು ಕೇವಲ ಇಂದಿನ ಬದುಕಿನ ಪ್ರಶ್ನೆಯಲ್ಲ, ಮುಂದಿನ ಪೀಳಿಗೆಗೆ ನ್ಯಾಯಕ್ಕಾಗಿ ಧ್ವನಿ ಎತ್ತುವ ಧೈರ್ಯವನ್ನು ಕಲಿಸುವ ಹೋರಾಟವೂ ಹೌದು ಎಂದು ಅವರು ಹೇಳಿದ್ದಾರೆ. “ನಾವು ಹೇಡಿಗಳಲ್ಲ, ನಮ್ಮ ಹಕ್ಕುಗಳಿಗಾಗಿ ಹೋರಾಡಲು ಹೆದರುವುದಿಲ್ಲ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಲು ಬಯಸುತ್ತೇವೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮುಷ್ಕರದಿಂದಾಗಿ ಹಾಸ್ಟೆಲ್‌ಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಅಡ್ಡಿಯಾಗಿರುವುದು ಹಾಗೂ ಮೆಸ್‌ಗಳಲ್ಲಿ ಆಹಾರ ಪೂರೈಕೆಗೆ ತೊಂದರೆಯಾಗಿರುವುದನ್ನು ಕಾರ್ಮಿಕರು ಒಪ್ಪಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಈ ಪರಿಸ್ಥಿತಿಯನ್ನು ಎದುರಿಸುವುದು ಸುಲಭವಲ್ಲ ಎಂಬ ಅರಿವು ತಮಗಿದೆ ಎಂದಿರುವ ಅವರು, ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅನಿವಾರ್ಯತೆಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. “ಸ್ವಚ್ಛಗೊಳಿಸದ ಹಾಸ್ಟೆಲ್‌ಗಳು ಮತ್ತು ಶಾಲೆಗಳು, ಆಹಾರವಿಲ್ಲದ ಮೆಸ್‌ಗಳ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಸುಲಭವಲ್ಲ ಎಂಬುದು ನಮಗೆ ಗೊತ್ತಿದೆ. ಆದರೂ ನಮ್ಮ ಹಕ್ಕುಗಳನ್ನು ಪಡೆಯಲು ಆಡಳಿತದ ಬಾಗಿಲಲ್ಲಿ ನಿಂತು ಹೋರಾಡುವುದನ್ನು ಮುಂದುವರಿಸುತ್ತೇವೆ. ನೀವೆಲ್ಲರೂ ಜೆಎನ್‌ಯು ಆಗಿದ್ದರೆ, ನಾವೂ ಜೆಎನ್‌ಯು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕೊನೆಯಲ್ಲಿ ‘ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಒಗ್ಗಟ್ಟು ಚಿರಾಯುವಾಗಲಿ’ ಎಂಬ ಘೋಷಣೆಯನ್ನೂ ಮೊಳಗಿಸಿದ್ದಾರೆ.

ಕಾರ್ಮಿಕರ ಹೋರಾಟಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಹಂಚಿಕೊಂಡಿರುವ ವಿಡಿಯೋ ಕೂಡ ಕ್ಯಾಂಪಸ್‌ನಲ್ಲಿನ ದುಸ್ಥಿತಿಯನ್ನು ಎತ್ತಿ ತೋರಿಸಿದೆ. ಜೆಎನ್‌ಯುನ ಅತಿದೊಡ್ಡ ಹಾಸ್ಟೆಲ್‌ನಲ್ಲಿ ಸಂಪೂರ್ಣ ಸ್ವಚ್ಛತಾ ಕೆಲಸವನ್ನು ಕೇವಲ ಮೂವರು ಮಹಿಳಾ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಓರ್ವ ಕಾರ್ಮಿಕರು ವಿವರಿಸಿದ್ದಾರೆ. “ಇದು ಜೆಎನ್‌ಯುನಲ್ಲಿರುವ ಅತಿದೊಡ್ಡ ಹಾಸ್ಟೆಲ್. ಆದರೆ, ಇಡೀ ಹಾಸ್ಟೆಲ್ ಸ್ವಚ್ಛಗೊಳಿಸುವ ಜವಾಬ್ದಾರಿ ಕೇವಲ ಮೂವರು ಮಹಿಳೆಯರ ಮೇಲಿದೆ. ಪ್ರತಿಯೊಬ್ಬ ಕಾರ್ಮಿಕರೂ ತಮ್ಮ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಕೆಲಸ ಮಾಡಲು ಒತ್ತಾಯಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಸಿಬ್ಬಂದಿ ಕೊರತೆ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಈ ಉದಾಹರಣೆ ಸಾಕ್ಷಿಯಾಗಿದೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.

ಕಾರ್ಮಿಕ ಆಯುಕ್ತರ ಕಚೇರಿಯ ಕಾರ್ಯವೈಖರಿಯನ್ನೂ ಎಐಜಿಕೆಯು ಉಪಾಧ್ಯಕ್ಷ ಸೂರ್ಯ ಪ್ರಕಾಶ್ ಪ್ರಶ್ನಿಸಿದ್ದಾರೆ. ಕೈಗಾರಿಕಾ ವಿವಾದಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸುವ ಜವಾಬ್ದಾರಿ ಹೊಂದಿರುವ ಕಾರ್ಮಿಕ ಆಯುಕ್ತರ ಕಚೇರಿಯೇ ತನ್ನ ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ. “ಕಾರ್ಮಿಕ ಆಯುಕ್ತರ ಕಚೇರಿ ತನ್ನ ಸಾಂಸ್ಥಿಕ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವಲ್ಲಿ ದಿನೇದಿನೇ ವಿಫಲವಾಗುತ್ತಿದೆ. ಕಾರ್ಮಿಕರ ಸಮಸ್ಯೆಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಅಧಿಕಾರ ಹೊಂದಿರುವ ಸಂಸ್ಥೆಯೇ ತನ್ನದೇ ನಿರ್ದೇಶನಗಳ ಅನುಷ್ಠಾನವನ್ನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕಾದ ವ್ಯವಸ್ಥೆಯೇ ತನ್ನ ಜವಾಬ್ದಾರಿಯನ್ನು ನಿರ್ವಹಿಸದಿದ್ದಾಗ, ಬೀದಿಗಿಳಿದು ಪ್ರತಿಭಟಿಸುವುದನ್ನು ಬಿಟ್ಟು ಕಾರ್ಮಿಕರಿಗೆ ಬೇರೆ ಯಾವ ದಾರಿ ಉಳಿದಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಅಧ್ಯಕ್ಷೆ ಅದಿತಿ ಮಿಶ್ರಾ ಕೂಡ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಕಾರ್ಮಿಕ ಆಯುಕ್ತರ ಮಧ್ಯಸ್ಥಿಕೆಯ ಹೊರತಾಗಿಯೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಗುತ್ತಿಗೆ ಕಾರ್ಮಿಕರ ಶೋಷಣೆಯನ್ನು ಮುಂದುವರಿಸಿದೆ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಡ್ಯಾನಿಶ್ ಅಲಿ, ಕಾರ್ಮಿಕರ ಹೋರಾಟವು ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಕೆಲಸದ ಸ್ಥಳದಲ್ಲಿ ಘನತೆ ಮತ್ತು ಮೂಲಭೂತ ಕಾರ್ಮಿಕ ಹಕ್ಕುಗಳಿಗಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅವರ ಬೇಡಿಕೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಡಳಿತವನ್ನು ಒತ್ತಾಯಿಸಿದ್ದಾರೆ.

ಸದ್ಯ ಕಾರ್ಮಿಕರು ಸಬರಮತಿ ಟಿ-ಪಾಯಿಂಟ್‌ನಲ್ಲಿ ಪ್ರತಿಭಟನೆ ಮುಂದುವರಿಸಿದ್ದು, ತಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಶ್ವವಿದ್ಯಾಲಯದ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಾದ ಸ್ವಚ್ಛತೆ, ಆಹಾರ, ಭದ್ರತೆ ಮತ್ತು ನಿರ್ವಹಣಾ ಸೇವೆಗಳನ್ನು ಒದಗಿಸುವ ನೂರಾರು ಕಾರ್ಮಿಕರೇ ಕನಿಷ್ಠ ವೇತನ, ಬೋನಸ್ ಮತ್ತು ಉದ್ಯೋಗದ ಭದ್ರತೆಗಾಗಿ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳ ಬದುಕನ್ನು ಸುಗಮಗೊಳಿಸುವ ಶ್ರಮಿಕರ ಬದುಕೇ ಅಸುರಕ್ಷಿತವಾಗಿರುವ ಈ ಪರಿಸ್ಥಿತಿಯಲ್ಲಿ, ಜೆಎನ್‌ಯು ಆಡಳಿತ ಮಂಡಳಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಹಕ್ಕುಗಳನ್ನು ಖಚಿತಪಡಿಸುತ್ತದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಕಾರ್ಯಕರ್ತನ ‘ಪಾಕಿಸ್ತಾನ್ ಜಿಂದಾಬಾದ್’ ಪ್ರಕರಣ ರದ್ದು! ಪ್ರತಿಭಟನೆ ವೇಳೆ ‘ಬಾಯಿತಪ್ಪಿ ಬಂದ ಮಾತು’ ಎಂಬ ವಾದ ಪುರಸ್ಕರಿಸಿದ ಕರ್ನಾಟಕ ಹೈಕೋರ್ಟ್!

ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾರ್ಯಕರ್ತನೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯಿತಪ್ಪಿ...

ಅಮೆರಿಕ ಮಧ್ಯಂತರ ಚುನಾವಣೆ | ಸಂಸತ್ತಿನ ಉಭಯ ಸದನಗಳಲ್ಲಿ ಬಹುಮತ ಸಾಧಿಸಿದ ಡೆಮಾಕ್ರಟಿಕ್ ಪಕ್ಷ : ಅಧ್ಯಕ್ಷ ಟ್ರಂಪ್‌ಗೆ ತೀವ್ರ ಮುಖಭಂಗ

ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ (US Midterm Elections 2026) ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ 'ಬ್ಲೂ ವೇವ್' (ನೀಲಿ ಅಲೆ) ಸೃಷ್ಟಿಸಿದ್ದು, ಸಂಸತ್ತಿನ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ)...

ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಇರಾನ್ ನಡುವಿನ ಶೀತಲ ಸಮರ ಹಾಗೂ ಅಮೆರಿಕದ ಮಿಲಿಟರಿ ಹಾಜರಾತಿಯಿಂದಾಗಿ ತೈಲ ಸಾರಿಗೆ ಮಾರ್ಗಗಳಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿರುವ ಬೆನ್ನಲ್ಲೇ, ಇರಾನ್ ಸರ್ಕಾರವು ಜಾಗತಿಕ ವಾಣಿಜ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು...

ಗುಜರಾತ್: ‘ತಪ್ಪಿತಸ್ಥನೆಂದು ಸಾಬೀತುಪಡಿಸಲು ಪುರಾವೆಗಳಿಲ್ಲ’: ಗೋಮಾಂಸ ಸಂಗ್ರಹ ಆರೋಪದ ಮುಸ್ಲಿಂ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಗೋಮಾಂಸ ಸಂಗ್ರಹಿಸಿ ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಸುಮಾರು ಹತ್ತು ತಿಂಗಳಿನಿಂದ ಜೈಲಿನಲ್ಲಿದ್ದ ಗುಜರಾತ್‌ನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಯ ವಿರುದ್ಧ ಈ ಹಿಂದೆ ದಾಖಲಾಗಿದ್ದ...

ದೆಹಲಿಯ ‘ವೋಟ್ ಚೋರಿ’ ರ‍್ಯಾಲಿಗೆ ಗೈರು: ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ 60 ಪ್ರಮುಖ ಪದಾಧಿಕಾರಿಗಳು ಅಮಾನತು!

ಅಖಿಲ ಭಾರತ ಯುವ ಕಾಂಗ್ರೆಸ್ ನಾಯಕತ್ವವು ಕಠಿಣ ನಿರ್ಧಾರ ತಳೆದಿದ್ದು, ರಾಷ್ಟ್ರೀಯ ನಾಯಕತ್ವ ನೀಡಿದ್ದ ಕರೆಗೆ ಗೈರುಹಾಜರಾದ ಮಧ್ಯಪ್ರದೇಶ ಯುವ ಕಾಂಗ್ರೆಸ್‌ನ ಬರೋಬ್ಬರಿ 60 ಪ್ರಮುಖ ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ...

ಮೂರು ಕೋಟಿ ಒಳನುಸುಳುಕೋರರು ಎಲ್ಲಿಂದ ಬಂದರು?: ‘ವೋಟ್ ಚೋರಿ’ ಬಗ್ಗೆ ಮುಕ್ತ ಚರ್ಚೆಗೆ ಬನ್ನಿ: ಮೋದಿ-ಅಮಿತ್ ಶಾಗೆ ಖರ್ಗೆ ಸವಾಲು

ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಮತಗಳ್ಳತನದ (ವೋಟ್ ಚೋರಿ) ಆರೋಪಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸುವ ಧೈರ್ಯ ತೋರಿಸಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಿಟ್ಟಿರುವ ಮುಕ್ತ ಚರ್ಚೆಯ ಸವಾಲನ್ನು ಸ್ವೀಕರಿಸಿ ಎಂದು ಕಾಂಗ್ರೆಸ್ ರಾಷ್ಟ್ರೀಯ...

ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದುವುದನ್ನು ದಂಡನೀಯವಾಗಿಸುವ ಕಾನೂನುಗಳು ಪ್ರಸ್ತುತತೆ ಕಳೆದುಕೊಂಡಿವೆ : ಸುಪ್ರೀಂ ಕೋರ್ಟ್

ಭಾರತದ ಕುಸಿಯುತ್ತಿರುವ ಫಲವತ್ತತೆ ದರವನ್ನು (fertility rate) ಗಮನದಲ್ಲಿಟ್ಟುಕೊಂಡು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಕಾನೂನುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್...

ಅಮೆರಿಕ ಮಧ್ಯಂತರ ಚುನಾವಣೆ : ಜಗತ್ತಿನ ಗಮನ ಸೆಳೆದ ಅಬ್ದುಲ್ ಸಯೀದ್, ಡೆಬ್ ಹಾಲೆಂಡ್ ಮತ್ತು ಇಲ್ಹಾನ್ ಉಮರ್ ಆಯ್ಕೆ!

ಅಮೆರಿಕದ ರಾಜಕೀಯ ಅಖಡಾದಲ್ಲಿ ಭಾರಿ ಕುತೂಹಲ ಮೂಡಿಸಿದ್ದ 2026ರ ಮಧ್ಯಂತರ ಚುನಾವಣೆಯ ಪ್ರಾಥಮಿಕ ಫಲಿತಾಂಶಗಳು ಹೊರಬಿದ್ದಿದ್ದು, ಡೆಮಾಕ್ರಟಿಕ್ ಪಕ್ಷದ ಸುಧಾರಣಾವಾದಿ ನಾಯಕರ ಜಯಯಾನ ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಅಸೋಸಿಯೇಟೆಡ್...

ನ್ಯಾಯಾಲಯದ ಆಕ್ಷೇಪದ ಬಳಿಕವೂ ಡಿಲಿಟೆಡ್ ವೋಟರ್ಸ್ ಫಾರಂ-6 ಸಲ್ಲಿಸಿ ಎಂದ ಚು. ಆಯೋಗ : ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ಪ್ರಶಾಂತ್ ಭೂಷಣ್

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಅರ್ಜಿದಾರರು, ಡಿಲೀಟ್ ಆದ ಮತದಾರರು ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಲು ಫಾರಂ 6 ಸಲ್ಲಿಸಬಹುದು ಎಂದು ಭಾರತೀಯ ಚುನಾವಣಾ ಆಯೋಗ ಇತ್ತೀಚೆಗೆ ನೀಡಿರುವ...

ಅಮೆರಿಕ ಮಧ್ಯಂತರ ಚುನಾವಣೆ : ಮೇಲ್ಮನೆ ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ, ಕೆಳಮನೆಯಲ್ಲೂ ಮುನ್ನಡೆ

ಅಮೆರಿಕದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ 2026ರ ಮಧ್ಯಂತರ ಚುನಾವಣೆಗಳ (US Midterm Elections) ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ರಸ್ತುತ ಮತ ಎಣಿಕೆ ಕಾರ್ಯ ಚುರುಕಿನಿಂದ ಸಾಗಿದೆ. ಹಾಲಿ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್...