ಭಾರತೀಯ ಜನತಾ ಪಾರ್ಟಿ (BJP) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ ಆರೋಪ ಎದುರಿಸುತ್ತಿದ್ದ ಕಾರ್ಯಕರ್ತನೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಯಿತಪ್ಪಿ (Slip of the tongue) ತಪ್ಪು ಘೋಷಣೆ ಹೊರಬಂದಿದೆ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ, ಬಿಜೆಪಿ ಪ್ರತಿಭಟನಾಕಾರರು ಉದ್ದೇಶಪೂರ್ವಕವಾಗಿ ಇಂತಹ ಘೋಷಣೆ ಕೂಗುವುದು ಅಸಂಭವ ಎಂದು ಅಭಿಪ್ರಾಯಪಟ್ಟು ಈ ಆದೇಶ ನೀಡಿದೆ.
ಕಾನೂನು ನಿಯತಕಾಲಿಕ ‘ಲೈವ್ ಲಾ’ (LiveLaw) ವರದಿಯ ಪ್ರಕಾರ, 2022 ರ ಡಿಸೆಂಬರ್ 18 ರಂದು ಮಂಡ್ಯದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಡಿ.ಎಸ್. ರವಿ ಕುಮಾರ್ ಎನ್ನುವ ಬಿಜೆಪಿ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರೆನ್ನಲಾದ ವೀಡಿಯೋ ವೈರಲ್ ಆಗಿತ್ತು. ‘ಪಾಕಿಸ್ತಾನ್ ಮುರ್ದಾಬಾದ್’ ಎನ್ನುವ ಬದಲಿಗೆ ಬಾಯಿತಪ್ಪಿ ಈ ಘೋಷಣೆ ಹೊರಬಂದಿದೆ ಎಂಬ ವಿವರಣೆಯೊಂದಿಗೆ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಈ ಘಟನೆಗೆ ಸಂಬಂಧಿಸಿದಂತೆ 2024 ರಲ್ಲಿ ಮಂಡ್ಯ ವೆಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 153B ಹಾಗೂ 505(1)(B) ಅಡಿಯಲ್ಲಿ ಮಂಡ್ಯದ ನ್ಯಾಯಾಲಯದಲ್ಲಿ ಅಪರಾಧ ಪ್ರಕ್ರಿಯೆ ಆರಂಭವಾಗಿತ್ತು.
ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಡಿ.ಎಸ್. ರವಿ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ಪೀಠವು ಅಕ್ಟೋಬರ್ 28, 2026 ರಂದು ತನ್ ಆದೇಶವನ್ನು ಹೊರಡಿಸಿದೆ. ತೀರ್ಪಿನಲ್ಲಿ ಆದೇಶದ ಉಲ್ಲೇಖವನ್ನು ದಾಖಲಿಸಿದ ನ್ಯಾಯಪೀಠವು, “ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ, ಅಲ್ಲಿನ ಪ್ರತಿಭಟನಾಕಾರರು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗುತ್ತಾರೆ ಎಂಬುದನ್ನು ಊಹಿಸಿಕೊಳ್ಳುವುದೂ ತೀರಾ ಅಸಾಧ್ಯ (At the outset, in a demonstration organized by the Bharathiya Janatha Party-a Political Party, It is highly unimaginable that the protesters therein would raise the slogan ‘Pakistan Zindabad’) ಎಂದು ಅಭಿಪ್ರಾಯಪಟ್ಟಿದೆ.
ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗುವ ಹರಿವಿನಲ್ಲಿ ‘ಮುರ್ದಾಬಾದ್’ ಬದಲು ಆಕಸ್ಮಿಕವಾಗಿ ‘ಜಿಂದಾಬಾದ್’ ಎನ್ನುವ ಪದ ಬಂದಿರುವುದರಲ್ಲಿ ಯಾವುದೇ ಅಪರಾಧಿಕ ಮನಸ್ಥಿತಿ ಇರಲಿಲ್ಲ ಎಂಬ ವಾದವನ್ನು ಹೈಕೋರ್ಟ್ ಪುರಸ್ಕರಿಸಿದ್ದು, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಪೂರ್ಣವಾಗಿ ರದ್ದುಗೊಳಿಸಿದೆ.


