ಭಾರತದ ಕುಸಿಯುತ್ತಿರುವ ಫಲವತ್ತತೆ ದರವನ್ನು (fertility rate) ಗಮನದಲ್ಲಿಟ್ಟುಕೊಂಡು, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಕಾನೂನುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ ಎಂದು ಸುಪ್ರೀಂ ಕೋರ್ಟ್ ಬಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಜನಸಂಖ್ಯಾ ಬದಲಾವಣೆಗಳಿಂದಾಗಿ ಇಂತಹ ನಿರ್ಬಂಧಗಳ ಹಿಂದಿನ ತಾರ್ಕಿಕ ಆಧಾರವು ಕುಸಿದುಬಿದ್ದಿದೆ ಎಂಬುವುದಾಗಿ ಹೇಳಿದೆ ಎಂದು livelaw.in ವರದಿ ಮಾಡಿದೆ.
ಹೀಗೆ ಅಭಿಪ್ರಾಯಪಡುತ್ತಾ, ನ್ಯಾಯಾಲಯವು 2003ರ ‘ಜಾವೇದ್ V/s ಹರಿಯಾಣ ಸರ್ಕಾರ’ ಪ್ರಕರಣದ ತೀರ್ಪನ್ನು ಪರಿಶೀಲನೆಗಾಗಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರಿದ್ದ ಪೀಠವು, ಎರಡಕ್ಕಿಂತ ಹೆಚ್ಚು ಜೀವಂತ ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ‘ಹರಿಯಾಣ ಪಂಚಾಯತ್ ರಾಜ್ ಕಾಯ್ದೆ, 1994’ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿತ್ತು.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕಾರಣಕ್ಕಾಗಿ ಜನರ ಮೇಲೆ ಅನರ್ಹತೆಯನ್ನು ಹೇರುವ ಇಂತಹ ಕಾನೂನುಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿದೆ. ಅದರಲ್ಲೂ ವಿಶೇಷವಾಗಿ, ಭಾರತದ ಕುಸಿಯುತ್ತಿರುವ ಫಲವತ್ತತೆ ದರವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮರುಪರಿಶೀಲಿಸಬೇಕಾಗಿದೆ ಎಂಬುವುದಾಗಿ ಹೇಳಿದೆ ಎಂದು ವರದಿ ಉಲ್ಲೇಖಿಸಿದೆ.
ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, ಕಾಕೋಡ ಗ್ರಾಮ ಪಂಚಾಯಿತಿಯ ಮಾಜಿ ಸರಪಂಚ್ ಮಂಗಳಾ ಭೀಮರಾವ್ ಅವರು ಮೂರನೇ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ‘ಮಹಾರಾಷ್ಟ್ರ ಗ್ರಾಮ ಪಂಚಾಯತ್ ಕಾಯ್ದೆ, 1959’ರ ಸೆಕ್ಷನ್ 14(1)(ಜೆ-1) ರ ಅಡಿಯಲ್ಲಿ ಎದುರಿಸುತ್ತಿದ್ದ ಅನರ್ಹತೆಯನ್ನು ರದ್ದುಗೊಳಿಸಿದೆ. ಈ ಶಾಸನಕ್ಕೆ ತಿದ್ದುಪಡಿ ಜಾರಿಗೆ ಬಂದ ಸೆಪ್ಟೆಂಬರ್ 13, 2000ರಿಂದ ಜಾರಿಯಾಗುವಂತೆ, 1959ರ ಕಾಯ್ದೆಯು ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದುವುದರ ಮೇಲೆ ನಿರ್ಬಂಧ ಹೇರಿತ್ತು.
‘ಜಾವೇದ್ V/s ಹರಿಯಾಣ ಸರ್ಕಾರ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಎರಡು ಮಕ್ಕಳ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದ್ದ 2003ರ ಅವಧಿಯಲ್ಲಿ ಭಾರತದ ಒಟ್ಟು ಫಲವತ್ತತೆ ದರವು (TFR) 3ರಷ್ಟಿತ್ತು. ಆದರೆ ಪ್ರಸ್ತುತ ಅದು 1.9 ಕ್ಕೆ ಕುಸಿದಿದೆ ಎಂದು ನ್ಯಾಯಾಲಯವು ತಿಳಿಸಿದೆ.
ಬದಲಿ ಮಟ್ಟವಾದ (replacement level) 2.1ಕ್ಕಿಂತಲೂ ಕೆಳಗೆ ಕುಸಿದಿರುವ ಫಲವತ್ತತೆ ದರವು, ಶೀಘ್ರದಲ್ಲೇ ವಯಸ್ಸಾಗುತ್ತಿರುವ ಜನಸಂಖ್ಯೆ ಮತ್ತು ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು ಕಡಿಮೆಯಾಗುವ ಗುಣಲಕ್ಷಣಗಳನ್ನು ಹೊಂದಿರುವ ಜನಸಂಖ್ಯಾ ಪರಿವರ್ತನೆಗೆ (demographic transition) ಕಾರಣವಾಗಬಹುದು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಒಂದು ದೇಶದ ಜನಸಂಖ್ಯೆಯು ಮುಂದಿನ ಪೀಳಿಗೆಯಲ್ಲೂ ಯಾವುದೇ ಬದಲಾವಣೆಯಿಲ್ಲದೆ ಸ್ಥಿರವಾಗಿ (ಒಂದೇ ಮಟ್ಟದಲ್ಲಿ) ಇರಬೇಕಾದರೆ, ಸರಾಸರಿ ಒಬ್ಬ ಮಹಿಳೆಗೆ ಕನಿಷ್ಠ 2.1 ರಷ್ಟು ಮಕ್ಕಳು ಇರಬೇಕು. ಇದನ್ನು ‘ಬದಲಿ ಮಟ್ಟ’ ಎನ್ನಲಾಗುತ್ತದೆ. ಅಂದರೆ, ತಂದೆ-ತಾಯಿಯ ಸ್ಥಾನವನ್ನು ತುಂಬಲು ಇಬ್ಬರು ಮಕ್ಕಳು ಮತ್ತು ಶಿಶು ಮರಣಗಳ ಸಮತೋಲನಕ್ಕೆ 0.1ರಷ್ಟು ಹೆಚ್ಚುವರಿ ಲೆಕ್ಕ.
ಭಾರತದಲ್ಲಿ ಈಗ ಈ ದರವು 1.9ಕ್ಕೆ ಕುಸಿದಿದೆ. ಅಂದರೆ, ದೇಶದಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ತಂದೆ-ತಾಯಂದಿರ ಸಂಖ್ಯೆಗಿಂತ ಕಡಿಮೆಯಾಗುತ್ತಿದೆ. ಹೊಸದಾಗಿ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ, ದೇಶದಲ್ಲಿ ವಯಸ್ಸಾದವರ (ಹಿರಿಯ ನಾಗರಿಕರ) ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ದೇಶದ ಆರ್ಥಿಕತೆಯನ್ನು ಬೆಳೆಸಲು ಮತ್ತು ಕೆಲಸ ಮಾಡಲು ಬೇಕಾಗುವ ಯುವಕರ ಅಥವಾ ದುಡಿಯುವ ವಯಸ್ಸಿನ ಜನರ (Working-age population) ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತದೆ.
2003ರಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು “ಎರಡು ಮಕ್ಕಳ ನಿಯಮ” ತರಲಾಗಿತ್ತು. ಆದರೆ ಈಗ ಜನಸಂಖ್ಯೆ ಹೆಚ್ಚಾಗುವ ಬದಲು ಯುವ ಜನಾಂಗದ ಸಂಖ್ಯೆ ಕಡಿಮೆಯಾಗುವ ಆತಂಕ ಎದುರಾಗಿರುವುದರಿಂದ, ಇಂತಹ ಹಳೆಯ ಕಾನೂನುಗಳನ್ನು ಬದಲಾಯಿಸಬೇಕು ಎಂಬುವುದು ಸುಪ್ರೀಂ ಕೋರ್ಟ್ನ ಅಭಿಪ್ರಾಯವಾಗಿದೆ.
ಆಗಸ್ಟ್ 4ರಂದು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸುವಾಗ, 2003ರ ‘ಜಾವೇದ್ V/s ಹರಿಯಾಣ ಸರ್ಕಾರ’ ಪ್ರಕರಣದ ತೀರ್ಪನ್ನು ಪ್ರಸ್ತುತ ಪೀಠವೇ ಮರುಪರಿಶೀಲಿಸಬೇಕೇ ಅಥವಾ ವಿಸ್ತೃತ ಪೀಠಕ್ಕೆ (larger bench) ಒಪ್ಪಿಸಬೇಕೇ ಎಂಬ ಬಗ್ಗೆ ಪರಿಗಣಿಸಲು ನ್ಯಾಯಾಲಯವು ಒಲವು ವ್ಯಕ್ತಪಡಿಸಿತ್ತು. ಅಲ್ಲದೆ, ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದುವುದನ್ನು ನಿರ್ಬಂಧಿಸುವ ಎಲ್ಲಾ ರಾಜ್ಯಗಳ ಕಾನೂನುಗಳ ಪಟ್ಟಿಯನ್ನು ನೀಡುವಂತೆ ನ್ಯಾಯಾಲಯವು ನ್ಯಾಯಾಲಯದ ಸಹಾಯಕಿಯಾಗಿರುವ (amicus curiae) ಅಡ್ವೊಕೇಟ್ ರುಕ್ಮಿಣಿ ಬೊಬ್ಡೆ ಮತ್ತು ಅರ್ಜಿದಾರರ ಪರ ವಕೀಲರಾದ ಅಡ್ವೊಕೇಟ್ ಪ್ರತೀಕ್ ಬೊಂಬರ್ಡೆ ಅವರಿಗೆ ಸೂಚಿಸಿತ್ತು.
ರುಕ್ಮಿಣಿ ಬೊಬ್ಡೆ ಅವರು ಸಲ್ಲಿಸಿದ ವರದಿಯ ಪ್ರಕಾರ, ಏಳು ರಾಜ್ಯಗಳು ಈಗಾಗಲೇ ಎರಡು ಮಕ್ಕಳ ನಿಯಮವನ್ನು ರದ್ದುಗೊಳಿಸಿವೆ. ಹದಿನೈದು ರಾಜ್ಯಗಳಲ್ಲಿ ಇಂತಹ ಯಾವುದೇ ನೀತಿಯೇ ಜಾರಿಯಲ್ಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಷಯದಲ್ಲಿ ಎಲ್ಲಾ ರಾಜ್ಯಗಳೂ ಒಂದೇ ರೀತಿಯ ನಿಲುವನ್ನು ಅಳವಡಿಸಿಕೊಂಡಿಲ್ಲ. ಅಸ್ಸಾಂ, ಗೋವಾ, ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಉತ್ತರಾಖಂಡ ರಾಜ್ಯಗಳು ಇಂದಿಗೂ ಈ ಎರಡು ಮಕ್ಕಳ ನಿಯಮವನ್ನು ಮುಂದುವರಿಸಿಕೊಂಡು ಬಂದಿವೆ.
ಪ್ರಕರಣದ ವಾಸ್ತವಿಕ ಹಿನ್ನೆಲೆಯನ್ನು ನೋಡುವುದಾದರೆ, ಮಂಗಳಾ ಅವರ ವಿರುದ್ಧ ಹೆಚ್ಚುವರಿ ಕಲೆಕ್ಟರ್ (Additional Collector) ಮುಂದೆ ದೂರು ದಾಖಲಿಸಲಾಗಿತ್ತು. ಇದರ ಆಧಾರದ ಮೇಲೆ ನಡಾವಳಿಗಳನ್ನು ಆರಂಭಿಸಿ, ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿತ್ತು. ಈ ಆದೇಶದ ವಿರುದ್ಧ ಅವರು ಹೆಚ್ಚುವರಿ ಕಮಿಷನರ್ (Additional Commissioner) ಅವರ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಆ ಮೇಲ್ಮನವಿಯೂ ತಿರಸ್ಕೃತಗೊಂಡಿದ್ದರಿಂದ, ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಗಸ್ಟ್ 5, 2025ರ ಆದೇಶದ ಮೂಲಕ ಹೈಕೋರ್ಟ್, ಅರ್ಜಿದಾರರು ತಮಗೆ ಜನಿಸಿದ ಮೂರನೇ ಮಗುವಿನ ಜನನ ಪ್ರಮಾಣಪತ್ರದಿಂದ ದೂರ ಉಳಿಯಲು (ಅದು ತಮ್ಮದಲ್ಲ ಎಂದು ವಾದಿಸಲು) ಪ್ರಯತ್ನಿಸುತ್ತಿದ್ದಾರೆ ಎಂದು ಕಂಡುಕೊಂಡಿತ್ತು. ಆದರೆ, ಆ ದಾಖಲೆಯಲ್ಲಿ ತಂದೆ ಮತ್ತು ತಾಯಿ ಇಬ್ಬರ ಹೆಸರೂ ಉಲ್ಲೇಖವಾಗಿರುವುದರಿಂದ ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ವಾದಕ್ಕೆ ಪೂರಕವಾಗಿ ಬೇರೆ ಯಾವುದೇ ಪುರಾವೆಗಳು ಇಲ್ಲದಿರುವುದನ್ನು ಪರಿಗಣಿಸಿದ ಹೈಕೋರ್ಟ್, ಅವರ ಅನರ್ಹತೆಯನ್ನು ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜಾ ಅವಧಿಯ ಅರ್ಜಿಯನ್ನು ಸಲ್ಲಿಸಿದ್ದರು.
ನವೆಂಬರ್ 4, 2025ರಂದು, ಸುಪ್ರೀಂ ಕೋರ್ಟ್ ಹೈಕೋರ್ಟ್ನ ಆಕ್ಷೇಪಾರ್ಹ ತೀರ್ಪಿನ ಜಾರಿಗೆ ತಡೆಯಾಜ್ಞೆ ನೀಡಿತ್ತು.
Courtesy :livelaw.in


