ಕೋಲ್ಕತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಕೋಲ್ಕತಾದ ಕಾಳಿಘಾಟ್ ನಿವಾಸದ ಹೊರಭಾಗದಲ್ಲಿ ಶುಕ್ರವಾರ ನಡುರಾತ್ರಿ ಭಾರಿ ಹೈಡ್ರಾಮಾವೊಂದು ಸಂಭವಿಸಿದೆ. 2 ದಿನಗಳ ಕಾಲ ಸತತ ಬೇಹುಗಾರಿಕೆ ನಡೆಸಿ ತಮ್ಮ ಮನೆ ಮೇಲೆ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿರುವ ಅಭಿಷೇಕ್ ಬ್ಯಾನರ್ಜಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ರಾಜ್ಯದ ಪೋಲಿಸ್ ನಡೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೇ ನೇರ ಸಮರ ಸಾರಿದ್ದು, ಈ ಘಟನೆ ಈಗ ತೀವ್ರ ಪಶ್ಚಿಮಬಂಗಾಳದ ರಾಜಕೀಯ ಕ್ರಾಂತಿಗೆ ಕಾರಣವಾಗಿದೆ.
‘ನನ್ನ ಪ್ರಾಣಕ್ಕೇ ರಕ್ಷಣೆ ಇಲ್ಲ, ಇನ್ನು ಸಾಮಾನ್ಯ ಜನರ ಕಥೆಯೇನು?’
ಶನಿವಾರ ಮುಂಜಾನೆ 2:00 ಗಂಟೆಯ ಸುಮಾರಿಗೆ ಸಂಭವಿಸಿದ ದಾಳಿಯ ಸಿಸಿಟಿವಿ ವೀಡಿಯೊ ತುಣುಕುಗಳನ್ನು ಹಂಚಿಕೊಂಡಿರುವ ಅಭಿಷೇಕ್ ಬ್ಯಾನರ್ಜಿ, ಪೋಲಿಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ತೀವ್ರ ವ್ಯಂಗ್ಯದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿರುವ ಸಂಸದರು, “2 ದಿನಗಳ ಸತತ ಬೇಹುಗಾರಿಕೆ ನಂತರ, ಇಂದು ಮುಂಜಾನೆ 2:00 ಗಂಟೆಗೆ ಬಿಜೆಪಿಯ ಗೂಂಡಾಗಳು ನನ್ನ ಮನೆ ಮೇಲೆ ಹೇಗೆ ದಾಳಿ ಮಾಡಿದ್ದಾರೆ ಎಂಬುದನ್ನು ಈ ವೀಡಿಯೊದಲ್ಲಿ ನೀವೇ ನೋಡಿ. ಜನರಿಂದ ಆಯ್ಕೆಯಾದ ಒಬ್ಬ ಸಂಸದನಿಗೆ ಈ ರೀತಿಯ ಪರಿಸ್ಥಿತಿ ಬಂದರೆ, ಇನ್ನು ಪಶ್ಚಿಮ ಬಂಗಾಳದ ಸಾಮಾನ್ಯ ಜನರ ಗತಿಯೇನು? ಕಳೆದ 6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ನಡೆದ 7ನೇ ಯತ್ನವಿದು. ಆದರೂ ಯಾವುದೇ ಪೋಲಿಸ್ ಕ್ರಮವಾಗಿಲ್ಲ, ನ್ಯಾಯಾಂಗದ ಪ್ರವೇಶವೂ ಆಗಿಲ್ಲ. ನ್ಯಾಯಾಂಗವು ಕಣ್ಣು ಮುಚ್ಚಿ ಕುಳಿತಿರುವುದರಿಂದ ಗೂಂಡಾಗಳು ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಮೂಕ ಪ್ರೇಕ್ಷಕರಾಗಿ ಉಳಿದಿದ್ದಕ್ಕಾಗಿ ಧನ್ಯವಾದಗಳು ಮೈ ಲಾರ್ಡ್ಸ್ ಎಂದು ನ್ಯಾಯಾಲಯಗಳ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.
‘ನಮ್ಮ ದೇಹಗಳ ಮೇಲೆಯೇ ಬುಲ್ಡೋಜರ್ ಓಡಿಸಿ ನೋಡೋಣ!’
ಅಭಿಷೇಕ್ ಬ್ಯಾನರ್ಜಿ ಅವರ ಮನೆ ಎದುರು ಪ್ರತಿಭಟನಾ ನಿರತ ಟಿಎಂಸಿ ಕಾರ್ಯಕರ್ತರೊಂದಿಗೆ ಧರಣಿಗೆ ಕುಳಿತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ತೀವ್ರವಾಗಿ ಹರಿಹಾಯ್ದಿದ್ದಾರೆ.
ಸಾರ್ವಜನಿಕವಾಗಿ ಮಾತನಾಡಿದ ಅವರು, “ನಾಳೆ ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬವಿದೆ. ಇಂತಹ ಪವಿತ್ರ ಹಬ್ಬದ ಸಮಯದಲ್ಲಿ, ಶುಕ್ರವಾರ ನಡುರಾತ್ರಿ 2:00 ಗಂಟೆಗೆ ಅಭಿಷೇಕ್ ಬ್ಯಾನರ್ಜಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದು ನಮ್ಮ ಕಾಳಿಘಾಟ್ ಪ್ರದೇಶ, ಇಲ್ಲಿಂದ ಕಾಳಿ ಮಾತೆಯ ಪೂಜಾ ಮೆರವಣಿಗೆಗಳು ಸಾಗುತ್ತವೆ. ಇಂತಹ ಜಾಗದಲ್ಲಿ ನಡುರಾತ್ರಿ ರೌಡಿಗಳನ್ನು ಕರೆತಂದು ಗಲಾಟೆ ಮಾಡಲಾಗುತ್ತಿದೆ. ನಮಗೆ ಬೆದರಿಕೆ ಹಾಕಲು ಧೈರ್ಯವಿದ್ದರೆ ನೇರವಾಗಿ ಬನ್ನಿ. ಬುಲ್ಡೋಜರ್ ಬಳಸಿ ನಮ್ಮನ್ನು ಬೆದರಿಸಲು ನೋಡುತ್ತಿದ್ದೀರಾ? ಹಾಗಿದ್ದರೆ ಬನ್ನಿ, ಮೊದಲು ನಮ್ಮ ದೇಹಗಳ ಮೇಲೆಯೇ ನಿಮ್ಮ ಬುಲ್ಡೋಜರ್ಗಳನ್ನು ಓಡಿಸಿ ನೋಡಿ!” ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿರುವ ಕುರಿತು ತಾವೇ ಖುದ್ದಾಗಿ ಲೋಕಸಭಾ ಸ್ಪೀಕರ್ಗೆ ಅಧಿಕೃತ ದೂರು ಪತ್ರ ಬರೆದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪೋಲಿಸ್ ಅಧಿಕಾರಿಗೆ ಕಪಾಳಮೋಕ್ಷ – ವೀಡಿಯೊ ಸಾಕ್ಷಿ ನೀಡಿದ ಟಿಎಂಸಿ:
ಮತ್ತೊಂದೆಡೆ ಟಿಎಂಸಿ ತನ್ನ ಅಧಿಕೃತ ಖಾತೆಯಲ್ಲಿ ವೀಡಿಯೊ ಒಂದನ್ನು ಪ್ರಕಟಿಸಿದ್ದು, ಸಾಧಾರಣ ಉಡುಪಿನಲ್ಲಿದ್ದ ಕರ್ತವ್ಯನಿರತ ಪೋಲಿಸ್ ಅಧಿಕಾರಿಯ ಗಲ್ಲಕ್ಕೆ ಬಿಜೆಪಿ ಬೆಂಬಲಿಗನೊಬ್ಬ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುತ್ತಿದ್ದಾನೆ ಎಂದು ಆರೋಪಿಸಿದೆ. ಪೋಲಿಸರ ಕಣ್ಣೆದುರಲ್ಲೇ ತಮ್ಮ ಕಾರ್ಯಕರ್ತರ ಮೇಲೆ ಕಲ್ಲು-ಇಟ್ಟಿಗೆ ತೂರಾಟ ನಡೆಸಲಾಗಿದೆ ಮತ್ತು ಪೋಲಿಸರ ಮೇಲೆಯೇ ಹಲ್ಲೆಯಾಗಿದ್ದರೂ ಯಾರನ್ನೂ ತಕ್ಷಣವೇ ಬಂಧಿಸಿಲ್ಲ ಎಂದು ಟಿಎಂಸಿ ತೀವ್ರ ಕಳವಳ ವ್ಯಕ್ತಪಡಿಸಿದೆ.


