ನವದೆಹಲಿ:
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಆಕ್ಷೇಪಾರ್ಹ ಪೋಸ್ಟ್ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶೋಕಾಸ್ (ಕಾರಣ ಕೇಳಿ) ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಅಕ್ಟೋಬರ್ 12 ರಂದು ಚುನಾವಣಾ ಆಯೋಗಕ್ಕೆ ಸಂಬಂಧಿತ ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಕೇರಳ ಕಾಂಗ್ರೆಸ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಸಿಜೆಐ ಸೂರ್ಯ ಕಾಂತ್ ಅವರ ಕುರಿತು “ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾದರೆ ತಕ್ಷಣ ರಾಜೀನಾಮೆ ನೀಡಿ” ಎಂಬ ಹೇಳಿಕೆಯನ್ನು ಪೋಸ್ಟ್ ಮಾಡಲಾಗಿತ್ತು. ಇದು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಪೋಸ್ಟ್ ಅನ್ನು ಡಿಲೀಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ವಿನೀತ್ ಜಿಂದಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, 1971ರ ನ್ಯಾಯಾಂಗ ನಿಂದನೆ ಕಾಯ್ದೆ ಹಾಗೂ ಸಂವಿಧಾನದ 129 ನೇ ವಿಧಿಯಡಿ ಕ್ರಮ ಜರುಗಿಸುವ ಕುರಿತು ನೋಟಿಸ್ ನೀಡಿ ಪರಿಶೀಲಿಸಲು ತೀರ್ಮಾನಿಸಿರುವುದಾಗಿ ಕಾನೂನು ಸುದ್ದಿ ಸಂಸ್ಥೆ ಲೈವ್ ಲಾ ವರದಿ ಮಾಡಿದೆ..
ವಿಚಾರಣೆ ವೇಳೆ ಕಾಂಗ್ರೆಸ್ ಸಮಿತಿಯ ಪರ ವಕೀಲರು ವಾದ ಮಂಡಿಸಿ, ಈ ಪೋಸ್ಟ್ ಅನ್ನು ಪಕ್ಷದ ಹಿರಿಯ ನಾಯಕರ ಅನುಮತಿಯಿಲ್ಲದೆ ಸಿಬ್ಬಂದಿ ವಿಜಯ್ ತೊಟ್ಟತಿಲ್ ಎಂಬುವವರು ಅಪ್ಲೋಡ್ ಮಾಡಿದ್ದರು ಎಂದು ಸ್ಪಷ್ಟಪಡಿಸಿದರು. ಘಟನೆ ಗಮನಕ್ಕೆ ಬಂದ ತಕ್ಷಣವೇ ಪೋಸ್ಟ್ ತೆಗೆದುಹಾಕಲಾಗಿದ್ದು, ತಪ್ಪಿತಸ್ಥ ನೌಕರ ವಿಜಯ್ ತೊಟ್ಟತಿಲ್ ಅವರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿ ಬೇಷರತ್ ಕ್ಷಮೆಯಾಚಿಸಲಾಗಿದೆ ಎಂದು ಪೀಠಕ್ಕೆ ತಿಳಿಸಲಾಯಿತು. ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಕೂಡ ಈ ಕುರಿತು ಪ್ರತ್ಯೇಕವಾಗಿ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣದ ಕುರಿತು ಕಾನೂನಾತ್ಮಕ ವೀಕ್ಷಣೆಗಳನ್ನು ಹಂಚಿಕೊಂಡ ಸುಪ್ರೀಂ ಕೋರ್ಟ್ ಪೀಠವು, ಸಂವಿಧಾನಿಕ ಚೌಕಟ್ಟಿನಲ್ಲಿ ನ್ಯಾಯಾಲಯಗಳ ತೀರ್ಪುಗಳನ್ನು ವಿಮರ್ಶಿಸಲು ಸಂಪೂರ್ಣ ಅವಕಾಶವಿದೆ, ಆದರೆ ನ್ಯಾಯಾಂಗದ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಅಥವಾ ಬೆದರಿಸುವ ಯತ್ನಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನವೇ ಸರ್ವೋಚ್ಚವಾಗಿದ್ದು, ನ್ಯಾಯಾಂಗದ ಗೌರವವು ಕಾನೂನಿನ ಆಡಳಿತವನ್ನು ಆಧರಿಸಿದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಕಾನೂನು ಪ್ರಕ್ರಿಯೆಯಲ್ಲಿ ಪೀಠಕ್ಕೆ ಸೂಕ್ತ ನೆರವು ನೀಡಲು ಹಿರಿಯ ವಕೀಲರಾದ ಅರವಿಂದ್ ದಾತಾರ್ ಮತ್ತು ಸಿದ್ಧಾರ್ಥ್ ಅಗರ್ವಾಲ್ ಅವರನ್ನು ನ್ಯಾಯಾಲಯದ ಮಿತ್ರರನ್ನಾಗಿ ನೇಮಿಸಲಾಗಿದ್ದು, ಭಾರತದ ಅಟಾರ್ನಿ ಜನರಲ್ ಅವರ ನೆರವನ್ನೂ ಕೋರಲಾಗಿದೆ ಎಂದು ವರದಿಯಾಗಿದೆದ. ಪ್ರಸ್ತುತ ಹಂತದಲ್ಲಿ ಪ್ರಕರಣದ ಸತ್ಯಾಸತ್ಯತೆ ಕುರಿತು ಯಾವುದೇ ಅಂತಿಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಕೋರ್ಟ್, ಕೇರಳ ಕಾಂಗ್ರೆಸ್ ಪದಾಧಿಕಾರಿಗಳಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.


