ದೇಶದಲ್ಲಿ ಶಾಂತಿ ಕಾಪಾಡಲು ತಾನು ಯಾವುದೇ ಪಾತ್ರ ವಹಿಸಲು ಸಿದ್ಧ ಎಂದು ನಟ ಮತ್ತು ರಾಜಕಾರಣಿ ರಜನಿಕಾಂತ್ ಹೇಳಿದ್ದಾರೆ. ಮುಸ್ಲಿಂ ಸಂಘಟನೆಯಾದ ತಮಿಳುನಾಡು ಜಮಾಅತುಲ್ ಉಲಮಾ ಸಭೈ ಇದರ ಕೆಲವು ನಾಯಕರು ಅವರ ನಿವಾಸದಲ್ಲಿ ಭೇಟಿಯಾದ ನಂತರ ಟ್ವಿಟರ್‌ನಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
“ದೇಶದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಯಾವುದೇ ಪಾತ್ರ ವಹಿಸಲು ನಾನು ಸಿದ್ಧನಿದ್ದೇನೆ. ದೇಶದ ಪ್ರಧಾನ ಉದ್ದೇಶವೆಂದರೆ ಪ್ರೀತಿ, ಏಕತೆ ಮತ್ತು ಶಾಂತಿ ಎಂದು ತಮಿಳುನಾಡು ಜಮಾಅತುಲ್ ಉಲಮಾ ಸಭೈ ಹೇಳಿದ್ದನ್ನು ನಾನು ಒಪ್ಪುತ್ತೇನೆ ”ಎಂದು ರಜಿನಿಕಾಂತ್ ಟ್ವೀಟ್ ಮಾಡಿದ್ದಾರೆ.
ರಜನಿಕಾಂತ್ ಅವರು ‘ತಮಿಳುನಾಡು ಜಮಾಅತುಲ್ ಉಲಮಾ ಸಭೈ’ ಸದಸ್ಯರಿಗೆ ಅಗತ್ಯವಿರುವದನ್ನು ಮಾಡುವುದಾಗಿ ಭರವಸೆ ನೀಡಿದರು ಎಂದು ಅದರ ಅಧ್ಯಕ್ಷ ಕೆ.ಎಂ.ಬಾಖವಿ ಹೇಳಿದರು. ಸಿಎಎ, ಎನ್‌ಪಿಆರ್ ಮತ್ತು ಎನ್‌ಆರ್‌ಸಿಯಿಂದಾಗಿ ಮುಸ್ಲಿಮರು ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ತಿಳಿಸಲು ತಮಿಳುನಾಡು ಜಮಾಅತುಲ್ ಉಲಮಾ ಸಭೈ ಸದಸ್ಯರು ಭಾನುವಾರ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದರು.
ಈ ಹಿಂದೆ ರಜನಿಕಾಂತ್ ಅವರು “ಸಿಎಎಯಿಂದ ಮುಸ್ಲಿಮರಿಗೆ ತೊಂದರೆಯಿಲ್ಲ ಅದು ಪೌರತ್ವ ಕೊಡುವ ಕಾನೂನು, ಒಬ್ಬ ಮುಸ್ಲಿಂ ಸಿಎಎಯಿಂದ ತೊಂದರೆಗೆ ಒಳಗಾದರು ಸಹ ಅದರ ವಿರುದ್ಧ ಧ್ವನಿ ಎತ್ತುವವರಲ್ಲಿ ಮೊದಲ ವ್ಯಕ್ತಿ ನಾನಾಗಲಿದ್ದೇನೆ” ಎಂದು ರಜಿನಿಕಾಂತ್ ಹೇಳಿದ್ದರು.
ಕಳೆದ ವಾರ ದೆಹಲಿ ಹಿಂಸಾಚಾರದ ಬಗ್ಗೆ “ಹಿಂಸಾಚಾರವನ್ನು ಹತ್ತಿಕ್ಕಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ” ಎಂದು ರಜನಿಕಾಂತ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು.


