ಬಿಹಾರದಲ್ಲಿ ಉಂಟಾಗಿರುವ ಬಿಜೆಪಿ-ಜೆಡಿಯು ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯದ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಆರ್‌ಜೆಡಿಯು, ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡರೆ ಜೆಡಿಯುಗೆ ಬೆಂಬಲ ನೀಡಲು ಸಿದ್ದ ಎಂದಿದೆ.
ಆರ್‌ಜೆಡಿ ಪಕ್ಷದ ಹಿರಿಯ ಮುಖಂಡರು “ಜೆಡಿಯು ಜೊತೆಗೂಡಿ ಸರ್ಕಾರ ರಚಿಸಿಲು ತೇಜಸ್ವಿ ಯಾದವ್ ಸಿದ್ದವಿದ್ದಾರೆ. ಆದರೆ ಜೆಡಿಯು ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡು ಹೊರಬರಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟು 243 ವಿಧಾನಸಭಾ ಕ್ಷೇತ್ರಗಳ ಬಿಹಾರ ಅಸೆಂಬ್ಲಿಯಲ್ಲಿ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು ಸದ್ಯ ಎನ್‌ಡಿಎ ಮೈತ್ರಿ 127 ಸ್ಥಾನ ಹೊಂದುವ ಮೂಲಕ ಸರ್ಕಾರ ರಚಿಸಿದೆ. ಅದರಲ್ಲಿ ಬಿಜೆಪಿ 77, ಜೆಡಿಯು 45, ಹಿಂದೂಸ್ತಾನ್ ಅವಾಜ್ ಮೋರ್ಚಾ 04 ಮತ್ತು ಒಬ್ಬರು ಪಕ್ಷೇತರರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ವಿರೋಧ ಪಕ್ಷಗಳ ಪಾಳಯದಲ್ಲಿ ಮಹಾಘಟಬಂಧನ್ ಮೈತ್ರಿಯಲ್ಲಿ ಆರ್‌ಜೆಡಿ 80, ಸಿಪಿಐ-ಎಂಎಲ್ 12, ಸಿಪಿಐ(ಎಂ)-02, ಸಿಪಿಐ 02 ಸ್ಥಾನದೊಂದಿಗೆ ಒಟ್ಟು 96 ಸ್ಥಾನ ಹೊಂದಿವೆ. ಅಲ್ಲದೆ ಕಾಂಗ್ರೆಸ್ 19 ಮತ್ತು ಎಐಎಂಐಎಂ ಪಕ್ಷವು 01 ಸ್ಥಾನ ಹೊಂದಿದೆ. ಒಂದು ವೇಳೆ ಜೆಡಿಯು ಎನ್‌ಡಿಎ ಮೈತ್ರಿಯಿಂದ ಹೊರಬಂದಲ್ಲಿ ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸಬಹುದಾಗಿದೆ.
ಇಂದು ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚಿಸಲು ಸಿಎಂ ನಿತೀಶ್ ಕುಮಾರ್ ಬಿಜೆಪಿಯ ಉಪ ಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್ ರನ್ನು ಭೇಟಿಯಾಗಲಿದ್ದಾರೆ.
ಬಿಜೆಪಿ ವರ್ಸಸ್ ಜೆಡಿಯು – ದಶಕಗಳ ಭಿನ್ನಮತ
2013ರವರೆಗೆ ಬಿಜೆಪಿ ಜೊತೆಗಿದ್ದ ಜೆಡಿಯು ಆ ಸಂಬಂಧಕ್ಕೆ ತಿಲಾಂಜಲಿ ಆಡಿ ಮಹಾಘಟಬಂಧನ್ ಜೊತೆಗೂಡಿ 2015ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಿತ್ತು. ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿದಿದ್ದ ಅದು 2017ರಲ್ಲಿ ಮೈತ್ರಿ ತೊರೆದು ಬಿಜೆಪಿ ಪಾಳಯ ಸೇರಿತ್ತು. 2020ರಲ್ಲಿ ಕೇವಲ 45 ಸೀಟು ಗೆದ್ದರೂ ಸಹ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಈಗ ಮತ್ತು ಬಿಜೆಪಿ ತೊರೆದು ಮಹಾ ಘಟಬಂಧನ್ ಕಡೆ ಮುಖ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ಬಿಕ್ಕಟ್ಟು: ಬಿಜೆಪಿ ವಿರುದ್ಧ ನಿತೀಶ್ ಬಂಡೇಳಲು ಕಾರಣವಾದ ಐದು ಈ ಅಂಶಗಳು…


